ಸೋಮವಾರ, ಜುಲೈ 4, 2022
22 °C

ಬೆರಗಿನ ಬೆಳಕು: ಶಕ್ರನ ವರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಹೀಗೆ ಸಿವಿಗಳ ರಾಷ್ಟ್ರವರ್ಧನನಾದ ವೆಸ್ಸಂತರ ಬೋಧಿಸತ್ವ ನೀರು ಬಿಟ್ಟು ಬ್ರಾಹ್ಮಣನಿಗೆ ಮಾದ್ರಿದೇವಿಯನ್ನು ದಾನ ಕೊಟ್ಟಾಗ ನೆಲ ಕಂಪಿಸಿತು, ಪ್ರಾಣಿಗಳು ಹೂಂಕರಿಸಿದವು, ಪಕ್ಷಿಗಳು ಕಿರುಚಿದವು. ಆದರೆ ಮಾದ್ರಿದೇವಿ ಹುಬ್ಬೇರಿಸಲಿಲ್ಲ, ವಿರೋಧಿಸಲಿಲ್ಲ, ಅಳಲಿಲ್ಲ. ತನ್ನ ಗಂಡನಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದು ಸರಿಯಾಗಿ ತಿಳಿದಿದೆ. ಆದ್ದರಿಂದ ಅವನು ಮಾಡಿದ್ದೇ ಸರಿಯೆಂದು ಭಾವಿಸಿ ಆಕೆ ಮೌನವಾಗಿ ಎಲ್ಲವನ್ನು ನೋಡುತ್ತಿದ್ದಳು. ಆಗ ಬೋಧಿಸತ್ವ ಹೇಳಿದ, ‘ನನ್ನ ಮಗ ಜಾಲಿಕುಮಾರನನ್ನು ಮತ್ತು ಮಗಳು ಕೃಷ್ಣಾಜಿನಳನ್ನು ತ್ಯಾಗ ಮಾಡುವಾಗ ಚಿಂತಿಸಲಿಲ್ಲ. ಮಕ್ಕಳ ಬಗ್ಗೆ ನನಗೆ ಯಾವ ದ್ವೇಷವೂ ಇಲ್ಲ. ಅಂತೆಯೇ ಮಾದ್ರಿಯೊಂದಿಗೂ ನನಗೆ ದ್ವೇಷವಿಲ್ಲ. ನನಗೆ ಸರ್ವಜ್ಞತ್ವ ಅತ್ಯಂತ ಪ್ರಿಯ. ಅದು ನನ್ನ ಬದುಕಿನ ಗುರಿ. ಆದ್ದರಿಂದ ನನಗೆ ಪ್ರಿಯರಾದವರ ತ್ಯಾಗವನ್ನು ಮಾಡಿಬಿಟ್ಟೆ’. ಹೀಗೆ ಮಾತನಾಡಿ ಮಾದ್ರಿದೇವಿಯ ಕಡೆಗೆ ತಿರುಗಿ, ‘ನಿನಗೇನಾದರೂ ಬೇಸರವಿದೆಯೇ?’ ಎಂದು ಕೇಳಿದ.

ಆಕೆ, ‘ದೇವ ನನಗೇಕೆ ಹೀಗೆ ಕೇಳುತ್ತೀರಿ? ಎಂದು ಕೇಳಿ ಸಿಂಹನಾದ ಮಾಡುತ್ತ ತನ್ನ ವಚನವನ್ನು ಘೋಷಿಸಿದಳು, ‘ನಾನು ಮಾದ್ರಿದೇವಿ, ವೆಸ್ಸಂತರ ಬೋಧಿಸತ್ವನ ಹೆಂಡತಿ. ಆತ ನನ್ನ ಒಡೆಯ, ಆತ ನನ್ನ ಈಶ್ವರ. ಆತ ನನ್ನನ್ನು ಯಾರಿಗಾದರೂ ಕೊಡಲಿ, ಮಾರಲಿ ಅಥವಾ ಕೊಂದು ಹಾಕಲಿ. ಆತನ ತೀರ್ಮಾನವನ್ನು ನಾನು ಮನಸಾ ಒಪ್ಪಿಕೊಂಡಿದ್ದೇನೆ’. ಈ ಮಾತುಗಳನ್ನು ಕೇಳಿದ ಶಕ್ರ ಅವಳ ಶ್ರೇಷ್ಠ ವಿಚಾರದ ಸ್ತುತಿ ಮಾಡಿದ. ಮತ್ತೆ ಹೇಳಿದ, ‘ಬೋಧಿಸತ್ವ, ನಿನ್ನ ನಡೆಯಿಂದ ಮನುಷ್ಯ ಹಾಗೂ ಶತ್ರುಗಳನ್ನು ಗೆದ್ದುಕೊಂಡು ಬಿಟ್ಟಿದ್ದೀಯಾ. ನಿನ್ನ ದಾನದಿಂದ ಭೂಮಿ ಅನುರಣಿತವಾಯಿತು. ನಿನ್ನ ಧ್ವನಿ ಮೂರು ಲೋಕಗಳವರೆಗೆ ತಲುಪಿದೆ. ಬೆಟ್ಟಗಳಿಂದ ಪ್ರತಿಧ್ವನಿಯಾದಂತೆ ಅದು ನಾಲ್ಕೂ ಕಡೆಗೆ ಮಿಂಚಿನಂತೆ ಹರಿದುಹೋಯಿತು. ಎರಡೂ ನಾರದ ಪರ್ವತದ ಅಧಿದೇವತೆಗಳಾದ ಇಂದ್ರ, ಬ್ರಹ್ಮ ಮತ್ತು ಪ್ರಜಾಪತಿ ನಿನ್ನ ಅನುಮೋದನೆ ಮಾಡಿದ್ದಾರೆ. ನೀನು ಅತ್ಯಂತ ದುಷ್ಕರವಾದ ಕಾರ್ಯವನ್ನು ಮಾಡಿದ್ದೀ ಎಂದು ಸೋಮ, ಯಮ ಮತ್ತು ರಾಜ ಕುಬೇರರು ನಿನ್ನ ಅನುಮೋದನೆ ಮಾಡಿದ್ದಾರೆ. ನೀನು ಮಾಡಿದ್ದು ಅತ್ಯಂತ ದುಜ್ರ್ಞೇಯವಾದ ಕರ್ಮ. ಇಂತಹ ಸತ್ಪುರುಷರು ಸ್ವರ್ಗಕ್ಕೆ ಹೋಗುತ್ತಾರೆ. ಮಕ್ಕಳನ್ನು ದಾನ ಮಾಡಿದ ಮತ್ತು ಕಾಡಿನಲ್ಲಿದ್ದುಕೊಂಡು ಹೆಂಡತಿಯನ್ನು ದಾನ ಮಾಡಿದ ಇವನ ಬ್ರಹ್ಮಯಾನ ನರಕ ಲೋಕವನ್ನು ದಾಟಿಕೊಂಡು ಸ್ವರ್ಗದಲ್ಲಿ ಫಲದಾಯಕವಾಗಲಿ’.

ಹೀಗೆ ಬೋಧಿಸತ್ವನ ದಾನದ ಅನುಮೋದನೆಯನ್ನು ಮಾಡಿ, ಶಕ್ರ, ಇನ್ನು ತಡಮಾಡಬಾರದೆಂದು ತೀರ್ಮಾನಿಸಿ ಹೇಳಿದ, ‘ಹೇ ವೆಸ್ಸಂತರ ಬೋಧಿಸತ್ವ, ನಿನ್ನ ಸರ್ವಾಂಗ ಸುಂದರಿ ಮಡದಿ ಮಾದ್ರಿದೇವಿಯನ್ನು ನಿನಗೆ ಮರಳಿ ದಾನ ಮಾಡುತ್ತಿದ್ದೇನೆ. ಆದ್ದರಿಂದ ನೀನು ಆಕೆಯನ್ನು ಮತ್ತೆಂದೂ ದಾನ ಮಾಡಲಾರೆ. ನೀನೇ ಮಾದ್ರಿಗೆ ಅನುರೂಪನಾದವನು ಮತ್ತು ಆಕೆ ನಿನಗೆ ಅನುರೂಪಳಾದವಳು. ನೀವಿಬ್ಬರೂ ಸಮಾನ ಮನಸ್ಕರು ಮತ್ತು ಸಮಾನ ಚಿತ್ತವುಳ್ಳವರು. ಈ ಕಾಡಿನಲ್ಲಿ ಇಬ್ಬರೂ ಏಕಚಿತ್ತರಾಗಿ ಬಾಳಿರಿ’. ಹೀಗೆ ಹೇಳಿ ತನ್ನ ನಿಜರೂಪವನ್ನು ತೋರಿಸಿ, ‘ನಾನು ದೇವೇಂದ್ರ ಶಕ್ರ. ನಿನ್ನ ಬಳಿಗೆ ಬಂದಿದ್ದೇನೆ. ನೀನು ರಾಜರ್ಷಿ. ನಿನಗೆ ನಾನು ಎಂಟು ವರಗಳನ್ನು ಕೊಡುತ್ತೇನೆ, ಕೇಳು’ ಎಂದು ಪ್ರಸನ್ನನಾದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು