ಗುರುವಾರ , ಮೇ 19, 2022
22 °C

ಬೆಳಗಿನ ಬೆಳಕು: ನಿಜಭಕ್ತಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹರಿಭಜಕರೊಳು ಭಯದಿನೊಗೆದುದೆನಿಬರ ಭಕುತಿ|
ವರದಮೇಲಣ ಭಕ್ತಿಯೆನಿಬರದು ನೋಡೆ ?||
ಬರಿಯ ಸಂತೋಷದನುರಾಗ ರಸ ನಿಜಭಕ್ತಿ -|
ಪರಮದಾಕರ್ಷೆಯದು – ಮಂಕುತಿಮ್ಮ ||494||

ಪದ-ಅರ್ಥ: ಭಯದಿನೊಗೆದುದೆನಿಬರ= ಭಯದಿಂ (ಭಯದಿಂದ)+ ಬಗೆದದು (ಹುಟ್ಟಿದುದು)+ ಎನಿಬರ (ಎಷ್ಟು), ವರದಮೇಲಣ= ವರದ (ವರಗಳ, ಅಪೇಕ್ಷೆಗಳ)+ ಮೇಲಣ, ಭಕ್ತಿಯೆನಿಬರದು= ಭಕ್ತಿ+ ಎನಿಬರ್+ ಅದು, ಪರಮದಾಕರ್ಷೆಯದು= ಪರಮದ (ಭಗವಂತನ)+ ಆಕರ್ಷೆಯದು (ಆಕರ್ಷಣೆಯದು).

ವಾಚ್ಯಾರ್ಥ: ಭಕ್ತರಲ್ಲಿ ಭಯದಿಂದ ಹುಟ್ಟಿದ ಭಕ್ತಿ ಎಷ್ಟು ಪ್ರಮಾಣದ್ದು? ಭಗವಂತನ ಕೃಪೆಯ ಆಸೆಗೆ ಹುಟ್ಟಿದ ಭಕ್ತಿಯ ಪ್ರಮಾಣವೆಷ್ಟು? ನಿಜವಾದ ಭಕ್ತಿ ಕೇವಲ ಸಂತೋಷದ, ಅನುರಾಗದ ರಸ. ಅದೇ ಭಗವಂತನ ಸೆಳೆತಕ್ಕೆ ಕಾರಣ.

ವಿವರಣೆ: ಹುಡುಗ ಕತ್ತಲೆಯಲ್ಲಿ ನಡೆದಿದ್ದ. ಯಾವ ಬೆಳಕೂ ಇಲ್ಲ. ದಾರಿ ಇನ್ನೂ ದೂರ ಮತ್ತು ಮುಂದೆ ದಾರಿಯ ಪಕ್ಕದಲ್ಲಿ ಸ್ಮಶಾನ. ಅಲ್ಲಿ ದೆವ್ವಗಳಿವೆಯೆಂಬ ಮಾತುಗಳನ್ನು ಕೇಳಿದ್ದ. ಅವನ ಎದೆ ಹೆದರಿಕೆಯಿಂದ ಹಾರುತ್ತಿತ್ತು. ಆದರೂ ಅವನು ಕೈಯ್ಯಲ್ಲಿ ಗಟ್ಟಿಯಾಗಿ ಹಿಡಿದಿದ್ದ ಹನುಮಂತನ ತಾಯಿತ ಧೈರ್ಯ ಕೊಡುತ್ತಿತ್ತು. ಮುಂದೆ ಎರಡು ದಿನಗಳ ನಂತರ ಆ ಹುಡುಗನ ತಾಯಿ ಹೇಳುತ್ತಿದ್ದಳು, ‘ಏನೋ ನೀನು ಐದು ಶನಿವಾರ ತಪ್ಪದೆ ಆಂಜನೇಯನ ದೇವಸ್ಥಾನಕ್ಕೆ ಹೋಗುತ್ತೇನೆಂದು ಹರಕೆ ಹೊತ್ತಿದ್ದೆಯಲ್ಲ, ಹೋದ ಶನಿವಾರ ಹೋಗಲೇ ಇಲ್ಲ. ಇನ್ನು ನಿನಗೆ ಏನು ಕಾದಿದೆಯೋ ತಿಳಿಯದು’. ಹುಡುಗ ಗಾಬರಿಯಾದ. ಆಂಜನೇಯನ ಕೋಪಕ್ಕೆ ತುತ್ತಾದ ತನಗೆ ಯಾವ ತೊಂದರೆ ಬಂದೀತೋ ಎಂದು ಕೊರಗಿದ. ಪುರೋಹಿತರು ಹೇಳಿದರು, ‘ಯಾವ ಭಯವೂ ಬೇಡ. ನಾನು ಅದಕ್ಕೊಂದು ಪ್ರಾಯಶ್ಚಿತ್ತ ಮಾಡಿಸುತ್ತೇನೆ. ಹನುಮಂತ ಕೃಪೆ ಮಾಡುತ್ತಾನೆ’. ಹುಡುಗ ನಂಬಿದ. ದೆವ್ವದ ಭಯ ನಿವಾರಣೆಗೆ ಹನುಮಂತನ ತಾಯಿತದ ಧೈರ್ಯ. ಹನುಮಂತನ ಕೋಪದ ಭಯಕ್ಕೆ ಪ್ರಾಯಶ್ಚಿತ್ತದ ಧೈರ್ಯ. ಹೀಗೆ ನಮ್ಮ ಬದುಕು ಭಯದಿಂದ ಭಯಕ್ಕೆ ಸಾಗುತ್ತಿದೆ. ಪೂಜೆ ಮಾಡದಿದ್ದರೆ, ಮಾಡಿದ ಪೂಜೆ ಸರಿಯಾಗದಿದ್ದರೆ, ಏನಾದರೂ ತಡೆಯಾದರೆ, ದೀಪ ಆರಿ ಹೋದರೆ, ಯಾವುದೋ ಅನಾಹುತವಾದೀತೆಂದು ಭಯ ಆವರಿಸಿಕೊಳ್ಳುತ್ತದೆ. ನಮ್ಮ ಭಕ್ತಿಗೆ ಬಹಳಷ್ಟು ಬಾರಿ ಭಯವೇ ಮೂಲ. ಭಕ್ತಿಯ ಮತ್ತೊಂದು ಮೂಲವೆಂದರೆ ಅನುಗ್ರಹಾಪೇಕ್ಷೆ. ನಮ್ಮ ಪೂಜೆಗಳೊಂದಿಗೆ ಚಾಚಿದ ಕೈ ಇದ್ದೇ ಇರುತ್ತದೆ. ನಾವು ಯಾವ ಪೂಜೆ, ಹೋಮ, ಧರ್ಮಕಾರ್ಯ ಮಾಡಿದರೂ ಅದರ ಹಿಂದೆ ಫಲಾಪೇಕ್ಷೆ ಇದ್ದೇ ಇರುತ್ತದೆ. ನಮ್ಮ ಸ್ತೋತ್ರಗಳು, ಮಹಾಕಾವ್ಯಗಳೂ ಕೂಡ ಮುಗಿಯುವುದು ಫಲಶೃತಿಯಿಂದಲೇ. ಕುಮಾರವ್ಯಾಸ, ‘ವೇದಪಾರಾಯಣದ ಫಲ, ಗಂಗಾದಿ ತೀರ್ಥಸ್ನಾನಫಲ, ಕೃಚ್ಛಾದಿ ತಪಸಿನ ಫಲವು. ಜ್ಯೋತಿಷ್ಯೋಮ ಯಾಗಫಲ, ಮುಂತಾದವುಗಳು ದೊರೆಯುವುದು ಈ ಮಹಾಭಾರತದ ಬಂದು ಅಕ್ಷರವನ್ನು ಹೇಳಿದವರಿಗೆ’ ಎಂದರೆ, ಶ್ರೀಸೂಕ್ತ, ‘ಪುತ್ರ, ಪೌತ್ರ, ಧನಂ, ಧಾನ್ಯಂ ಹಸ್ತ್ಯಾಶ್ವಾದಿಗವೇರಥಂ, ಪ್ರಜಾನಾಂ ಭವಸಿ ಮಾತಾ ಚ ಆಯುಷ್ಮಂತಂ ಕರೋತು ಮಾಂ||’ ಎಂದರೆ ನನಗೆ ಮಕ್ಕಳು, ಮೊಮ್ಮಕ್ಕಳು, ಧನ, ಧಾನ್ಯ, ಕುದುರೆ, ಆನೆ, ಆಡು, ಕುರಿ, ರಥ, ಆಕಳುಗಳನ್ನು ಕೊಡುವುದರೊಂದಿಗೆ ದೀರ್ಘಾಯಸ್ಸು ಕೊಡು’ ಎನ್ನುತ್ತದೆ. ಆದರೆ ನಿಜವಾದ ಭಕ್ತಿ ಇವೆರಡರಿಂದ ದೂರವಾಗಿ ಬರಿಯ ಸಂತೋಷ ಅನುರಾಗದ ರಸವಾಗಿ ಭಗವಂತನತ್ತ ಆಕರ್ಷಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.