ಗುರುವಾರ , ಫೆಬ್ರವರಿ 27, 2020
19 °C

ಸ್ವಭಾವಕ್ಕೆ ತಕ್ಕಂತಹ ಸ್ನೇಹಿತರು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Gururaja

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಬಹುಧರ್ಮಿಷ್ಠ ಶ್ರೇಷ್ಠಿಯಾಗಿ ಹುಟ್ಟಿ ಪಂಚಶೀಲಗಳನ್ನು ಪಾಲಿಸುತ್ತಿದ್ದ. ಅವನ ಪರಿವಾರದವರೆಲ್ಲ ಧರ್ಮ ಮಾರ್ಗದಲ್ಲೇ ನಡೆಯುತ್ತಿದ್ದರು. ಆತ ಒಮ್ಮೆ ಚಿಂತಿಸಿದ. ನನಗಿಂತಲೂ ಹೆಚ್ಚು ಧರ್ಮಪಾಲನೆ ಮಾಡುವವರು ಅಥವಾ ದೇವತೆಗಳು ತನ್ನ ಮನೆಗೆ ವಾಸಕ್ಕೆ ಬಂದರೆ ನಾವು ಬಳಿಸಿದ ಆಸನ, ಹಾಸಿಗೆಗಳನ್ನು ಕೊಡುವುದು ಸರಿಯಾಗುವುದಿಲ್ಲ. ಆದ್ದರಿಂದ ಆತ ಒಂದು ಹೊಸ ಕೋಣೆಯನ್ನು ನಿರ್ಮಿಸಿ ವಿಶೇಷ ಆಸನ ಹಾಗೂ ಹಾಸಿಗೆಗಳನ್ನು ಸಿದ್ಧಪಡಿಸಿದ.

ಆ ಸಮಯದಲ್ಲಿ ದೇವಲೋಕದ ವಿರೂಪಾಕ್ಷ ಮಹಾರಾಜನ ಮಗಳು ಕಾಲಕಣ್ಣಿ ಹಾಗೂ ಧೃತರಾಷ್ಟ್ರ ಮಹಾರಾಜನ ಪುತ್ರಿ ಸಿರಿ ಇಬ್ಬರೂ ಸಂಭ್ರಮ ದಿಂದ ಅನೋತತ್ತ ಸರೋವರದಲ್ಲಿ ಈಜಾಡಲು ಬಂದರು. ಅವರಲ್ಲಿ ಒಂದು ವಾದ ಪ್ರಾರಂಭವಾಯಿತು. ಯಾರು ಮೊದಲು ನೀರಿನಲ್ಲಿ ಇಳಿಯಬೇಕು? ತಮ್ಮಲ್ಲಿ ಶ್ರೇಷ್ಠರಾದವರು ಮೊದಲು ಇಳಿಯುವುದಾದರೆ ಯಾರು ಶ್ರೇಷ್ಠರು? ಮೊದಮೊದಲು ವಾದವಾದದ್ದು ಜಗಳಕ್ಕೇ ತಿರುಗಿತು. ಇಬ್ಬರೂ ಮರಳಿ ತಮ್ಮ ತಂದೆಯರ ಕಡೆಗೆ ಹೋಗಿ ದೂರು ನೀಡಿದರು. ಅವರು ಇದರ ತೀರ್ಮಾನವನ್ನು ಇಂದ್ರನಿಗೆ ಒಪ್ಪಿಸಿದರು.

ಇಂದ್ರನಿಗೂ ಇದನ್ನು ತೀರ್ಮಾನಿಸುವುದು ತುಂಬ ಕಷ್ಟದ ಕೆಲಸವಾಗಿ ಕಂಡಿತು. ಆತ ಒಂದು ಬುದ್ಧಿವಂತಿಕೆಯ ಕೆಲಸ ಮಾಡಿದ. ಇಬ್ಬರೂ ಕನ್ಯೆಯರನ್ನು ಕರೆದು, ‘ವಾರಾಣಸಿಯಲ್ಲಿ ಒಬ್ಬ ಶ್ರೇಷ್ಠಿ ಇದ್ದಾನೆ. ಅವನಷ್ಟು ಧರ್ಮಿಷ್ಠ ಮನುಷ್ಯ ಯಾರೂ ಇಲ್ಲ. ಆತ ಅತ್ಯಂತ ಪವಿತ್ರರಾದ ಅತಿಥಿಗಳಿಗೆ ಎಂದು ಒಂದು ಕೋಣೆಯನ್ನು ಕಟ್ಟಿಸಿ, ಹೊಸ ಆಸನ ಹಾಗೂ ಹಾಸಿಗೆಗಳನ್ನು ಮಾಡಿಸಿ ಇಟ್ಟಿದ್ದಾನೆ. ನೀವಿಬ್ಬರೂ ಅಲ್ಲಿಗೆ ಹೋಗಿ ಅವನ ಹತ್ತಿರ ಮಾತನಾಡಿ. ಯಾರಿಗೆ ಆತ ತನ್ನ ಹೊಸ ಆಸನ, ಹಾಸಿಗೆಗಳನ್ನು ಕೊಡುತ್ತಾನೋ ಅವರೇ ಮೊದಲು ಅನೋತತ್ತ ಸರೋವರದಲ್ಲಿ ಸ್ನಾನ ಮಾಡಬಹುದು’ ಎಂದು ಹೇಳಿದ.

ಅವರಿಬ್ಬರೂ ಶ್ರೇಷ್ಠಿಯ ಮನೆಗೆ ಬಂದರು. ಮೊದಲು ಕಾಲಕಣ್ಣಿ ಅವನನ್ನು ಕಂಡಳು. ಕಪ್ಪುವರ್ಣದ, ಉಗ್ರಮುಖದ ಆಕೆಯನ್ನು ಕಂಡು, ‘ನೀನು ಯಾರು ತಾಯೀ? ಎಲ್ಲಿಂದ ಬಂದೆ? ನಿನಗೆ ಎಂಥ ಜನರು ಇಷ್ಟ?’ ಎಂದು ಕೇಳಿದ. ಆಕೆ, ‘ನನಗೆ ಜಿಪುಣ, ಜಗಳಗಂಟ ಮತ್ತು ಹಠದಿಂದ ಕೆಲಸ ಮಾಡುವ ಮನುಷ್ಯ ಇಷ್ಟ’ ಎಂದಳು. ಆಗ ಶ್ರೇಷ್ಠಿ, ‘ತಾಯೀ, ನಿನಗಿಲ್ಲಿ ಸ್ಥಳವಿಲ್ಲ, ಬೇರೆ ಜಾಗ ನೋಡಿಕೋ’ ಎಂದು ಕಳುಹಿಸಿಬಿಟ್ಟ. ನಂತರ ಸಿರಿ ಬಂದಳು. ಅವಳ ಮುಖದಲ್ಲಿಯ ತೇಜ, ಸಂತೃಪ್ತಿಗಳನ್ನು ಕಂಡು ಹಿಂದೆ ಕಾಲಕಣ್ಣಿಗೆ ಕೇಳಿದ ಪ್ರಶ್ನೆಗಳನ್ನೇ ಕೇಳಿದ. ಅದಕ್ಕೆ ಆಕೆ, ‘ಧರ್ಮಿಷ್ಠ, ನನಗೆ ಕಷ್ಟ–ಸುಖಗಳಲ್ಲಿ ಸ್ಥಿತಿಪ್ರಜ್ಞತೆಯನ್ನು ತೋರುವ, ಮೃದುಭಾಷಿಯ ನಮ್ರನಾದ, ದುರಾಚಾರಗಳಿಂದ ದೂರವಿರುವ ಮನುಷ್ಯ ನನಗೆ ಪ್ರಿಯ’ ಎಂದಳು. ‘ತಾಯಿ ಈ ಕೋಣೆ, ಆಸನ, ಹಾಸಿಗೆ ನಿನಗಾಗಿಯೇ ಇದೆ, ದಯವಿಟ್ಟು ಬಳಸು’ ಎಂದ. ಆಕೆ ಆ ರಾತ್ರಿ ಅಲ್ಲಿದ್ದು ಮರುದಿನ ಅನೋತತ್ತ ಸರೋವರಕ್ಕೆ ಸ್ನಾನಕ್ಕೆ ನಡೆದಳು.

ನಾವು ಎಂಥವರನ್ನು ಸ್ನೇಹಿತರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತೇವೆ, ಎಂಥವರ ಸಹವಾಸವನ್ನು ಇಷ್ಟಪಡುತ್ತೇವೆ ಎಂಬುದು ನಮ್ಮ ಗುಣವನ್ನು ಎತ್ತಿ ತೋರುತ್ತದೆ. ನಮ್ಮ ಸ್ವಭಾವದಂತೆ ಸ್ನೇಹಿತರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)