ಸೋಮವಾರ, ಅಕ್ಟೋಬರ್ 3, 2022
24 °C

ಬೆರಗಿನ ಬೆಳಕು | ಮನಸ್ಸಾಕ್ಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುನಕ ಬೆಂಬತ್ತಿತಲ ಧರ್ಮಜನ ಕಡೆವರಂ |

ನಿನಗಂತು ಸಂಗಡಿಗನೊರ್ವನೆಡೆಬಿಡದನ್ ||

ಇಣಿಕಿ ನೋಡರದಾರುಮೆನ್ನುವೆಡೆ ಕಾದಿಹನು |

ಅಣಕಿಗಂ ಮನಸ್ಸಾಕ್ಷಿ – ಮಂಕುತಿಮ್ಮ || 690 ||

ಪದ-ಅರ್ಥ: ಶುನಕ=ನಾಯಿ, ಬೆಂಬತ್ತಿತಲ=ಬೆನ್ನುಹತ್ತಿತಲ, ಕಡೆವರಂ=ಕಡೆಯವರೆಗೂ, ನಿನಗಂತು=ನಿನಗೆ+ಅಂತು,
ಸಂಗಡಿಗನೊರ್ವನೆಡೆಬಿಡದನ್=ಸಂಗಡಿಗನು+ಓರ್ವನ್ (ಒಬ್ಬನು)+ಎಡೆಬಿಡದನ್, ನೋಡರದಾರುಮೆನ್ನುವೆಡೆ = ನೋಡರು(ನೋಡುವುದಿಲ್ಲ)+ಅದಾರು (ಯಾರೂ)+ಎನ್ನುವೆಡೆ(ಎನ್ನುವುದಾದರೆ), ಅಣಕಿಗ=ಅಣಕಿಸುವವನು.
ವಾಚ್ಯಾರ್ಥ: ಕಡೆಯವರೆಗೂ ಧರ್ಮರಾಜನನ್ನು ನಾಯಿಯೊಂದು ಬೆನ್ನತ್ತಿತಲ್ಲ. ಅಂತೆಯೇ ನಿನಗೂ ಸಂಗಡಿಗನೊಬ್ಬನು ಎಡೆಬಿಡದೆ ಇದ್ದಾನೆ. ಯಾರೂ ನನ್ನನ್ನು ಇಣಿಕಿ ನೋಡಲಾರರು ಎನ್ನುವುದಾದರೆ ಮನಸ್ಸಾಕ್ಷಿ ಅಣಕಿಸುತ್ತ ಕಾದಿದ್ದಾನೆ.

ವಿವರಣೆ: ಮಹಾಭಾರತದ ಮನೋಜ್ಞ ಪ್ರಸಂಗವೊಂದನ್ನು ಈ ಕಗ್ಗ ಎತ್ತಿ ತೋರುತ್ತದೆ. ಕುರುಕ್ಷೇತ್ರ ಯುದ್ಧ ಮುಗಿದು ಧರ್ಮರಾಜನ ಆಡಳಿತದ ಕೆಲವು ವರ್ಷಗಳು ಕಳೆದ ನಂತರ, ತಾವಿನ್ನು ಹಿಮಾಲಯಕ್ಕೆ ಹೋಗುವ ಸಮಯ ಬಂತೆಂದು ತಿಳಿದು. ಅಭಿಮನ್ಯುವಿನ ಮಗನಾದ ಪರೀಕ್ಷಿತನನ್ನು ರಾಜನನ್ನಾಗಿ ಮಾಡಿ, ಸುಭದ್ರೆಯನ್ನು ರಾಜಮಾತೆಯನ್ನಾಗಿ ನಿಯಮಿಸಿ, ಧರ್ಮರಾಜ ತನ್ನ ತಮ್ಮಂದಿರು ಮತ್ತು ದ್ರೌಪದಿಯೊಂದಿಗೆ ಹೊರಟ. ಅವರೊಂದಿಗೆ ಒಂದು ನಾಯಿಯೂ ಇತ್ತು. ಅದೆಲ್ಲಿಂದ ಬಂದಿತ್ತೋ? ಮೇರು ಪರ್ವತವನ್ನು ಸೇರುವ ಮೊದಲೇ ಪ್ರಿಯಪತ್ನಿ ದ್ರೌಪದಿ ದೇಹತ್ಯಾಗ ಮಾಡಿದಳು. ಮುಂದೆ ನಡೆದಂತೆ ನಕುಲ, ಸಹದೇವ, ಅರ್ಜುನರು
ಪ್ರಾಣಬಿಟ್ಟರು. ಕೊನೆಗೆ ಪ್ರಯಾಣದಲ್ಲಿ ಭೀಮನೂ ಮರಣಹೊಂದಿದ. ಆದರೆ ನಾಯಿ ಮಾತ್ರ ಜೊತೆಯಾಗಿಯೇ ಇತ್ತು.

ಸ್ವರ್ಗದ ಕಡೆಗೆ ನಡೆದಾಗ ಇಂದ್ರ ಬಂದು, “ಧರ್ಮರಾಜಾ, ನೀನು ಧರ್ಮಪಾಲನೆ ಮಾಡಿದ್ದೀಯಾ, ರಥವನ್ನು ಹತ್ತು. ಸ್ವರ್ಗಕ್ಕೆ ಕರೆದೊಯ್ಯುತ್ತೇನೆ” ಎಂದಾಗ ತನ್ನ ಜೊತೆಯಲ್ಲಿ ನಾಯಿಯನ್ನು ಕರೆದುಕೊಂಡು ಹೋಗಬೇಕು ಎಂದು ಬೇಡುತ್ತಾನೆ ಧರ್ಮರಾಜ. ಕಾರಣ ಕೇಳಿದರೆ, “ನನ್ನ ಹೆಂಡತಿ, ತಮ್ಮಂದಿರು ನನ್ನನ್ನು ತೊರೆದರೂ ಈ ನಾಯಿ ನನ್ನನ್ನು ತೊರೆದಿಲ್ಲ. ಅದಿಲ್ಲದೆ ನಾನು ಸ್ವರ್ಗಕ್ಕೆ ಬರಲಾರೆ” ಎಂದಾಗ ನಾಯಿ ಯಮಧರ್ಮನಾಗಿ ನಿಂತು, “ನಿನ್ನ ಧರ್ಮಪ್ರಜ್ಞೆಗೆ ಮೆಚ್ಚಿದ್ದೇನೆ” ಎಂದು ಸ್ವರ್ಗಕ್ಕೆ ಹೋಗಲು ಅನುವು ಮಾಡುತ್ತಾನೆ. ಈ ಪ್ರಸಂಗವನ್ನು ಕಗ್ಗದಲ್ಲಿ ತರಲಾಗಿದೆ.

ಧರ್ಮರಾಜನನ್ನು ಕೊನೆಯವರೆಗೆ ಬೆನ್ನತ್ತಿದ ನಾಯಿಯಂತೆ ನಮ್ಮನ್ನೂ ಒಬ್ಬ ಎಂದಿಗೂ ಬಿಡದೆ ಬೆನ್ನುಹತ್ತಿ ಬರುತ್ತಾನಂತೆ ಅವನು ಯಾರು ಎಂದು ಕುತೂಹಲದಿಂದ ಇಣುಕಿ ನೋಡಿದರೆ ಆತ ನಮ್ಮ ಮನಸ್ಸಾಕ್ಷಿ, ಇದೆಷ್ಟು ಚೆಂದದ ಮಾತು! ನಾವು ಯಾರಿಗಾದರೂ ಮೋಸ ಮಾಡಬಹುದು, ಸುಳ್ಳು ಹೇಳಬಹುದು, ಜನರನ್ನು ಮರುಳು ಮಾಡಬಹುದು. ಆದರೆ ನಮ್ಮ ಅಂತ:ಸಾಕ್ಷಿ. ಅದನ್ನು ಗಮನಿಸುತ್ತದೆ. ಮನಸ್ಸಿಗೆ ಚುಚ್ಚುತ್ತದೆ. ‘ಎಲಾ ಸುಳ್ಳು ಹೇಳುತ್ತೀಯಾ?” ಎಂದು ಕೆಣಕಿ ಪ್ರಶ್ನಿಸುತ್ತದೆ.

ಎಲ್ಲಿಯವರೆಗೆ ನಾವು ಮನಸ್ಸಾಕ್ಷಿಯನ್ನು ಶುದ್ಧವಾಗಿಟ್ಟುಕೊಳ್ಳುತ್ತೇವೋ, ಅದಕ್ಕನುಗುಣವಾಗಿ ನಡೆಯುತ್ತೇವೋ ಅಲ್ಲಿಯವರೆಗೆ ನಮಗೆ ಮುಖವಾಡಗಳ ಅಗತ್ಯತೆ ಬರುವುದಿಲ್ಲ. ಕೊನೆಯವರೆಗೂ ನಮ್ಮೊಂದಿಗಿರುವ ಮನಸ್ಸಾಕ್ಷಿ, ನಮ್ಮ ಸನ್ನಡತೆಗೆ ಒಂದು ದಾರಿದೀಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.