ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಎರಡು ಜಗತ್ತುಗಳು

Last Updated 28 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಕಣ್ದೆರೆದು ನೋಡು, ಚಿತ್ಸತ್ವ ಮೂರ್ತಿಯ ನೃತ್ಯ |
ಕಣ್ಣುಚ್ಚಿ ನೋಡು ನಿಶ್ಚಲ ಶುದ್ಧಸತ್ತ್ವ ||
ಉನ್ಮುಖನು ನೀನೆರಡು ಜಗಕಮಿರುತಿರಲಾಗ |
ಹೃನ್ಮಧ್ಯದಲಿ ಶಾಂತಿ – ಮಂಕುತಿಮ್ಮ || 851 ||

ಪದ-ಅರ್ಥ: ಕಣ್ದೆರೆದು=ಕಣ್+ತೆರೆದು, ಚಿತ್ಸತ್ವಮೂರ್ತಿಯ=ಚಿತ್+ಸತ್ವ+ಮೂರ್ತಿಯ,ಕಣ್ಮುಚ್ಚಿ=ಕಣ್+ಮುಚ್ಚಿ, ಉನ್ಮುಖ=ಮುಖಮಾಡಿ ನಿಂತಿರಲು, ನೀನೆರಡು=ನೀನು+ಎರಡು, ಜಗಕಮಿರುತಿರಲಾಗ=ಜಗಕ (ಜಗತ್ತಿಗೆ)+ಇರುತಿರಲು+ಆಗ, ಹೃನ್ಮಧ್ಯದಲ್ಲಿ=ಹೃದಯಮಧ್ಯದಲಿ.

ವಾಚ್ಯಾರ್ಥ: ಕಣ್ಣು ತೆರೆದು ನೋಡು ಚಿತ್, ಸತ್ವದ ರೂಪವಾದ ಪ್ರಪಂಚದ ನೃತ್ಯ ಕಾಣುತ್ತದೆ. ಕಣ್ಣು ಮುಚ್ಚಿ ನೋಡಿದಾಗ ನಿಶ್ಚಲವಾದ ಪರಸತ್ವದ ದರ್ಶನ ಕಾಣುತ್ತದೆ. ಈ ಎರಡೂ ಜಗತ್ತುಗಳಿಗೆ ನೀನು ಮುಖಮಾಡಿ ನಿಂತಾಗ, ಹೃದಯ ಮಧ್ಯದಲ್ಲಿ ಶಾಂತಿ ನೆಲೆಯಾಗುತ್ತದೆ.

ವಿವರಣೆ: ಒಂದು ವಸ್ತುವಿಗೆ ಅನೇಕ ಮುಖಗಳು. ಯಾರಿಗೂ ಅದರ ಎಲ್ಲ ಮುಖಗಳು ಕಾಣಲಾರವು. ವಸ್ತುವಿನ ಸಂಪೂರ್ಣವಾಗಿ ಗ್ರಹಿಸಲು ಬಯಸಿದ ಮನುಷ್ಯ ಅದನ್ನು ಅತ್ಯಂತ ಸಮೀಪದಿಂದ ನೋಡುವ ಪ್ರಯತ್ನ ಮಾಡಿದ. ಪ್ರತಿಯೊಂದು ಕೋನದಿಂದ ಅದು ಬೇರೆಯಾಗಿಯೇ ಕಂಡಿತು. ನಿಧಾನಕ್ಕೆ ಅದರ ಅಂತರಂಗಕ್ಕೆ ಇಳಿಯುವ ಪ್ರಯತ್ನ ಮಾಡಿದ. ಆಗ ಅವನಿಗೆ ಅರ್ಥವಾಯಿತು, ಪ್ರತಿಯೊಂದು ವಸ್ತುವಿಗೆ ಮೂರು ಆಯಾಮಗಳಿವೆ. ಮೊದಲನೆಯದು ಕಾಲದಲ್ಲಿದೆ, ಎರಡನೆಯದು ದೇಶದಲ್ಲಿದೆ, ಮೂರನೆಯದು ಭಾವದಲ್ಲಿ ಚಾಚಿದೆ. ಹಾಗೆಂದರೆ ನಾವು ನೋಡುವ ವಸ್ತು ಯಾವುದೋ ಒಂದು ನಿಗದಿಯಾದ ಕಾಲದಲ್ಲಿದೆ. ಅಂದಿದ್ದ ಅಲೆಗ್ಛಾಂಢ್ರಿಯಾದ ಪ್ರಸಿದ್ಧ ಲೈಬ್ರರಿ ಈಗಿಲ್ಲ. ನನ್ನ ಅಜ್ಜ ಅಜ್ಜಿ ನೋಡಿಬಂದ ಧನುಷ್ಕೋಟಿ ಈಗ ಸಮುದ್ರ ಸೇರಿದೆ. ಹೀಗೆ ವಸ್ತು ಕಾಲಬದ್ಧವಾದದ್ದು. ಅಂತೆಯೇ ಅದು ಒಂದು ಯಾವುದೋ ಸ್ಥಳದಲ್ಲಿರುವುದು.

ತಾಜಮಹಲ ಬೆಂಗಳೂರಿಗೆ ಬರಲಾರದು. ಚೀನಾದ ದೊಡ್ಡ ಗೋಡೆ ಅಮೇರಿಕೆಗೆ ಸಾಗಲಾರದು. ಹೀಗೆಂದರೆ ಒಂದು ವಸ್ತುವಿಗೆ ಒಂದು ಸ್ಥಳವಿದೆ. ಆದರೆ ವಸ್ತುವಿಗೆ ಭಾವದ ಆಯಾಮ ದೊಡ್ಡದು. ಎಂದೋ ಎಲ್ಲಿಯೋ ನೋಡಿದ ವಸ್ತು ನಮ್ಮ ಭಾವಕೋಶದಲ್ಲಿ ನೆಲೆಯಾಗಿದೆ. ಪ್ಯಾರಿಸ್‌ನಲ್ಲಿ ಎಂದೋ ನೋಡಿದ ಮೋನಾಲಿಸಾ ಭಾವಚಿತ್ರ ನೆನೆದಾಗಲೆಲ್ಲ ಮನದ ಭಿತ್ತಿಯ ಮೇಲೆ ನೋಡುತ್ತದೆ. ಕಣ್ಣು ತೆರೆದು ನೋಡಿದರೆ ವಿಶ್ವದ ಮೊರೆತ, ಅಬ್ಬರ ಕೇಳಿಸುತ್ತದೆ. ಅದು ಕಣ್ಣಿಗೆ ಕಾಣಲಾರದ ಅಪರಂಪಾರ ಶಕ್ತಿಯ ದೃಶ್ಯರೂಪದ ವೈಖರಿ. ಅದನ್ನೇ ಕಗ್ಗ ಚಿತ್ಸತ್ತ್ವಮೂರ್ತಿಯ ನೃತ್ಯ ಎನ್ನುತ್ತದೆ. ಆ ನೃತ್ಯ ಕಾಲ, ದೇಶಗಳಿಗೆ ಸಂಬಂಧಿಸಿದ್ದು. ಆದರೆ ಕಣ್ಣು ಮುಚ್ಚಿದಾಗ ಮನುಷ್ಯ ಭಾವಕೋಶಕ್ಕೆ ಇಳಿಯುತ್ತಾನೆ. ಅಲ್ಲಿ ಶುದ್ಧವಾದ, ನಿಶ್ಚಲವಾದ ಪರತತ್ವ ಇದೆ. ಹೊರಗೆ ಕಾಣುವ ನೊರೆಗೆ, ಒಳಗಿದ್ದ ಹಾಲು ಕಾರಣ. ಪ್ರಪಂಚ ನೊರೆ, ಹಾಲು ಪರಸತ್ವ. ಕಗ್ಗ ಹೇಳುತ್ತದೆ, ನಿನಗೆ ಶಾಂತಿ ಬೇಕಾದರೆ ಎರಡೂ ಸತ್ಯಗಳಿಗೆ ಮುಖಮಾಡಿ ನಿಲ್ಲಬೇಕು. ಬರೀ ಕಣ್ಣುಮುಚ್ಚಿ ಕೂಡ್ರುವುದಲ್ಲ, ಹೊರಗಿನ ಬೆಡಗಿಗೆ ಬೆರಗಾಗಿ ಒಳಗಿನ ಸತ್ಯವನ್ನು ಮರೆಯುವುದು ತರವಲ್ಲ. ಎರಡನ್ನೂ ಎಚ್ಚರದಿಂದ ಗಮನಿಸಿದಾಗ ಶಾಂತಿ ಮೈದೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT