ಶನಿವಾರ, ಫೆಬ್ರವರಿ 29, 2020
19 °C

ಭಿನ್ನತೆಯಲ್ಲಿಯ ಶಕ್ತಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬೆರಳುಗಳ ನೋಡವುಗಳೊಂದರಂತೊಂದಿಲ್ಲ |
ಕರಧರ್ಮಕುಚಿತವಾ ಹೆಚ್ಚು ಕಡಿಮೆಗಳು ||
ಪುರುಳ ಪಿಡಿವುವೆ ಬೆರಳ್ಗಳೆಲ್ಲವೊಂದುದ್ದವಿರೆ? |
ಸರಿಯಹುದು ಕಾರ್ಯದಲಿ - ಮಂಕುತಿಮ್ಮ || 240 ||

ಪದ-ಅರ್ಥ: ನೋಡವುಗಳೊಂದರಂತೊಂದಿಲ್ಲ=ನೋಡು+ಅವುಗಳು+ಒಂದರಂತೆ+ಒಂದಿಲ್ಲ, ಕರಧರ್ಮಕುಚಿತವಾ=ಕರಧರ್ಮಕೆ (ಕೈ ಮಾಡಬಹುದಾದ ಕೆಲಸಕ್ಕೆ)+ಉಚಿತ+ಆ, ಪುರುಳ= ವಸ್ತುಗಳ, ಬೆರಳ್ಗಳೆಲ್ಲವೊಂದುದ್ದವಿರೆ=ಬೆರಳ್ಗಳು(ಬೆರಳುಗಳು)+ಎಲ್ಲ, ಒಂದು+ಉದ್ದವಿರೆ.

ವಾಚ್ಯಾರ್ಥ: ಬೆರಳಗಳನ್ನು ನೋಡು, ಅವು ಒಂದರಂತೆ ಮತ್ತೊಂದಿಲ್ಲ. ಕೈ ಮಾಡಬಹುದಾದ ಕೆಲಸಕ್ಕೆ ಈ ಹೆಚ್ಚು ಕಡಿಮೆಗಳು ಸರಿಯಾಗಿವೆ. ಎಲ್ಲ ಬೆರಳುಗಳು ಅಷ್ಟೇ ಉದ್ದವಿದ್ದರೆ ವಸ್ತುಗಳನ್ನು ಹಿಡಿಯಲು ಆಗುತ್ತಿತ್ತೇ. ಆದ್ದರಿಂದ ಅವುಗಳ ಹೆಚ್ಚು ಕಡಿಮೆಗಳು ಕೆಲಸದಲ್ಲಿ ಸಹಕಾರಿಯಾಗಿವೆ.

ವಿವರಣೆ: ನಿಸರ್ಗದಲ್ಲಿ, ಬದುಕಿನಲ್ಲಿ ಭೇದ, ಅಸಮಾನತೆ ಎದ್ದು ಕಾಣುತ್ತದೆ. ಇದು ಇಂದು ಆದದ್ದಲ್ಲ. ಪ್ರಪಂಚದ ಪ್ರಾರಂಭಕಾಲದಿಂದಲೂ ಹೀಗೆಯೇ ಇದ್ದದ್ದು. ಇದರ ಫಲಿತಾಂಶವೇ ಜನತೆಯಲ್ಲಿ ಕಂಡು ಬರುವ ನಾನಾತ್ಮ – ವಂಶಗಳು, ಕುಲಗಳು, ಜಾತಿಗಳು, ಮನೆತನಗಳು, ಪೀಳಿಗೆಗಳು. ಹೀಗೆ ಕಂಡು ಬರುವ ಪ್ರತಿಯೊಂದು ಬಗೆಯ ಗುಂಪಿನಲ್ಲಿರುವ ವ್ಯಕ್ತಿಯೂ ಕೂಡ ಬೇರೆಯೇ.

ಹೀಗೆ ಎಲ್ಲವೂ ಅಸಮಾನವಾಗಿರುವುದರಿಂದಲೇ ಜೀವಿತದಲ್ಲಿ ಪರಸ್ಪರರ ಬಗ್ಗೆ ಕುತೂಹಲ. ಮನುಷ್ಯರ ಗುಣಶಕ್ತಿಗಳಲ್ಲಿ ಪರಸ್ಪರ ಭಿನ್ನತೆ ಇರುವ ಕಾರಣದಿಂದಲೇ ಅವರಿಗೆ ಅನ್ಯೋನ್ಯವಶ್ಯಕತೆ. ಒಬ್ಬರಿಗೆ ಮತ್ತೊಬ್ಬರ ಸಹಕಾರ ಬೇಕು. ಆದ್ದರಿಂದಲೇ ಸಂಘಗಳು ಮತ್ತು ಸಮಾಜಗಳ ಅವಶ್ಯಕತೆ. ಒಬ್ಬ ಮನುಷ್ಯನ ಜೀವಪೋಷಣೆಗೆ ಬೇಕಾದ ಎಲ್ಲ ಗುಣಸಂಪತ್ತು ಮತ್ತು ಶಕ್ತಿಗಳು ಅವನಲ್ಲಿ ಇದ್ದು ಬಿಟ್ಟರೆ ಅವನಿಗೆ ಮತ್ತೊಬ್ಬರ ಅವಶ್ಯತೆಯೇ ಇಲ್ಲ. ಅವನಿಗೆ ರಾಜ್ಯವೂ ಬೇಡ, ಸಮಾಜವೂ ಬೇಡ. ಯಾರೂ ಬೇಕಾಗದಿರುವವನಿಗೆ ಹೊರಗಿನ ಯಾವ ಸಂಸ್ಕಾರವೂ ತಟ್ಟುವುದಿಲ್ಲ, ಆದ್ದರಿಂದ ಅವನ ವಿಕಾಸವೂ ಆಗಲಾರದು. ಹೀಗೆ ಮಾನವರಲ್ಲಿ ಸ್ವಭಾವತಃ ಬಂದ ವ್ಯತ್ಯಾಸಗಳು, ಅಸಮಾನತೆಗಳು, ಸಮಾಜಸಂಘಟನೆಗೆ ಪ್ರೇರಕವಾಗಿ, ಜೀವ ವಿಕಾಸಕ್ಕೆ ಸಾಧಕಗಳಾದದ್ದನ್ನು ಕಾಣುತ್ತೇವೆ.

ಭೇದಗಳು, ವ್ಯತ್ಯಾಸಗಳು ನಮಗೆ ಉಪಕಾರಿಗಳೂ ಆಗಬಲ್ಲವು. ಆದರೆ ಈ ಅಸಮಾನತೆಗಳು, ವ್ಯತ್ಯಾಸಗಳು ಮಿತಿಯನ್ನು ಮೀರಿದಾಗ ಅವು ಅಪಕಾರಿಯಾಗುತ್ತವೆ. ಈ ಮಿತಿಯನ್ನು ಅರಿಯುವುದೇ ಸಂಸ್ಕೃತಿಯ ಲಕ್ಷಣ. ಅಸಮಾನತೆಯನ್ನು ತೊಡೆದು ಹಾಕುವುದೆಂದರೆ ಎಲ್ಲರನ್ನೂ ಒಂದೇ ಪಡಿಯಚ್ಚಿನಲ್ಲಿ ಹುಯ್ದು ಸಿದ್ಧಪಡಿಸುವುದೆಂದಲ್ಲ. ಲೋಕದಲ್ಲಿ ಒಂದೊಂದು ಗುಣಕ್ಕೂ ಒಂದೊಂದು ಕೆಲಸವಿದೆ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ಸ್ಥಾನವಿದೆ. ಗುಣಶಕ್ತಿಗಳಂತೆ ಜೀವಿತ ಧರ್ಮ.

ಅದನ್ನು ಈ ಕಗ್ಗ ಎಷ್ಟು ಸರಳವಾದ ಉದಾಹರಣೆಯೊಂದಿಗೆ ವಿವರಿಸುತ್ತದೆ. ನಮ್ಮ ಐದೂ ಬೆರಳುಗಳು ಬೇರೆ ಬೇರೆಯೇ. ಒಂದರಂತೆ ಮತ್ತೊಂದಿಲ್ಲ. ಆದರೆ ಕೈ ಮಾಡಬಹುದಾದ ಕೆಲಸಕ್ಕೆ ಅವು ಹಾಗಿರುವುದೇ ಸಹಕಾರಿ. ಹೆಬ್ಬೆರಳು ಮಾಡಲಾಗದ ಕೆಲಸವನ್ನು ಕಿರುಬೆರಳು ಮಾಡುತ್ತದೆ. ಕಿರುಬೆರಳಿನಿಂದ ಎತ್ತಲಾಗದ್ದನ್ನು ಹೆಬ್ಬೆರಳು ಸುಲಭವಾಗಿ ಎತ್ತುತ್ತದೆ. ಐದು ಬೆರಳುಗಳು ಬೇರೆಯಾಗಿರುವುದರಿಂದಲೇ ಕೈಗೆ ಆ ಶಕ್ತಿ, ಬಿಗಿ ಮತ್ತು ಸುಲಭತೆ. ಹೀಗೆ ಭಿನ್ನತೆಯಲ್ಲೇ, ಅನುಕೂಲತೆ ಇರುವುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)