ಶನಿವಾರ, ಸೆಪ್ಟೆಂಬರ್ 19, 2020
25 °C

ಅತ್ಯಂತ ಶ್ರೇಷ್ಠದಾನ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಶಿವಿರಾಷ್ಟ್ರದ ಅರಿಟ್ಠಪುರದಲ್ಲಿ ಶಿವಿ ಮಹಾರಾಜ ರಾಜ್ಯಭಾರ ಮಾಡುತ್ತಿದ್ದ. ಬೋಧಿಸತ್ವ ಅವನ ಮಗನಾಗಿ ಹುಟ್ಟಿದ್ದ. ಬೆಳೆದಂತೆ ಆತ ಸಕಲ ವಿದ್ಯಾಪಾರಂಗತನಾದ. ತಂದೆ ಕಾಲವಾದ ಮೇಲೆ ತಾನೇ ರಾಜನಾದ. ಅತ್ಯಂತ ಧರ್ಮದಲ್ಲಿ ರಾಜ್ಯಪಾಲನೆ ಮಾಡುತ್ತಲಿದ್ದ. ಅದರಲ್ಲೂ ಪ್ರತಿನಿತ್ಯ ದಾನಶಾಲೆಗಳಲ್ಲಿ ದಾನ ಮಾಡುತ್ತಿದ್ದ.

ಒಂದು ದಿನ ಹೀಗೆ ದಾನಶಾಲೆಯಲ್ಲಿ ಕುಳಿತಾಗ ಅವನಿಗೆ ಯೋಚನೆಯೊಂದು ಬಂದಿತು. ದಾನ ಮಾಡುವ ಹಣ ರಾಜಕೋಶದಿಂದ ಬಂದದ್ದು. ರಾಜ್ಯ ತಂದೆಯಿಂದ ಬಂದದ್ದು. ಹಾಗಾದರೆ ಈ ದಾನ ನನ್ನದು ಹೇಗಾದೀತು? ನನ್ನದಾದದ್ದನ್ನು ನಾನು ಏನು ಕೊಟ್ಟಿದ್ದೇನೆ? ಹಾಗೆ ಕೊಡುವುದಾದರೆ ಅದು ನನ್ನದು. ಯಾರಾದರೂ ನನ್ನ ದೇಹದ ಮಾಂಸವನ್ನು ಕೇಳಿದರೆ, ಅಂಗಗಳನ್ನು ಕೇಳಿದರೆ, ಕೊಟ್ಟುಬಿಡುತ್ತೇನೆ ಎಂದು ತೀರ್ಮಾನ ಮಾಡಿದ. ಈ ಮಾತನ್ನು ತಿಳಿದು ಇವನ ಮನೋನಿಶ್ಚಯವನ್ನು ಪರೀಕ್ಷೆ ಮಾಡಲೆಂದು ಶಕ್ರ ಕುರುಡ ಮುದುಕನ ರೂಪದಲ್ಲಿ ಬೋಧಿಸತ್ವನ ಮುಂದೆ ಬಂದು ನಿಂತ. ರಾಜನನ್ನು ಕೇಳಿದ, ‘ಶುಭಾಂಗ, ನೀನು ರಾಜ, ಮಹಾದಾನಿ. ಆದರೆ ನಾನು ಹುಟ್ಟು ಕುರುಡ, ಎರಡೂ ಕಣ್ಣಿಲ್ಲ. ನೀನು ನನಗೆ ಕಣ್ಣುಗಳನ್ನು ನೀಡಬಲ್ಲೆಯಾ?’ ರಾಜನಿಗೆ ಆಶ್ಚರ್ಯವಾಯಿತು. ಈಗ ತಾನೇ ಮನದಲ್ಲಿ ತೀರ್ಮಾನ ಮಾಡಿಕೊಂಡಾಗ, ತಕ್ಷಣವೇ ಯಾಚಕನೊಬ್ಬ ಬಂದನಲ್ಲ !

ಕುರುಡ ಮುದುಕನನ್ನು ಕರೆದುಕೊಂಡು ಅರಮನೆಗೆ ಬಂದ. ಆಸ್ಥಾನ ವೈದ್ಯನಾದ ಸೀವಕನನ್ನು ಕರೆದು ತನ್ನ ಕಣ್ಣುಗಳನ್ನು ತೆಗೆದು ಮುದುಕನ ಕಣ್ಣಿಗೆ ಹಚ್ಚಿಬಿಡಲು ಹೇಳಿದ. ರಾಣಿ, ಮಕ್ಕಳು ಮಂತ್ರಿಗಳು ಗೋಗರೆದರು. ಬೇಕಾದರೆ ಮುದುಕನಿಗೆ ಬೇಕಾದಷ್ಟು ಹಣ, ಮರ್ಯಾದೆಗಳನ್ನು ಕೊಡಿ, ಕಣ್ಣುಗಳನ್ನು ಬೇಡ. ರಾಜನಾದವನು ಕಣ್ಣಿಲ್ಲದೆ ರಾಜ್ಯಭಾರ ಮಾಡುವುದು ಹೇಗೆ? ಆದರೆ ಬೋಧಿಸತ್ವ ತನ್ನ ವೃತದಿಂದ ಹಿಂದೆ ಸರಿಯಲಿಲ್ಲ. ವೈದ್ಯ ನಿರುಪಾಯನಾಗಿ ಎರಡೂ ಕಣ್ಣುಗಳನ್ನು ಕಿತ್ತು ಮುದುಕನ ಕಣ್ಣಿಗೆ ಹಚ್ಚಿಬಿಟ್ಟ. ಶಕ್ರ ಇಂದ್ರಲೋಕಕ್ಕೆ ಹೋಗಿಬಿಟ್ಟ. ಬೋಧಿಸತ್ವ ಪೂರ್ತಿ ಕುರುಡನಾದ.

ಕೆಲವು ದಿನಗಳ ನಂತರ ರಾಜ ಚಿಂತಿಸಿದ. ಕುರುಡನಾಗಿ ರಾಜ್ಯವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಿಲ್ಲ. ಹಾಗಾದರೆ ಇಲ್ಲಿರುವುದಕ್ಕಿಂತ ಕಾಡಿಗೆ ಹೋಗಿ ಪ್ರವ್ರಜಿತನಾಗಿ ಶ್ರಮಣ ಧರ್ಮವನ್ನು ಪಾಲಿಸುತ್ತೇನೆ ಎಂದುಕೊಂಡ. ಅರಮನೆಯಲ್ಲಿ ಯಾರೂ ಒಪ್ಪಲಿಲ್ಲ. ಕಾಡಿನಲ್ಲಿ ಕುರುಡ ಹೇಗೆ ಬದುಕಿಯಾನು ಎಂಬ ಚಿಂತೆ ಅವರದ್ದು. ರಾಜ ಹೇಳಿದ, ‘ನನ್ನೊಂದಿಗೆ ಸೇವಕನೊಬ್ಬನು ಬರಲಿ. ಅವನು ನನಗೆ ಹಣ್ಣು ಹಂಪಲಗಳನ್ನು ತಂದು ಕೊಡಲಿ. ನನ್ನ ಸೊಂಟಕ್ಕೊಂದು ಉದ್ದದ ಹಗ್ಗ ಕಟ್ಟಿದರೆ ಸಾಕು. ಆಶ್ರಮದಿಂದ ಕೆಲದೂರ ಸಾಗಿ ಶಾರೀರಿಕ ಕ್ರಿಯೆಗಳನ್ನು ಮುಗಿಸಲು ಅನುವಾಗುತ್ತದೆ. ಹೀಗೆ ಹೇಳಿ ಅವರನ್ನು ಒಪ್ಪಿಸಿದ. ಆಗ ಶಕ್ರ ಮತ್ತೆ ಅವನ ಮುಂದೆ ಬಂದು ನಿಂತ. ‘ಮಹಾರಾಜಾ, ನೀನು ಕುರುಡನಾದುದರಿಂದ ಪ್ರವ್ರಜಿತನಾಗ ಬಯಸುವೆಯೋ, ಇಲ್ಲ, ಪರಲೋಕಪ್ರಾಪ್ತಿಗಾಗಿ ಕಾಡಿಗೆ ತೆರಳುತ್ತಿರುವೆಯೋ?’ ಎಂದು ಕೇಳಿದ. ಬೋಧಿಸತ್ವ, ‘ಶಕ್ರ, ನಿನ್ನನ್ನು ಅಂದೇ ನಾನು ಗುರುತಿಸಿದ್ದೆ. ನೀನು ಬಂದಿದ್ದು ನನ್ನ ಪರೀಕ್ಷೆಗೆಂದೇ ತಿಳಿದಿತ್ತು. ನಿನಗೆ ಗೊತ್ತಿದೆ, ನನಗೆ ರಾಜ್ಯದ ಮೇಲೆ, ಹಣದ ಮೇಲೆ ಯಾವ ಮೋಹವೂ ಇಲ್ಲ, ಯಾಕೆಂದರೆ ಯಾವುದೂ ನನ್ನದಲ್ಲ. ಈಗಲೂ ನಾನು ಆತ್ಮವೃದ್ಧಿಗಾಗಿಯೇ ಕಾಡಿಗೆ ಹೋಗುತ್ತಿದ್ದೇನೆ’ ಎಂದ. ಶಕ್ರ ಸಂತೋಷದಿಂದ ರಾಜನ ಕಣ್ಣುಗಳನ್ನು ಮರಳಿಸಿದ ಮತ್ತು ಅವನೇ ರಾಜನಾಗಿ ಮುಂದುವರೆಯುವಂತೆ ಮಾಡಿದ. ಬೋಧಿಸತ್ವ ಹೇಳಿದ, ‘ದಯವಿಟ್ಟು ದಾನ ಮಾಡಿ. ನಿಮ್ಮ
ದಾದದ್ದನ್ನು ದಾನ ಮಾಡಿ. ಅದು ಶ್ರೇಷ್ಠ’. ಅದು ಸರಿಯಾದ ಮಾತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.