ಶುಕ್ರವಾರ, ಜನವರಿ 22, 2021
20 °C

ಬೆರಗಿನ ಬೆಳಕು: ಉಪಮೆಯ ಬಲ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಮಗಧರಾಜ ರಾಜಗೃಹದಲ್ಲಿ ರಾಜ್ಯಭಾರ ಮಾಡುತ್ತಿದ್ದ. ಬೋಧಿಸತ್ವ ಪಟ್ಟದ ರಾಣಿಯ ಗರ್ಭದಿಂದ ಜನಿಸಿದ. ಇವನು ಹುಟ್ಟಿದ ದಿನವೇ ಪುರೋಹಿತನ ಹೆಂಡತಿಯೂ ಗಂಡುಮಗುವನ್ನು ಹೆತ್ತಳು. ಆ ಮಗುವಿಗೆ ಸೋನಕಕುಮಾರ ಎಂದು ಹೆಸರಿಟ್ಟರು. ಇಬ್ಬರೂ ಮಕ್ಕಳು ಜೊತೆಗೇ ಬೆಳೆದು, ಜೊತೆಗೆ ಶಿಕ್ಷಣ ಪಡೆಯಲು ತಕ್ಕಶಿಲೆಗೆ ಹೋದರು. ಶಿಕ್ಷಣ ಮುಗಿಸಿ ಬರುವಾಗ ದಾರಿಯಲ್ಲಿ ವಾರಾಣಸಿಯ ರಾಜೋದ್ಯಾನದಲ್ಲಿ ತಂಗಿದರು.

ಆಗ ವಾರಾಣಸಿಯ ರಾಜ ತೀರಿಹೋಗಿದ್ದ. ಅವನಿಗೆ ಮಕ್ಕಳಿಲ್ಲದಿದ್ದುದರಿಂದ ಮುಂದಿನ ರಾಜ ಯಾರಾಗಬೇಕು ಎಂಬುದನ್ನು ಮಂತ್ರಿಗಳು ಯೋಚಿಸುತ್ತಿದ್ದರು. ಮುಂದೆ ರಾಜನಾಗುವವನನ್ನು ಗುರುತಿಸು ಎಂದು ಸ್ವಯಂಚಾಲಿತ ಪುಷ್ಪರಥವನ್ನು ಬಿಟ್ಟರು. ಅದು ಬಂದು ಬೋಧಿಸತ್ವನ ಮುಂದೆ ನಿಂತಿತು. ಮಂತ್ರಿಗಳು ಬಂದು ಅವನನ್ನು ಕರೆದೊಯ್ದು ರಾಜ್ಯಾಭಿಷೇಕ ಮಾಡಿದರು. ಈ ಸಂಭ್ರಮದಲ್ಲಿ ಬೋಧಿಸತ್ವ ತನ್ನ ಬಾಲ್ಯದ ಗೆಳೆಯ ಸೋನಕನನ್ನು ಮರೆತೇಬಿಟ್ಟ. ಬೋಧಿಸತ್ವನನ್ನು ಕರೆದುಕೊಂಡು ಹೋದ ಮೇಲೆ ಅಲ್ಲಿಯೇ ರಾಜೋದ್ಯಾನದಲ್ಲಿ ಉಳಿದ ಸೋನಕಕುಮಾರನ ಮುಂದೆ ಒಂದು ಒಣಗಿದ ಎಲೆ ಹಾರಿ ಬಂದು ಬಿತ್ತು. ಅದನ್ನು ಕಂಡು ಅವನಿಗೆ ಪ್ರೇರಣೆಯಾಯಿತು. ಈ ಎಲೆ ಹೇಗೆ ಒಣಗಿ ಹೋಯಿತೋ, ಹಾಗೆಯೇ ನನ್ನ ದೇಹವೂ ಒಂದು ದಿನ ಒಣಗಿ ಹೋಗುತ್ತದೆ. ಅಷ್ಟರಲ್ಲಿಯೇ ನಾನು ಬುದ್ಧತ್ವವನ್ನು ಪಡೆಯಬೇಕೆಂದು ಪ್ರವ್ರಜಿತನಾಗಿ ನಂದಮೂಲ ಪರ್ವತಕ್ಕೆ ಹೋಗಿಬಿಟ್ಟ.

ನಲವತ್ತು ವರ್ಷ ಬೋಧಿಸತ್ವ ಜೀವನವನ್ನು ಭೋಗಭಾಗ್ಯಗಳಲ್ಲೇ ಕಳೆದ. ಒಂದು ದಿನ ಆತನಿಗೆ ಬಾಲ್ಯ ಸ್ನೇಹಿತನ ನೆನಪಾಯಿತು. ಅವನನ್ನು ಕಾಣಬೇಕೆಂಬ ಅಪೇಕ್ಷೆಯಿಂದ ಎಲ್ಲೆಲ್ಲಿಯೂ ಡಂಗೂರವನ್ನು ಸಾರಿದ. ಆಗಲೇ ಪ್ರತ್ಯೇಕ ಬುದ್ಧನಾಗಿದ್ದ ಸೋನಕನಿಗೆ ತನ್ನ ಸ್ನೇಹಿತನ ಅಪೇಕ್ಷೆ ತಿಳಿಯಿತು. ಆಕಾಶಮಾರ್ಗವಾಗಿ ವಾರಾಣಸಿಗೆ ಬಂದು ಉದ್ಯಾನದಲ್ಲಿ ಉಳಿದ. ಅವನನ್ನು ನೋಡಲು ರಾಜ ಸಕಲ ಮಂಗಲವಸ್ತುಗಳು, ಚಿನ್ನ, ರತ್ನಗಳನ್ನು ತೆಗೆದುಕೊಂಡು ಬಂದ. ಸೋನಕ ಹೇಳಿದ, ‘ರಾಜಾ, ನನಗೆ ಈ ಯಾವ ವಸ್ತುಗಳಿಂದಲೂ ಪ್ರಯೋಜನವಿಲ್ಲ. ನೀನೂ ಈಗ ಬಹುಕಾಲ ರಾಜಭೋಗವನ್ನು ಆನಂದಿಸಿದ್ದೀ, ಇನ್ನು ಸಾಕು. ಮನಸ್ಸನ್ನು ಒಳಗೆ ತಿರುಗಿಸಿ ಪ್ರವ್ರಜಿತನಾಗು’.

ರಾಜ, ‘ಸೋನಕ, ನನ್ನ ಮನಸ್ಸು ಇನ್ನೂ ಸನ್ಯಾಸಿ ಜೀವನಕ್ಕೆ ಸಿದ್ಧವಾಗಿಲ್ಲ, ಭೋಗಕ್ಕೆ ವಿಮುಖವಾಗಿಲ್ಲ’ ಎಂದ. ಅದಕ್ಕೆ ಸೋನಕ, ‘ರಾಜಾ, ನಿನಗೊಂದು ಉಪಮೆಯನ್ನು ಕೊಡುತ್ತೇನೆ. ಗಂಗೆಯಲ್ಲಿ ಒಂದು ದೊಡ್ಡ ಆನೆಯ ಶವ ಕೊಚ್ಚಿಕೊಂಡು ಸಮುದ್ರದೆಡೆಗೆ ಹೋಗುತಿತ್ತು. ಅದನ್ನು ಕಂಡು ಒಂದು ಕಾಗೆ ಹಾರಿಬಂದು ಅದರ ಮೇಲೆ ಕುಳಿತಿತು. ಅದಕ್ಕೆ ಬಲು ಸಂಭ್ರಮ. ಬೇಕಾದಷ್ಟು ಆಹಾರ ಮತ್ತು ಪುಕ್ಕಟೆ ವಿಹಾರ. ಅದು ಮಾಂಸವನ್ನು ತಿಂದು ಗಂಗಾನೀರು ಕುಡಿದು ಅಲ್ಲಿಯೇ ಉಳಿಯಿತು. ಆದರೆ ಆನೆಯ ಶವ ಸಮುದ್ರವನ್ನು ಸೇರಿದಾಗ, ನೆಲಕಾಣದೆ, ಹಾರಲಾಗದೆ ಒದ್ದಾಡಿ ತಿಮಿಂಗಲುಗಳಿಗೆ ಆಹಾರವಾಗಿ ಹೋಯಿತು. ಬರೀ ಕಾಮಭೋಗದಲ್ಲಿ ಮೈಮರೆತವರು ಆ ಕಾಗೆಯಂತಾಗುತ್ತಾರೆ’ ಎಂದು ತಿಳಿಸಿದ. ತಕ್ಷಣವೇ ರಾಜ ಪ್ರವ್ರಜಿತನಾಗಿ ಸ್ನೇಹಿತನೊಂದಿಗೆ ಹೊರಟುಬಿಟ್ಟ.

ನೀತಿಯ ಮಾತಿನಿಂದಾಗದ್ದು ಒಂದು ಉಪಮೆಯಿಂದ ಸಾಧ್ಯವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.