ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಗುಣಗಳ ಅವತರಣ

Last Updated 29 ಏಪ್ರಿಲ್ 2021, 19:11 IST
ಅಕ್ಷರ ಗಾತ್ರ

ಜನಿಸಿದೆಡೆಯಿಂ ಕಡಲವರೆಗಮಡಿಯಡಿ ನೆಲದ |
ಗುಣವಕೊಳ್ಳುತ ಕೊಡುತ ಪೊನಲು ಮಾರ್ಪಡುಗುಂ ||
ಮನುಜಸಂತಾನದಲಿ ಗುಣದವತರಣವಂತು |
ಗುಣಿಪುದೆಂತಾ ತೆರನ – ಮಂಕುತಿಮ್ಮ || 412 ||

ಪದ-ಅರ್ಥ: ಜನಿಸಿದೆಡೆಯಿಂ=ಜನಿಸಿದ+ಎಡೆಯಿಂ(ಸ್ಥಾನದಿಂದ), ಕಡಲವರೆಗಮಡಿಯಡಿ=ಕಡಲವರೆಗಂ(ಕಡಲವರೆಗೂ)+ಅಡಿ+ಅಡಿ, ಪೊನಲು=ನದಿ, ಮಾರ್ಪಡುಗುಂ=ಬದಲಾಯಿಸುತ್ತದೆ, ಗುಣದವತರವಂತು=ಗುಣದ+ಅವತರಣ+ಅಂತು(ಹಾಗೆಯೇ), ಗುಣಿಪುದೆಂತಾ=ಗುಣಿಪುದೆಂತು (ಲೆಕ್ಕ ಹಾಕುವುದೆಂತು)+ಆ, ತೆರನ=ರೀತಿಯನ್ನು.

ವಾಚ್ಯಾರ್ಥ: ಹುಟ್ಟಿದೆಡೆಯಿಂದ ಕಡಲವರೆಗೆ ಹರಿಯುವ ನದಿ ನೆಲದ ಗುಣವನ್ನು ಪಡೆಯುತ್ತ, ನೆಲಕ್ಕೆ ತನ್ನ ಗುಣವನ್ನು ಕೊಡುತ್ತ ಬದಲಾಗುವಂತೆ, ಮನುಷ್ಯನಲ್ಲೂ ಗುಣಗಳ ಅವತರಣ ಹಾಗೆಯೇ ಆಗುತ್ತದೆ. ಅದನ್ನು ಗಣಿಸುವುದೆಂತು?

ವಿವರಣೆ: ಎಲ್ಲೋ ಒಂದೆಡೆ ನೆಲದಲ್ಲಿ ಜಿನುಗಿ ಹುಟ್ಟಿದ ನದಿ ಸಣ್ಣದಾಗಿ ಹರಿಯುತ್ತ ಮುಂದುವರೆಯುತ್ತದೆ. ಹಾಗೆ ಹೋಗುವಾಗ ನೆಲದ ಗುಣವನ್ನು ಹೀರಿಕೊಳ್ಳುತ್ತದೆ. ಅಷ್ಟೇ ಅಲ್ಲ, ತನ್ನ ಗುಣವನ್ನು ನೆಲಕ್ಕೆ ಕೊಡುತ್ತದೆ. ನೀರಿನ ರುಚಿ, ಮೃದುತ್ವ, ಕಠಿಣತೆ ಬಂದದ್ದು ನದಿ ಹರಿದು ಬಂದ ಮಣ್ಣಿನ ಗುಣ. ಅದಕ್ಕೇ ಒಂದು ಬಾವಿಯ, ಕೆರೆಯ, ನದಿಯ ನೀರಿನ ಗುಣ, ಮತ್ತೊಂದರಂತಿರುವುದಿಲ್ಲ. ಇಸ್ರೇಲ್‌ನ ಪಕ್ಕದಲ್ಲಿರುವ ಎರಡು ಸಮುದ್ರಗಳಲ್ಲಿ ಒಂದು ಮೃತ ಸಮುದ್ರ, ಮತ್ತೊಂದು ಗೆಲಲೀ ಸಮುದ್ರ. ಮೃತಸಮುದ್ರ ಎಂದು ಹೆಸರು ಬಂದದ್ದೇ ಅದರಲ್ಲಿರುವ ಉಪ್ಪಿನಂಶದಿಂದ. ಆ ನೀರಿನಲ್ಲಿ ಪ್ರತಿಶತ ಮೂವತ್ತೆರಡರಷ್ಟು ಉಪ್ಪಿದೆ. ಅದರಿಂದಾಗಿ ಈ ಸಮುದ್ರದ ನೀರಿನಲ್ಲಿ ಒಂದು ಜಲಚರವೂ ಬದುಕುವುದಿಲ್ಲ, ಅದರ ಸುತ್ತಮುತ್ತ ಸಸ್ಯಗಳೂ ಬೆಳೆಯಲಾರವು. ಅದಕ್ಕೇ ಅದು ಮೃತಸಮುದ್ರ. ಗೆಲಿಲಿ ಸಮುದ್ರದಲ್ಲಿ ನೀರು ಹರಿದು, ಸದಾಕಾಲ ಬದಲಾಗುವುದರಿಂದ ಆ ನೀರಿನಲ್ಲಿ ಉಪ್ಪಿನಂಶ ಕಡಿಮೆ ಇದೆ. ಅಂದರೆ ನೀರಿನ ಗುಣ ತಾನು ಹರಿಯುವ ಮಣ್ಣಿನಿಂದ ಮಾತ್ರ ಬಂದದ್ದಲ್ಲ, ತನ್ನ ಚಲನಶೀಲತೆಯಿಂದ ಪಡೆದುಕೊಂಡದ್ದು. ಒಂದೇ ಕಡೆಗೆ ನಿಂತ ನೀರು ಕ್ಷಾರಯುಕ್ತವಾಗಿ, ವಿಷಕಾರಿಯಾದ ಅಂಶಗಳನ್ನು ಸಂಗ್ರಹಿಸಿಕೊಂಡರೆ, ಹರಿಯುವ ನೀರು ಪರಿಶುದ್ಧತೆಯನ್ನು ಕಾಪಾಡಿಕೊಳ್ಳುತ್ತದೆ.

ಮನುಷ್ಯನ ಬದುಕೂ ಹಾಗೆಯೇ. ಹುಟ್ಟಿದಾಗಿನಿಂದ ಸಾಯುವವರೆಗೆ ವ್ಯಕ್ತಿ ಬೆಳೆದು ಬಂದ ಪರಿಸರ, ಕಲಿತ ವಿದ್ಯೆ, ಕಟ್ಟಿಕೊಂಡ ಸ್ನೇಹಿತರ ಬಳಗ, ಪಟ್ಟ ಪರಿಶ್ರಮ, ಜೀವನಾದರ್ಶಗಳು, ಪ್ರೇರಕ ಶಕ್ತಿಗಳು ಅವನ ಗುಣವನ್ನು ನಿರ್ಣಯಿಸುತ್ತವೆ. ಅದನ್ನು ಈ ಕಗ್ಗ ಸುಂದರವಾಗಿ ಪ್ರಸ್ತುತಪಡಿಸುತ್ತದೆ. ಮನುಷ್ಯನಲ್ಲಿ ಗುಣಗಳ ಅವತರಣವಾಗುವುದು ಹೀಗೆಯೇ. ಆದರೆ ಯಾರಿಂದ, ಯಾವಾಗ, ಯಾವ ಪ್ರಮಾಣದ ಪ್ರೇರಣೆ ದೊರೆತು ಗುಣಗಳು ಬದಲಾಗುವುವು ಎಂಬುದನ್ನು ಹೇಳುವುದು ಹೇಗೆ? ಒಂದು ಕ್ಷಣದ ದರ್ಶನದಿಂದ ಕ್ರೂರತೆಯನ್ನು ಬಿಟ್ಟ ಅಂಗುಲಿಮಾಲ, ಹೆಂಡತಿಯ ಒಂದೇ ಮಾತಿನಿಂದ ರಾಮಭಕ್ತರಾದ ತುಲಸೀದಾಸರು, ಕೆಲವು ಋಣಾತ್ಮಕ ಘಟನೆಗಳಿಂದ ಯಹೂದ್ಯರ ಬಗ್ಗೆ ದ್ವೇಷದ ಬೆಂಕಿಯನ್ನು ಕಟ್ಟಿಕೊಂಡು ಮಾರಣಹೋಮ ಮಾಡಿದ ಹಿಟ್ಲರ್, ಇಂಥವರ ಬದುಕುಗಳನ್ನು ಗಮನಿಸಿದಾಗ, ನೀರಿನಂತೆ ಮನುಷ್ಯನ ಗುಣಗಳೂ ಯಾವುಯಾವುದೋ ಕಾರಣಗಳಿಂದ ಬದಲಾಗುವುದು ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT