ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮಿತ್ರದ್ರೋಹ

Last Updated 22 ಅಕ್ಟೋಬರ್ 2020, 20:30 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದಾಗ ಹತ್ತಿರದ ಗ್ರಾಮವೊಂದರಲ್ಲಿ ಒಬ್ಬ ಕೃಷಿಕ ಬ್ರಾಹ್ಮಣನಿದ್ದ. ಒಂದು ದಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಎತ್ತುಗಳನ್ನು ನೇಗಿಲಿನಿಂದ ಬಿಚ್ಚಿ, ಗುದ್ದಲಿಯಿಂದ ನೆಲವನ್ನು ಅಗೆಯುತ್ತಿದ್ದ. ಆಗ ಎತ್ತುಗಳು ಹುಲ್ಲು, ಎಲೆಗಳನ್ನು ತಿನ್ನುತ್ತ ಕಾಡಿನೊಳಗೆ ಓಡಿಹೋದವು. ಅವುಗಳನ್ನು ಹುಡುಕಲು ಈ ಮನುಷ್ಯ ಕಾಡಿನಲ್ಲಿ ಬಂದ. ಅಲೆಯುತ್ತ ಅಲೆಯುತ್ತ ದಾರಿ ತಪ್ಪಿ ಹಿಮಾಲಯದ ತಪ್ಪಲು ಪ್ರದೇಶಕ್ಕೆ ಬಂದ. ಹಸಿದು ಕಂಗಾಲಾದವನಿಗೆ ಪ್ರಪಾತದ ಪಕ್ಕದಲ್ಲಿ ಒಂದು ತಿಂದುಕ ಹಣ್ಣಿನ ಮರ ಕಂಡಿತು. ನೆಲಕ್ಕೆ ಬಿದ್ದ ಹಣ್ಣುಗಳನ್ನು ತಿಂದ. ಅವು ತುಂಬ ರುಚಿ ಎನ್ನಿಸಿದಾಗ ಮರವನ್ನು ಹತ್ತಿ ಹಣ್ಣುಗಳನ್ನು ಆರಿಸಿ ತಿನ್ನತೊಡಗಿದ. ಕುಳಿತಿದ್ದ ಕೊಂಬೆ ಮುರಿದು ಈತ ಕಾಲು ಮೇಲಾಗಿ ಪ್ರಪಾತದಲ್ಲಿ ಬಿದ್ದ. ಅಲ್ಲಿ ನೀರು ಆಳವಾಗಿದ್ದರಿಂದ ಪೆಟ್ಟು ಬೀಳಲಿಲ್ಲ. ಮೇಲೆ ಬರುವ ದಾರಿ ಇಲ್ಲದೆ ಹತ್ತು ದಿನ ಅಲ್ಲಿಯೇ ಬಿದ್ದು ನರಳುತ್ತಿದ್ದ.

ಆ ಸಮಯದಲ್ಲಿ ಬೋಧಿಸತ್ವ ವಾನರ ಕುಲದಲ್ಲಿ ಹುಟ್ಟಿ ಅಲ್ಲಿಯೇ ವಾಸಿಸುತ್ತಿದ್ದ. ಎತ್ತಿನಂತೆ ಬಾಲವುಳ್ಳ, ಎತ್ತಿನಂತೆಯೇ ಬಲಶಾಲಿಯಾಗಿದ್ದ ವಾನರ ನಾಯಕನಾಗಿದ್ದ. ಮರದಿಂದ ಮರಕ್ಕೆ ಹಾರುತ್ತಿದ್ದ ವಾನರ ಈ ಮನುಷ್ಯನನ್ನು ಪ್ರಪಾತದಲ್ಲಿ ಕಂಡು ಮಾತನಾಡಿಸಿತು. ನಂತರ ಅವನ ಮೇಲಿನ ಕರುಣೆಯಿಂದ, ದೊಡ್ಡ ದೊಡ್ಡ ಕಲ್ಲುಗಳನ್ನು ತಂದು ಮೆಟ್ಟಿಲುಗಳನ್ನು ಮಾಡಿತು. ಮನುಷ್ಯನನ್ನು ಎತ್ತಿ ಬೆನ್ನ ಮೇಲೆ ಕೂಡ್ರಿಸಿಕೊಂಡು ಬಹಳ ಕಷ್ಟದಿಂದ ಮೇಲೇರುತ್ತ ಪ್ರಪಾತದಿಂದ ಹೊರಗೆ ತಂದಿತು. ಅದಕ್ಕೆ ತುಂಬ ಆಯಾಸವಾಗಿತ್ತು. ವಾನರ ಕೇಳಿತು, ‘ಗೆಳೆಯಾ, ನನಗೆ ಸ್ವಲ್ಪ ವಿಶ್ರಾಂತಿ ಬೇಕು. ಒಂದು ಅರ್ಧ ತಾಸು ಮಲಗುತ್ತೇನೆ. ಕಾಡಿನ ಪ್ರಾಣಿಗಳು ನನಗೆ ಹಿಂಸೆ ಮಾಡಬಹುದು. ನೀನು ಸ್ವಲ್ಪ ಎಚ್ಚರವಾಗಿದ್ದು, ಅಂಥ ಪ್ರಾಣಿಗಳು ಬಂದರೆ ಸದ್ದು ಮಾಡಿ ಓಡಿಸಿಬಿಡುತ್ತೀಯಾ?’. ಈತ ಒಪ್ಪಿದಾಗ ಅದು ಮಲಗಿಬಿಟ್ಟಿತು.

ಈ ಮನುಷ್ಯನಿಗೆ ಒಂದು ದುಷ್ಟ ಆಲೋಚನೆ ಬಂದಿತು. ವಾನರ ಎತ್ತಿನಂತೆ ಬಲಿಷ್ಠವಾಗಿದೆ. ನಾನೋ ಹಸಿದು ಕಂಗಾಲಾಗಿದ್ದೇನೆ. ಈ ವಾನರನನ್ನು ಕೊಂದು ಏಕೆ ಇದರ ಮಾಂಸವನ್ನು ಸುಟ್ಟು ತಿನ್ನಬಾರದು? ಅದನ್ನು ಕಟ್ಟಿಕೊಂಡು ಹೊರಟರೆ ನನ್ನ ಊರು ಮುಟ್ಟುವವರೆಗೆ ಹಸಿವಿನ ಚಿಂತೆ ಇರದು. ಹೀಗೆ ಯೋಚಿಸಿ ಒಂದು ಕಲ್ಲು ತೆಗೆದುಕೊಂಡು ಮಲಗಿದ್ದ ವಾನರನ ತಲೆಗೆ ಅಪ್ಪಳಿಸಿದ. ಈತ ದುರ್ಬಲನಾದ್ದರಿಂದ ವಾನರ ಸಾಯದಿದ್ದರೂ ತಲೆ ಒಡೆದು ರಕ್ತ ಸೋರತೊಡಗಿತು. ವಾನರ ತಟಕ್ಕನೆ ಮೇಲೆದ್ದು ಕಣ್ಣೀರು ತುಂಬಿಕೊಂಡು, ‘ಏಕೆ ಮನುಷ್ಯ ಹೀಗೆ ಮಾಡಿದೆ? ಮನುಷ್ಯ ದೀರ್ಘಾಯುಷಿ. ಸಹಾಯ ಮಾಡಿದ ನನಗೆ ನೀನು ಹೀಗೇಕೆ ಮಾಡಿದೆ? ಮಿತ್ರದ್ರೋಹ ಮಾಡಬಹುದೆ? ನಿನ್ನ ಮನದಲ್ಲಿ ಪಾಪ ತುಂಬಿದೆ. ಆಯ್ತು, ಬಾ, ನಿನಗೆ ನಿನ್ನ ಊರಿನ ದಾರಿ ತೋರುತ್ತೇನೆ’ ಎಂದು ಅವನನ್ನು ಕಾಡಿನಂಚಿನವರೆಗೂ ತಂದು ಬಿಟ್ಟು ಶುಭ ಹಾರೈಸಿ ಹೋಯಿತು. ಮರುಕ್ಷಣದಿಂದ ಮಿತ್ರದ್ರೋಹ ಮಾಡಿದ ಮನುಷ್ಯನ ಮೈ ಬೆಂಕಿಯಂತೆ ಉರಿಯತೊಡಗಿತು. ಕುಷ್ಠರೋಗ ದೇಹವನ್ನು ಆವರಿಸಿಬಿಟ್ಟಿತು. ಅವನ ಹತ್ತಿರ ಕೂಡ ಯಾರೂ ಬರಲಿಲ್ಲ. ಆತ ಒದ್ದಾಡುತ್ತ ವಾರಣಾಸಿಯ ರಾಜೋದ್ಯಾನಕ್ಕೆ ಬಂದು ಯಾರಿಗೂ ಕಾಣದಂತೆ ಬಾಳೆ ಎಲೆ ಹಾಸಿಕೊಂಡು ಮಲಗಿದ್ದ. ಅಲ್ಲಿಗೆ ಬಂದ ರಾಜ ಇವನ ಅವಸ್ಥೆಯನ್ನು ಕಂಡು ಕಾರಣ ಕೇಳಿದ. ಆಗ ಮನುಷ್ಯ, ‘ರಾಜಾ, ಇದು ನಾನಾಗಿ ತಂದುಕೊಂಡ ಆಪತ್ತು. ನನ್ನ ಜೀವ ಉಳಿಸಿ ಕಾಪಾಡಿದ ಮಿತ್ರನಿಗೆ ನಾನು ದ್ರೋಹ ಬಗೆದೆ. ಮಿತ್ರದ್ರೋಹಕ್ಕೆ ಇದು ಸರಿಯಾದ ಶಿಕ್ಷೆ’ ಎಂದ. ಹೀಗೆ ಹೇಳುತ್ತಿರುವಾಗಲೇ ಭೂಮಿ ಬಾಯಿ ತೆರೆದು ಇವನನ್ನು ಅವೀಚೀ ನರಕಕ್ಕೆ ಎಳೆದುಕೊಂಡು ಹೋಯಿತು.

ಮಿತ್ರದ್ರೋಹಿಗೆ ಎಂದಿಗೂ ಸುಖ, ಸಂತೋಷಗಳು ದೊರಕಲಾರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT