ಬುಧವಾರ, ಡಿಸೆಂಬರ್ 8, 2021
18 °C

ಬೆರಗಿನ ಬೆಳಕು: ಬದುಕಿನ ಸುಂದರತೆಗೆ ಮೂರು ರಸಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಸುಂದರದ ರಸ ನೂರು; ಸಾರವದರೊಳು ಮೂರು |
ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳ ||
ಒಂದರಿಂದೊಂದು ಬೆಳೆಯಾದಂದು ಜೀವನವು |
ಚೆಂದಗೊಂಡುಜ್ಜುಗವೊ – ಮಂಕುತಿಮ್ಮ || 455 ||

ಪದ-ಅರ್ಥ: ಸಾರವದರೊಳು= ಸಾರವು(ಸತ್ವ)+ ಅದರೊಳು, ಬೆಳೆಯಾದಂದು= ಬೆಳೆದಾಗ, ಚೆಂದಗೊಂಡುಜ್ಜುಗವೊ= ಚೆಂದಗೊಂಡ+ ಉಜ್ಜುಗ(ಕಾರ್ಯ)ವೆ

ವಾಚ್ಯಾರ್ಥ: ಸೌಂದರ್ಯಕ್ಕೆ ನೂರಾರು ರಸಗಳು. ಅವುಗಳಲ್ಲಿ ಸಾರವತ್ತಾದವುಗಳು ಮೂರು, ಅವು ಮೋಹ, ಕರುಣೆ ಮತ್ತು ಶಾಂತಿ. ಅವು ಒಂದಕ್ಕೊಂದು ಪೂರಕವಾಗಿ ಬೆಳೆದಾಗ ಜೀವನವು ಚೆಂದವಾದ ಕಾರ್ಯವಾಗುತ್ತದೆ.

ವಿವರಣೆ: ರಸವೆಂದರೆ ಸವಿ, ರುಚಿ. ಯಾವ ಗುಣದಿಂದಾಗಿ ಒಂದು ವಸ್ತು ನಮಗೆ ಇಷ್ಟವಾಗುತ್ತದೋ, ಯಾವುದನ್ನು ಪಡೆಯಬೇಕೆಂಬ ಉತ್ಕಟತೆ ಉಂಟಾಗುತ್ತದೆಯೋ ಅದು ಅದರ ರಸ. ಮಾವಿನ ಹಣ್ಣು ಬಹಳ ಇಷ್ಟವೆಂದರೆ, ಅದು ಹಣ್ಣಿನ ರಸದ ದ್ರವತ್ವವಲ್ಲ, ಅದರ ಆಕಾರವಲ್ಲ, ಬಣ್ಣವಲ್ಲ. ಅವೆಲ್ಲ ತಕ್ಕಮಟ್ಟಿಗೆ ಕಾರಣವಾಗಿದ್ದರೂ, ಮೂಲವಾಗಿ ಹಣ್ಣಿನ ತಿರುಳಿನಲ್ಲಿರುವ, ನಾಲಗೆಗೆ ಸುಖ ಕೊಡುವ ರುಚಿಯೇ ರಸ. ತಿಂದಾಗ ಉಂಟಾಗುವ ಸುಖದ ಹುಟ್ಟು ಎಲ್ಲಿ? ಮಾವಿನಹಣ್ಣಿನಲ್ಲೋ, ತಿನ್ನುವ ಬಾಯಿಯಲ್ಲೋ? ಇವೆರಡರಲ್ಲೂ ಅಲ್ಲ, ಆ ಎರಡರ ಸಂಯೋಗದಲ್ಲಿ ಹುಟ್ಟುವುದು ಸುಖ. ಮಾವಿನಹಣ್ಣಿನ ತಿರುಳಿಗೂ, ತಿನ್ನುವವನ ಹಲ್ಲು, ನಾಲಗೆಗೂ ಹೊಂದಿಕೆಯಾದಾಗ ಸುಖ. ಅದೇ ರಸಾನುಭವ. ಅದಕ್ಕೇ ಕನಕದಾಸರು ಹೇಳಿದರು, ‘ಸಿಹಿಯು ಸಕ್ಕರೆಯೊಳಗೋ, ಸಕ್ಕರೆಯು ಸಿಹಿಯೊಳಗೋ| ಸಿಹಿಯು ಸಕ್ಕರೆ ಎರಡೂ ಜಿಹ್ವೆಯ ಒಳಗೋ||’

ಬದುಕಿನಲ್ಲಿ ನಮಗೆ ರಸಾನುಭವ ದಿನನಿತ್ಯ ಆಗುತ್ತಿರುತ್ತದೆ. ಅದು ಹೊರಗಿನಿಂದಲೂ, ಒಳಗಿನಿಂದಲೂ ಆಗುವಂಥದ್ದು. ಹೊರಗಡೆ ಪ್ರವಾಸಕ್ಕೆ ಹೋದಾಗ ರಮಣೀಯ ದೃಶ್ಯಗಳನ್ನು ನೋಡಿದಾಗ, ಒಳ್ಳೆಯ ಸಂಗೀತವನ್ನು ಕೇಳಿದಾಗ, ನಮಗಿಷ್ಟವಾದ ಊಟವನ್ನು ಮಾಡಿದಾಗ, ನಮ್ಮ ಗೌರವಕ್ಕೆ ಪಾತ್ರರಾದವರ ಮಾತುಗಳನ್ನು ಕೇಳಿದಾಗ, ಮಕ್ಕಳ, ಆತ್ಮೀಯರ ಏಳಿಗೆಯನ್ನು ಕಂಡಾಗ ರಸಾನುಭವವಾಗುತ್ತದೆ. ಹಾಗೆಯೇ ಆಂತರ್ಯದಲ್ಲಿ ಅದರ ಅನುಭೂತಿ ಆಗುವುದುಂಟು. ಬಾಲ್ಯದ ಸುಂದರ ಪ್ರಸಂಗಗಳನ್ನು ನೆನೆದಾಗ, ಪೂಜೆ ಮಾಡುವಾಗ, ಧ್ಯಾನ ಮಾಡುವಾಗ, ಯಾವುದೋ ಉನ್ನತ ವಿಚಾರದ ಚಿಂತನೆ ಮಾಡುವಾಗ ರಸದ ಅನುಭವವಾಗುತ್ತದೆ. ಭರತ ತನ್ನ ನಾಟ್ಯಶಾಸ್ತ್ರದಲ್ಲಿ ರಸವಾಗುವಂತಹ ಎಂಟು ಸ್ಥಾಯೀಭಾವಗಳನ್ನು ಗುರುತಿಸುತ್ತಾನೆ. ಅವು ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ ಮತ್ತು ಅದ್ಭುತ. ಮುಂದೆ ಅದನ್ನು ಉದ್ಭಟ ಮತ್ತು ರುದ್ರಟರು ಬೆಳೆಸಿ ಶಾಂತಿ ರಸವನ್ನು ಸೇರಿಸಿದರು. ಸಾಮಾನ್ಯವಾಗಿ ಅವುಗಳನ್ನು ನವರಸಗಳೆಂದು ಕರೆದರು. ಈ ನವರಸಗಳು ನಮ್ಮ ಬದುಕನ್ನು ನೂರಾರು ರೀತಿಯಲ್ಲಿ ತಟ್ಟುತ್ತವೆ. ಕಗ್ಗ ಹೇಳುತ್ತದೆ, ಈ ಎಲ್ಲ ರಸಗಳ ಸಾರವಿರುವುದು ಮೂರರಲ್ಲಿ. ಅವು ಮೋಹ, ಕರುಣೆ ಮತ್ತು ಶಾಂತಿ. ಅವು ಒಂದರಿಂದ ಮತ್ತೊಂದು ಬೆಳೆಯುವಂಥವುಗಳು. ಮೋಹ ಮಿತಿಯಲ್ಲಿದ್ದಾಗ, ಉಚಿತವಾದ ಸ್ಥಳದಲ್ಲಿ ಕರುಣೆ ತೋರಿದಾಗ, ಮನದಲ್ಲಿ ಶಾಂತಿಯ ಅವತರಣವಾಗುತ್ತದೆ. ಆಗ ಬದುಕೆಂಬುದು  ಸಂತೋಷದ, ಸಂಭ್ರಮದ ನೆಲೆಯಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.