ಸೋಮವಾರ, ಡಿಸೆಂಬರ್ 6, 2021
24 °C

ಬೆರಗಿನ ಬೆಳಕು | ದೇವರ ಕೃಪೆ - ಸಾಲ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಜೀವಸತ್ತ್ವದಪಾರಭಂಡಾರವೊಂದಿಹುದು|
ಸಾವಕಾರನದೃಷ್ಟನ್ ಅದನಾಳುತಿಹನು||
ಆವಶ್ಯಕದ ಕಡವನವನೀವುದುಂಟುಂತೆ!|
ನಾವೊಲಿಪುದೆಂತವನ ? – ಮಂಕುತಿಮ್ಮ||503||

ಪದ-ಆರ್ಥ: ಜೀವಸತ್ತ್ವದಪಾರಭಂಡಾರವೊಂದಿಹುದು=ಜೀವಸತ್ವದ+ ಅಪಾರ+ ಭಂಡಾರ+ ಒಂದು+ ಇಹುದು, ಸಾವಕಾರನದೃಷ್ಟನ್= ಸಾವುಕಾರನು+ ಅದೃಷ್ಟನ್ (ಕಣ್ಣಿಗೆ ಕಾಣುವುದಿಲ್ಲ), ಕಡವನವನೀವುದುಂಟಂತೆ= ಕಡವನು (ಸಾಲವನ್ನು)+ ಅವನು+ ಈವುದು (ಕೊಡುವುದು)+ ಉಂಟುಂತೆ, ನಾವೊಲಿಪುದೆಂತವನ= ನಾವು+ ಒಲಿಪುದು (ಒಲಿಸುವುದು)+ ಎಂತು+ ಅವನ.

ವಾಚ್ಯಾರ್ಥ: ಜೀವಸತ್ವದ ಒಂದು ಭಂಡಾರವಿದೆ. ಕಣ್ಣಿಗೆ ಕಾಣದ ಸಾವುಕಾರನೊಬ್ಬನು ಅದನ್ನು ಆಳುತ್ತಿದ್ದಾನೆ. ಅವಶ್ಯವಾದ ಸಾಲವನ್ನು ಕೊಡುತ್ತಾನಂತೆ. ಅವನನ್ನು ನಾವು ಒಲಿಸುವುದು ಹೇಗೆ?

ವಿವರಣೆ: ಪ್ರತಿಯೊಂದು ವಸ್ತುವಿಗೆ ಸೃಷ್ಟಿಕರ್ತನೊಬ್ಬನಿದ್ದಾನೆ. ರೇಡಿಯೊ ಕಂಡುಹಿಡಿದವನೊಬ್ಬ, ದೂರದರ್ಶನ ಕಂಡುಹಿಡಿದವನೊಬ್ಬ, ಅಕ್ಕಿ, ರಾಗಿ, ಹತ್ತಿಗಳ ತಳಿಯನ್ನು ಕಂಡುಹಿಡಿದವನೊಬ್ಬ, ಹೀಗೆ ಪ್ರತಿಯೊಂದು ಸೃಷ್ಟಿಯ ಹಿಂದೆ ಒಂದು ಕಾರಣ ಮತ್ತು ಕರ್ತೃ ಇದ್ದಾರೆ. ಆದರೆ ಈ ಪ್ರಪಂಚ ಇದೆಯಲ್ಲ, ಬೆರಗಾಗುವಂಥ ಪ್ರಪಂಚ, ಇದನ್ನು ನಿರ್ಮಾಣ ಮಾಡಿದ್ದು ಯಾರು?

ಪ್ರತಿಕ್ಷಣಕ್ಕೂ ಕಲ್ಪನಾತೀತವಾದ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ, ಅಷ್ಟೇ ಪ್ರಮಾಣದಲ್ಲಿ ನಾಶವೂ ಆಗುತ್ತಿದೆ. ಅಮೀಬಾದಂಥ ಸೂಕ್ಷಜೀವಿಯಿಂದ, ಆನೆಯಂಥ ಬೃಹತ್ ಪ್ರಾಣಿಗಳ ಸೃಷ್ಟಿ ನಡೆದೇ ಇದೆ. ಭೂಕಂಪ, ಮಹಾಪೂರದಂಥ ಅನಾಹುತಗಳಿಂದ ಸಾವಿರಾರು ಪ್ರಾಣಗಳ ನಾಶವೂ ನಡೆದಿದೆ. ಇದೊಂದು ಬಹುದೊಡ್ಡ ಜೀವಸತ್ವದ ಉಗ್ರಾಣ. ಈ ಉಗ್ರಾಣದ ಯುಜಮಾನ ಯಾರು? ಈ ಚಿಂತನೆ ಸಹಸ್ರಾರು ವರ್ಷಗಳಿಂದ ನಡೆದೇ ಇದೆ.

ನಮ್ಮ ಆರ್ಷದೃಷ್ಟಿಯ ದೃಷ್ಟಾರರು ಆ ಶಕ್ತಿಯನ್ನು ದೇವರು ಎಂದು ಕರೆದರು. ದೇವರು ಕಣ್ಣಿಗೆ ಕಾಣಲಾರ, ಆದರೆ ಪ್ರತಿಯೊಂದು ಅಣು, ಅಣುವಿನಲ್ಲಿ ಸೇರಿಕೊಂಡಿದ್ದಾನೆ. ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾಗಿದ್ದಾನೆ. ಅಂತರ್ಯಾಮಿಯಾಗಿ ಎಲ್ಲವನ್ನು, ಎಲ್ಲರನ್ನು ನಿಯಂತ್ರಿಸುತ್ತಾನೆ. ಕರ್ಮಾಧ್ಯಕ್ಷನಾಗಿ ಫಲ ಕೊಡುತ್ತಾನೆ. ಅವನು ಸಾಕಾರನೂ ಹೌದು, ನಿರಾಕಾರನೂ ಹೌದು. ನಮ್ಮ ಬುದ್ಧಿಶಕ್ತಿಯಿಂದ ಅವನನ್ನು ಯಥಾರ್ಥವಾಗಿ ಅರಿಯುವುದಾಗಲಿ, ವರ್ಣಿಸುವುದಾಗಲಿ ಸಾಧ್ಯವಿಲ್ಲ. ಆದರೆ ನಾವು ಅಹಂಕಾರರಹಿತರಾಗಿ, ಅನನ್ಯ ಭಕ್ತಿಯಿಂದ ಪೂಜಿಸಿದರೆ, ಅವನು ಸುಪ್ರೀತನಾಗಿ ನಮ್ಮ ಮೇಲೆ ಅನುಗ್ರಹಮಾಡುತ್ತಾನೆ. ಇದು ನಮ್ಮ ದರ್ಶನಗಳ ಅಂತರಂಗ. ಕಗ್ಗ ಈ ಮಾತನ್ನೇ ಧ್ವನಿಸುತ್ತದೆ. ಈ ಪ್ರಚಂಡವಾದ ಜೀವಸತ್ವದ ಉಗ್ರಾಣದ ಯಜಮಾನನೊಬ್ಬನಿದ್ದಾನೆ. ಆದರೆ ಆತ ಕಣ್ಣಿಗೆ ಕಾಣಲಾರ. ಆದರೆ ಒಂದು ಸುದ್ದಿ ಇದೆ. ಅವನು ಮನಸ್ಸು ಮಾಡಿದರೆ, ನಮಗೆ ಅವಶ್ಯಕವಾದುದನ್ನು ಕಡವಾಗಿ ನೀಡಬಹುದಂತೆ. ಹಾಗಾದರೆ ಅವನನ್ನು ಒಲಿಸಿಕೊಳ್ಳುವುದು ಹೇಗೆ?

ಅವನು ಕರುಣೆಯಿಂದ ನೀಡುವ ವಸ್ತು ‘ಕಡ’ ಎನ್ನುವುದನ್ನು ಮರೆಯಬಾರದು. ‘ಕಡ’ ಎಂದರೆ ಸಾಲ - ಸಾಲ ಎಂದಿಗೂ ದಾನವಲ್ಲ. ಅದು ಮರಳಿಕೊಡಬೇಕಾದ ವಸ್ತು. ಬಹುಶಃ ಅದನ್ನು ಬಡ್ಡಿ ಸಮೇತ ಮರಳಿಸಬೇಕಾಗುತ್ತದೆ. ನಾವು ವಿನಮ್ರತೆಯಿಂದ, ಪ್ರಾಮಾಣಿಕತೆಯಿಂದ ಕರ್ತವ್ಯ ಮಾಡಿದಾಗಲೂ ಭಗವಂತ ನಮಗೆ ನೀಡುವುದು ಸಾಲವೇ. ಅಂದರೆ ನಾವು ಭಗವಂತನಿಂದ ಪಡೆದದ್ದು ನಮ್ಮದೇ ಅಲ್ಲ. ಅದನ್ನೇ ಸ್ವಾಮಿ ವಿವೇಕಾನಂದರು ತರುಣ ರಾಕ್‍ಫೆಲರ್‍ನಿಗೆ ಹೇಳುತ್ತಾರೆ. ‘ನಿನ್ನ ಹಣ, ನಿನ್ನದಲ್ಲ. ಭಗವಂತ ಅದನ್ನು ಜನರಿಗೆ ಹಂಚಲು ನಿನ್ನನ್ನು ಸುಪರ್ದುದಾರನನ್ನಾಗಿ ನಿಯಮಿಸಿದ್ದಾನೆ’. ನಾವು ಪಡೆದದ್ದೆಲ್ಲ ಅವನು ನೀಡಿದ ಸಾಲ. ಅದನ್ನು ಶ್ರದ್ಧೆಯಿಂದ ಮರಳಿ ಒಪ್ಪಿಸಿದಾಗ ಅವನು ಸಂತೋಷದಿಂದ ಮತ್ತಷ್ಟು ನೀಡಿಯಾನು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.