ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ತಾಯಿಯ ಆತಂಕ

Last Updated 11 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಇತ್ತ ಮಾದ್ರಿದೇವಿಗೆ ಅಪಶಕುನಗಳಾಗುತ್ತಿದ್ದವು. ರಾತ್ರಿ ಬಿದ್ದ ಕನಸು ಆಕೆಯನ್ನು ಹೆದರಿಸಿತ್ತು. ವೆಸ್ಸಂತರ ಬೋಧಿಸತ್ವನ ಸಮಾಧಾನದ ಮಾತುಗಳು ಅಷ್ಟೊಂದು ತೃಪ್ತಿ ನೀಡಿರಲಿಲ್ಲ. ಕಾಡಿನಲ್ಲಿ ಫಲ ಮೂಲಗಳನ್ನು ಆರಿಸುವಾಗಲೂ ಕೈ ನಡುಗಿ ಮುಮ್ಮಟಿ ಬಿದ್ದು ಬಿದ್ದು ಹೋಗುತ್ತಿತ್ತು. ಹೆಗಲಮೇಲಿನಿಂದ ಸೆರಗು ಮೇಲಿಂದ ಮೇಲೆ ಜಾರುತ್ತಿತ್ತು. ಬಲಗಣ್ಣು ಹಾರುತ್ತಿತ್ತು. ಹಣ್ಣುಗಳಿಂದ ತುಂಬಿದ್ದ ಮರಗಳು ಹಣ್ಣೇ ಇಲ್ಲದಂತೆ ಕಾಣಿಸುತ್ತಿದ್ದವು. ಬೋಳು ಮರಗಳು ಹಣ್ಣಿರುವಂತೆ ತೋರುತ್ತಿದ್ದವು. ಕೆಲವೊಂದು ಬಾರಿ ಅತ್ಯಂತ ಪರಿಚಿತವಾದ ಹಾದಿಯೂ ಮರೆತುಹೋಗುವಂತೆ ಭಾಸವಾಗುತ್ತಿತ್ತು. ಹಿಂದೆಂದೂ ಈ ತರಹದ ಪರಿಸ್ಥಿತಿ ಒದಗಿರಲಿಲ್ಲ. ಆಕೆಯ ಎದೆ ಡವಡವನೆ ಬಡಿದುಕೊಂಡಿತು. ಆದಷ್ಟು ಬೇಗ ಪರ್ಣಕುಟಿಗೆ ಹೋಗಬೇಕೆಂದು ತೀರ್ಮಾನಿಸಿದಳು. ಆಗ ಸೂರ್ಯ ಕೆಳಗಿಳಿದ. ಆಶ್ರಮ ಇನ್ನೂ ದೂರವಿದೆ. ಆಶ್ರಮದಲ್ಲಿ ಎಲ್ಲರೂ ನಾನು ತರುವ ಫಲಮೂಲಗಳಿಗಾಗಿ ಕಾದು ಕುಳಿತಿರುತ್ತಾರೆ. ನಾನು ಅಲ್ಲಿಗೆ ಹೋಗುವುದು ತಡವಾದರೆ, ಬೋಧಿಸತ್ವ ತಾನು ಹಸಿದಿದ್ದರೂ, ಹಸಿದ ಮಕ್ಕಳಿಗೆ ಒಳ್ಳೆಯ ಮಾತುಗಳನ್ನು ಹೇಳುತ್ತ ಸಂತೋಷವನ್ನು ಕೊಡುತ್ತಾನೆ. ನನ್ನ ಬಡಪಾಯಿ ಮಕ್ಕಳು ಹಸಿದಿದ್ದರೂ ತೋರಗೊಡದೆ ನನ್ನ ದಾರಿಯನ್ನೇ ನೋಡುತ್ತ ಕುಳಿತಿರುವರು. ಆದ್ದರಿಂದ ಬೇಗನೇ ಹೊರಡುತ್ತೇನೆ ಎಂದು ದಾರಿಯಲ್ಲಿ ಮುಂದೆ ಬಂದಳು.

ಮಾದ್ರಿದೇವಿ ದಾರಿಯ ಮಧ್ಯದಲ್ಲಿ ಕುಳಿತ ಸಿಂಹ, ಹುಲಿ, ಚಿರತೆಗಳನ್ನು ನೋಡಿ ಒಂದು ಕ್ಷಣ ಹೆದರಿದಳು. ‘ಪ್ರಾಣಿ ಬಾಂಧವರೇ, ನನಗೆ ಆಶ್ರಮಕ್ಕೆ ಹೋಗಲು ಇದೊಂದೇ ದಾರಿ. ಬೇರೆ ದಾರಿ ನನಗೆ ತಿಳಿದಿಲ್ಲ. ಆಶ್ರಮದಲ್ಲಿ ನನಗಾಗಿ ನನ್ನ ಗಂಡ ಮತ್ತು ಮಕ್ಕಳು ಕಾಯುತ್ತಿದ್ದಾರೆ. ನಿಮಗೆ ನನ್ನ ನಮಸ್ಕಾರ. ನೀವು ಈ ಕಾಡಿಗೆ ಮಹಾರಾಜರು. ನನಗೆ ಧರ್ಮಸೋದರರು. ದಯವಿಟ್ಟು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ನನಗೆ ದಾರಿ ಬಿಡಿ. ನಾನು ದೇಶದಿಂದ ಹೊರಹಾಕಲ್ಪಟ್ಟ ರಾಜಪುತ್ರನ ಹೆಂಡತಿ. ನಾನೂ ಪತಿವೃತೆ ಸೀತೆಯಂತೆ ಗಂಡನ ಜೊತೆಗೇ ಬಂದವಳು. ಅವನ ನೆರಳಾಗಿಯೇ ಬದುಕುವವಳು. ನೀವೂ ಕೂಡ ರಾತ್ರಿಯಾದರೆ ನಿಮ್ಮ ನಿಮ್ಮ ಮಕ್ಕಳನ್ನು ನೋಡುತ್ತೀರಿ. ಹಾಗೆಯೇ ನಾನೂ ನನ್ನ ಮಕ್ಕಳಾದ ಜಾಲಿಕುಮಾರ ಮತ್ತು ಕೃಷ್ಣಾಜಿನರನ್ನು ನೋಡಬಯಸುತ್ತೇನೆ. ನಿಮಗೆ ಬೇಕಾದರೆ ನಾನು ಸಂಗ್ರಹಿಸಿ ಇಟ್ಟ ಫಲಮೂಲಗಳು ಮತ್ತು ಖಾದ್ಯ ವಸ್ತುಗಳನ್ನು ನಿಮಗೆ ಕೊಟ್ಟುಬಿಡುತ್ತೇನೆ. ದಯವಿಟ್ಟು ನನಗೆ ದಾರಿಬಿಡಿ’ ಎಂದು ಪರಿಪರಿಯಾಗಿ ಬೇಡಿದಳು. ಆಗ ಬೆಳದಿಂಗಳು ಹರಡಿಕೊಂಡಿತು. ಸರಿಯಾದ ಸಮಯವಾಯಿತೆಂದು ಪ್ರಾಣಿಗಳಾಗಿದ್ದ ದೇವಪುತ್ರರು ಎದ್ದು ದಾರಿಯನ್ನು ಬಿಟ್ಟು ಹೊರಟುಹೋದರು. ಕಾಡುಪ್ರಾಣಿಗಳು ಹೊರಟುಹೋದಮೇಲೆ ಆಕೆ ನಡೆದು ಆಶ್ರಮಕ್ಕೆ ಬಂದಳು. ಅಂದು ಹುಣ್ಣಿಮೆ. ಉಪೋಸಥದ ದಿನ. ಆಕೆ ನಿತ್ಯವೂ ಯೋಗಭ್ಯಾಸ ಮಾಡುವ ಜಗುಲಿಯ ಮೇಲೆ ನಿಂತುಕೊಂಡು, ಮಕ್ಕಳು ಸಾಮಾನ್ಯವಾಗಿ ಕುಳಿತಿರುತ್ತಿದ್ದ ಸ್ಥಳವನ್ನು ನೋಡಿದಳು. ಅಲ್ಲಿ ಮಕ್ಕಳು ಕಾಣಲಿಲ್ಲ. ಆಕೆಗೆ ಮತ್ತಷ್ಟು ಗಾಬರಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT