ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ ಹೇಳಿದ ಕಥೆ | ಅಲ್ಪರ ಸಹವಾಸ

Last Updated 13 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುವಾಗ ಬೋಧಿಸತ್ವ ಒಂದು ಸಿಂಹವಾಗಿ ಹುಟ್ಟಿದ್ದ. ನಂತರ ಕಾಲಕ್ರಮೇಣ ಅವನಿಗೊಬ್ಬ ಮಗ ಮತ್ತು ಮಗಳು ಹುಟ್ಟಿದರು. ಮಗನಿಗೆ ಮನೋಜ ಎಂದು ಹೆಸರಿಟ್ಟ.

ಮನೋಜ ಸಿಂಹಕ್ಕೂ ಮುಂದೆ ಮದುವೆಯಾಯಿತು. ಹೀಗೆ ಗುಹೆಯಲ್ಲಿ ಐದು ಸಿಂಹಗಳು ಜೊತೆಯಾಗಿ ಬದುಕುತ್ತಿದ್ದವು. ಮನೋಜ ಸಿಂಹ ಅತ್ಯಂತ ಬಲಿಷ್ಠವಾಗಿ ಬೆಳೆದಿತ್ತು. ಕಾಡಿನ ಯಾವ ಮೃಗವನ್ನಾದರೂ ಹೊಡೆದು ತರುವ ಶಕ್ತಿ ಅದಕ್ಕಿತ್ತು. ಅದು ಸಣ್ಣ, ಸಣ್ಣ ಪ್ರಾಣಿಗಳನ್ನು ಬೇಟೆಯನ್ನಾಡದೆ ದೊಡ್ಡ ದೊಡ್ಡ ಕೋಣಗಳನ್ನು, ಆನೆಗಳನ್ನು ಹೊಡೆದು ಇಡೀ ಪರಿವಾರಕ್ಕೆ ಮಾಂಸವನ್ನು ತರುತ್ತಿತ್ತು.

ಒಂದು ದಿನ ಹೀಗೆ ಕೋಣದ ಬೇಟೆಗೆ ಹೊರಟಾಗ ಒಂದು ನರಿ ಅಸಹಾಯಕವಾಗಿ ರಸ್ತೆಯ ಬದಿಯಲ್ಲಿ ಬಿದ್ದಿದ್ದು ಕಂಡಿತು. ಮೊದಲೇ ಸಾಯುವಂತಿದ್ದ ಈ ಪುಟ್ಟ ಪ್ರಾಣಿಯನ್ನೇಕೆ ಹೊಡೆಯುವುದು ಎಂದುಕೊಂಡು ಅದನ್ನು ಮಾತನಾಡಿಸಿತು. ‘ಯಾಕಯ್ಯಾ, ಹೀಗೆ ಬಿದ್ದುಕೊಂಡಿದ್ದೀ?’ ಎಂದು ಕೇಳಿತು. ಚಾಣಾಕ್ಷ ನರಿ, ‘ಪ್ರಭು, ನಾನು ತಮ್ಮನ್ನು ಕಾಣುವುದಕ್ಕಾಗಿಯೇ ಹೀಗೆ ನಮಸ್ಕಾರ ಮಾಡಿಕೊಂಡು ಕುಳಿತಿದ್ದೇನೆ. ತಮ್ಮ ದೃಷ್ಟಿ ನನ್ನಂತಹ ಅಲ್ಪನ ಮೇಲೆ ಬಿದ್ದರೆ ಸಾಕು, ಉದ್ಧಾರವಾಗಿಬಿಡುತ್ತೇನೆ’ ಎಂದು ನಾಟಕದ ಮಾತುಗಳನ್ನಾಡಿತು.

ಸಂತೋಷಗೊಂಡ ಮನೋಜ ಸಿಂಹಕ್ಕೆ, ‘ಪ್ರಭು, ನನಗೇನೂ ಬೇಕಿಲ್ಲ, ನಿಮ್ಮ ಸೇವೆ ಮಾಡುವ ಅವಕಾಶ ದೊರೆತರೂ ಸಾಕು’ ಎಂದಿತು. ಸಿಂಹ, ಈ ನರಿಯನ್ನು ನಂಬಿ ಗುಹೆಗೆ ಕರೆ ತಂದಿತು. ತಂದೆ ಬೋಧಿಸತ್ವ ಸಿಂಹ, ‘ಮಗೂ, ನೀನು ಕಾಡಿನ ರಾಜ. ಇಂಥ ಅಲ್ಪರನ್ನು ನಂಬಬೇಡ. ಅದರಲ್ಲೂ ಈ ನರಿ ತುಂಬ ಕುತಂತ್ರಿ, ಯಾವಾಗ ಹೇಗೆ ತೊಂದರೆ ಕೊಟ್ಟೀತು ಎಂದು ಹೇಳುವುದು ಕಷ್ಟ’ ಎಂದು ಎಚ್ಚರಿಸಿತು. ಆದರೆ ಶಕ್ತಿಯ ಮದದಿಂದ ಕೊಬ್ಬಿದ್ದ ಮನೋಜ ಈ ಮಾತುಗಳನ್ನು ಕೇಳಿಸಿಕೊಳ್ಳಲಿಲ್ಲ.

ಸಿಂಹ ಹೊಡೆದು ತಂದ ಬೇಟೆಯಲ್ಲಿ, ಹೊಟ್ಟೆ ತುಂಬ ಆಹಾರವನ್ನು ತಿಂದು ನರಿ ಕೊಬ್ಬಿತು. ಒಂದು ದಿನ, ‘ಪ್ರಭು, ತಮ್ಮಂತಹ ಶಕ್ತಿಶಾಲಿಗಳು ಈ ಕೋಣಗಳನ್ನು ಹೊಡೆಯುವುದು ದೊಡ್ಡದೇನಲ್ಲ. ತಮ್ಮಂತಹವರು ಹೊಡೆದರೆ ಚುರುಕಾದ ಕುದುರೆಗಳನ್ನು ಹೊಡೆಯಬೇಕು. ಆಗ ನಿಮ್ಮ ಕೀರ್ತಿ ಹೆಚ್ಚುತ್ತದೆ’ ಎಂದಿತು. ‘ಈ ಕುದುರೆಗಳು ಎಲ್ಲಿರುತ್ತವೆ?’ ಎಂದು ಕೇಳಿತು ಸಿಂಹ. ‘ಪ್ರಭು, ಕುದುರೆಗಳು ವಾರಾಣಸಿ ನಗರದ ಹೊರವಲಯದಲ್ಲಿಯೇ ಓಡಾಡುತ್ತಿರುತ್ತವೆ. ರಾಜ ಅವುಗಳಿಗೋಸ್ಕರ ಒಂದು ದೊಡ್ಡ ಅಶ್ವಶಾಲೆಯನ್ನು ಕಟ್ಟಿಸಿದ್ದಾನೆ. ಅಲ್ಲಿ ನೂರಾರು ಕುದುರೆಗಳಿವೆ’ ಎಂದು ತಲೆ ತುಂಬಿತು.

ತಂದೆ ಬೋಧಿಸತ್ವ ಹೇಳಿದರೂ ಕೇಳದೆ ಕುದುರೆಯ ಬೇಟೆಗೆ ನಗರಕ್ಕೆ ಹೋಗಿ ಒಂದು ಕುದುರೆಯನ್ನು ಹೊಡೆದು ತಂದಿತು. ಬೋಧಿಸತ್ವ ಸಿಂಹ ಹೇಳಿತು. ‘ಆಯ್ತು, ಇನ್ನು ಮೇಲೆ ಕುದುರೆಯ ಬೇಟೆ ಬೇಡ. ಯಾಕೆಂದರೆ ರಾಜರ ಬಳಿ ಶ್ರೇಷ್ಠ ಧನುರ್ಧರರಿದ್ದಾರೆ. ಅವರು ಮರೆಯಲ್ಲಿ ನಿಂತು ನಿನ್ನನ್ನು ಹೊಡೆದುಬಿಡುತ್ತಾರೆ’. ನರಿಯ ಬೋಧೆಗೆ ಬಲಿಯಾದ ಮನೋಜ ಮತ್ತೆ ಕುದುರೆಯ ಲಾಯಕ್ಕೆ ನುಗ್ಗಿದಾಗ ಅಲ್ಲಿ ಅಡಗಿ ಕುಳಿತಿದ್ದ ಮೂರು, ನಾಲ್ಕು ಜನ ಬಿಲ್ಲುಗಾರರು ಚೂಪಾದ ಬಾಣಗಳನ್ನು ಬಿಟ್ಟು ಅದನ್ನು ಕೊಂದು ಹಾಕಿದರು.

ಬೋಧಿಸತ್ವ ಹೇಳಿದ, ‘ನೀವು ಯಾವ ತಪ್ಪು ಮಾಡಿದರೂ ಸರಿಮಾಡಿಕೊಳ್ಳಬಹುದು. ಆದರೆ ಅಲ್ಪರ ಸಹವಾಸ ಮಾಡಿದರೆ ಜೀವನದಲ್ಲಿ ಮೇಲಕ್ಕೆ ಏರುವುದು ಮತ್ತು ಯಶಸ್ಸನ್ನು ಕಾಣುವುದು ಅಸಾಧ್ಯ’. ಈ ಮಾತು ಎಂದೆಂದಿಗೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT