ಶನಿವಾರ, ಏಪ್ರಿಲ್ 1, 2023
25 °C

ಬೆರಗಿನ ಬೆಳಕು: ಶಾಂತಿಯ ಮೂಲ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಪಿಡಿ ಗಳಿಸು ಭುಜಿಸೊಡೆಯನಾಗೆನ್ನುವುದು ಮೋಹ |
ಕೊಡು ಸಲಿಸು ಸೇವೆಗೈಯೆನ್ನುವುದು ಕರುಣೆ ||
ಬಿಡು ನೀನು ನಾನುಗಳ, ವಿಶ್ವಾತ್ಮಪದವನೀ |
ನಡರೆನ್ನುವುದು ಶಾಂತಿ – ಮಂಕುತಿಮ್ಮ || 456||

ಪದ-ಅರ್ಥ: ಪಿಡಿ=ಹಿಡಿ, ಭುಜಿಸೊಡೆಯನಾಗೆನ್ನುವುದು=ಭುಜಿಸು(ತಿನ್ನು)+ಒಡೆಯನಾಗು+ ಎನ್ನುವುದು, ಸೇವೆಗೈಯೆನ್ನುವುದು-ಸೇವೆಗೈ(ಸೇವೆ ಮಾಡು)+ಎನ್ನುವುದು, ಶ್ವಾತ್ಮಪದವನೀನಡೆರೆನ್ನುವುದು=ವಿಶ್ವಾತ್ಮಪದವನು+ನೀನು+ಅಡರು(ಹೊಂದು)+ಎನ್ನುವುದು,

ವಾಚ್ಯಾರ್ಥ: ಹಿಡಿ, ಗಳಿಸು, ಅನುಭವಿಸು, ಒಡೆಯನಾಗು ಎನ್ನುವುದು ಮೋಹ. ನೀಡು, ಸಲ್ಲಿಸು, ಸೇವೆ ಮಾಡು ಎನ್ನುವುದು ಕರುಣೆ. ನೀನು, ನಾನುಗಳನ್ನು ಬಿಟ್ಟು ವಿಶ್ವಾತ್ಮದ ಪದವನ್ನು ಪಡೆ ಎನ್ನುವುದು ಶಾಂತಿ.

ವಿವರಣೆ: ಹಿಂದಿನ ಚೌಪದಿಯಲ್ಲಿ ಡಿ.ವಿ.ಜಿ ಮೂರು ಗುಣಗಳನ್ನು ಹೆಸರಿಸಿ ಅವು ಪರಸ್ಪರವಾಗಿ ಒಂದನ್ನೊಂದು ಬೆಳೆಸಿ ಬದುಕಿಗೆ ಸುಂದರತೆಯನ್ನು ತರುತ್ತವೆ ಎಂದು ತಿಳಿಸಿ, ಈ ಕಗ್ಗದಲ್ಲಿ ಅವುಗಳನ್ನು ವಿವರಿಸುತ್ತಾರೆ. ಮೊದಲನೆಯ ಗುಣ ಮೋಹ. ಮೋಹ ಪದದ ಮೂಲ ಅರ್ಥ ದಿಗ್ಭ್ರಾಂತಿ ಅಥವಾ ಗೊಂದಲ. ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ‘ಕ್ರೋಧಾದ್ಭವತಿ ಸಂಮೋಹ. ಸಂಮೋಹಾತ್ ಸ್ಮೃತಿ ವಿಭ್ರಮ:’ ಎಂಬ ಮಾತು ಬರುತ್ತದೆ. ಮೋಹದಿಂದ ಸತ್ಯದ ಅರ್ಥದ ಗ್ರಹಿಕೆ ಮಬ್ಬಾಗುತ್ತದೆ, ನಿರ್ಣಯ ಸಾಮರ್ಥ್ಯದಲ್ಲಿ ದೋಷ ಕಾಣುತ್ತದೆ. ಮಮತ್ವವೇ ಮೋಹ. ಎಲ್ಲವೂ ನನ್ನದು ಎನ್ನುವುದು ಮೋಹ. ಮೋಹ ಸದಾಕಾಲ ಎಲ್ಲವನ್ನು ತನ್ನದಾಗಿಸಿಕೊಳ್ಳಲು ಹವಣಿಸುತ್ತದೆ. ಅದಕ್ಕೆಂದೇ ಮೋಹ, ಸಿಕ್ಕದ್ದನ್ನೆಲ್ಲ ಗಳಿಸು, ಹಿಡಿದುಕೋ, ಪಡೆದದ್ದನ್ನು ಭೋಗಿಸು, ಎಲ್ಲದಕ್ಕೂ ಒಡೆಯನಾಗು ಎನ್ನುತ್ತದೆ. ಇದು ಬದುಕಿನಲ್ಲಿ ಮೊದಲನೆಯ ಹಂತ. ಎಲ್ಲವೂ ತನಗಾಗಿ ಇದ್ದದ್ದು ಎಂಬ ಭ್ರಾಂತಿ.

ಮೋಹದ ನಂತರ ಬರುವ ಎತ್ತರದ ಗುಣ ಕರುಣೆ. ಆಗ ‘ನಾನು’ ಎನ್ನುವುದು ಸ್ವಲ್ಪ ಕಡಿಮೆಯಾಗಿ ಪರರಿಗಾಗಿ ಏನಾದರೂ ಮಾಡಬೇಕೆಂಬ ಭಾವ ಬಲಿತಿದೆ. ಅದು ತನ್ನ ಸ್ವಹಿತಾಸಕ್ತಿಯನ್ನು ದಾಟಿ ಮತ್ತೊಬ್ಬರಿಗಾಗಿ ಕೊಡುವ, ಸಹಾನುಭೂತಿ ತೋರುವ, ಮತ್ತೊಬ್ಬರಿಗೆ ಅಕಾರಣವಾಗಿ ಸೇವೆ ಮಾಡುವ ಗುಣ. ಕರುಣೆಯಲ್ಲಿ ತ್ಯಾಗದ ಅಂಶ ಉಂಟು. ಕರುಣೆಯಲ್ಲಿ ಭೌತಿಕ ಲಾಭವಿಲ್ಲ ಆದರೆ ನೈತಿಕ ಲಾಭವಿದೆ. ಆದರೆ ಕರುಣೆ ಕೂಡ ಒಂದು ಮನೋವಿಕಾರ. ಅದು ಸಾಮಾನ್ಯ ಸನ್ನಿವೇಶಗಳಲ್ಲಿ ಒಳ್ಳೆಯದೇ. ಮನುಷ್ಯರು, ಮೃಗ, ಪಕ್ಷಿಗಳು ತಮ್ಮ ಮರಿಗಳಲ್ಲಿ ತೋರುವ ಕರುಣೆ ಪ್ರಾಕೃತವಾದದ್ದು. ಅದು ವ್ಯಾಮೋಹಕ್ಕೆ ಎಡೆನೀಡುವಂಥದ್ದು, ಪಕ್ಷಪಾತದ್ದು, ಭ್ರಾಂತಿದೃಷ್ಟಿ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಬಂದ ಕರುಣೆ ಇಂಥದ್ದು. ಅವನು ಸ್ವಜನಹತ್ಯೆ ಒಳ್ಳೆಯದಲ್ಲ ಎಂದು ಕರುಣೆ ತೋರುತ್ತಾನೆ. ‘ಸ್ವಜನಹತ್ಯೆ’ಯಲ್ಲಿ ‘ಸ್ವ’ ಎಂಬ ಭಾವ ಮೋಹಮೂಲವಾದದ್ದು. ಅದಕ್ಕೇ ದುಃಖ. ಕರುಣೆ ಸರಿಯಾದ ಸ್ಥಳದಲ್ಲಿ, ನಿರಪೇಕ್ಷವಾಗಿದ್ದಲ್ಲಿ ಅದೊಂದು ಉದಾತ್ತ ಭಾವ. ಇಲ್ಲದಿದ್ದರೆ ಅದು ಹೃದಯ ದೌರ್ಬಲ್ಯ. ಈ ಕಗ್ಗ ಹೇಳುವುದು ‘ಸ್ವ’ ಪ್ರಜ್ಞೆ ಇಲ್ಲದ, ಮೋಹರಹಿತವಾದ ಕರುಣೆ. ಅದು ‘ನಾನು’ ಎಂಬುದನ್ನು ಬಿಟ್ಟು ‘ನೀನು’ ಎನ್ನುವುದರೆಡೆಗೆ ಮನಮಾಡಿದ್ದು.

ಇವೆರಡನ್ನೂ ಮೀರಿದ್ದು ಶಾಂತಿ. ಅದು ದೊರೆಯುವುದು ‘ನಾನು’ ‘ನೀನು’ ಗಳ ದ್ವಂದ್ವವನ್ನು ದಾಟಿದಾಗ. ಬೇಂದ್ರೆಯವರ ನಾಕುತಂತಿಯ ಒಂದು ಸಾಲು, ‘ನಾನು ನೀನಿನ ಈ ನಿನಾನಿಗೆ ಬೇನೆ ಏನೋ?’ ನಾವು ಬೆಳೆದಂತೆಲ್ಲ ‘ನಾನು’ ‘ನನ್ನದು’ ‘ನಿನ್ನದು’ ಎಂಬ ಬೇಲಿಗಳನ್ನು ಕಟ್ಟಿಕೊಂಡೇ ಬದುಕುತ್ತೇವೆ. ಹಾಗಾದರೆ ಈ ‘ನಾನು-ನೀನಿನ’ ಹುಟ್ಟಿಗೆ ‘ಈ ನಿನಾನಿಗೆ’ ಮೂಲ ಕಾರಣ ಯಾರು? ಇದರ ಕರ್ತೃತ್ವ ಶಕ್ತಿ ಯಾವುದು? ಹಾಗೆ ಅಂತರ್ಮುಖವಾಗಿ ಹುಡುಕುತ್ತ ಹೊರಟಾಗ ದೊರೆಯುವುದು ವಿಶ್ವಾತ್ಮಪ್ರಜ್ಞೆ. ಅದೇ ಶಾಂತಿಯ ಮೂಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು