ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ನಂಬಿಕೆಯ ಹೆಣಿಕೆ

Published 2 ಆಗಸ್ಟ್ 2023, 0:04 IST
Last Updated 2 ಆಗಸ್ಟ್ 2023, 0:04 IST
ಅಕ್ಷರ ಗಾತ್ರ

ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ |
ಲೋಕತಾಪದಿ ಬೆಂದು ತಣಿಪನೆಳಸಿದವಂ ||
ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು |
ಸ್ವೀಕರಿಕೆ ಬೇಳ್ಪವರು – ಮಂಕುತಿಮ್ಮ || 940 ||

ಪದ-ಅರ್ಥ: ಗಣಿಸದೆಯೆ=ಗಣನೆಗೆ ತೆಗೆದುಕೊಳ್ಳದೆ, ಲೋಕತಾಪದಿ=ಬದುಕಿನ ಬೇಗೆಯಲ್ಲಿ,
ತಣಿಪನೆಳಸಿದವಂ=ತಣಿಪನ್ (ತಂಪನ್ನು)+ಎಳಸಿದವಂ(ಬಯಸಿದವನು), ಕಂತೆಯಲ್ಲಿ=ಗಂಟಿನಲ್ಲಿ, ನೆಯ್ದಿಹನು=ಹೆಣೆದಿಹನು, ಸ್ವೀಕರಿಕೆ=ಸ್ವೀಕರಿಸಲಿ, ಬೇಳ್ಪವರು=ಬೇಕಾದವರು.

ವಾಚ್ಯಾರ್ಥ: ವ್ಯಾಕರಣ, ಕಾವ್ಯದ ಲಕ್ಷಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಲೋಕದ ಬೆಂಕಿಯಲ್ಲಿ ಬೆಂದು ತಂಪನ್ನು ಬಯಸಿದವನು, ಈ ಗಂಟಿನಲ್ಲಿ ತನ್ನ ನಂಬಿಕೆಯನ್ನೇ ಹೆಣೆದಿದ್ದಾನೆ. ಬೇಕಾದವರು ಅದನ್ನು ಸ್ವೀಕರಿಸಬಹುದು.


ವಿವರಣೆ: ಈ ಕಗ್ಗದಲ್ಲಿ ನಾಲ್ಕು ವಿಚಾರಗಳಿವೆ. 1. ಇದನ್ನು ಬರೆದವರು ಯಾರು? 2. ಏನು ಬರೆದಿದ್ದಾರೆ? 3. ಹೇಗೆ ಬರೆದಿದ್ದಾರೆ? 4. ಇದು ಯಾರಿಗೆ ಪ್ರಯೋಜನ? ಮೊದಲಿಗೆ, ಇದನ್ನು ಬರೆದವನು ಲೋಕದ ಬೇಗೆಯಲ್ಲಿ ಬೆಂದವನು. ಅವನು ಕಷ್ಟ, ಸುಖಗಳ ಬೆಂಕಿಯಲ್ಲಿ ಹಾಯ್ದು ಬಂದವನು. ಬಸವಳಿದು ತಂಪನ್ನು ಬಯಸುತ್ತಿದ್ದಾನೆ. ಆ ತಂಪು ಎಲ್ಲಿ ದೊರೆತೀತೋ ಎಂದು ನೋಡುತ್ತಿದ್ದಾನೆ. ಆತನೇ ತನ್ನ ಜೀವನಾನುಭವದಿಂದ, ತಿಳಿವಳಿಕೆಯಿಂದ ಒಂದಿಷ್ಟನ್ನು ಬರೆದು ಕಂತೆಯಲ್ಲಿ ಕಟ್ಟಿ ಇಟ್ಟಿದ್ದಾನೆ. ಆ ಕಂತೆಯಲ್ಲಿ ಇರುವುದು ತಾನು ಹೊಂದಿದ ನಂಬಿಕೆಯ ಮಾತುಗಳು.

ಯಾಕೆಂದರೆ ಪ್ರತಿಯೊಬ್ಬ ಮನುಷ್ಯನನ್ನು ಪೋಷಿಸುವುದು, ಧೈರ್ಯ ನೀಡುವುದು ಅವನ ನಂಬಿಕೆಯೇ. ನಂಬಿಕೆ ಪರ್ವತವನ್ನೇ ಕದಲಿಸಬಹುದು ಎಂಬ ಮಾತಿದೆ. ಅದು ಪರ್ವತವನ್ನು ಕದಲಿಸದಿದ್ದರೂ, ಬದುಕನ್ನು ಖಂಡಿತವಾಗಿ ಬದಲಿಸುತ್ತದೆ. ನಂಬಿಕೆ ಕಷ್ಟಗಳನ್ನು ಕಡಿಮೆ ಮಾಡದಿದ್ದರೂ, ಅಸಾಧ್ಯವನ್ನು ಸಾಧ್ಯವಾಗಿಸುತ್ತದೆ. ಆದರೆ ಆ ನಂಬಿಕೆ ಸಕಾರಾತ್ಮಕವಾಗಿರಬೇಕು, ಪರಿಶುದ್ಧವಾಗಿರಬೇಕು.
ಲೋಕತಾಪದಲ್ಲಿ ಬೆಂದ ಮನುಷ್ಯ ಪ್ರಪಂಚವನ್ನು, ಅಲ್ಲಿಯ ವ್ಯವಹಾರಗಳನ್ನು ಧನಾತ್ಮಕವಾಗಿ,
ಸಾಕ್ಷಿಪ್ರಜ್ಞೆಯಿಂದ ನೋಡಿರುವುದರಿಂದ ಅವನ ನಂಬಿಕೆ ಅನೇಕರಿಗೆ ಪ್ರಯೋಜನವಾದೀತು ಎಂದು ಬರೆದು ಕಂತೆಯಲ್ಲಿ ಕಟ್ಟಿ ಇಟ್ಟಿದ್ದಾನೆ.

ಮೂರನೆಯದಾಗಿ, ಆತ ತನಗೆ ತೋಚಿದಂತೆ, ಕಾವ್ಯದ ಲಕ್ಷಣಗಳನ್ನು ಗಮನಿಸದೆ, ವ್ಯಾಕರಣದ ಬಗ್ಗೆ ಚಿಂತಿಸದೆ ಬರೆದಿದ್ದಾನೆ. ಇದರಲ್ಲಿ ವ್ಯಾಕರಣ ದೋಷಗಳಿರಬಹುದು. ಕಾವ್ಯಾಂಗದ ಬಾಹ್ಯಲಕ್ಷಣಗಳಾದ ಅಲಂಕಾರ, ಗುಣ, ನೀತಿಗಳಾಗಲೀ, ಅಂತರಂಗದ ಲಕ್ಷಣಗಳಾದ ರಸ, ಧ್ವನಿ, ತತ್ವಗಳಾಗಲೀ ಈ ಕಗ್ಗದಲ್ಲಿ ಇರಲಿಕ್ಕಿಲ್ಲ ಎನ್ನುತ್ತಾರೆ ಕವಿ. ಕೊನೆಯದಾಗಿ, ಕಗ್ಗದ ಪ್ರಯೋಜನ ಇರುವುದು ಎಲ್ಲರಂತೆ ಪ್ರಪಂಚದ ಬೇಗೆಯಲ್ಲಿ ಬೆಂದು ತಂಪನ್ನು ಬಯಸುವವರಿಗೆ. ಇಲ್ಲಿ ಒತ್ತಾಯವೇನೂ ಇಲ್ಲ. ಯಾರಿಗೆ ಇದು ಬೇಕೆನ್ನಿಸುತ್ತದೆಯೋ ಅವರು ಅದನ್ನು ಸ್ವೀಕರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT