ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಶಕ್ಕೆ ಸಿಕ್ಕ ಮನುಷ್ಯ

Last Updated 19 ಏಪ್ರಿಲ್ 2020, 19:34 IST
ಅಕ್ಷರ ಗಾತ್ರ

ದೋಷಿಯವನಿವನು ಪಾಪಿಯೆನುತ್ತ ಗಳಹದಿರು| ಆಶೆಯೆನಿತವನು ಸಹಿಸಿದನೊ! ದಹಿಸಿದನೊ ! ||
ವಾಸನೆಗಳವನನೇಳದವೋ ಬಲವೇನೊ ! |
ಪಾಶಬದ್ಧನು ನರನು – ಮಂಕುತಿಮ್ಮ || 280 ||

ಪದ-ಅರ್ಥ: ದೋಷಿಯವನಿವನು=ದೋಷಿಯವನು+ಇವನು, ಗಳಹು=ಅರ್ಥವಿಲ್ಲದ ಮಾತು, ಬಡಬಡಿಕೆ, ಆಶೆಯೆನಿತವನು= ಆಶೆಯನ್ನುಎನಿತು+ಅವನು, ವಾಸನೆಗಳ ವನನೇಳ ದವೊ=ವಾಸನೆ ಗಳು+ಅವನನು+ಏನು+ಎಳೆದವೊ, ಪಾಶಬದ್ಧನು=ಪಾಶದಲ್ಲಿ ಬಂಧಿತನು.

ವಾಚ್ಯಾರ್ಥ: ಅವನು ದೋಷಿ, ಇವನು ಪಾತಕಿ ಎನ್ನುತ್ತ ಬಡಬಡಿಸಬೇಡ. ಅವನು ಅದೆಷ್ಟು ಆಸೆಗಳನ್ನು ಸಹಿಸಿದನೊ, ಆಸೆಗಳಲ್ಲಿ ಅವನೆಷ್ಟು ದಹಿಸಿದನೊ, ಆ ವಾಸನೆಗಳು ಅವನನ್ನು ಅದೆಷ್ಟು ಬಲದಿಂದ ಎಳೆದವೊ? ಮನುಷ್ಯ ತನ್ನ ಬದುಕಿನ ಆಸೆಗಳಲ್ಲಿ ಬಂಧಿತನಾಗಿದ್ದಾನೆ.

ವಿವರಣೆ: ಬೈಬಲ್ಲಿನಲ್ಲಿ ಒಂದು ಸುಂದರ ಹಾಗೂ ಮನಮುಟ್ಟುವ ಕಥೆ. ಒಂದು ಊರಿನಲ್ಲಿಯ ಜನರೆಲ್ಲ ಸೇರಿ ಒಬ್ಬ ಹೆಣ್ಣುಮಗಳನ್ನು ಹಿಡಿದುಕೊಂಡು ಬಂದು ಮರಕ್ಕೆ ಕಟ್ಟಿ ಹಾಕುತ್ತಾರೆ. ವ್ಯಭಿಚಾರ ಮಾಡಿದ್ದಾಳೆ ಎಂಬ ಆರೋಪ ಆಕೆಯ ಮೇಲೆ. ಮೋಸೆಸ್ ಆಕೆಯನ್ನು ಕಲ್ಲಿನಿಂದ ಹೊಡೆದು ಸಾಯಿಸಿ ಎಂದು ಹೇಳಿದ್ದಾರೆಂದು ಒಬ್ಬ ಹೇಳುತ್ತಾನೆ. ಜನರೆಲ್ಲ ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಆಕೆಯತ್ತ ಎಸೆಯಲು ಸಿದ್ಧರಾಗಿದ್ದಾರೆ. ಆಗ ಅಲ್ಲಿಗೆ ಕರುಣಾಮಯಿಯಾದ ಏಸೂ ಕ್ರಿಸ್ತ ಬರುತ್ತಾನೆ. ಪರಿಸ್ಥಿತಿಯನ್ನು ಗಮನಿಸಿ ಏಸೂ ಕ್ರಿಸ್ತ ಒಂದು ಮಾತು ಹೇಳುತ್ತಾನೆ, “ನಿಮ್ಮಲ್ಲಿ ಯಾರು ಒಂದೂ ಪಾಪವನ್ನು ಮಾಡದೇ ಇರುವಿರೋ ಅವರೇ ಮೊದಲ ಕಲ್ಲನ್ನು ಆಕೆಗೆ ಹೊಡೆಯಿರಿ”. ನಂತರ ಒಬ್ಬೊಬ್ಬರಾಗಿ ಆ ಸ್ಥಳದಿಂದ ತೆರಳುತ್ತಾರೆ. ಕೊನೆಗೆ ಏಸೂ ಕ್ರಿಸ್ತ ಮಾತ್ರ ಉಳಿದುಕೊಳ್ಳುತ್ತಾನೆ. ಆ ಹೆಣ್ಣಿಗೆ ಇನ್ನು ಮುಂದೆ ಪಾಪಕೃತ್ಯಗಳನ್ನು ಮಾಡಬೇಡ ಎಂದು ಹೇಳಿ ಕಳುಹಿಸುತ್ತಾನೆ. ಎಂತಹ ಮಾರ್ಮಿಕ ಸಂದೇಶ! ಆಕೆ ತಪ್ಪು ಮಾಡಿದಳೆಂದು ಆಕೆಯನ್ನು ಶಿಕ್ಷಿಸಲು ಸಿದ್ಧರಾಗಿದ್ದವರೆಲ್ಲರೂ ಒಂದಲ್ಲ ಒಂದು ತಪ್ಪು ಮಾಡಿದವರೇ.

ಈ ಮಾತನ್ನೇ ಕಗ್ಗ ಹೇಳುತ್ತದೆ. ಅವನು ದೋಷಿ, ಇವನು ಪಾಪಿ ಎಂದು ಮತಿಭ್ರಮಣೆಯಾದಂತೆ ಬಡಬಡಿಸಬೇಡ. ಯಾಕೆಂದರೆ ತಪ್ಪೇ ಮಾಡದವರು ಒಬ್ಬರೂ ಇಲ್ಲ. ತಪ್ಪು ಮಾಡಿದವನು ಯಾಕೆ ಆ ತಪ್ಪು ಮಾಡಿದ? ಅದು ಯಾವುದೋ ಆಸೆಯಿಂದಲ್ಲವೇ? ಆ ಆಸೆ ಅವನನ್ನು ಅದೆಷ್ಟು ಪರೀಕ್ಷೆ ಮಾಡಿತೊ, ಅದೆಷ್ಟು ಬಲದಿಂದ ಅವನನ್ನು ಹಿಡಿದು ಎಳೆಯಿತೊ? ಆಸೆಯ ಬೆಂಕಿ ಅವನನ್ನು ಎಷ್ಟು ಬಾರಿ ಸಜೀವವಾಗಿ ದಹಿಸಿಬಿಟ್ಟಿತೊ? ನಮ್ಮ ಮಕ್ಕಳಿಗಾಗಿ, ತುಂಬ ಬೇಕಾದವರಿಗಾಗಿ ನಾವೆಷ್ಟು ಒದ್ದಾಡುತ್ತೇವೆ. ಅವರಿಗೆ ಒಳಿತಾಗಲಿ ಎಂಬ ಆಸೆಗೆ ಕೆಲವೊಮ್ಮೆ ಸುಳ್ಳು ಹೇಳುತ್ತೇವೆ, ಅಪ್ರಾಮಾಣಿಕವಾಗಿ ನಡೆದುಕೊಳ್ಳುತ್ತೇವೆ. ಆದರೆ ಧೃತರಾಷ್ಟçನ ಪುತ್ರ ಮೋಹವನ್ನು ತೆಗಳುತ್ತೇವೆ. ಸಣ್ಣ ಸಣ್ಣ ಕೆಲಸಗಳಿಗಾಗಿಯೇ, ನಮ್ಮವರಿಗಾಗಿ ನಾವು ಚಿಕ್ಕಪುಟ್ಟ ಅನ್ಯಾಯಗಳನ್ನು ಮಾಡುವುದಾದರೆ ಧೃತರಾಷ್ಟ್ರನ ಮುಂದಿದ್ದ ಆಸೆಗೆ ಅವನೇನು ಮಾಡಬೇಕು? ಅವನ ಮುಂದಿದ್ದದ್ದು ಯÁವುದೋ ಚಿಕ್ಕ ಕೆಲಸ, ಚಿಕ್ಕ ಲಾಭವಲ್ಲ, ಅವನ ಗುರಿ ಮಗನಿಗೆ ಇಡೀ ಹಸ್ತಿನಾಪುರದ ಚಕ್ರವರ್ತಿ ಪದವಿ, ರಾಜಸಿಂಹಾಸನ!. ತನ್ನ ಮಕ್ಕಳಿಗೆ ಅಧಿಕಾರ, ಗೌರವ ದೊರಕಲಿ ಎಂದು, ಟೀಕೆಗಳನ್ನು ಸಹಿಸಿಕೊಂಡು, ಏನೆಲ್ಲ ಪ್ರಯತ್ನ ಮಾಡುವ ನಾಯಕರ ಒದ್ದಾಟಗಳನ್ನು ಕಂಡಿಲ್ಲವೇ? ಇದನ್ನೇ ಕಗ್ಗ ಸ್ಪಷ್ಟಪಡಿಸುತ್ತದೆ, ಈ ಆಸೆಗಳ ಶಕ್ತಿ ಎಷ್ಟು ದೊಡ್ಡದು! ಅವುಗಳ ಬಲವನ್ನು ಅಳೆಯುವುದು ಕಷ್ಟ. ಆಸೆಗಳ ಪಾಶಕ್ಕೆ ಬದ್ಧನಾದವನು ಮನುಷ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT