ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಧರೆಯ ಸುಖ-ಕೇವಲ ಬಡ್ಡಿ

Last Updated 3 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಧರೆಯ ಸುಖ-ಕೇವಲ ಬಡ್ಡಿ
ಪರಮ ಲಾಭವ ಗಳಿಸೆ ಜೀವಿತವ್ಯಾಪಾರ - |
ಕಿರಬೇಕು ಮೂಲಧನವದು ತತ್ವದೃಷ್ಟಿ ||
ಚಿರಲಾಭ ಜಗದಾತ್ಮ ಲೀಲಾವಿಹಾರಸುಖ |
ಧರೆಯ ಸುಖ ಮೇಲ್ ಬಡ್ಡಿ
– ಮಂಕುತಿಮ್ಮ ||749||

ಪದ-ಅರ್ಥ: ಗಳಿಸೆ=ಗಳಿಸಲು, ಜೀವಿತವ್ಯಾಪಾರ ಕಿರಬೇಕು=ಜೀವಿತ+ವ್ಯಾಪಾರಕೆ+ಇರಬೇಕು, ಮೂಲಧನವದು=ಮೂಲಧನವು+ಅದು,
ಚಿರಲಾಭ=ಶಾಶ್ವತವಾದ ಲಾಭ, ಮೇಲ್=ಮೇಲಿನ.

ವಾಚ್ಯಾರ್ಥ: ಜೀವನದ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಗಳಿಸಲು ಮೂಲಧನ ಇರಬೇಕು. ಅದು ತತ್ವದೃಷ್ಟಿ. ಶಾಶ್ವತ ಲಾಭವೆಂದರೆ ಜಗದಾತ್ಮದ ಲೀಲಾವಿಹಾರದಲ್ಲಿ ದೊರೆಯುವ ಸುಖ. ಭೂಮಿಯಲ್ಲಿ ದೊರೆಯುವ ಸುಖ ಕೇವಲ ಮೇಲಿನ ಬಡ್ಡಿ ಮಾತ್ರ.

ವಿವರಣೆ: ಯಾವುದೇ ವ್ಯಾಪಾರ ಮಾಡಲು ಮೊದಲು ಮೂಲಧನ ಬೇಕು. ಆ ಮೂಲಧನದ ಧೈರ್ಯದ ಮೇಲೆಯೇ ವ್ಯಾಪಾರ ನಡೆಯುವುದು. ಮೂಲಧನವಿಲ್ಲದೆ ಪ್ರಾರಂಭಿಸಿದ ವ್ಯವಹಾರ ಅತಂತ್ರ. ಅಂತೆಯೇ ಮನುಷ್ಯನ ಜೀವಿತವೆಂಬ ವ್ಯಾಪಾರಕ್ಕೆ ಮೂಲಧನ ತತ್ವದೃಷ್ಟಿ. ಆ ತತ್ವದೃಷ್ಟಿ ಹೇಗಿರಬೇಕೆಂಬುದನ್ನು ಡಿ.ವಿ.ಜಿ ತಮ್ಮ ‘ಬಾಳಿಗೊಂದು ನಂಬಿಕೆ’ ಗ್ರಂಥದಲ್ಲಿ ಮನಮುಟ್ಟುವಂತೆ ಹೇಳುತ್ತಾರೆ ‘ಜೀವನವು ದೇವರು ಕೊಟ್ಟ ವರ, ಜೀವನವನ್ನು ಅಂದಗೊಳಿಸುವುದೇ ನಾವು ದೇವರಿಗೆ ಸಲ್ಲಿಸುವ ಕೃತಜ್ಞತೆ. ಜೀವನ ಸಮೃದ್ಧಿ, ಜೀವನ ಸಂಸ್ಕಾರ, ಜೀವನ ಸೌಂದರ್ಯ, ಇದು ಬರಿಯ ಐಹಿಕಾಸಕ್ತಿಯಲ್ಲ, ಭೋಗನಿಷ್ಠೆಯಲ್ಲ, ಅದು ವೇದವೇದಾಂತಗಳ ಸಾರಾಂಶ. ಅದರಲ್ಲಿ ಅತ್ಯಾಶೆ ಬೇಡ, ಉದ್ವೇಗ ಬೇಡ, ಆತುರ ಬೇಡ, ಆವೇಶ ಬೇಡ, ಪ್ರತಿಫಲ ನಿರೀಕ್ಷೆಯ ಅತಿ ಸಂಭ್ರಮ ಬೇಡ; ಹಾಗೆ ಆಲಸ್ಯವೂ ಬೇಡ; ಪ್ರಮತ್ತತೆ ಬೇಡ. ಪ್ರಕೃತಿಯ ಕಾರ್ಯದಂತೆ, ಸೂರ್ಯೋದಯದಂತೆ, ಗಿಡ ಚಿಗುರುವಂತೆ, ನಿರಾಡಂಬರವಾಗಿ ಎಡೆಬಿಡದೆ ಸಾಗುತ್ತಿರಲಿ ನಮ್ಮ ಜೀವಿತದ ವ್ಯವಸಾಯ.’

ಆದರೆ ಶಾಶ್ವತವಾದ ಲಾಭ ನಮಗೆ ದೊರಕುವುದು ಜಗದಾತ್ಮವಾದ ಪರಮಾತ್ಮನ ಲೀಲಾ ವಿಹಾರದಲ್ಲಿ ದೊರೆಯುವ ಸುಖ. ಅದನ್ನು ಪಡೆಯಲು ಏನು ಮಾಡಬೇಕು? ಸಾಗರದಲ್ಲಿ ತೆರೆಯಾದಂತೆ, ಸೂರ್ಯನಲ್ಲಿ ಬೆಳಕಾದಂತೆ, ವಜ್ರದಲ್ಲಿ ಹೊಳಪಿದ್ದಂತೆ ಭಗವಂತನ ಸೃಷ್ಟಿಯಲ್ಲಿ ನನ್ನತನವನ್ನು ಕರಗಿಸಿ ಮರೆತು ಹೋಗಬೇಕು.

ಸತ್ಯಕಾಮ ಜ್ಞಾನಕ್ಕಾಗಿ ತಹತಹಿಸಿದ, ಗುರುವಿನ ಬಳಿ ಸಾರಿದ. ಅವರೊಂದು ಕೆಲಸ ಕೊಟ್ಟರು. ‘ಈ ಗೋವುಗಳನ್ನು ಕಾಡಿಗೆ ಒಯ್ದು, ನೂರಾದ ಮೇಲೆ ಕರೆದು ತಾ’ ಎಂದರು. ಸತ್ಯಕಾಮ ಕಾಡಿನ ಸೌಂದರ್ಯದಲ್ಲಿ ಮೈ ಮರೆತ. ಸೂರ್ಯನ ಬೆಳಕಿನಲ್ಲಿ ಹೊಳಪಾದ, ಚಂದ್ರನ ಬೆಳದಿಂಗಳಿನಲ್ಲಿ ತಂಪಾದ, ಹೂವಿನಲ್ಲಿ ಸುಗಂಧವಾದ, ಹಕ್ಕಿಗಳ ಕೊರಳಿನ ಧ್ವನಿಯಾದ, ನದಿಯ ನೀರಿನ ಹರಿವಾದ. ತಾನೇ ಪ್ರಕೃತಿಯಾದ. ಅದೊಂದು ಅದ್ಭುತ ಸಮಾಧಿಯ ಅವಸ್ಥೆ. ಯಾವುದೂ ಶಾಶ್ವತವಲ್ಲ, ಸ್ಥಿರವಾದದ್ದು ಆತ್ಮ ಮಾತ್ರ ಎಂದು ತಿಳಿದು ಸತ್ಯಕಾಮ ದಾರ್ಶನಿಕನಾದ. ಹಾಗೆ ಅಂತರ್‌ದೃಷ್ಟಿ ಇದ್ದವನಿಗೆ ಅಪ್ರಯತ್ನ ಸಾಕ್ಷಾತ್ಕಾರ!

ಕಗ್ಗದ ಮಾತೂ ಅದೇ. ಜಗದ ಆತ್ಮದ ಲೀಲೆಯಲ್ಲಿ ವಿಹಾರ ಮಾಡುವುದೇ ಶಾಶ್ವತವಾದ ಲಾಭ. ಭೌತಿಕ ಜೀವನದಲ್ಲಿ, ನಿತ್ಯವ್ಯವಹಾರಗಳಲ್ಲಿ ದೊರೆಯುವ ಸುಖ, ಮೂಲಧನದ ಮೇಲೆ ದೊರಕಿದ ಬಡ್ಡಿ ಇದ್ದಂತೆ. ನಿಮ್ಮ ಮೂಲಧನ ನಿಮ್ಮ ಬಳಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT