ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವಿಧಿಯ ಬಗೆ

Last Updated 14 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಅದು ಒಳಿತು ಇದು ಕೆಟ್ಟದೆಂಬ ಹಟ ನಿನಗೇಕೆ? |
ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ ||
ಸೊದೆಯ ಸೌರಭ ನಂಜು ಬಟ್ಟಲಲಿ ತೋರೀತು |
ವಿಧಿಯ ಬಗೆಯೆಂತಿಹುದೊ! – ಮಂಕುತಿಮ್ಮ || 365 ||

ಪದ-ಅರ್ಥ: ದೈವವೆಲ್ಲಕವೊಂದು= ದೈವ+ಎಲ್ಲಕು+ಒಂದು, ಸೊದೆಯ=ಅಮೃತದ, ಸೌರಭ=ಪರಿಮಳ, ನಂಜುಬಟ್ಟಲಲಿ=ವಿಷದ ಬಟ್ಟಲಲ್ಲಿ, ಬಗೆಯೆಂತಿಹುದೊ=ಬಗೆ (ವಿಧಾನ)+ಎಂತು+ಇಹುದೊ.

ವಾಚ್ಯಾರ್ಥ: ಅದು ಒಳ್ಳೆಯದು, ಇದು ಒಳ್ಳೆಯದಲ್ಲ ಎಂಬ ಹಟ ನಿನಗೇಕೆ? ವಿಧಿ ಇದೆಲ್ಲಕ್ಕೂ ಒಂದು ತೆರೆಯನ್ನು ಎಳೆದು ಮರೆಮಾಡಿದೆ. ವಿಷದ ಬಟ್ಟಲು ಎಂದು ತೋರಿದ್ದು ಅಮೃತದ ಪರಿಮಳವಾದೀತು. ವಿಧಿಯ ರೀತಿ ಹೇಗಿದೆ ಎಂಬುದನ್ನು ತಿಳಿಯುವುದು ಕಷ್ಟ.

ವಿವರಣೆ: ರಾಯಬಹದ್ದೂರ ಮೋಹನ್ ಸಿಂಗ್ ಒಬೆರಾಯ್ ಈಗ ಪಾಕಿಸ್ತಾನದಲ್ಲಿರುವ ಪಂಜಾಬಿನಲ್ಲಿ ಹುಟ್ಟಿದವರು. ಆರು ತಿಂಗಳು ಮಗುವಾಗಿದ್ದಾಗ ತಂದೆ ತೀರಿ, ಬಡತನ ಬೆನ್ನಟ್ಟಿತು. ಲಾಹೋರಿನಲ್ಲಿ ಕಷ್ಟಪಟ್ಟು ಕಾಲೇಜು ಶಿಕ್ಷಣ ಪೂರೈಸಿದರು. ಭಯಂಕರ ಪ್ಲೇಗ್‌ನಿಂದ ಪಾರಾಗಲು ಶಿಮ್ಲಾಕ್ಕೆ ಬಂದರು. ಹೊಟ್ಟೆಪಾಡಿಗೆ ಸೆಸಿಲ್ ಹೋಟೆಲ್‌ನಲ್ಲಿ ನೆಲ ಒರೆಸುವ, ಪಾತ್ರೆ ತೊಳೆಯುವ ಕೆಲಸ. ಬದುಕೇ ಬೇಡವೆನ್ನಿಸಿರಬೇಕು. ವಿಧಿ ನೀಡಿದ ಕೆಲಸವನ್ನೇ ಪ್ರಾಮಾಣಿಕತೆಯಿಂದ ಮಾಡಿ, ಮುಂದೆ ಅದೇ ಹೋಟೆಲ್ ಅನ್ನು ಕೊಂಡುಕೊಂಡರು. ಮುಂದೆ ವಿಧಿ ಮೆಚ್ಚಿದಂತೆ ಕಂಡಿತು. ಕಲಕತ್ತೆಯ ಗ್ರಾಂಡ್ ಹೋಟೆಲ್‌ ಅನ್ನು ಕೊಳ್ಳುವ ಜೊತೆಗೆ ಇಡೀ ಪ್ರಪಂಚದಲ್ಲಿ ನೂರಾರು ಅತ್ಯುತ್ತಮ ಹೋಟೆಲ್‌ಗಳನ್ನು ಕಟ್ಟಿದರು. ದುಡ್ಡು ಬೇಡವೆಂದರೂ ಹರಿದು ಬಂದು ನಿಂತಿತು. ಜೇಬಿನಲ್ಲಿ ಹತ್ತು ಕಾಸೂ ಇಲ್ಲದ ಹುಡುಗ ಪ್ರಪಂಚದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದದ್ದು ದೈವದಾಟ. ಅವರು ನಿಧನವಾಗುವುದಕ್ಕಿಂತ ಎರಡು ವರ್ಷ ಮೊದಲು ಪತ್ರಿಕಾ ವರದಿಗಾರರು ಸಂದರ್ಶನದಲ್ಲಿ ಕೇಳಿದರು, ‘ಬಾಲ್ಯದಲ್ಲಿ ತುಂಬ ಬಡತನವಿತ್ತು. ಈಗ ಶ್ರೀಮಂತಿಕೆ ಕಾಲು ಮುರಿದು ಕುಳಿತಿದೆ. ಆದರೆ ನಿಮಗೆ ತುಂಬ ಸಂತೋಷ, ಸಂತೃಪ್ತಿ ದೊರೆತದ್ದು ಯಾವಾಗ?’ ಒಬೆರಾಯ್ ನೀಡಿದ ಉತ್ತರ ಅದ್ಭುತ. ‘ನಾನು ಬಡವನಾಗಿದ್ದಾಗಲೇ ತುಂಬ ಸಂತೋಷವಾಗಿದ್ದೆ. ನನ್ನೊಡನೆ ನನ್ನ ಅತ್ಯಂತ ಪ್ರಿಯಳಾದ ಪತ್ನಿ ಇದ್ದಳು. ಆಕೆಯ ತ್ಯಾಗದಿಂದಲೇ ನಾನು ಬೆಳೆದದ್ದು. ನನ್ನ ಮಕ್ಕಳು ನನ್ನೊಂದಿಗಿದ್ದರು. ನಗುನಗುತ್ತಾ ಬಾಳು ಸವೆಯುತ್ತಲಿತ್ತು. ಅವರ ಪ್ರೇಮದಲ್ಲಿ ಕಷ್ಟ ತಿಳಿಯಲಿಲ್ಲ. ನನ್ನೊಬ್ಬ ಮಗ ಅಪಘಾತದಲ್ಲಿ ತೀರಿಹೋದ. ಇನ್ನೊಬ್ಬ ಅಸ್ತಮಾ ರೋಗಕ್ಕೆ ಬಲಿಯಾದ. ನನ್ನ ಹೆಂಡತಿ ನನ್ನನ್ನು ಬಿಟ್ಟು ಮುಂದೆ ಹೋಗಿ ಭಗವಂತನ ಪಾದ ಸೇರಿದಳು. ಉಳಿದೊಬ್ಬ ಮಗನನ್ನು ನಾನು ವರ್ಷಕ್ಕೊಮ್ಮೆ ನೋಡಿದರೆ ಹೆಚ್ಚು. ಅವನೂ ಈ ಕೆಲಸದಲ್ಲೇ ಇದ್ದಾನೆ. ನಾನು ಏಕಾಂಗಿಯಾಗಿದ್ದೇನೆ’.

ಪ್ರಪಂಚ ಅವರು ಬಡವರೆಂದಾಗ ಸುಖಿಯಾಗಿದ್ದರು. ಅವರು ಸಮೃದ್ಧತೆಯಲ್ಲಿ ತೇಲಾಡುತ್ತಿದ್ದಾರೆ ಎಂದು ಜಗತ್ತು ಭಾವಿಸಿದಾಗ ದುಃಖಿಯಾಗಿದ್ದರು. ವಿಧಿಯ ರೀತಿಯೇ ಹೀಗೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಹೇಳಲಾಗುವುದಿಲ್ಲ. ದೈವ ಮರೆಯಲ್ಲಿ ಆಡುವ ಆಟ ನಮಗೆ ತಿಳಿಯದು.

ಯಾವುದು ನಮಗೆ ಒಳ್ಳೆಯದು ಎಂದು ಭಾವಿಸಿದ್ದೀತೋ ಅದು ಕೆಟ್ಟದ್ದೂ ಆಗಬಹುದು. ಆಯ್ತು, ಎಲ್ಲವೂ ಮುಗಿದೇ ಹೋಯಿತು ಎಂಬ ನಿರಾಸೆಯ ಕಾರ್ಮೋಡದ ನಡುವೆಯೇ ಯಶಸ್ಸಿನ ಹೊಂಬೆಳಕು ಮೂಡೀತು. ವಿಧಿಯ ಆಟದ ವೈಚಿತ್ರ್ಯವನ್ನು ಬಲ್ಲವರಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT