ಭಾನುವಾರ, ಜನವರಿ 19, 2020
20 °C

ಅಪಾಯದ ಮಿತಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ರಣಹದ್ದಾಗಿ ಹುಟ್ಟಿದ್ದ. ಅವನ ಹೆಸರು ಅಪರಣ್ಣ. ಅದು ತುಂಬ ಬಲಶಾಲಿಯಾದದ್ದು. ಅದು ತನ್ನದೇ ಒಂದು ದೊಡ್ಡ ತಂಡವನ್ನು ಕಟ್ಟಿಕೊಂಡು ಗೃಧ್ರಕೂಟ ಪರ್ವತದ ಶಿಖರಗಳಲ್ಲಿ ವಾಸವಾಗಿತ್ತು. ಅಪರಣ್ಣನಿಗೆ ಒಬ್ಬ ಮಗ. ಅವನ ಹೆಸರು ಮಿಗಾಲೋಪ. ಅವನೂ ಅತ್ಯಂತ ಬಲಶಾಲಿ. ಆದರೆ ಅಹಂಕಾರಿಯೂ ಹೌದು. ತನ್ನಷ್ಟು ಶಕ್ತಿಶಾಲಿ ಯಾರೂ ಇಲ್ಲ ಎಂಬ ನಡೆಯನ್ನು ಕ್ಷಣಕ್ಷಣಕ್ಕೆ ಪ್ರದರ್ಶಿಸುತ್ತಿದ್ದ.

ಉಳಿದ ಹದ್ದುಗಳ ಜೊತೆಗೆ ಹಾರುವಾಗ ಮಿಗಾಲೋಪ ತಾನೊಬ್ಬನೇ ಥಟ್ಟನೇ ಎತ್ತರಕ್ಕೆ ಹಾರಿಹೋಗಿ ಬಿಡುತ್ತಿದ್ದ. ಜೊತೆಗಾರ ಹದ್ದುಗಳು ಬಂದು ತಂದೆ ಅಪರಣ್ಣನಿಗೆ ಈ ವಿಷಯ ತಿಳಿಸಿ, ಮಿಗಾಲೋಪನಿಗೆ ಬುದ್ಧಿ ಹೇಳುವುದು ಒಳಿತು ಎಂದವು.

ತಂದೆ ಮಗನನ್ನು ಕರೆದು ಹೇಳಿದ, ‘ಮಗೂ, ಮಿಗಾಲೋಪ. ನೀನು ಬಹಳ ಬಲಶಾಲಿ ಎಂಬುದು ನಿನಗೂ ಗೊತ್ತಿದೆ. ನಿನ್ನ ವಯಸ್ಸಿಗೆ ನಾನು ನಿನಗಿಂತ ಬಲಶಾಲಿಯಾಗಿದ್ದೆ. ಆದರೆ ಒಂದು ವಿಷಯ ನಿನಗೆ ತಿಳಿದಿರಬೇಕು. ನಾವು ಕೇವಲ ಹಕ್ಕಿಗಳು. ನಾವೆಷ್ಟೇ ಶಕ್ತಿಶಾಲಿಗಳಾಗಿದ್ದರೂ ನಿಸರ್ಗದ ಶಕ್ತಿಯನ್ನು ಮೀರುವುದು ಅಸಾಧ್ಯ. ನೀನು ಈಗೀಗ ತುಂಬ ಎತ್ತರಕ್ಕೆ ಹಾರುತ್ತಿದ್ದೀ ಎಂಬುದನ್ನು ಕೇಳಿದೆ. ನೀನು ಮೇಲಕ್ಕೆ ಹಾರು. ಆದರೆ ಭೂಮಿ ನಿನಗೆ ಚತುಷ್ಕೋನ ಹೊಲದಂತೆ ಕಾಣುವವರೆಗೂ ಹಾರು. ಅದಕ್ಕಿಂತ ಎತ್ತರಕ್ಕೆ ಹೋಗಬೇಡ. ಅದು ನಮ್ಮ ಶಕ್ತಿಯ ಮಿತಿ. ಅಲ್ಲಿಯ ಗಾಳಿಯ ರಭಸ ನಮ್ಮ ರೆಕ್ಕೆಗಳ ಶಕ್ತಿಯನ್ನು ಮೀರಿದ್ದು’.

ಮಗ ತಂದೆ ಹೇಳುವುದನ್ನು ಕೇಳಿಸಿಕೊಂಡ. ಆತ ಬರೀ ಕೇಳಿಸಿಕೊಂಡ, ಆದರೆ ಅದನ್ನು ಪರಿಗಣಿಸಲಿಲ್ಲ. ಅದು ವಯಸ್ಸಾದ ತಂದೆ-ತಾಯಿಯರ ಆತಂಕದ ಮಾತು ಎಂದು ನಗೆಯಾಡಿದ. ನಾನು ತಂದೆ ಹೇಳಿದ ಎತ್ತರಕ್ಕಿಂತ ಬಹುಮೇಲೆ ಹಾರಿ ಹೋಗಿ ಬಂದು ಅಲ್ಲಿಯ ಸೊಗಸನ್ನು ತಂದೆಗೆ ವಿವರಿಸುತ್ತೇನೆ. ಆಗ ಅವರಿಗೆ ತಾವು ಯಾವುದೋ ಭ್ರಮೆಯಲ್ಲಿದ್ದುದರ ಅರಿವಾಗುತ್ತದೆ, ನನ್ನ ಬಗ್ಗೆ ಅವರಿಗೆ ಇನ್ನು ಅಭಿಮಾನ ಉಂಟಾಗುತ್ತದೆ.

ಮರುದಿನವೇ ಆತ ಗೆಳೆಯರೊಡನೆ ಹಾರುತ್ತ ಮೇಲಕ್ಕೆ, ಮೇಲಕ್ಕೆ ಹೋದ. ಉಳಿದವರು ನೋಡುತ್ತಲೇ ಇದ್ದರು. ಮಿಗಾಲೋಪನಿಗೆ ಈಗ ಭೂಮಿ ಚತುಷ್ಕೋನ ಹೊಲದಂತೆ ಕಾಣತೊಡಗಿತು. ಆತನಿಗೆ ಸಂತೋಷದಿಂದ ರೋಮಾಂಚನವಾಯಿತು. ಜೊತೆಗಾರರಿಗೆ ಕೂಗಿ ಹೇಳಿದ, ‘ನೋಡಿ, ಇದುವರೆಗೂ ಯಾರೂ ಹಾರದಿದ್ದ ಎತ್ತರಕ್ಕೆ ಹೋಗುತ್ತಿದ್ದೇನೆ’, ಸರ‍್ರೆಂದು ಮತ್ತಷ್ಟು ಮೇಲಕ್ಕೆ ಹಾರಿದ. ಎರಡು ಕ್ಷಣಗಳಲ್ಲಿ ಗಾಳಿಯ ರಭಸ ನುಗ್ಗಿ ಬಂತು. ಈ ಬಲಿಷ್ಠವಾದ ರಣಹದ್ದನ್ನು ಕಾಗದದ ಚೂರಿನಂತೆ ದಿಕ್ಕು ದಿಕ್ಕಿಗೆ ಹರಿಸಿಬಿಟ್ಟಿತು. ದಿಕ್ಕು ತಪ್ಪಿದ ರಣಹದ್ದು ಮಿಗಾಲೋಪ ಅಸಹಾಯವಾಗಿ ಒದ್ದಾಡುತ್ತಿದ್ದಾಗ ಮತ್ತೊಂದು ಗಾಳಿಯ ತೆರೆ ಅದನ್ನು ಚಿಂದಿ ಚಿಂದಿ ಮಾಡಿಬಿಟ್ಟಿತು.

ನಾವು ಎಷ್ಟೇ ಶಕ್ತಿಶಾಲಿಗಳಾದರೂ, ನಮ್ಮ ಶಕ್ತಿಗೆ ಮಿತಿ ಇದೆ. ಆ ಮಿತಿಯನ್ನು ಅರಿಯಬೇಕು. ಮಿತಿಗಳನ್ನು ದಾಟುವುದು ತಪ್ಪೇ? ಖಂಡಿತ ಅಲ್ಲ. ಆದರೆ ದಾಟುವುದರಲ್ಲಿಯೂ ಒಂದು ಮಿತಿ ಇದೆ. ಅದನ್ನು ದಾಟಿ ಹೊರಟರೆ ಅಪಾಯ ತಪ್ಪಿದ್ದಲ್ಲ.

ಪ್ರತಿಕ್ರಿಯಿಸಿ (+)