ಬುಧವಾರ, ಫೆಬ್ರವರಿ 26, 2020
19 °C

ಅಂತಃಪ್ರವೃತ್ತಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಆವುದೋ ಒಳಿತೆಂದು ಆವುದೋ ಸೊಗವೆಂದು |
ಆವಾವ ದಿಕ್ಕಿನೊಳಮಾವಗಂ ಬೆದಕಿ ||
ಜೀವ ಪರಿಧಾವಿಪವೊಲ್ ಆಗಿಪಂತರ್ವೃತ್ತಿ
ಭಾವುಕದ ನೆಲೆಯ ಕರೆ – ಮಂಕುತಿಮ್ಮ || 222 ||

ಪದ-ಅರ್ಥ: ಸೊಗ=ಸೊಗಸು, ದಿಕ್ಕಿನೊಳಮಾವಗಂ=ದಿಕ್ಕಿನೊಳಂ(ದಿಕ್ಕಿನಲ್ಲಿ)+ಆವಗಂ(ಯಾವಾಗಲೂ), ಬೆದಕಿ=ಹುಡುಕಾಡಿ, ಪರಿಧಾವಿಪವೊಲ್=ಧಾವಿಸುವಂತೆ ಮಾಡುವ, ಆಗಿಪಂತರ್ವೃತ್ತಿ+ಆಗಿಪ(ಮಾಡುವ)+ಅಂತರ್ವೃತ್ತಿ=ಅಂತರಂಗದ ಭಾವನೆ

ವಾಚ್ಯಾರ್ಥ: ಯಾವುದೋ ಒಳ್ಳೆಯದು, ಯಾವುದೋ ಸೊಗಸಾದದ್ದು ಎಂದು ಯಾವುಯಾವುದೋ ದಿಕ್ಕುಗಳಲ್ಲಿ ಸದಾಕಾಲ ತಡಕಾಡುತ್ತ ಮನುಷ್ಯ ಜೀವ ಧಾವಿಸುವಂತೆ ಮಾಡುವ ಅಂತರಂಗದ ಪ್ರವೃತ್ತಿ ಅದು ಭಾವನೆಯ ಕೂಗು.

ವಿವರಣೆ: ಮನುಷ್ಯನ ಮನಸ್ಸು ಎಂದಿಗೂ ಸುಮ್ಮನಿರಲಾರದು. ಅದು ಆತನನ್ನು ಓಡಿಸುತ್ತಲೇ ಇರುತ್ತದೆ. ಯಾವುದೋ ಒಳ್ಳೆಯದು ಎಂದು ಎನ್ನಿಸಿದ ತಕ್ಷಣ ಆ ಕಡೆಗೆ ಧಾವಿಸುತ್ತದೆ. ಅಷ್ಟರಲ್ಲಿ ಮತ್ತೊಂದು ಸೊಗಸಾಗಿ ಕಾಣುತ್ತದೆ. ಮತ್ತೆ ಆ ಕಡೆಗೆ ಧಾವಂತ. ಮರುಭೂಮಿಯಲ್ಲಿ ನೀರಡಿಸಿದ ಪ್ರಾಣಿಗೆ ದೂರದಲ್ಲಿ ನೀರು ಹಾಯುವಂತೆ ಕಾಣುತ್ತದೆ. ಅದರಾಸೆಗೆ ನಾಲಿಗೆಯನ್ನು ಚಾಚಿಕೊಂಡು ಓಡಿ ಓಡಿ ಸುಸ್ತಾಗುತ್ತದೆ. ನೀರು ದೊರೆಯುವುದಿಲ್ಲ. ನೀರಿದ್ದರೆ ತಾನೇ ದೊರಕುವುದು? ಅದು ಕಂಡಿದ್ದು ಮೃಗಜಲ, ನೀರಿನ ಭ್ರಮೆ. ದೀಪದ ಹುಳಕ್ಕೆ ಬೆಳಕನ್ನು ಕಂಡರೆ ಬಲು ಸಂತೋಷ. ಹಾರಿ ಹಾರಿ ಬಂದು ಬೆಂಕಿಯಲ್ಲಿ ಬಿದ್ದು ತನ್ನನ್ನೇ ಕಳೆದುಕೊಳ್ಳುತ್ತದೆ. ಮನುಷ್ಯ ಹೀಗೆ ತನಗೆ ಸೊಗಸೆಂದು ಕಂಡ ಕಡೆಗೆ ಧಾವಿಸುವಾಗ ಪ್ರತಿ ಬಾರಿ ಕಳೆದುಕೊಳ್ಳುತ್ತಾನೆಂಬ ಅರ್ಥವಲ್ಲ, ಆದರೆ ಧಾವಂತ ತಪ್ಪಿದ್ದಲ್ಲ. ಹಣ ಗಳಿಸುವ ಆಸೆಗೆ ಸಮುದ್ರಗಳನ್ನು ಹಾರಿ ಬೇರೆ ದೇಶಗಳಿಗೆ ದಾಂಗುಡಿ ಇಡುತ್ತಾನೆ, ಅಧಿಕಾರದ ಆಸೆಗೆ ಏನೇನೋ ವಿಪರೀತದ ಆಟಗಳನ್ನು ಆಡುತ್ತಾನೆ.

ಮನಸ್ಸು ಒಂದು ಕಬ್ಬಿಣದ ಚೂರು ಇದ್ದಂತೆ. ಅದರ ಹಿಡಿತ ಅದರ ಕೈಯಲ್ಲಿ ಇಲ್ಲ. ಬೇರೆ ಬೇರೆ ದಿಕ್ಕಿನಲ್ಲಿರುವ ಆಕರ್ಷಣೆಯ ಆಯಸ್ಕಾಂತಗಳು ಅದನ್ನು ಹಿಡಿದೆಳೆಯುತ್ತವೆ. ಇದು ಸೆಳೆತ ಕಂಡೆಡೆಗೆ ಧಾವಿಸುತ್ತದೆ. ಮೊದಲಿನ ಅಯಸ್ಕಾಂತಕ್ಕಿಂತ ಪ್ರಬಲವಾದ ಆಯಸ್ಕಾಂತ ಸೆಳೆಯಿತೋ, ಆ ಕಡೆಗೆ ಪಯಣ ಪ್ರಾರಂಭ. ಕಠಿಣ ತಪಸ್ಸಿನ ವಿಶ್ವಾಮಿತ್ರರನ್ನು ಅಲುಗಾಡಿಸಿದ ಮೇನಕೆಯ ರೂಪ, ಭೂಮಿಯಷ್ಟೇ ಸ್ಥಿರ ಮನಸ್ಸಿನ ಸೀತೆಯನ್ನು ಆಕರ್ಷಿಸಿ ಭ್ರಮಿಸುವಂತೆ ಮಾಡಿದ ಮಾಯಾ ಜಿಂಕೆ, ಒಂದು ವ್ಯವಸ್ಥೆಯ ನಾಯಕತ್ವಕ್ಕಾಗಿ ನಿಷ್ಠೆ ಇಲ್ಲದವ ರನ್ನು ಓಲೈಸುತ್ತ ಓಡಾಡುವ ಕರ್ಮ ಇವೆಲ್ಲ ಏಕಾಗುತ್ತವೆ? ಇದನ್ನು ಈ ಕಗ್ಗ ಸೊಗಸಾಗಿ ನಮ್ಮ ಮುಂದಿಡುತ್ತದೆ. ಇದಕ್ಕೆಲ್ಲ ಕಾರಣ ನಮ್ಮ ಅಂತಃಪ್ರವೃತ್ತಿ. ಇದು ಮನುಷ್ಯನ ಭಾವನೆಯ ಕೂಗು. ಆದರೆ ಇಲ್ಲೊಂದು ಸುಂದರವಾದ ಆದರೆ ಸೂಕ್ಷ್ಮವಾದ ಸೂಚನೆಯೂ ಇದೆ. ಇದು ಮನಸ್ಸಿನ ಪ್ರವೃತ್ತಿಯಾದ್ದರಿಂದ, ಆ ಪ್ರವೃತ್ತಿಯನ್ನು ಪ್ರಯತ್ನದಿಂದ ನಿಗ್ರಹಿಸಲು ಸಾಧ್ಯ. ಹಾಗೆ ನಿಗ್ರಹಿಸಿದರೆ ದಿಕ್ಕುದಿಕ್ಕಿಗೆ ಓಡುವ ಪರಿತಾಪ ಕಡಿಮೆಯಾಗಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)