ಸೋಮವಾರ, ಸೆಪ್ಟೆಂಬರ್ 21, 2020
27 °C

ನರಿ ಮತ್ತು ಕೋತಿಯ ಸಂಯೋಗ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಪರಮೇಷ್ಠಿ ನಿಜಜಾತುರಿಯನಳೆಯೆ ನಿರವಿಸಿದ |
ನೆರಡುಕೈಯಿಂದೆರಡು ಜಂತುಗಳ ಬಳಿಕ ||
ಇರದೆ ತಾನವನೊಂದುಗೂಡಿಸಲು ಬೆರಗಾಯ್ತು |
ನರಿಯು ವಾನರವು ನರ– ಮಂಕುತಿಮ್ಮ || 193 ||

ಪದ-ಅರ್ಥ: ಪರಮೇಷ್ಠಿ=ಬ್ರಹ್ಮ, ನಿಜಚಾತುರಿಯನೆಳೆಯೆ=ನಿಜ
(ಸ್ವಂತ)+ಚಾತುರಿಯನು (ಕೈಚಳಕವನ್ನು)+ಅಳೆಯೆ (ಪರೀಕ್ಷಿಸಲು,
ಅಳೆಯಲು), ನಿರವಿಸಿದ=ಅಪೇಕ್ಷಿಸಿದ, ಎರಡು ಕೈಯಿಂದೆರಡು= ಎರಡು ಕೈಯಿಂದ+ ಎರಡು, ತಾನವನೊಂದುಗೂಡಿಸಲು=ತಾನು+ಅವನ್ನು+ಒಂದುಗೂಡಿಸಲು.

ವಾಚ್ಯಾರ್ಥ: ಬ್ರಹ್ಮ ತನ್ನ ಕೈಚಳಕವನ್ನರಿಯಲು ಅಪೇಕ್ಷಿಸಿ ಎರಡು ಕೈಯಲ್ಲಿ ಎರಡು ಪ್ರಾಣಿಗಳನ್ನು ಹಿಡಿದು ಅವನ್ನೆರಡನ್ನೂ ಒಂದುಗೂಡಿಸಿದಾಗ ಅವನಿಗೇ ಬೆರಗಾಯ್ತು. ಯಾಕೆಂದರೆ ನರಿ ಮತ್ತು ವಾನರರನ್ನು ಒಂದುಗೂಡಿಸಿದಾಗ ಬಂದ ಪ್ರಾಣಿ ನರ, ಮನುಷ್ಯ!

ವಿವರಣೆ: ಕಗ್ಗ ಸುಂದರವಾದ ಬೆರಗಿನ ಘಟನೆಯನ್ನು ವರ್ಣಿಸುತ್ತದೆ. ಒಂದು ಬಾರಿ ಸೃಷ್ಟಿಕರ್ತನಾದ ಬ್ರಹ್ಮನಿಗೇ ತನ್ನ ಕೈಚಳಕವನ್ನು ನೋಡಿಕೊಳ್ಳುವ ಮನಸ್ಸಾಯಿತಂತೆ. ಇಡೀ ಪ್ರಪಂಚದಲ್ಲಿ ಲಕ್ಷಾಂತರ ಪಕ್ಷಿ, ಪ್ರಾಣಿಗಳನ್ನು, ಸಸ್ಯ, ಪಾಷಾಣಗಳನ್ನು ಅತ್ಯಂತ ಸುಲಭವಾಗಿ ಸೃಷ್ಟಿಸಿದ ಆತನಿಗೆ ಒಂದು ವಿಶೇಷ ಅಪೇಕ್ಷೆಯಾಯಿತು. ಅದನ್ನು ಪರೀಕ್ಷಿಸಿ ನೋಡುವುದಕ್ಕಾಗಿ ಆತ ತನ್ನ ಎರಡು ಕೈಯಲ್ಲಿ ಎರಡು ಪ್ರಾಣಿಗಳನ್ನು ಹಿಡಿದುಕೊಂಡನಂತೆ. ಒಂದು ಕೈಯಲ್ಲಿ ನರಿ, ಮತ್ತೊಂದು ಕೈಯಲ್ಲಿ ಕೋತಿ. ನಂತರ ಇವೆರಡೂ ಸೇರಿದರೆ ಏನಾಗಬಹುದು ಎಂಬ ಕುತೂಹಲದಿಂದ ಅವನ್ನು ಒಂದುಗೂಡಿಸಿದಾಗ ಅವನಿಗೇ ಆಶ್ಚರ್ಯವಾಯಿತಂತೆ. ಯಾಕೆಂದರೆ ಇವೆರಡರ ಸಂಯೋಗದಿಂದ ಹುಟ್ಟಿದ ಪ್ರಾಣಿ ಮನುಷ್ಯ!

ಈ ಘಟನೆಯ ಹಿಂದೆ ಕಗ್ಗ ಒಂದು ಮಾರ್ಮಿಕವಾದ ವಿಷಯವನ್ನು ತಿಳಿಸಲು ಪ್ರಯತ್ನಿಸುತ್ತದೆ. ನರಿ ಮತ್ತು ಕೋತಿ ಸೇರಿದಾಗ ಮನುಷ್ಯನಾದನೆಂದರೆ, ಮನುಷ್ಯನಲ್ಲಿ ಈ ನರಿ ಮತ್ತು ಕೋತಿಯ ಗುಣಗಳು ಸೇರಿಕೊಂಡಿವೆ. ನರಿ ಎಂಬ ಪ್ರಾಣಿ ನಾಯಿ ಮತ್ತು ತೋಳ ಇವುಗಳೆರಡರ ಮಧ್ಯದ ತಳಿ. ಇದೂ ಅವುಗಳ ಹಾಗೆಯೇ ಬದುಕು ವಂಥದ್ದು. ನರಿಯ ಮುಖ್ಯ ಗುಣಗಳೆಂದರೆ ಅದರ ಬುದ್ಧಿಯ ತೀಕ್ಷ್ಣತೆ ಮತ್ತು ಸ್ವಾರ್ಥ. ಅದಕ್ಕೆ ಬಹು ದೊಡ್ಡ ಪ್ರಾಣಿಗಳಿಗಿರುವ ಶಕ್ತಿ ಇಲ್ಲ. ಅದಕ್ಕಾಗಿ ಅದು ತನ್ನ ಬುದ್ಧಿಯನ್ನು ಬಳಸಿಕೊಂಡು ಆಹಾರ ಸಂಪಾದನೆ ಮಾಡುತ್ತದೆ. ಅದಕ್ಕೆ ಸರಿ ತಪ್ಪುಗಳ ಚಿಂತೆಯಿಲ್ಲ. ಹೇಗಾದರೂ ಮಾಡಿ, ಯಾರಿಗಾದರೂ ಮೋಸ ಮಾಡಿದರೂ ಚಿಂತೆಯಿಲ್ಲ, ತನ್ನ ಕಾರ್ಯ ಸಾಧನೆಯನ್ನು ಮಾಡಿಕೊಂಡು ಬಿಡುತ್ತದೆ. ಅದಕ್ಕೇ ನಮ್ಮ ಪಂಚತಂತ್ರ ಕಥೆಗಳಲ್ಲಿ ಸಾಮಾನ್ಯವಾಗಿ ನರಿಯನ್ನು ಬುದ್ಧಿವಂತ ಆದರೆ ಕುಯುಕ್ತಿಗಳನ್ನು ಮಾಡುವ ಪ್ರಾಣಿ ಎಂದು ಗುರುತಿಸಲಾಗಿದೆ. ಈ ಗುಣಗಳು ಮನುಷ್ಯನಲ್ಲಿ ಕಾಣುತ್ತವೆ. ಇನ್ನೊಂದು ಪ್ರಾಣಿ ಕೋತಿ. ಅದು ಚಂಚಲತೆಯ ಸಂಕೇತ. ಅದು ಒಂದೆಡೆಗೆ ನಿಲ್ಲಲಾರದು. ಎಲ್ಲಿಯೂ ನೆಲೆನಿಲ್ಲದೆ ಹಾರುತ್ತ ಓಡಾಡುವುದು ಅದರ ಲಕ್ಷಣ. ಮನುಷ್ಯನಲ್ಲೂ ಆ ಚಂಚಲತೆ ಮನೆ ಮಾಡಿದೆ.

ಅದಕ್ಕೇ ಕಗ್ಗ, ಮನುಷ್ಯ ನರಿ ಹಾಗೂ ಕೋತಿಯ ಗುಣಗಳನ್ನು ಆವಾಹಿಸಿ ಕೊಂಡವನು ಎನ್ನುತ್ತದೆ. ನರಿಯ ಬುದ್ಧಿವಂತಿಕೆ, ಛಲ, ಕಾರ್ಯಸಾಧನೆಯ ಯುಕ್ತಿಗಳು ಇವುಗಳೊಂದಿಗೆ ಕೋತಿಯ ಚಂಚಲತೆ ಮಾನವನಲ್ಲಿ ಕಂಡು ಬರುವುದರಿಂದ ಇವನನ್ನು ನರಿ ಹಾಗೂ ಕೋತಿಗಳ ಸಂಯೋಗ ಎಂದು ವ್ಯಂಗ್ಯವಾಗಿ ಕಗ್ಗ ವರ್ಣಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು