ಗುರುವಾರ , ಜುಲೈ 29, 2021
23 °C

ಬೆರಗಿನ ಬೆಳಕು | ಎರಡು ಶ್ರೇಷ್ಠ ಗುಣಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಪೆರ್ಮೆಯ ಗುಣಂಗಳಿನ್ನೂರು ಶಾಸ್ತ್ರೋಕ್ತದವು |
ಸರ್ವೋತ್ತಮಗಳೆರಡು ಸರ್ವಕಠಿಣಗಳು ||
ನಿರ್ಮತ್ಸರತೆಯೊಂದು ದೋಷಿಯೊಳ್ ಕ್ಷಮೆಯೊಂದು |
ಬ್ರಾಹ್ಮಿಕಾಭ್ಯಾಸವದು – ಮಂಕುತಿಮ್ಮ || 297 ||

ಪದ-ಅರ್ಥ: ಪೆರ್ಮೆಯ=ಒಳ್ಳೆಯ, ಗುಣಂಗಳಿನ್ನೂರು=ಗುಣಂಗಳು+ಇನ್ನೂರು, ಶಾಸ್ತ್ರೋಕ್ತದವು=ಶಾಸ್ತ್ರಗಳಿಂದ ಬಂದವು, ಬ್ರಾಹ್ಮಿಕಾಭ್ಯಾಸ=ಬ್ರಾಹ್ಮಿಕ=ಬ್ರಹ್ಮಸಂಬಂಧವಾದ+ಅಭ್ಯಾಸ.

ವಾಚ್ಯಾರ್ಥ: ಒಳ್ಳೆಯ ಗುಣಗಳು ಯಾವುವು ಎನ್ನುವುದನ್ನು ಶಾಸ್ತ್ರಗಳು ತಿಳಿಸುತ್ತವೆ. ಅವು ನೂರಾರು ಇರಬಹುದು. ಅವುಗಳಲ್ಲಿ ಅತ್ಯುತ್ತಮವಾದವುಗಳು ಮತ್ತು ನಡೆಯಲು ಅಷ್ಟೇ ಕಷ್ಟವಾದವು ಎರಡು. ನಿರ್ಮತ್ಸರತೆ ಒಂದನೆಯದು ಮತ್ತು ದೋಷಿಗಳಲ್ಲಿ ಕ್ಷಮೆ ಎರಡನೆಯದು. ಬ್ರಹ್ಮವನ್ನು ತಿಳಿದುಕೊಳ್ಳಲು ಇವೆರಡರ ಅಭ್ಯಾಸ ಅವಶ್ಯ.

ವಿವರಣೆ: ಜಗತ್ತಿನಲ್ಲಿರುವ ಒಳ್ಳೆಯ ಗುಣಗಳನ್ನು ಪಟ್ಟಿ ಮಾಡುತ್ತ ಹೋದರೆ ನೂರಾರು ದೊರೆತಾವು. ನಮ್ಮ ಶಾಸ್ತ್ರಗಳು ಅಂತಹ ಶ್ರೇಷ್ಠಗುಣಗಳ ದೊಡ್ಡ ಪಟ್ಟಿಯನ್ನೇ ಕೊಡ ಮಾಡುತ್ತವೆ. ಈ ನೂರಾರು ಶ್ರೇಷ್ಠಗುಣಗಳಲ್ಲಿ ಅತ್ಯಂತ ಶ್ರೇಷ್ಠವಾದವುಗಳು ಎರಡು. ಅವು ಶ್ರೇಷ್ಠವಾದವುಗಳು ಮಾತ್ರವಲ್ಲ, ನಮ್ಮ ನಡತೆಯಲ್ಲಿ ಅವುಗಳನ್ನು ತರುವುದು ತುಂಬ ಕಠಿಣವಾದವುಗಳೂ ಹೌದು. ಆ ಗುಣಗಳು - ನಿರ್ಮತ್ಸರತೆ ಹಾಗೂ ಕ್ಷಮೆ.

ಮತ್ತೊಬ್ಬರ ಬಗ್ಗೆ ಅಸೂಯೆಯನ್ನು ತಾಳದ ಅನಸೂಯ ಗುಣ ಬಹಳ ದೊಡ್ಡದು. ನಾವು ನಮ್ಮ ಮನೆಗಳಲ್ಲಿ ಚೆನ್ನಾಗಿಯೇ ಇರುತ್ತೇವೆ. ಆದರೆ ಪಕ್ಕದ ಮನೆಯವರು ಹೊಸ ಸೋಫಾ ತಂದರೆ, ಸ್ವಲ್ಪ ಉದ್ದವಾದ ಕಾರು ತಂದರೆ, ಗೋಡೆಯ ತುಂಬ ಹರಡುವ ಟಿ.ವಿ. ತಂದರೆ ನಮ್ಮ ಮನೆಯ ಶಾಂತಿ ಕದಡುತ್ತದೆ. ಪಕ್ಕದ ಮನೆಯವರು ವಸ್ತುಗಳನ್ನು ತಂದದ್ದು ತಮ್ಮ ಹಣದಿಂದಲೇ. ಆದರೂ ನಮಗೆ ತಳಮಳ, ಸಂಕಟ. ಇದೇ ಹೊಟ್ಟೆಯುರಿ, ಅಸೂಯೆ. ಬರೀ ಹೆಸರನ್ನು ಅನಸೂಯ ಎಂದಿಟ್ಟುಕೊಂಡರೆ ಸಾಕೆ? ಅದು ಕೊಂಚವಾದರೂ ಬದುಕಿನಲ್ಲಿ ಬರಬೇಡವೆ? ಅಸೂಯೆಯೆಂಬುದು ಬೆಂಕಿ. ಅದು ನಮ್ಮ ಹೊಟ್ಟೆಯನ್ನೇ ಸುಡುತ್ತದೆ. ನನ್ನ ಬಾಲ್ಯದಲ್ಲಿ ಧಾರವಾಡದಲ್ಲಿದ್ದಾಗ ನಮ್ಮ ಮನೆಗೂ, ಸಂಗೀತ ತಪಸ್ವಿ ಬಸವರಾಜ ರಾಜಗುರುರವರ ಮನೆಗೂ ನಡುವೆ ಒಂದೇ ಗೋಡೆ. ನಾವು ಸಾಕಷ್ಟು ಸಮಯ ಅವರ ಮನೆಯಲ್ಲಿ ಕಳೆದದ್ದು ಉಂಟು. ಅವರನ್ನು ‘ಕಾಕಾ’ ಎಂದೇ ಕರೆಯುತ್ತಿದ್ದೆವು. ನಾನು ಪದವಿ ತರಗತಿಯಲ್ಲಿದ್ದಾಗ ಸಂಗೀತ ವಿಮರ್ಶಕರೊಬ್ಬರು ಅವರನ್ನು ಕೇಳಿದರು, ‘ನೀವು ಎರಡು-ಮೂರು ದಿನಗಳ ಪ್ರವಾಸಕ್ಕೆ ಹೋದಾಗ ಕುಡಿಯುವ ನೀರನ್ನು ಒಯ್ಯುತ್ತೀರಿ. ಆದರೆ ಭೀಮಸೇನ ಜೋಶಿ, ರಸ್ತೆ ಬದಿ ಬೋಂಡಾ ತಿಂದು ಹಾಡುತ್ತಾರಲ್ಲ?’ ರಾಜಗುರುರವರ ಪ್ರತಿಕ್ರಿಯೆ ಅನುಸೂಯಗುಣದ ಕಿರೀಟ. ‘ಭೀಮಸೇನನ ಧ್ವನಿ ದೇವರು ಕೊಟ್ಟದ್ದು. ಅಂವಾ ಏನು ಮಾಡಿದ್ರೂ ನಡೀತದೆ. ಆದರೆ ನಾನು ಹೊಟ್ಟೆಪಾಡಿಗೆ ಮಾಡಿಕೊಂಡ ಧ್ವನಿ, ಕಾಪಾಡಿಕೋಬೇಕಲ್ಲಾ?’ ಸಹಗಾಯಕನ ಬಗ್ಗೆ ಅಸೂಯೆಯ ಒಂದು ಎಳೆಯೂ ಇಲ್ಲ!

ಇದರಂತೆ, ದೋಷಿಗಳಲ್ಲಿ ಕ್ಷಮಾಗುಣ ವಿಶೇಷವಾದದ್ದು. ತನ್ನ ಹೆಂಡತಿಯನ್ನು ಹೊತ್ತು ಕೊಂಡೊಯ್ದು, ಸಕಲ ಕಷ್ಟಗಳಿಗೆ ಕಾರಣನಾದ ರಾವಣನನ್ನು, ಅವನ ಮರಣದ ನಂತರ ಕ್ಷಮಿಸುವುದಲ್ಲದೇ, ಗೌರವ ತೋರಿದ ರಾಮನ ಗುಣ ಇಂತಹದ್ದು. ಕೋಪದಿಂದ ಮುಳ್ಳಿನ ಕಂಟಿಗಳಿಂದ ತನ್ನನ್ನು ರಪರಪನೆ ಹೊಡೆದು ಮೈಯೆಲ್ಲ ರಕ್ತಮಯವನ್ನಾಗಿ ಮಾಡಿದ ಸೋದರಮಾವನ ಮೈ-ಕೈ ಒತ್ತಿ, ‘ಈ ಒರಟನಿಗೆ ಹೊಡೆದು ನಿಮ್ಮ ಕೈ ನೋವಾಗಿರಬೇಕು, ಕ್ಷಮಿಸಿ’ ಎಂದ ತುಕಾರಾಮನ ಕ್ಷಮಾಗುಣ ಕಲ್ಪನಾತೀತವಾದದ್ದು.

ಈ ಎರಡು ಗುಣಗಳ ಸತತ ಅಭ್ಯಾಸ, ಬ್ರಹ್ಮತತ್ವವನ್ನು ಅರಿಯಲು ಅತ್ಯಂತ ಅವಶ್ಯಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು