ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನಕ್ಕೆ ಸತ್ಪಾತ್ರರು

Last Updated 3 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಅವನ ಧರ್ಮಪ್ರಜ್ಞೆಯಿಂದಾಗಿ ಇಡೀ ದೇಶದಲ್ಲಿ ಧರ್ಮ ನೆಲೆ ಮಾಡಿತ್ತು. ನ್ಯಾಯಾಲಯಗಳು ಬರಿದಾದವು. ರಾಜನಿಗೆ ತನ್ನಲ್ಲಿರುವ ದೋಷಗಳನ್ನು ಕಂಡುಕೊಳ್ಳುವ ಬಯಕೆಯಾಯಿತು. ಆತ ನಗರದಲ್ಲಿ ಯಾರನ್ನು ಕೇಳಿದರೂ ಅವನಲ್ಲಿ ಒಂದು ದೋಷವನ್ನೂ ಹೇಳಲಿಲ್ಲ. ರಾಜ ಜನಪದಲ್ಲಾದರೂ ತನ್ನ ದೋಷವನ್ನು ಯಾರಾದರೂ ಹೇಳಬಹುದೆಂದುಕೊಂಡು ರಾಜ್ಯವನ್ನು ಅಮಾತ್ಯರಿಗೆ ಒಪ್ಪಿಸಿ, ವೇಷ ಬದಲಿಸಿಕೊಂಡು, ತನ್ನ ಜೊತೆಗೆ ಪುರೋಹಿತನನ್ನು ಕರೆದುಕೊಂಡು ಹೊರಟ. ಇಡೀ ದೇಶ ಸುತ್ತಿದರೂ ಯಾರೂ ಅವನಲ್ಲಿ ದೋಷಗಳನ್ನು ಕಾಣಲಿಲ್ಲ. ಆಗ ಅವನು ಗಡಿನಾಡಿನ ಒಂದು ಗ್ರಾಮಕ್ಕೆ ಬಂದು ಅಲ್ಲಿದ್ದ ದಾನಶಾಲೆಯಲ್ಲಿ ಕುಳಿತುಕೊಂಡ.

ಆ ಸಮಯದಲ್ಲಿ ಗ್ರಾಮದ ಅತ್ಯಂತ ಶ್ರೀಮಂತ ವ್ಯಕ್ತಿ, ಆತ ಎಂಭತ್ತು ಕೋಟಿ ಸಂಪತ್ತಿನ ಒಡೆಯ, ಸಂಭ್ರಮದಿಂದ ಪರಿವಾರದವರೊಂದಿಗೆ ನದಿ ಸ್ನಾನಕ್ಕೆ ಹೋಗುತ್ತಿದ್ದ. ಧರ್ಮಶಾಲೆಯಲ್ಲಿ ಕುಳಿತಿದ್ದ ರಾಜನನ್ನು ನೋಡಿದ. ಹೊಂಬಣ್ಣದಿಂದ ಥಳಥಳನೆ ಹೊಳೆಯುತ್ತಿದ್ದ ಈ ವ್ಯಕ್ತಿ ರಾಜಕಳೆಯನ್ನು ಹೊಂದಿದ್ದನ್ನು ಕಂಡು ಪ್ರಭಾವಿತನಾದ. ಅವನಲ್ಲಿ ಸ್ನೇಹಭಾವ ಜಾಗೃತವಾಯಿತು. ಅವನನ್ನು ಕಂಡು ಅಲ್ಲಿಯೇ ಇರುವಂತೆ ಬಿನ್ನವಿಸಿಕೊಂಡು ತನ್ನ ಮನೆಗೆ ತೆರಳಿದ. ಮನೆಯಲ್ಲಿ ಬಗೆಬಗೆಯ ಪಕ್ವಾನ್ನಗಳನ್ನು ಮಾಡಿಸಿಕೊಂಡು, ಬಂಗಾರದ ತಟ್ಟೆಯಲ್ಲಿ ಬಡಿಸಿಕೊಂಡು ಮತ್ತೆ ದಾನಶಾಲೆಗೆ ಬಂದ. ಅವನು ಬರುವಷ್ಟರಲ್ಲಿ ಹಿಮಾಲಯದಿಂದ ಪಂಚ ಅಭಿಜ್ಞಾಪ್ರಾಪ್ತನಾದ ತಪಸ್ವಿಯೊಬ್ಬ ಬಂದು ಕುಳಿತಿದ್ದ. ಸ್ವಲ್ಪ ಹೊತ್ತಿಗೆ ನಂದಮೂಲ ಪರ್ವತದಿಂದ ಪ್ರತ್ಯೇಕ ಬುದ್ಧನೂ ಬಂದು ಕುಳಿತಿದ್ದ. ಶ್ರೀಮಂತ ವ್ಯಕ್ತಿ ರಾಜನಿಗೆ ಕೈ ತೊಳೆಯಲು ನೀರು ಕೊಟ್ಟು ಅತ್ಯುತ್ತಮ ಆಹಾರ ಪದಾರ್ಥಗಳನ್ನು ತುಂಬಿದ ಬಂಗಾರದ ತಟ್ಟೆಯನ್ನು ತಂದು ಕೊಟ್ಟ. ಅದನ್ನು ಪಡೆದುಕೊಂಡ ರಾಜ ನಿಧಾನಕ್ಕೆ ಮೇಲೆದ್ದು ತನ್ನ ಜೊತೆಗೆ ಬಂದಿದ್ದ ಪುರೋಹಿತನಿಗೆ ಕೊಟ್ಟ. ಪುರೋಹಿತ ಅದನ್ನು ಸ್ವೀಕರಿಸಿ, ಮೇಲೆದ್ದು ತಪಸ್ವಿಗೆ ಕೊಟ್ಟು ನಮಸ್ಕರಿಸಿದ.

ತಪಸ್ವಿ ತಟ್ಟೆಯನ್ನು ಎಡಗೈಯಲ್ಲಿ ಹಿಡಿದುಕೊಂಡು ಬಲಗೈಯಲ್ಲಿ ನೀರಿನ ಪಾತ್ರೆಯಿಂದ ಪ್ರತ್ಯೇಕ ಬುದ್ಧನ ಕೈಗೆ ನೀರು ಹಾಕಿ ನಂತರ ಊಟದ ತಟ್ಟೆಯನ್ನು ಅವನಿಗೆ ಕೊಟ್ಟು ನಮಸ್ಕರಿಸಿದ. ಪ್ರತ್ಯೇಕ ಬುದ್ಧ ಯಾವ ಯೋಚನೆಯನ್ನು ಮಾಡದೆ, ಸ್ವಲ್ಪ ದೂರದಲ್ಲಿ ಗೋಡೆಗೆ ಮುಖಮಾಡಿ ಕುಳಿತು, ಉಳಿದವರು ಅಲ್ಲಿ ಇದ್ದಾರೆಂಬುದನ್ನು ಮರೆತವನಂತೆ ಊಟ ಮಾಡತೊಡಗಿದ. ಅವನ ಊಟ ಮುಗಿದ ಮೇಲೆ ನಗರದ ಶ್ರೀಮಂತ ಯೋಚಿಸಿದ. ತಾನು ಕೊಟ್ಟಿದ್ದು ಆ ತೇಜಸ್ವಿ ವ್ಯಕ್ತಿಗೆ. ಆತ ಅದನ್ನು ಬ್ರಾಹ್ಮಣನಿಗೆ ಕೊಟ್ಟ. ಆ ಬ್ರಾಹ್ಮಣ ಅದನ್ನು ತಪಸ್ವಿಗೆ ನೀಡಿದ. ತಪಸ್ವಿ ತನಗೆ ಕೊಟ್ಟದ್ದೇ ತಡ ಪ್ರತ್ಯೇಕ ಬುದ್ಧ ಉಳಿದವರನ್ನು ವಿಚಾರಿಸದೆ ತಿಂದು ಬಿಟ್ಟ. ಇದು ಯಾಕೆ ಹೀಗೆ ಎಂದು ಒಬ್ಬೊಬ್ಬರನ್ನೇ ಕೇಳಿದ. ‘ನಿನ್ನನ್ನು ಕಂಡು ಪ್ರಭಾವಿತನಾದ ನಾನು ನಿನಗಾಗಿ ಶ್ರೇಷ್ಠ ಆಹಾರವನ್ನು ಮಾಡಿಸಿಕೊಂಡು ಬಂದೆ. ನೀನೇಕೆ ಅದನ್ನು ಬ್ರಾಹ್ಮಣನಿಗೆ ಕೊಟ್ಟೆ?’. ರಾಜ ಹೇಳಿದ, ‘ಬ್ರಾಹ್ಮಣ ನನ್ನ ಆಚಾರ್ಯ, ನನ್ನ ಮಾರ್ಗದರ್ಶಕ. ಆದ್ದರಿಂದ ಕೊಟ್ಟೆ’. ಬ್ರಾಹ್ಮಣ ಹೇಳಿದ, ‘ನಾನು ಗೃಹಸ್ಥ, ಮನುಷ್ಯಲೋಕದ ಭೋಗಗಳನ್ನು ಅನುಭವಿಸುತ್ತೇನೆ. ಆದ್ದರಿಂದ ವೃದ್ಧ, ತಪಸ್ವಿಗೆ ಊಟ ನೀಡಿದ್ದು ಉಚಿತ’. ತಪಸ್ವಿ ಹೇಳಿದ, ‘ನಾನು ಗಡ್ಡೆ, ಗೆಣಸುಗಳನ್ನು ಹುಡುಕಿಕೊಂಡು, ತಾವರೆದಂಟು, ಮಧು, ನೆಲ್ಲಿಕಾಯಿಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಊಟ ಮಾಡುತ್ತೇನೆ. ಆದರೆ ಯಾವ ಸಂಗ್ರಹವನ್ನು ಮಾಡದ, ಎಲ್ಲ ಪಾಪಗಳಿಂದ ದೂರವಾದ ಪ್ರತ್ಯೇಕ ಬುದ್ಧ ಮಾತ್ರ ಈ ಊಟಕ್ಕೆ ಅರ್ಹ’ ಎಂದ.

ದಾನವನ್ನು ನೀಡುವುದು ಮುಖ್ಯ. ಆದರೆ ಯಾರು ಅದಕ್ಕೆ ಅರ್ಹರು ಎಂದು ಯೋಚಿಸಿ ನೀಡುವುದು ಇನ್ನೂ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT