ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನ್ಯತೆಯ ಹುಡುಕಾಟ

ಬೆರಗಿನ ಬೆಳಕು
Last Updated 23 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ನೂತ್ನತೆಯ ಪೂರ್ಣತೆಯನನ್ಯೂನತೆಯ ಗಳಿಪ |
ಯತ್ನಮೇ ಪೌರುಷಪ್ರಗತಿ; ಅದೆ ಪ್ರಕೃತಿ ||
ವಿಜ್ಞಾನ ಶಾಸ್ತ್ರ ಕಲೆ ಕಾವ್ಯ ವಿದ್ಯೆಗಳೆಲ್ಲ |
ಧನ್ಯತೆಯ ಬೆದಕಾಟ – ಮಂಕುತಿಮ್ಮ || 227 ||

ಪದ-ಅರ್ಥ: ನೂತ್ನತೆ=ನೂತನತೆ, ಹೊಸದಾದದ್ದು, ಪೂರ್ಣತೆಯನನ್ಯೂನತೆಯ=ಪೂರ್ಣತೆಯನು+ಅನ್ಯೂನತೆಯ(ಕುಂದಿಲ್ಲದಿರುವುದು), ಗಳಿಪ=ಸಂಪಾದಿಸುವ, ಬೆದಕಾಟ=ಹುಡುಕಾಟ
ವಾಚ್ಯಾರ್ಥ: ಹೊಸದಾದದ್ದನ್ನು, ಪೂರ್ಣವಾದದ್ದನ್ನು, ಕುಂದಿಲ್ಲದಿರುವುದನ್ನು ಪಡೆಯುವ ಸತತ ಪ್ರಯತ್ನವೇ ಪೌರುಷ ಪ್ರಗತಿ. ಅದೇ ಪ್ರಕೃತಿಯೂ ಹೌದು. ವಿಜ್ಞಾನ, ಶಾಸ್ತ್ರಗಳು. ಕಲೆ, ಕಾವ್ಯ, ವಿದ್ಯೆಗಳೆಲ್ಲ ಅದರ ಸಂಪಾದನೆಯಲ್ಲಿ ದೊರೆಯುವ ಧನ್ಯತೆಗಾಗಿ ಮಾಡುವ ಹುಡುಕಾಟ.

ವಿವರಣೆ: ಪ್ರಪಂಚದಲ್ಲಿ ಶಾಶ್ವತವಾದದ್ದು ಬದಲಾವಣೆ ಒಂದೇ, ಪ್ರಪಂಚ ಎಂದೂ ಒಂದೇ ರೀತಿ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಇರುವುದು ಸಾಧ್ಯವಿಲ್ಲ. ಅದು ಪ್ರತಿಕ್ಷಣವೂ ಬದಲಾಗುವಂಥದ್ದು. ನಿಸರ್ಗವನ್ನು ಗಮನಿಸಿ, ಮಾನವನ ಬದುಕಿನ ರೀತಿಗಳನ್ನು ಗಮನಿಸಿ, ಅವನ ಸ್ವಭಾವಗಳನ್ನು ಗಮನಿಸಿ, ಅಪೇಕ್ಷೆಗಳನ್ನು ನೋಡಿ. ಯಾವುದೂ ಎಲ್ಲ ಕಾಲದಲ್ಲೂ ಒಂದೇ ರೀತಿಯಾಗಿಲ್ಲವೆಂಬುದು ಸ್ಪಷ್ಟ. ಪ್ರತಿನಿಮಿಷಕ್ಕೂ ಹೊಸದಾಗುವ ಈ ವಿಶ್ವ ಒಂದು ಬೆರಗು. ಮನುಷ್ಯನಿಗೂ ಆ ಪ್ರಪಂಚವನ್ನು ಬದಲಾಯಿಸುವ ಹವ್ಯಾಸ. ಅದಕ್ಕಾಗಿ ಅದೆಷ್ಟು ಆವಿಷ್ಕಾರಗಳು! ಸದಾ ಹೊಸತು ಬೇಕು ಎನ್ನುವ ಬಯಕೆ. ಇವರು ನಮ್ಮ ಹಾಗೆ ಸಾಮಾನ್ಯರು.

ಅದರೊಂದಿಗೆ ಪೂರ್ಣತೆಯನ್ನು ಪಡೆಯುವ ಬಯಕೆ. ಇದು ಹೊಸದನ್ನು ಪಡೆಯಬೇಕೆನ್ನುವ ಮನಸ್ಥಿತಿಯ ಮೇಲಿನ ಹಂತ. ಈ ಮಟ್ಟದ ಜನರಿಗೆ ಹೊಸತರಿಂದ ತೃಪ್ತಿಯಿಲ್ಲ. ಬದುಕಿನಲ್ಲಿ ಪೂರ್ಣತೆಯನ್ನು ಕಾಣುವ ಈ ಜನ ತಮ್ಮ ಪ್ರತಿಯೊಂದು ಕಾರ್ಯದಲ್ಲೂ ಉತ್ಕೃಷ್ಟತೆಯನ್ನೇ ತರುತ್ತಾರೆ. ಅದರಿಂದ ಪ್ರಪಂಚದ ಗುಣಮಟ್ಟ ಹೆಚ್ಚಾಗುತ್ತದೆ. ಇವರನ್ನು ಜ್ಞಾನಿಗಳು ಎಂದು ಗುರುತಿಸುತ್ತಾರೆ. ಇವೆರಡಕ್ಕಿಂತ ಮೇಲ್ಮಟ್ಟದ ಚಿಂತನೆಯ ಜನರೂ ಇದ್ದಾರೆ. ಅವರಿಗೆ ಕೇವಲ ಹೊಸತರಲ್ಲಿ ಆಸಕ್ತಿ ಇಲ್ಲ, ಪರಿಪೂರ್ಣತೆಯಿಂದಲೂ ತೃಪ್ತಿ ಇಲ್ಲ. ಅವರಿಗೆ ಕುಂದಿಲ್ಲದಂತಹ ವಸ್ತುವಿನ ಮೇಲೆ ಮನಸ್ಸು. ಅವರನ್ನು ದಾರ್ಶನಿಕರು ಅಥವಾ ಅಧ್ಯಾತ್ಮ ಜೀವಿಗಳು ಎನ್ನಬಹುದು. ಪ್ರಪಂಚದಲ್ಲಿ ಕುಂದೇ ಇಲ್ಲದಂಥ ಏಕೈಕ ಸತ್ವವೆಂದರೆ ಅದು ಪರಸತ್ವ. ಅದನ್ನು ದೇವರೆನ್ನಿ, ದೈವವೆನ್ನಿ, ಭಗವಂತ ಎನ್ನಿ, ಏನಾದರೂ ಕರೆಯಿರಿ. ಆ ಕುಂದಿಲ್ಲದ, ಸಾವಿಲ್ಲದ, ಹುಟ್ಟಿಲ್ಲದ ಸತ್ವದೆಡೆಗೆ ಚಿಂತಿಸುವವರು ಇವರು.

ಹೀಗೆ ವಿವಿಧ ಹಂತಗಳಲ್ಲಿ, ಅವರವರ ಶಕ್ತಿಯಂತೆ ಪಡೆದ ಬೆಳವಣಿಗೆಯೇ ಪೌರುಷ ಪ್ರಗತಿ. ಅದೇ ಪ್ರಕೃತಿ. ಪ್ರಕೃತಿಯೆಂದರೆ ಕೇವಲ ನಿಸರ್ಗವಲ್ಲ, ಅದು ಮಾನವನ ಮೂಲಭೂತವಾದ ಸ್ವಭಾವ.

ಮನುಷ್ಯ ಹೀಗೆ ಹೊಸತನಕ್ಕಾಗಿ, ಪೂರ್ಣತೆಗಾಗಿ ಕೊನೆಗೆ ಕುಂದಿಲ್ಲದ ಸತ್ವದ ದರ್ಶನಕ್ಕಾಗಿ ಮಾಡುವ ಪ್ರಯತ್ನಗಳೇ ನಮ್ಮ ಕಣ್ಣ ಮುಂದಿರುವ ವಿಜ್ಞಾನ, ಶಾಸ್ತ್ರ, ಕಲೆ, ಕಾವ್ಯ, ವಿದ್ಯೆಗಳು. ಇವುಗಳನ್ನು ಸಾಧಿಸುವಲ್ಲಿ, ಬೆಳೆಸುವಲ್ಲಿ ಮನುಷ್ಯ ಮಾಡುವ ಹುಡುಕಾಟಗಳೇ ಅವನಿಗೆ ಧನ್ಯತೆಯನ್ನು ತರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT