ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನಾ ಮಾಡಿದ ಕರ್ಮ

Last Updated 8 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಅವನೊಬ್ಬ ಅತ್ಯಂತ ದಾನಶೀಲ, ಶ್ರದ್ಧಾವಂತ ಮತ್ತು ಸದಾಕಾಲ ಉಪೋಸಥ ವೃತವನ್ನು ಮಾಡುವವನಾಗಿದ್ದ. ಅವನ ಅಮಾತ್ಯರು, ಪರಿವಾರದವರೆಲ್ಲ ಧರ್ಮಿಷ್ಠರಾಗಿದ್ದರು. ಆದರೆ ಅವನ ಪುರೋಹಿತ ಮಾತ್ರ ಲಂಚಕೋರನಾಗಿ ದುರಾಚಾರಿಯಾಗಿದ್ದ. ಲಂಚ ತೆಗೆದುಕೊಂಡು ಮೊಕದ್ದಮೆಗಳಲ್ಲಿ ತಪ್ಪು ನಿರ್ಣಯಗಳನ್ನು ನೀಡುತ್ತಿದ್ದ. ಉಪೋಸಥ ವೃತ ಮಾಡುತ್ತೇನೆಂದು ಸುಳ್ಳು ಹೇಳುತ್ತಿದ್ದ. ಒಂದು ದಿನ ಮೊಕದ್ದಮೆ ನಡೆದಾಗ ಅತ್ಯಂತ ಸದಾಚಾರಿಯಾದ ಹೆಂಗಸೊಬ್ಬಳು ಮನೆಗೆ ಹೋಗಲಾಗಲಿಲ್ಲ. ಆಗ ನ್ಯಾಯಾಧೀಶನಾಗಿದ್ದ ಪುರೋಹಿತ ತನ್ನ ಬಳಿ ಇದ್ದ ಎರಡು ಮಾವಿನ ಹಣ್ಣುಗಳಲ್ಲಿ ಒಂದನ್ನು ಆಕೆಗೆ ಕೊಟ್ಟ. ಆಕೆ ಅವನನ್ನು ಹರಸಿದಳು.

ಮುಂದೆ ಆತ ಸತ್ತ ಮೇಲೆ ಹಿಮಾಲಯದ ಕೊಸಿಕೀ ನದಿಯ ದಂಡೆಯ ಮೇಲಿದ್ದ ಸುಂದರವಾದ ಮೂರು ಯೋಜನಗಳಷ್ಟು ದೊಡ್ಡದಾದ ಮಾವಿನ ತೋಪಿನಲ್ಲಿ ಜನಿಸಿದ. ಸಂಜೆಯಾದ ಮೇಲೆ ಆತನಿಗೆ ಅತ್ಯಂತ ಸುಂದರವಾದ ರೂಪವಿತ್ತು. ಅಲಂಕೃತವಾದ ನಿವಾಸ ಬರುತ್ತಿತ್ತು. ಹದಿನಾರು ಸಾವಿರ ಸುಂದರ ದೇವನರ್ತಕಿಯರು ಅವನೊಂದಿಗೆ ರಮಿಸುತ್ತಿದ್ದರು. ಆದರೆ ಬೆಳಗಾಗುತ್ತಿದ್ದಂತೆ ಎಲ್ಲವೂ ಮರೆಯಾಗಿ ಪ್ರೇತರೂಪ ಬರುತ್ತಿತ್ತು. ಒಂಭತ್ತು ತಾಳೆಮರದಷ್ಟು ಎತ್ತರದ ದೇಹ, ಎರಡೂ ಕೈಗಳಲ್ಲಿ ಒಂದೊಂದೇ ಬೆರಳು, ಅ ಬೆರಳಿಗೆ ಗುದ್ದಲಿಯಂಥ ಉಗುರು ಮೂಡುತ್ತಿದ್ದವು. ಅವನ ಮೈಯೆಲ್ಲ ಸದಾಕಾಲ ಉರಿಯುತ್ತಿತ್ತು. ತನ್ನ ಉಗುರುಗಳಿಂದ ಬೆನ್ನಿನ ಮಾಂಸವನ್ನು ಸೀಳಿ ಸೀಳಿ ತಿನ್ನುತ್ತಿದ್ದ. ಸಂಜೆಯಾದಂತೆ ಮತ್ತೆ ಸಂಭ್ರಮ. ಅವನಿಗರ್ಥವಾಗಿತ್ತು, ಹಗಲಿನ ಪರಿತಾಪ ತಾನು ಮಾಡಿದ ಅನಾಚಾರಗಳ ಫಲ ಮತ್ತು ರಾತ್ರಿಯ ಸಂಭ್ರಮ ತಾನು ಗಳಿಸಿದ ಜ್ಞಾನದ ಹಾಗೂ ಮಹಿಳೆಗೆ ನೀಡಿದ ದಾನದ ಫಲ.

ಆ ಸಮಯದಲ್ಲಿ ವಾರಾಣಸಿಯ ರಾಜ, ಕಾಮ, ಭೋಗಗಳು ಸಾಕೆಂದುಕೊಂಡು ಪ್ರವ್ರಜಿತನಾಗಿ ಹಿಮಾಲಯಕ್ಕೆ ಬಂದು ಈ ಮಾವಿನ ತೋಟಕ್ಕೆ ಸ್ವಲ್ಪ ದೂರದಲ್ಲಿ ಆಶ್ರಮವನ್ನು ಕಟ್ಟಿಕೊಂಡು ಉಳಿದ. ಅವನು ಹಕ್ಕಿಗಳಂತೆ ನೆಲಕ್ಕೆ ಬಿದ್ದ ಕಾಳುಗಳನ್ನು ತಿಂದು ಬದುಕುತ್ತಿದ್ದ. ಒಂದು ದಿನ ನದಿಯಲ್ಲಿ ಸ್ನಾನ ಮಾಡುವಾಗ ಪ್ರವಾಹದಲ್ಲಿ ಮಾವಿನ ಹಣ್ಣೊಂದು ತೇಲಿ ಅವನ ಬಳಿ ಬಂದಿತು. ಅದನ್ನು ತಿಂದ ಅವನಿಗೆ ಅದರ ರುಚಿಯ ತೃಷ್ಣೆ ಅಂಟಿಕೊಂಡಿತು. ಬೇರೆ ಏನನ್ನೂ ತಿನ್ನದೆ ಬರೀ ಆ ಮಾವಿನಹಣ್ಣನ್ನೇ ತಿನ್ನಬೇಕೆಂದು ತೀರ್ಮಾನಿಸಿ ನದಿಯ ತಟದಲ್ಲಿಯೇ ಕುಳಿತುಬಿಟ್ಟ. ಅದನ್ನೇ ಅಪೇಕ್ಷಿಸುತ್ತ ಏಳು ದಿನ ಉಪವಾಸ ಮಾಡಿದ. ಆಗ ಕಾಡಿನ ದೇವತೆ ಅವನನ್ನು ಎತ್ತಿ ಈ ಮಾವಿನ ತೋಪಿಗೆ ಕರೆತಂದು, ನೀನು ಇಲ್ಲಿಯೇ ಇದ್ದು ತಪಸ್ಸು ಮಾಡು ಎಂದು ಹೇಳಿದಳು.

ಅಲ್ಲಿದ್ದಾಗ ರಾತ್ರಿ ದೇವತೆಯಂತಿದ್ದು, ಹಗಲಿನಲ್ಲಿ ಪ್ರೇತದಂತೆ ಒದ್ದಾಡುವ ಈ ವ್ಯಕ್ತಿಯನ್ನು ಕಂಡು ಆಶ್ಚರ್ಯಪಟ್ಟ. ಆಗ ಆತ, ‘ಸ್ವಾಮಿ, ನೀವು ನನ್ನನ್ನು ಗುರುತಿಸಲಿಲ್ಲ. ನಾನು ನಿಮ್ಮ ಪುರೋಹಿತ. ಲಂಚಕೋರನಾಗಿ, ಭ್ರಷ್ಟನಾದ್ದರಿಂದ ನನಗೆ ಈ ಪಿಶಾಚಿ ರೂಪ ಬಂದಿದೆ. ನಾನು ಮಾಡಿದ ಒಂದೆರಡು ಒಳ್ಳೆಯ ಕಾರ್ಯಗಳಿಗೆ ರಾತ್ರಿಯ ಸಂತೋಷ ದೊರೆತಿದೆ’ ಎಂದ. ಆಗ ತಪಸ್ವಿಯಾದ ರಾಜ ಅವನನ್ನು ತನ್ನ ಜೊತೆಗೆ ಧ್ಯಾನದಲ್ಲಿ ಸೇರಿಸಿಕೊಂಡು ಮುಕ್ತಿ ಪಡೆಯುವಂತೆ ಮಾಡಿದ.

ನಾವು ಮಾಡಿದ ಯಾವ ಕರ್ಮವೂ – ಒಳ್ಳೆಯದು ಅಥವಾ ಕೆಟ್ಟದ್ದು - ಪರಿಣಾಮ ಬೀರದೆ ಹೋಗುವುದಿಲ್ಲ. ವರಕ್ಕೆ ಅಥವಾ ಶಿಕ್ಷೆಗೆ ನಾವು ಸಿದ್ಧರಾಗಿರಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT