ಶನಿವಾರ, ಸೆಪ್ಟೆಂಬರ್ 18, 2021
30 °C

ಬೆರಗಿನ ಬೆಳಕು: ನಾನಾತ್ವದಲ್ಲಿ ಏಕತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಂದರ್ಯದಾಲಯ ಬರಿ ದ್ವಂದ್ವವೇನಲ್ಲ |
ದ್ವಂದ್ವದೊಳಗನುವು; ಅದು ಪರಿಮಾಣದುಚಿತ ||
ಸಂಧಾನರೀತಿಯದು; ಸಹಕಾರ ನೀತಿಯದು |
ಸಂದರ್ಭಸಹಜತೆಯೊ – ಮಂಕುತಿಮ್ಮ || 449 ||

ಪದ-ಅರ್ಥ: ಸೌಂದರ್ಯದಾಲಯ= ಸೌಂದರ್ಯದ+ ಆಲಯ (ಮನೆ), ದ್ವಂದ್ವದೊಳ
ಗನುವು= ದ್ವಂದ್ವದೊಳಗೆ+ ಅನುವು (ಹೊಂದಾ
ಣಕೆ, ಅವಕಾಶ), ಪರಿಮಾಣದುಚಿತ= ಪರಿಮಾ
ಣದ (ಅಳತೆಯ)+ ಉಚಿತ (ಸರಿಯಾದದ್ದು)

ವಾಚ್ಯಾರ್ಥ: ಸೌಂದರ್ಯವೆನ್ನುವುದು ಬರೀ ದ್ವಂದ್ವವಲ್ಲ. ಅದು ದ್ವಂದ್ವದೊಳಗಿನ ಹೊಂದಾಣಿಕೆ. ಅದು ಸರಿಯಾದ ಪ್ರಮಾಣದಲ್ಲಿದ್ದರೆ ಉಚಿತ. ಅದು ಸಂಧಾನದ ಬಗೆಯದು, ಸಹಕಾರವನ್ನು ಬಯಸುವುದು ಮತ್ತು ಸಂದರ್ಭಕ್ಕೆ ಸಹಜವಾದದ್ದು.

ವಿವರಣೆ: ಬದುಕೊಂದು ಸೌಂದರ್ಯದ ತವರುಮನೆ. ಆ ಸೌಂದರ್ಯದ ಘಟಕಗಳು ಏಕದ್ರವ್ಯವಲ್ಲ. ಅದು ಅನೇಕ ಗುಣಗಳು ಮತ್ತು ಪ್ರಭಾವಗಳ ಸಂಮಿಶ್ರಣ. ಅದೊಂದು ಹೂವಿನ ಗುಚ್ಛವಿದ್ದಂತೆ. ಬರೀ ಹಳದಿ ಬಣ್ಣದ ಗುಲಾಬಿ ಹೂವುಗಳ ಗುಚ್ಛ ಚೆಂದ. ಆದರೆ ಅದರ ಮಧ್ಯದಲ್ಲೊಂದು ಕೆಂಪು ಗುಲಾಬಿ ಇನ್ನೂ ಸೌಂದರ್ಯವನ್ನು ವೃದ್ಧಿಸುತ್ತದೆ. ಕಪ್ಪು ತಲೆಗೂದಲಿನ ನಡುವೆ ಬಿಳೀ ಬೈತಲೆ ಚೆಂದ, ಬಿಳೀ ಮರುಭೂಮಿಯ ಮಧ್ಯದ ಕಪ್ಪು ರಸ್ತೆ ಚೆಂದ. ಕಪ್ಪು ಬಂಡೆಗಳ ನಡುವೆ ತೂರಿ ಬರುವ ನೀರಿನ ಬಿಳಿಯನೊರೆ ಬಲುಚೆಂದ. ಹೀಗೆ ಗುಣಭೇದ, ರೂಪಭೇದಗಳ ನಡುವಿನ ಅನ್ಯೋನ್ಯತೆ, ಸಹಕಾರ ಸೊಗಸಿನ ಕಾರಣ. ಯಾವುದೇ ಒಂದು ರೂಪ, ಗುಣ ತಾನೊಂದೇ ಇದ್ದಾಗ ಸೊಗಸಾಗದು. ಪ್ರತಿಯೊಂದು ರೂಪವೂ ತನ್ನ ನೆರೆಹೊರೆಯ ರೂಪ ಗುಣಗಳೊಡನೆ ಬೆರೆಯಬೇಕು, ತನ್ನ ಭಾವಚರ್ಯೆಗಳನ್ನು ಪರಿಷ್ಕಾರ ಮಾಡಿಕೊಂಡು ಒಟ್ಟಿನ ಸೊಗಸಿಗೆ ಕಾರಣವಾಗಬೇಕು.

ಸಾಂಬಾರಿನ ವಾಸನೆ ಬಂದದ್ದು ಯಾವುದರಿಂದ? ಬೇಳೆಯಿಂದಲೇ, ನೀರಿನಿಂದಲೇ, ಉಪ್ಪು, ಹುಳಿ, ಮೆಣಸಿನಿಂದಲೇ? ಬೆಲ್ಲದಿಂದಲೇ? ನೋಡಿದರೆ ಈ ಎಲ್ಲ ವಸ್ತುಗಳ ಬಣ್ಣ, ಗುಣಗಳು ತುಂಬ ಬೇರೆ. ಹುಣಿಸೆಹಣ್ಣು ಮತ್ತು ಬೆಲ್ಲಗಳು ವಿರುದ್ಧ ಗುಣವುಳ್ಳವುಗಳು. ಆದರೆ ಸಾಂಬಾರಿನಲ್ಲಿ ಸರಿಯಾದ ಪ್ರಮಾಣದಲ್ಲಿದ್ದಾಗ ವಿಶೇಷ ರುಚಿ ಕೊಡುತ್ತವೆ. ಈ ವಸ್ತುಗಳನ್ನು ಬೇರೆ ಬೇರೆಯಾಗಿ ತಿನ್ನುವುದಾಗುವುದಿಲ್ಲ. ಅವು ಸರಿಯಾದ ರೀತಿಯಲ್ಲಿ ಬೆರಕೆಯಾದಾಗ ಸಾಂಬಾರಿನ ಘಮಲು ಬರುತ್ತದೆ. ಇದು ವಿವಿಧತೆಯ ನಾಶವಲ್ಲ, ಅದು ವೈವಿಧ್ಯದ ಸಂಮಿಳಿತತೆ. ಅದೇ ಸಮರಸತೆ, ಇದೇ ದ್ವಂದ್ವಗಳ ಸಮನ್ವಯತೆ. ಶ್ರೀರಾಮಕೃಷ್ಣರ ಬದುಕು ಇದಕ್ಕೊಂದು ಸುಂದರ ಉದಾಹರಣೆ. ಅದು ವೈರುಧ್ಯಗಳ ಸಂಗಮ. ಅತ್ಯಂತ ಅಶಕ್ತ ದೇಹದಲ್ಲಿ ಅತ್ಯಂತ ಧೃಡವಾದ ಮನಸ್ಸು; ಹೊಟ್ಟೆಪಾಡಿನ  ವಿದ್ಯೆಯನ್ನು ನಿರಾಕರಿಸಿದರೂ, ಜ್ಞಾನ ಮತ್ತು ಸಾಮಾನ್ಯಜ್ಞಾನದ ಗಣಿ; ಮದುವೆಯಾದರೂ ಸಾಮಾನ್ಯರಂತೆ ಗಂಡನಾಗದೆ ಉಳಿದವರು; ಯಾವುದೇ ವೈಯಕ್ತಿಕ ಸುಖಕ್ಕೆ ನಿರ್ಲಕ್ಷ್ಯ ಭಾವದಿಂದಿದ್ದವರಿಗೆ ಜಿಲೇಬಿ ಮತ್ತು ಮೀನಿನ ಬಗ್ಗೆ ಅಪಾರ ಪ್ರೀತಿ; ತಂತ್ರಸಾಧನೆ ಮಾಡಿದರೂ ಭೋಗಿಯಾಗದೆ ಉಳಿದವರು; ಸನ್ಯಾಸ ಪಡೆದರೂ ಸಂಸಾರ ತೊರೆದವರಲ್ಲ, ಕಾವಿ ಧರಿಸಿದವರಲ್ಲ. ನಿರಾಕಾರದ ನಿರ್ವಿಕಲ್ಪ ಸಮಾಧಿ ಪಡೆದರೂ ಕಾಳಿಮಾತೆಯ ದರ್ಶನಕ್ಕೆ ಹಾತೊರೆದವರು; ಸಾಧನೆಯಲ್ಲಿ ದೈವಿಕತೆಯನ್ನು ಮುಚ್ಚಿದ್ದರೂ, ಮಾನವೀಯ ಸಂಬಂಧಗಳಲ್ಲಿ ಅತಿಯಾದ ಸಂವೇದನೆ; ರಾಜರು, ಶ್ರೀಮಂತರ ಬಗ್ಗೆ ಅಲಕ್ಷ್ಯವಿದ್ದರೂ ಬಡಜನರ ಬಗ್ಗೆ, ಶಿಷ್ಯರ ಬಗ್ಗೆ ಅಪಾರ ಪ್ರೀತಿ. ಈ ಹದವಾದ ವೈರುಧ್ಯಗಳ ಮಿಶ್ರಣವೇ ಅವರನ್ನು ದೈವದ ಸ್ಥಾನದಲ್ಲಿ ನಿಲ್ಲಿಸಿತು. ನಾನಾತ್ವದಲ್ಲಿ ಏಕತ್ವದ ಅನುಸಂಧಾನ ಜ್ಞಾನಿಯ ವಿಶೇಷತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.