ಶುಕ್ರವಾರ, ಮಾರ್ಚ್ 31, 2023
33 °C

ಬೆರಗಿನ ಬೆಳಕು: ಪರಮಯೋಗ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹೊರಗೆ ಹೊರೆಯಾಗದವೊಲ್ ಒಳಗನನುಗೊಳಿಸಿ, ನೀ-

ನೊಳಗು ಶೆಕೆಯಾಗದವೊಲ್ ಅಳವಡಿಸೆ ಹೊರಗ ||
ಸರಿಸಮದೊಳೆರಡನುಂ ಬಾಳಿನಲಿ ಜೋಡಿಪುದೆ |
ಪರಮ ಜೀವನ ಯೋಗ – ಮಂಕುತಿಮ್ಮ || 811 ||

ಪದ-ಅರ್ಥ: ಹೊರೆಯಾಗದವೊಲ್=ಹೊರೆಯಾಗದಂತೆ, ಒಳಗನನುಗೊಳಿಸಿ=ಒಳಗನು+ಅನುಗೊಳಿಸಿ(ಸಿದ್ಧಗೊಳಿಸಿ),
ನೀನೊಳಗು=ನೀನು+ಒಳಗು, ಶೆಕೆಯಾಗದವೊಲ್=ಶೆಕೆಯಾಗದಂತೆ, ಸರಿಸಮದೊಳೆರಡನುಂ=ಸರಿಸಮದೊಳ್+ಎರಡನುಂ, ಜೋಡಿಪುದೆ=ಜೋಡಿಸುವುದೆ

ವಾಚ್ಯಾರ್ಥ: ಹೊರಗೆ ಹೊರೆಯಾಗದಂತೆ ಆಂತರ್ಯವನ್ನು ಸಿದ್ಧಗೊಳಿಸಿ, ಒಳಗೆ ಶೆಕೆಯಾಗದಂತೆ ಹೊರಗನ್ನು ಜೋಡಿಸುತ್ತ, ಅವೆರಡನ್ನೂ ಸರಿಸಮವಾಗಿ ಜೋಡಿಸುವುದೇ ಶ್ರೇಷ್ಠವಾದ ಯೋಗ.

ವಿವರಣೆ: ಪ್ರತಿಯೊಬ್ಬ ಮನುಷ್ಯನಿಗೆ ಎರಡು ಪರಿಸರಗಳಿವೆ. ಒಂದು ಬಾಹ್ಯ ಪರಿಸರ. ಅದು ಇಂದ್ರಿಯಗಳಿಗೆ
ದೊರಕುವಂಥದ್ದು. ಅವುಗಳಿಂದ ಅನುಭವಕ್ಕೆ ಸಿಗುವಂಥದ್ದು. ಇನ್ನೊಂದು ಪ್ರಪಂಚ ಅಂತರಂಗದ್ದು. ಹೊರಗಿನ ದೃಶ್ಯ ಪ್ರಪಂಚಕ್ಕೆ ಸೆಳೆತ ಹೆಚ್ಚು. ಇಂದ್ರಿಯಗಳ ಅಪೇಕ್ಷೆಯಂತೆ ಮನುಷ್ಯ ದಿಕ್ಕುದಿಕ್ಕಿಗೆ ಧಾವಿಸುತ್ತಾನೆ. ಸುಖ ಸಿಕ್ಕೀತು ಎಂಬ ವ್ಯರ್ಥ ಆಸೆಯಲ್ಲಿ ದುಡಿಯುತ್ತ ಬದುಕನ್ನು ಭಾರಮಾಡಿಕೊಳ್ಳುತ್ತಾನೆ. ಅದನ್ನೇ ಕಗ್ಗ ‘ಹೊರಗನ್ನು ಹೊರೆಯಾಗಿಸಿಕೊಳ್ಳುವುದು’ ಎನ್ನುತ್ತದೆ. ಆ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಅಂತರಂಗದ ಸಿದ್ಧತೆ. ನನಗೆ ಮಾರ್ಗದರ್ಶಕರಾಗಿದ್ದ ಖ್ಯಾತ ಅಣುವಿಜ್ಞಾನಿ ಡಾ. ರಾಜಾ ರಾಮಣ್ಣನವರ ಕಾರ್ಯವಿಸ್ತಾರ ಅಪಾರವಾದದ್ದು. ಹಗಲು ರಾತ್ರಿ ದುಡಿಮೆ, ಜಗತ್ತಿನಾದ್ಯಂತ ಸತತ ಪ್ರವಾಸ. ಆದರೆ ಅವರು ಯಾವಾಗಲೂ ನಿರಾಳ, ಸದಾ ನಗು ಮುಖ, ಹಾಸ್ಯದ ಬುಗ್ಗೆ.

ಇಷ್ಟು ಒತ್ತಡದ ಕೆಲಸವಿದ್ದರೂ ಹೀಗೆ ಹಗುರಾಗಿರುವುದು ಹೇಗೆಸಾಧ್ಯ ಎಂದು ಒಮ್ಮೆ ಅವರನ್ನು ಕೇಳಿದ್ದೆ. ಅವರ ಉತ್ತರನಮಗೆ ತುಂಬ ಪ್ರಯೋಜನಕಾರಿ. “ಈ ಕೆಲಸದಿಂದ ಜನರಿಗೆ ಪ್ರಯೋಜನವಾಗುತ್ತದೆ ಎಂಬ ನಂಬಿಕೆ ಇದೆ. ಅದಕ್ಕೆ ಬುದ್ಧಿಶಕ್ತಿಯನ್ನೆಲ್ಲ ಹಾಕಿ ದುಡಿಯುತ್ತೇನೆ. ಆದರೆ ಭಾವನಾತ್ಮಕವಾಗಿ ನಾನು ಆತಂಕಮಾಡಿಕೊಳ್ಳುವುದಿಲ್ಲ. ಪ್ರಯತ್ನದಲ್ಲಿ ಕೊರತೆ ಇಲ್ಲ. ಆಗಿಯೇ ತೀರಬೇಕೆಂಬ ಉದ್ವೇಗವಿಲ್ಲ. ಉದ್ವೇಗ ಹೆಚ್ಚಾದಂತೆ ಕೆಲಸದ ಪರಿಣಾಮ ಕಡಿಮೆಯಾಗುತ್ತದೆ. ಅದು ನನ್ನ ಆರೋಗ್ಯಕ್ಕೂ ಒಳ್ಳೆಯದಲ್ಲ”. ಹಾಗೆಂದರೆ, ಹೊರಗಿನ ಭಾರವನ್ನು ಕಡಿಮೆ ಮಾಡಲು ಒಳಗಿನ ಮನಸ್ಥಿತಿಯಲ್ಲಿಯ ಸಮತ್ವತೆ ಕಾರಣ. ಅದೇ ರೀತಿ, ಆಂತರ್ಯದ ಶಾಂತತೆಗೆ ಬಾಹ್ಯಪ್ರಪಂಚದ ಆಕರ್ಷಣೆಗಳೂ ಕಡಿಮೆಯಾಗಬೇಕು. ಜನ  ಮನಶ್ಯಾಂತಿಯನ್ನು ಕಳೆದುಕೊಂಡು ಆತಂಕಪಡುವುದು ಏಕೆ? ಅಪೇಕ್ಷೆಪಟ್ಟ ಆಕರ್ಷಣೆಗಳು ದೊರಕದೆ ಹೋದಾಗ, ಸಂಬಂಧಗಳಲ್ಲಿ ಅತಿಯಾಸೆ ಇಟ್ಟುಕೊಂಡು, ಅವು ಒಡೆದು ಹೋದಾಗ. ಅಂದರೆ ಬಾಹ್ಯಪ್ರಪಂಚಕ್ಕೂ, ಆಂತರ್ಯದ ಮನಸ್ಸಿನ ವ್ಯವಸ್ಥೆಗೂ ಒಂದು ಅವಿನಾ ಸಂಬಂಧವಿದೆ. ಒಂದಿಲ್ಲದಿದ್ದರೆ ಇನ್ನೊಂದು ಇಲ್ಲ ಎನ್ನುವ ಸಂಬಂಧ. ಒಂದು ಮತ್ತೊಂದರ ಮೇಲೆ ಪ್ರಭಾವನ್ನುಂಟು ಮಾಡುತ್ತದೆ. ಅದನ್ನೇ ಕಗ್ಗ ಹೇಳುತ್ತದೆ. ಬಾಹ್ಯಪ್ರಪಂಚದ ಒತ್ತಡ ಹೆಚ್ಚಾಗದಂತೆ ಆಂತರಿಕ ಮನಸ್ಥಿತಿಯನ್ನು ಹದ ಮಾಡಿಕೊಳ್ಳಬೇಕು. ಮನಸ್ಸಿನ ಸ್ಥಿಮಿತತೆ, ಶಾಂತತೆ ಕೆಡದ ಹಾಗೆ
ಬಾಹ್ಯಪ್ರಪಂಚದ ಆಕರ್ಷಣೆಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಹೀಗೆ ಬಾಹ್ಯ ಮತ್ತು ಆಂತರ್ಯದ ಎರಡೂ ಕಾರ್ಯಗಳನ್ನು ಸರಿಯಾಗಿ, ಹದವಾಗಿ ಜೋಡಿಸುವುದೇ ಜೀವನದ ಶ್ರೇಷ್ಠ ಯೋಗ. ಯೋಗ ಎಂದರೆ ಜೋಡಿಸುವುದು, ಹೊಂದಿಸುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು