ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮರುಜನ್ಮ

Last Updated 1 ಜನವರಿ 2023, 21:44 IST
ಅಕ್ಷರ ಗಾತ್ರ

ಜ್ವರ ಬಂದು ತನು ಬೆಂದ ಯಾತನೆಯ ಮಾತೇನು ? |
ಉರಿಬೇಗೆಯಿಳಿಯೆ ಹೊಸ ಹೊಸಬನಾ ನರನು ||
ಕರಣತಪನೆಗಳಿಳಿಯೆ, ಕಾರಣವದೇನಿರಲಿ |
ಮರುಜನ್ಮವಾತ್ಮಂಗೆ – ಮಂಕುತಿಮ್ಮ || 788 ||

ಪದ-ಅರ್ಥ: ಉರಿಬೇಗೆಯಿಳಿಯೆ=ಉರಿಬೇಗೆ (ತೀವ್ರಜ್ವರ)+ಇಳಿಯೆ, ಹೊಸಬನಾ=ಹೊಸಬನು+ಆ, ಕರಣತಪನೆಗಳಿಳಿಯೆ=ಕರಣ(ಇಂದ್ರಿಯ)+ತಪನೆ(ತಾಪ)ಗಳನ್ನು+ಇಳಿಯೆ, ಕಾರಣವದೇನಿರಲಿ=ಕಾರಣವು+ಅದೇನು+ಇರಲಿ, ಮರುಜನ್ಮವಾತ್ಮಂಗೆ=ಮರುಜನ್ಮ(ಪುನರ್ಜನ್ಮ)+ಆತ್ಮಂಗೆ(ಆತ್ಮನಿಗೆ)

ವಾಚ್ಯಾರ್ಥ: ಜ್ವರ ಬಂದಾಗ, ದೇಹ ಬೆಂದು ಆದ ಯಾತನೆಯು ತುಂಬ ಹೆಚ್ಚು. ಆದರೆ ತೀವ್ರವಾದ ಜ್ವರ ಇಳಿದ ಮೇಲೆ ಮನುಷ್ಯ ಹೊಸದಾಗಿರುವಂತೆ ಚುರುಕಾಗುತ್ತಾನೆ. ಅದಾವ ಕಾರಣಕ್ಕೋ, ಇಂದ್ರಿಯಗಳ ತಾಪ ಇಳಿದಾಗ ಮನುಷ್ಯನಿಗೆ ಪುನರ್ಜನ್ಮವಾದಂತೆ.

ವಿವರಣೆ: ನಮಗೆಲ್ಲ ಅಂಗುಲಿಮಾಲನ ಕಥೆ ಗೊತ್ತಿದೆ. ಅವನದೊಂದು ವಿಚಿತ್ರವಾದ ಆದರೆ ಕ್ರೂರ ವ್ರತ. ಸಾವಿರ ಜನರನ್ನು ಕೊಂದುಬಿಡುತ್ತೇನೆ ಎಂದು ತೀರ್ಮಾನಿಸಿದ. ಲೆಕ್ಕ ಇಡುವುದು ಹೇಗೆ? ತಾನು ಕೊಂದವರ ತೋರುಬೆರಳುಗಳನ್ನು ಕತ್ತರಿಸಿ, ದಾರದಲ್ಲಿ ಪೋಣಿಸಿ ಕೊರಳಲ್ಲಿ ಹಾಕಿಕೊಂಡಿದ್ದ. ಅದಕ್ಕೇ ಅವನು ಅಂಗುಲಿಮಾಲ- ತೋರುಬೆರಳುಗಳ ಮಾಲೆ ಹಾಕಿಕೊಂಡವನು. ಒಮ್ಮೆ ಭಗವಾನ್ ಬುದ್ಧ, ಅಂಗುಲಿಮಾಲನಿದ್ದ ಕಾಡಿನ ಪ್ರದೇಶಕ್ಕೆ ಬಂದ. ಕತ್ತಿ ಹಿರಿದು ನಿಂತಿದ್ದ ಕ್ರೂರಿಯನ್ನು ಪ್ರೇಮ ತುಂಬಿದ ಕಣ್ಣುಗಳಿಂದ ಸೋಲಿಸಿ ಗೆದ್ದ. ಅಂಗುಲಿಮಾಲ ಬುದ್ಧನಿಗೆ ಶರಣಾದ. ಇದು ನಮಗೆ ಸಾಮಾನ್ಯವಾಗಿ ತಿಳಿದ ಕಥೆ. ಮುಂದೇನಾಯಿತುಎನ್ನುವುದು ಮುಖ್ಯ. ಅಂಗುಲಿಮಾಲ ಬುದ್ಧನ ಶಿಷ್ಯನಾಗಿ ಅವನನ್ನು ಹಿಂಬಾಲಿಸಲು ಬೇಡಿದ. ಬುದ್ಧ ಹೇಳಿದ, “ಈಗಲೇ ಬರುವುದು ಬೇಡ.

ನೀನು ಈ ಪ್ರದೇಶದ ಹಳ್ಳಿಗಳಲ್ಲಿ ಮೂರು ವರ್ಷ ಜನರ ಸೇವೆ ಮಾಡು. ನಂತರ ನನ್ನ ಬಳಿಗೆ ಬರುವಿಯಂತೆ”. ಅಂಗುಲಿಮಾಲ ಹೌಹಾರಿದ. “ಪ್ರಭೂ, ನಾನಿಲ್ಲಿಯ ಅನೇಕರನ್ನು ಕೊಂದಿದ್ದೇನೆ. ಅವರು ನನ್ನನ್ನು ಬಿಟ್ಟಾರೆಯೇ? ಸತ್ತವರ ಮಕ್ಕಳು, ಸಂಬಂಧಿಕರಿಗೆ ನನ್ನ ಮೇಲೆ ಅಸಾಧ್ಯ ಕೋಪವಿದೆ. ಅವರ ಮಧ್ಯೆ ನಾನು ಹೇಗೆ ಬದುಕಲಿ?”. “ಅದು ನಿನ್ನ ಕರ್ಮ. ಅದನ್ನು ಸವೆಸಲೇ ಬೇಕು. ಅವರು ನಿನಗೆ ಹೊಡೆದರೂ, ಶಿಕ್ಷಿಸಿದರೂ ನೀನು ತಾಳ್ಮೆ ಕಳೆದುಕೊಳ್ಳದೆ ಪ್ರೀತಿಯಿಂದ ಅವರ ಸೇವೆ ಮಾಡು” ಎಂದು ಹೇಳಿ ನಡೆದ ಬುದ್ಧ. ಅಂಗುಲಿಮಾಲ ಸುತ್ತಲಿನ ಹಳ್ಳಿಗಳಿಗೆ ನಡೆದ. ಜನ ಅವನಿಗೆ ಹೊಡೆದರು. ಹಣೆಯ ಮೇಲೆ ರಕ್ತ ಚಿಮ್ಮಿತು, ಮೈಮೇಲೆ ಬಾಸುಂಡೆಗಳು ಮೂಡಿದವು. ಅನೇಕ ದಿನ ಊಟವಿಲ್ಲದೆ ಇದ್ದ. ಸೇವೆಯನ್ನು ಬಿಡಲಿಲ್ಲ. ದಿನಗಳೆದಂತೆ ಜನ ಅವನಲ್ಲಿ ಆದ ಪರಿವರ್ತನೆಯನ್ನು ಕಂಡರು, ಸೇವೆಯನ್ನು ಮೆಚ್ಚಿದರು. ಮೂರು ವರ್ಷಗಳಲ್ಲಿ ಆತ ತ್ಯಾಗದ, ಸೇವೆಯ, ಪ್ರೇಮದ ಪ್ರತಿಮೂರ್ತಿಯೇ ಆದ. ಆಗ ಬುದ್ಧ ಬಂದು ಅವನನ್ನು ಕರೆದೊಯ್ದು ತನ್ನ ಪ್ರಮುಖ ಶಿಷ್ಯರಲ್ಲಿ ಒಬ್ಬನನ್ನಾಗಿಸಿದ. ಇದು ಒಂದು ಜೀವ ಸಂಪೂರ್ಣ ಪರಿವರ್ತನೆಯನ್ನು ಹೊಂದಿದ ಕಥೆ. ಜ್ವರ ಬಂದು ಇಳಿದ ಮೇಲೆ ದೇಹ ಹಗುರಾಗಿ ಹೊಸ ಚೈತನ್ಯ ಬರುತ್ತದೆ. ಹಾಗೆಯೇ ಯಾವುದೇ ಕಾರಣದಿಂದ ಇಂದ್ರಿಯಗಳ ತಾಪ ಇಳಿದು ಹೋದರೆ ಅದೊಂದು ಮರುಜನ್ಮವಿದ್ದಂತೆ. ಕ್ರೂರತೆಯನ್ನು, ಕಾಮವನ್ನು ಜೀವನದ ಮಾರ್ಗವನ್ನಾಗಿಯೇ ಮಾಡಿಕೊಂಡಿದ್ದ ಅಂಗುಲಿಮಾಲ, ಬುದ್ಧದರ್ಶನದ ಅಮೃತ ಕ್ಷಣದಲ್ಲಿ ಅವನ್ನೆಲ್ಲ ನೀಗಿಕೊಂಡು ಸಂತನಾಗಿ ಪುನರ್ಜನ್ಮ ಪಡೆದಂತೆ. ಇದೇ ಕಗ್ಗದ ಧ್ವನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT