ಶನಿವಾರ, ಆಗಸ್ಟ್ 8, 2020
26 °C

ಬೆರಗಿನ ಬೆಳಕು | ವಿಶ್ವಪಾಲನೆಯ ರೀತಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಾಸ್ಯಗಾರನೊ ಬೊಮ್ಮ; ವಿಕಟ ಪರಿಹಾಸವದು |
ಆಸ್ಯ ಗಂಭೀರ, ಬೆರಲಿಂದ ಚಕಳಗುಳಿ ||
ವಿಶ್ವಾಸದುಪಚಾರ, ಹುಣಿಸೆಮೆಣಸಾಹಾರ |
ವಿಶ್ವಪಾಲನೆಯಿಂತು – ಮಂಕುತಿಮ್ಮ || 318 ||

ಪದ-ಅರ್ಥ: ವಿಕಟ=ವಿಡಂಬನೆಯ, ಪರಿಹಾಸ=ತಮಾಷೆ, ಹಾಸ್ಯ, ಆಸ್ಯ=ಮುಖ, ಚಳಕಗುಳಿ=
ಕಚಗುಳಿ, ವಿಶ್ವಾಸದುಪಚಾರ=
ವಿಶ್ವಾಸದ+ಉಪಚಾರ, ಹುಣಿಸೆಮೆಣಸಾಹಾರ=ಹುಣಿಸೆ+ಮೆಣಸು+ಆಹಾರ.

ವಾಚ್ಯಾರ್ಥ: ಪರಬ್ರಹ್ಮನೊಬ್ಬ ಹಾಸ್ಯಗಾರ. ಆದರೆ ಆತನದು ವಿಡಂಬನೆಯ ತಮಾಷೆ. ಅವನ ಮುಖ ಗಂಭೀರವಾಗಿರುತ್ತದೆ. ಆದರೆ ಬೆರಳಿನಿಂದ ಕಚಗುಳಿ ಇಡುತ್ತಾನೆ. ಮೇಲೆ ವಿಶ್ವಾಸದ ಉಪಚಾರ ಮಾಡುತ್ತಾನೆ ಆದರೆ ಬಡಿಸುವುದು ಹುಣಿಸೆ ಮೆಣಸುಗಳ ಆಹಾರ. ಇದೇ ಅವನ ವಿಶ್ವಪಾಲನೆಯ ರೀತಿ.

ವಿವರಣೆ: ಇದೊಂದು ರೀತಿಯ ನಿಂದಾಸ್ತುತಿ ಇದ್ದಂತಿದೆ. ಮೇಲ್ನೋಟಕ್ಕೆ ಪರಬ್ರಹ್ಮನ ಕಾರ್ಯವೈಖರಿಯನ್ನು ಟೀಕೆ ಮಾಡುವಂತೆ ತೋರುತ್ತದೆ. ಅವನೊಬ್ಬ ದುಃಖ ಸಂತೋಷಿ. ಜನರಿಗೆ ತೊಂದರೆ ಕೊಟ್ಟು, ಅವರು ಒದ್ದಾಡುವುದನ್ನು ಕಂಡು ಸಂತೋಷಪಡುತ್ತಾನೆ. ಅವನು ವಿಕಟ ಹಾಸ್ಯಗಾರ. ಮುಖ ನೋಡಿದರೆ ಗಂಭೀರವಾಗಿರುವಂತೆ ತೋರುತ್ತಾನೆ. ಆದರೆ ಬೆರಳಿನಿಂದ ಕಚಗುಳಿ ಇಟ್ಟು ನಗಿಸುತ್ತಾನೆ. ಮೇಲೆ ನೋಡಿದರೆ ವಿಶ್ವಾಸದಿಂದ ಉಪಚರಿಸುವ ಹಾಗೆ ತೋರುತ್ತಾನೆ. ಹಸಿದು ಹೋದರೆ ಹೊಟ್ಟೆ ಉರಿಯುವ ಹಾಗೆ ಹುಣಿಸೆ ಮತ್ತು ಮೆಣಸಿನ ಆಹಾರ ಕೊಡುತ್ತಾನೆ. ಅವನ ವಿಶ್ವಪಾಲನೆಯ ರೀತಿಯೇ ಹೀಗೆ. ಹೀಗೆಲ್ಲ ನಮ್ಮ ವಿಚಾರ ಸರಣಿ ಹರಿಯುತ್ತದೆ.

ಆದರೆ ಇದರ ಹಿಂದಿನ ವಿಶಾಲ ತತ್ವವನ್ನು ತಿಳಿದರೆ, ಈ ಮಾತುಗಳೆಲ್ಲ ನಮ್ಮ ಆತಂಕದಿಂದ ಬಂದವುಗಳು, ನಮ್ಮ ಅಸಹಾಯಕತೆಯನ್ನು ತಡೆದುಕೊಳ್ಳಲಾರದೆ ಭಗವಂತನ ಮೇಲೆ ತಪ್ಪು ಹೊರಿಸುವ ಆತುರ. ಪರಬ್ರಹ್ಮ ಜಗತ್ತನ್ನು ಸೃಷ್ಟಿಸಿದವನೂ, ಅದನ್ನು ರಕ್ಷಿಸುವವನೂ ಆಗಿದ್ದರೂ ಆತ ಸ್ವೇಚ್ಛಾವರ್ತಿಯಲ್ಲ. ಆತ ತಾನೇ ಹಾಕಿಕೊಂಡ ನಿಯಮಗಳ ಪ್ರಕಾರ ನಡೆಯುವಂಥವನು. ಉದಾಹರಣೆಗೆ ದೇಶದ ರಾಷ್ಟ್ರಪತಿಗೂ ಸಾಮಾನ್ಯ ಪ್ರಜೆಗೂ ಇರುವ ಸಂಬಂಧವಿದ್ದ ಹಾಗೆ. ರಾಷ್ಟ್ರಪತಿಗೆ ಎಲ್ಲ ಅಧಿಕಾರಗಳು ಸ್ವಾಯತ್ತವಾಗಿದ್ದರೂ, ಹೇಗೆ ಬೇಕೋ ಹಾಗೆ ತೀರ್ಮಾನಗಳನ್ನು ಕೊಡುವಂತಿಲ್ಲ. ಪ್ರಜೆಗಳು ರಾಷ್ಟ್ರಪತಿಯಿಂದ ಏನನ್ನಾದರೂ ಕೇಳಬಹುದು ಆದರೆ ಕೊಟ್ಟೇ ತೀರಬೇಕೆಂಬ ನಿಬಂಧನೆ ಅವರಿಗಿಲ್ಲ. ನಿಮ್ಮ ಸಾಮರ್ಥ್ಯದಂತೆ, ಸಾಧನೆಯಂತೆ, ಯೋಗ್ಯತೆಯಂತೆ, ವಿದ್ಯಾರ್ಹತೆಯಂತೆ ರಾಷ್ಟ್ರಪತಿಗಳು ಫಲ ನೀಡಬಹುದು. ನೀವು ಬೇಡಿದ್ದು ಸಿಗದೆ ಹೋದರೆ ರಾಷ್ಟ್ರಪತಿಗಳನ್ನು ದೂರಿ ಫಲವಿಲ್ಲ. ನಮ್ಮ ಅರ್ಹತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಕಾರ್ಯಗಳಿಂದ ಸಂತೋಷವಾದರೆ ಭಗವಂತ ಕಚಕುಳಿ ಇಟ್ಟ ಎನ್ನುತ್ತೇವೆ, ನಮ್ಮ ತಪ್ಪುಗಳಿಂದ ಶಿಕ್ಷೆ ದೊರೆತರೆ, ಮಾಡಿದ ತಪ್ಪುಗಳನ್ನು ಮರೆತು ದೇವರಿಗೆ ಕಣ್ಣಿಲ್ಲ ಎನ್ನುತ್ತೇವೆ. ಹೆಸರಿಗೆ ಭಕ್ತಪರಾಧೀನ ಎನ್ನಿಸಿಕೊಂಡರೂ ನಮಗೆ ಇಷ್ಟು ತೊಂದರೆ ಕೊಡುತ್ತಾನೆ ಎಂದು ದೂರುತ್ತೇವೆ. ನಾವು ಭಕ್ತರಾದದ್ದು ಯಾವಾಗ? ಆದದ್ದು ಸತ್ಯವೇ? ಭಗವಂತ ಯಾರಿಗೂ ಶಿಕ್ಷೆಯನ್ನು ಕೊಡುವುದಿಲ್ಲ, ಯಾರಿಗೂ ಅನವಶ್ಯಕವಾದ ಕೃಪೆಯನ್ನೂ ಮಾಡುವುದಿಲ್ಲ. ನಮ್ಮ ಕರ್ಮಗಳಿಗೆ ಸರಿಯಾಗಿ ತೂಕಮಾಡಿ ಫಲಗಳನ್ನು ಕೊಡುತ್ತಾನೆ. ನಮಗಾಗುವ ಸಂತೋಷ, ದುಃಖಗಳು ನಮ್ಮದೇ ಕರ್ಮಫಲಗಳು.

ಇದು ಪರಬ್ರಹ್ಮನ ವಿಶ್ವಪಾಲನೆಯ ರೀತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು