ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮೂಗು ಬದಲಿಸಿದ ಚರಿತ್ರೆ

Last Updated 28 ಜೂನ್ 2020, 19:30 IST
ಅಕ್ಷರ ಗಾತ್ರ

ನಾಸಿಕದ ಮಾಟದಿಂದಾ ಕ್ಲಿಯೋಪ್ಯಾಟ್ರಳಿಗೆ |
ದಾಸರಾದರು ಶೂರ ಸೀಸರ್ ಆ್ಯಂಟನಿಗಳ್ ||
ದೇಶಚರಿತ್ರೆಗೆಮವರ ಜಸಕಮಂಕುಶವಾಯ್ತು |
ನಾಸಾಪುಟದ ರೇಖೆ – ಮಂಕುತಿಮ್ಮ || 306 ||

ಪದ-ಅರ್ಥ: ನಾಸಿಕ=ಮೂಗು, ಕ್ಲಿಯೋಪ್ಯಾಟ್ರಾ=ಇಜಿಪ್ತಿನ ರಾಣಿ, ದೇಶಚರಿತ್ರೆಗೆಮವರ=ದೇಶಚರಿತೆಗಂ(ದೇಶದ ಚರಿತ್ರೆಗೆ)+ಅವರ, ಜಸಕಮಂಕುಶವಾಯ್ತು=
ಜಸಕಂ(ಯಶಸ್ಸಿಗೆ)+ಅಂಕುಶವಾಯ್ತು, ನಾಸಾಪುಟದ ರೇಖೆ=ಮೂಗಿನ ಸೊಬಗು, ಸೌಂದರ್ಯ.

ವಾಚ್ಯಾರ್ಥ: ಮಹಾಶೂರರಾದ ಸೀಸರ್ ಮತ್ತು ಆ್ಯಂಟನಿಗಳು ಕ್ಲಿಯೋಪ್ಯಾಟ್ರಾಳ ಮೂಗಿನ ಸೊಬಗಿಗೆ ಸೋತು ದಾಸರಾದರು. ದೇಶದ ಚರಿತ್ರೆಗೆ, ಅವರ ಯಶಸ್ಸಿಗೆ ಅಂಕುಶದಂತೆ ಅಡ್ಡಿಯಾಯಿತು ಆ ಮೂಗಿನ ವಿನ್ಯಾಸ.

ವಿವರಣೆ: ಈಜಿಪ್ಟ್‌‌ ಮತ್ತು ರೋಮ್ ದೇಶಗಳ ಇತಿಹಾಸದಲ್ಲಿ ಇದೊಂದು ಅತ್ಯಂತ ಮಾರ್ಮಿಕ ಪ್ರಸಂಗ. ಬಹುಶಃ ಪ್ರಪಂಚದ ಎಲ್ಲ ದೇಶಗಳ ಇತಿಹಾಸದಲ್ಲೂ ಒಂದು ಘಟನೆ, ಒಬ್ಬ ವ್ಯಕ್ತಿ ಸರಿಯಾದ ಸಮಯಕ್ಕೆ ಬಂದು ಇತಿಹಾಸವನ್ನೇ ಬದಲಿಸಿದ್ದನ್ನು ಕಾಣುತ್ತೇವೆ. ಹಾಗೆ ಈ ಎರಡು ದೇಶಗಳ ಇತಿಹಾಸದಲ್ಲಿ ಒಂದು ವಿಚಿತ್ರ ತಿರುವನ್ನು ತಂದವಳು ಕ್ಲಿಯೋಪ್ಯಾಟ್ರಾ. ಆಕೆ ಪುರಾತನ ಈಜಿಪ್ಟ್ ಅನ್ನು ಸುಮಾರು ಮೂರು ದಶಕಗಳ ಕಾಲ ಮೊದಲು ತನ್ನ ತಂದೆಯೊಡನೆ, ನಂತರ ತನ್ನ ಇಬ್ಬರು ತಮ್ಮಂದಿರೊಡನೆ ಮತ್ತು ಕೊನೆಗೆ ತನ್ನ ಮಗನೊಂದಿಗೆ ಆಳಿದವಳು. ಆಕೆ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ತನಗಿಂತ ತುಂಬ ಹಿರಿಯನಾಗಿದ್ದ ಸೀಸರ್‌ನನ್ನು ಆಕರ್ಷಿಸಿ ಮದುವೆಯಾಗಿ ಸಿಸೇರಿಯನ್ ಎಂಬ ಮಗನನ್ನು ಪಡೆದಳು. ಸೀಸರ್‌ನ ಹತ್ಯೆಯಾದ ಮೇಲೆ ರೋಮ್ ಸೈನ್ಯದ ನಾಯಕನಾಗಿದ್ದ ಆ್ಯಂಟನಿಯನ್ನು ಮದುವೆಯಾಗಿ ಅವನನ್ನು ಸಂಪೂರ್ಣವಾಗಿ ತನ್ನ ಮೋಹದಲ್ಲಿ ಸಿಲುಕಿಸಿಬಿಟ್ಟಳು. ಮಹಾಶೂರನಾಗಿದ್ದ ಆ್ಯಂಟನಿ ಆಕೆಯ ಮೋಹಕ್ಕೆ ಬಲಿಯಾಗಿ, ಕುಡುಕನಾಗಿ, ಶಕ್ತಿಯನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡನಂತೆ. ಕೆಲವರು ಹೇಳುವಂತೆ ಕ್ಲಿಯೋಪ್ಯಾಟ್ರಾ ಆಸಾಮಾನ್ಯ ಸುಂದರಿ. ಆ ಸೌಂದರ್ಯದ ಮುಕುಟ ಅವಳ ಮೂಗಿನ ಮಾಟ. ಅದು ಕೊಂಚ ಮೊಂಡಾಗಿತ್ತಂತೆ. ಅದೇ ಅವಳ ಪ್ರಮುಖ ಆಕರ್ಷಣೆ. ಮತ್ತೆ ಕೆಲ ಇತಿಹಾಸಕಾರರು ಹೇಳುವಂತೆ ಆಕೆ ಅಂತಹ ಸುಂದರಿ ಏನೂ ಅಲ್ಲ. ಆದರೆ ಬಹಳ ಪ್ರತಿಭಾವಂತೆ, ಚಾಲಾಕಿ, ಮಾತಿನಿಂದ ಯಾರನ್ನಾದರೂ ಮರುಳು ಮಾಡುವ ಶಕ್ತಿ ಇತ್ತು. ‌

ಸೀಸರ್ ಮತ್ತು ಆ್ಯಂಟನಿಯಂಥ ಮಹಾನ್ ನಾಯಕರು, ಶೂರರು ಆಕೆಯ ದಾಸರಾಗಿದ್ದರು ಎಂದರೆ ಅವಳ ಸೌಂದರ್ಯವನ್ನೋ, ಬುದ್ಧಿವಂತಿಕೆಯನ್ನೋ ಮೆಚ್ಚಬೇಕಾಗುತ್ತದೆ. ಅವಳಿಂದಾಗಿ ನಾಗರಿಕತೆಯ ಅತ್ಯಂತ ಉತ್ತುಂಗಕ್ಕೆ ಏರಿದ್ದ ರೋಮ್‌ ಆಧಿಪತ್ಯ ಕುಸಿದು ಪ್ರಜಾಪ್ರಭುತ್ವ ಕರಗಿ ಹೋಗಿ ಮತ್ತೆ ಸರ್ವಾಧಿಕಾರ ಬಂದಿತು. ಹೀಗಾಗಿ ಆ ಎರಡೂ ದೇಶಗಳ ಚರಿತ್ರೆಗಳಿಗೆ, ಆ ಮಹಾಶೂರರುಗಳ ಯಶಸ್ಸಿಗೆ ಅಂಕುಶದಂತೆ ಬಂದದ್ದು ಕ್ಲಿಯೋಪ್ಯಾಟ್ರಾಳ ಸೌಂದರ್ಯ ಹಾಗೂ ಬುದ್ಧಿವಂತಿಕೆ.

ಈ ಘಟನೆಯನ್ನು ವಿವರಿಸುವ ಕಗ್ಗದ ಆಶಯವೆಂದರೆ ಈ ಪ್ರಪಂಚದಲ್ಲಿ ಯಾವಾಗ, ಯಾವುದರಿಂದ, ಯಾರಿಂದ ಏನು ಕಾರ್ಯ ನಡೆದೀತು, ಅದರಿಂದ ಪ್ರಪಂಚದ ಇತಿಹಾಸವೇ ಬದಲಾದೀತು ಎಂಬುದನ್ನು ಹೇಳುವುದು ಕಷ್ಟ. ಪ್ರಪಂಚದ ರೀತಿಯೇ ಹಾಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT