ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮತ್ತೆರಡು ಪ್ರಶ್ನೆಗಳು

Last Updated 5 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಮಹೋಷಧಕುಮಾರನ ಉತ್ತರದಿಂದ ಪ್ರೀತನಾದ ರಾಜ ಅವನಿಗೆ ಸತ್ಕಾರ ಮಾಡಿದ್ದನ್ನು ಕಂಡು ಸೆನೆಕ ಮತ್ತು ಅವನ ಗುಂಪಿನ ಪಂಡಿತರಿಗೆ ಬಹಳ ಸಂಕಟವಾಯಿತು. ‘ಇದೇನು ದೊಡ್ಡ ಉತ್ತರ. ಅದನ್ನು ನಾವು ದಿನನಿತ್ಯ ಗಮನಿಸುತ್ತೇವೆ. ಅದರಲ್ಲಿ ಯಾವ ವಿಶೇಷವೂ ಇಲ್ಲ. ಅಂಥ ಸಣ್ಣದಾದ ಮತ್ತು ಕ್ಷುಲ್ಲಕ ಉತ್ತರವನ್ನು ಕೊಡಬಾರದೆಂದು ಸುಮ್ಮನಿದ್ದೆವು’ ಎಂದು ಬೊಬ್ಬೆ ಹಾಕತೊಡಗಿದರು. ಆ ಗದ್ದಲವನ್ನು ಕೇಳಿ ದೇವಿ ಮತ್ತೆ ಹೊರಗೆ ಬಂದು, ‘ಸದ್ದು, ಪಾಂಡಿತ್ಯ ಇರುವಲ್ಲಿ ಸದ್ದು ಇರುವುದಿಲ್ಲ. ನಿಮಗೆ ಆ ಪ್ರಶ್ನೆ ಅತೀ ಕ್ಷುಲ್ಲಕ ಎನ್ನಿಸಿದರೆ, ಮತ್ತೆರಡು ಪ್ರಶ್ನೆಗಳನ್ನು ಕೇಳುತ್ತೇನೆ. ಅವುಗಳಿಗಾದರೂ ನೀವು ಉತ್ತರ ಕೊಡುತ್ತೀರೋ ಎಂದು ನೋಡುತ್ತೇನೆ’ ಎಂದಳು.

‘ಆಯ್ತು, ನಾವು ಸಿದ್ಧರಾಗಿದ್ದೇವೆ’ ಎಂದು ಕುಳಿತರು ಪಂಡಿತರು. ದೇವಿ ಹೇಳಿದಳು, ‘ಮೊದಲನೆಯ ಪ್ರಶ್ನೆ, ಯಥೇಚ್ಛವಾಗಿ ಬೈಗಳು ಬರುತ್ತವೆ, ಮನೆಗೆ ಬರುವುದೇ ಬೇಡವೆನ್ನಿಸುತ್ತದೆ. ಆದರೂ ಅದೊಂದು ಪ್ರಿಯವಾದ ದೃಶ್ಯ. ಅದು ಯಾವುದು?’. ಎರಡನೆಯ ಪ್ರಶ್ನೆ, ‘ಸುಳ್ಳು ಹೇಳುತ್ತಾರೆ, ಸುಳ್ಳು ಆರೋಪವನ್ನು ಹೊರಿಸಲಾಗುತ್ತದೆ. ಆದರೆ ಅತ್ಯಂತ ಪ್ರಿಯವಾಗುತ್ತದೆ. ಯಾವುದು ಆ ದೃಶ್ಯ?’. ಮತ್ತೆ ಪಂಡಿತರ ತಲೆ ಕೆಟ್ಟು ಹೋಯಿತು. ಯಾರಾದರೂ ಬೈದರೆ, ಮನೆಗೆ ಬರಬೇಡವೆಂದರೆ ಪ್ರಿಯವಾಗುವುದು ಹೇಗೆ? ಸುಳ್ಳು ಆರೋಪಗಳನ್ನು ಮಾಡುವ ಕ್ರಿಯೆ ಹೇಗೆ ಸಂತೋಷ ಕೊಟ್ಟೀತು? ಇಂಥ ವಿರೋಧಾಭಾಸದ ಪ್ರಶ್ನೆಗಳಿಗೆ ಏನರ್ಥವಿದ್ದೀತು? ಈ ಪಂಡಿತರಿಗೆ ಉತ್ತರಗಳು ಹೊಳೆಯಲಿಲ್ಲವೆಂದು ತಿಳಿದಾಗ ರಾಜ ಮಹೋಷಧಕುಮಾರನನ್ನು ಕೇಳಿದ.

ಮಹೋಷಧಕುಮಾರ ನಕ್ಕು ಹೇಳಿದ, ‘ಮಹಾಪ್ರಭು, ಇವೆರಡೂ ಕೂಡ ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಬರುವಂಥವುಗಳು. ಮೊದಲನೆಯ ಪ್ರಶ್ನೆಯ ದೃಶ್ಯ ಹೀಗಿದೆ. ಮಗನಿಗೆ ಏಳೆಂಟು ವರ್ಷವಾದಾಗ ತಾಯಿ, ಕೆಲವು ಕೆಲಸಗಳನ್ನು ಹೇಳುತ್ತಾಳೆ. ‘ಅಂಗಡಿಗೆ ಹೋಗಿ ಈ ಸಾಮಾನು ತೆಗೆದುಕೊಂಡು ಬಾ, ಹೊಲಕ್ಕೆ ಹೋಗಿ ತಂದೆಗೆ ಊಟಕೊಟ್ಟು ಬಾ’. ಆದರೆ ಆಟದಲ್ಲಿ ಮಗ್ನವಾದ ಹುಡುಗ ಆಲಸ್ಯದಿಂದ ಏನೇನೋ ನೆಪ ಹೇಳಿ ತಪ್ಪಿಸಿಕೊಳ್ಳಲು ನೋಡುತ್ತಾನೆ. ಮೊದಲೇ ಮುಗಿಯದ ಕೆಲಸಗಳಲ್ಲಿ ತೊಡಗಿಹೋದ ತಾಯಿಗೆ ಕೋಪ ಬಂದು ಹೊಡೆಯಲು ಹೋಗುತ್ತಾಳೆ. ಹುಡುಗ ತಪ್ಪಿಸಿಕೊಂಡು ಮನೆಯಿಂದ ಓಡಿ ಹೋಗುತ್ತಾನೆ. ಆಗ ಆಕೆ ಕೋಪದಿಂದ ಅವನನ್ನು ಸಿಕ್ಕಾಪಟ್ಟೆ ಬೈಯುತ್ತಾಳೆ. ನೀನು ಮನೆಗೇ ಬರಬೇಡ ಎನ್ನುತ್ತಾಳೆ. ಆದರೆ ಆತ ಮಧ್ಯಾಹ್ನ ಊಟದ ವೇಳೆಗೂ ಮನೆಗೆ ಬರದಿದ್ದಾಗ ತಾನೇ ಮನೆಮನೆಗಳಿಗೆ ಹೋಗಿ ಅವನನ್ನು ಹುಡುಕಿ ಕರೆತರುತ್ತಾಳೆ. ಬರುವಾಗ ಅವನನ್ನು ಪ್ರೀತಿಯಿಂದ ಅಪ್ಪಿ ಮುದ್ದಾಡುತ್ತಾಳೆ. ಆಕೆ ಅವನಿಗೆ ಬಯ್ದರೂ ದ್ವೇಷವಿಲ್ಲ, ಅನನ್ಯವಾದ ಪ್ರೀತಿ ಇದೆ. ಇದೇ ಅಪೂರ್ವ ದೃಶ್ಯ’.

‘ಎರಡನೆಯದೂ ಸುಂದರ ದೃಶ್ಯ. ಹೊಸದಾಗಿ ಮದುವೆಯಾದ ಗಂಡ-ಹೆಂಡತಿಯರು ಏಕಾಂತದಲ್ಲಿ ಕ್ರೀಡಿಸುವಾಗ ಪರಸ್ಪರ ಆರೋಪ
ಮಾಡುತ್ತಾರೆ. ‘ನನಗೆ ಗೊತ್ತು, ನಿಮಗೆ ನನ್ನ ಮೇಲೆ ಪ್ರೀತಿ ಇಲ್ಲ, ಮತ್ತೆ ಯಾರನ್ನೋ ಪ್ರೀತಿಸುತ್ತೀರಿ’ ಎಂದು ಆಕೆ ಹೇಳಿದರೆ, ‘ನನಗೂ ಗೊತ್ತು, ನೀನು ಬೇರೆ ಯಾರನ್ನೋ ಮದುವೆಯಾಗಬೇಕೆಂದಿದ್ದೆ’ ಎಂದು ಆತ ಹೇಳುತ್ತಾನೆ. ಇವು ಪ್ರೀತಿಯ, ಸಲುಗೆಯ ಮಾತುಗಳು. ಮೇಲ್ನೋಟಕ್ಕೆ ಸುಳ್ಳು ಆರೋಪಗಳೆನ್ನಿಸಿದರೂ, ಅವು ಪ್ರೀತಿಯನ್ನು, ಒಲವನ್ನು ಗಟ್ಟಿ ಮಾಡುವ ಬಂಧಗಳು. ಅದಕ್ಕೆ ಅದೊಂದು ಸುಂದರ ದೃಶ್ಯ’ ಎಂದು ಹೇಳಿದ. ಸಭಿಕರು ಜೈಕಾರ ಮಾಡಿದರು. ದೇವಿ ತನ್ನ ಸಹಮತವನ್ನು ಸೂಚಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT