ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮನ-ಬುದ್ಧಿ ದಾಂಪತ್ಯ

Last Updated 17 ಜನವರಿ 2022, 14:57 IST
ಅಕ್ಷರ ಗಾತ್ರ

ಭಾವದಾವೇಶದಿಂ ಮನವಶ್ವದಂತಿರಲಿ |

ಧೀವಿವೇಚನೆಯದಕೆ ದಕ್ಷರಾಹುತನು ||

ತೀವಿದೊಲವಿನ ದಂಪತಿಗಳಾಗೆ ಮನಬುದ್ಧಿ |

ಜೀವಿತವು ಚೈತ್ರಕಥೆ- ಮಂಕುತಿಮ್ಮ|| 543 ||

ಪದ-ಅರ್ಥ: ಭಾವದಾವೇಶದಿಂ=ಭಾವದ+ಆವೇಶದಿಂ(ಆವೇಶದಿಂದ), ಮನವಶ್ವದಂತಿರಲಿ=ಮನ+ಅಶ್ವದಂತೆ+ಇರಲಿ, ಧೀವಿವೇಚನೆಯದಕೆ=ಧೀ(ಬುದ್ಧಿ)+ವಿವೇಚನೆ+ಅದಕೆ, ದಕ್ಷರಾಹುತ=ದಕ್ಷ(ಸಮರ್ಥನಾದ)+ರಾಹುತ(ಕುದುರೆಸವಾರಿ), ತೀವಿದೊಲವಿನ=ತೀವಿದ(ತುಂಬಿದ)+ಒಲವಿನ, ಚೈತ್ರಕಥೆ=ಚೈತ್ರ(ವಿಜಯ)+ಕಥೆ.

ವಾಚ್ಯಾರ್ಥ: ಭಾವದ ಆವೇಶದಿಂದ ಮನಸ್ಸು ಕುದುರೆಯ ಹಾಗೆ ಇರಲಿ. ಬುದ್ಧಿಯ ವಿವೇಚನೆ ಎನ್ನುವುದು ಸಮರ್ಥ ಸವಾರನಿದ್ದಂತೆ. ಮನಸ್ಸು ಮತ್ತು ಬುದ್ಧಿಗಳು ತುಂಬಿದ ಪ್ರೀತಿಯ ದಂಪತಿಗಳಂತೆ ಅನ್ಯೋನ್ಯವಾಗಿದ್ದರೆ, ಬದುಕು ಜಯದ ಗಾಥೆಯಾಗುತ್ತದೆ.

ವಿವರಣೆ: ಕಠೋಪನಿಷತ್ತಿನ ಒಂದು ಸುಂದರವಾದ ರೂಪಕ ಹೀಗಿದೆ.

ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ತು

ಬುದ್ಧಿಂ ತು ಸಾರಥಿಂವಿದ್ಧಿ ಮನ: ಪ್ರಗ್ರಹಮೇವ ಚ||

ಇಂದ್ರಿಯಾಣಿ ಹಯಾನ್ಯಾಹು: ವಿಷಯಾಂಸ್ತೇಷು ಗೋಚರಾನ್ ||

“ಶರೀರವನ್ನು ರಥವೆಂದೂ, ಆತ್ಮನು ಅದರಲ್ಲಿ ಪಯಣಿಸುವ ರಥಿಯೆಂದೂ ತಿಳಿ. ಬುದ್ಧಿಯು ಸಾರಥಿ, ಮನಸ್ಸು ಕಡಿವಾಣ ಮತ್ತು ಇಂದ್ರಿಯಗಳು ಕುದುರೆಗಳು. ಇಂದ್ರಿಯ ವಿಷಯಗಳು ರಥ ಸಾಗುವ ದಾರಿ”.

ಈ ಶ್ಲೋಕ ಕಗ್ಗಕ್ಕೆ ಎಷ್ಟು ಸಂವಾದಿಯಾಗಿದೆ! ಸಾರಥಿಯಾಗಿದ್ದ ಬುದ್ಧಿ ಸದಾ ಎಚ್ಚರದಿಂದಿದ್ದು, ಮನಸ್ಸೆಂಬ ಕಡಿವಾಣವನ್ನು ಬಿಗಿಯಾಗಿ ಹಿಡಿದುಕೊಂಡಿದ್ದರೆ, ಇಂದ್ರಿಯಗಳೆಂಬ ಕುದುರೆಗಳು ಸರಿಯಾದ ದಾರಿಯಲ್ಲಿ ಹೋಗುತ್ತವೆ. ಆಗ ರಥ ನಿರ್ದಿಷ್ಟವಾದ ಗುರಿಯನ್ನು ಸೇರುತ್ತದೆ.

ನಾವು ಯಾವುದೇ ಕಾರ್ಯವನ್ನು ಮಾಡುವಾಗ ಮನಸ್ಸು ಕಾರ್ಯವನ್ನು ಕುರಿತು ಯೋಚಿಸಬೇಕು. ಅದರಲ್ಲಿ ಆಸಕ್ತಿಯನ್ನು ಹೊಂದಬೇಕು. ಆಸಕ್ತಿ ಪ್ರಬಲವಾಗಬೇಕು. ಅದನ್ನೇ ಕಗ್ಗ ಭಾವದ ಆವೇಶದಿಂದ ಮನಸ್ಸು ಶಕ್ತಿಶಾಲಿಯಾದ ಕುದುರೆಯಂತಿರಬೇಕು ಎನ್ನುತ್ತದೆ. ಅಶಕ್ತವಾದ, ಅನಾಸಕ್ತತವಾದ ಮನಸ್ಸು ಯಾವುದನ್ನೂ ಮಾಡಲಾರದು. ಮನಸ್ಸು ವಿಚಾರಗಳ ಮೂಲ. ಅದೊಂದು ಭಾವನೆಗಳ ಮಹಾಪ್ರವಾಹ. ಅದು ಕ್ರಿಯಾಶೀಲವೂ ಹೌದು, ವಿಕಾರಶೀಲವೂ ಹೌದು. ಅದು ಇಂದ್ರಿಯಗಳ ಸಹಾಯದಿಂದ ಶಬ್ದ, ಸ್ಪರ್ಶ, ರೂಪ, ರಸ, ಗ್ರಂಥಗಳನ್ನು ತಿಳಿಯುತ್ತದೆ. ನಾವು ಇಂದ್ರಿಯಗಳ ಗುಲಾಮರಾದರೆ ಒಂದು ಮಾತು, ಒಂದು ದೃಶ್ಯ ನಮ್ಮ ಭಾವೋದ್ವೇಗವನ್ನು ಕೆರಳಿಸುತ್ತವೆ. ಆಗ ಮನಸ್ಸು ಇಂದ್ರಿಯಗಳನ್ನು ನಿಗ್ರಹಿಸುವ ಬದಲು ಇಂದ್ರಿಯಗಳು ಮನಸ್ಸನ್ನು ನಿಯಂತ್ರಿಸುತ್ತವೆ. ಬದುಕಿನ ಪ್ರಯಾಣದ ದಾರಿ ತಪ್ಪುತ್ತದೆ. ಕುದುರೆ ಬಲಶಾಲಿಯಾದಷ್ಟೂ ಅದರ ಸವಾರ ಹೆಚ್ಚು ಸಮರ್ಥನಾಗಬೇಕಾಗುತ್ತದೆ. ಎಲ್ಲಿಯವರೆಗೂ ಕುದುರೆ ಸವಾರನ ನಿಯಂತ್ರಣದಲ್ಲಿದೆಯೋ ಅಲ್ಲಿಯವರೆಗೆ ಅದು ಅಪೇಕ್ಷಿತ ದಾರಿಯಲ್ಲಿಯೇ ಸಾಗುತ್ತದೆ. ಆದರೆ ಸವಾರ ಅಶಕ್ತನಾದರೆ ಕುದುರೆ ಅವನನ್ನು ಕೆಳಗೆ ಕೆಡವಿ, ಅವನ ಮಾತನ್ನು ಕೇಳದೆ ತನ್ನ ದಾರಿಯಲ್ಲೇ ಹೋಗಿ ಬಿಡುತ್ತದೆ. ನಿಜವಾದ ಬುದ್ಧಿ ಆಸೆಗಳನ್ನು ಹತ್ತಿಕ್ಕುವುದಿಲ್ಲ, ಅವುಗಳನ್ನು ಪ್ರಚೋದಿಸುತ್ತದೆ. ಆದರೆ ಅದು ಅತಿಯಾಗದಂತೆ ನಿಯಂತ್ರಿಸುತ್ತದೆ. ಆಸೆಗಳಿಲ್ಲದ ಮನಸ್ಸು ಸತ್ತ ಕುದುರೆ. ಅದಕ್ಕೆ ಸವಾರ ಯಾಕೆ ಬೇಕು? ಅತಿಯಾದ ಆಸೆಯ ಮನಸ್ಸು ಬುದ್ಧಿಯನ್ನು ಕೆಡಿಸುತ್ತದೆ. ಆದ್ದರಿಂದ ಬುದ್ಧಿ ಶಿಸ್ತುಗೊಳಿಸಲ್ಪಟ್ಟು ಏಕನಿಷ್ಠವಾಗಿರಬೇಕು. ಅಂಥ ಮನಸ್ಸನ್ನು ಗೀತೆ “ವ್ಯವಸಾಯಾತ್ಮಿಕಾ ಬುದ್ಧಿ:” ಎನ್ನುತ್ತದೆ. ಈ ಕಗ್ಗದ ಸಂದೇಶವೆಂದರೆ, ಎಲ್ಲಿ ಮನಸ್ಸು ಮತ್ತು ಬುದ್ಧಿಗಳು ಪರಸ್ಪರ ತುಂಬ ಒಲವಿನಿಂದ ಕೂಡಿದ ದಂಪತಿಗಳ ಹಾಗೆ ಅನ್ಯೋನ್ಯವಾಗಿರುತ್ತವೆಯೋ, ಆ ಬದುಕಿನ ಪ್ರಯಾಣ ಒಂದು ಯಶಸ್ಸಿನ ಕಥೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT