ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಆತ್ಮಗತಿಯ ಧ್ಯಾನ

Last Updated 17 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಏನೆ ನಿಜವಿರಲಿ ಮತ್ತೇನೆ ಸುಳ್ಳಾಗಿರಲಿ |
ನಾನೆನಿಪ್ಪಾತ್ಮವೊಂದಿರುವುದನುಭವಿಕ ||
ಹಾನಿಗಾವಾತನಾತ್ಮವನುಮಂ ಕೆಡಹದಿರು |
ಧ್ಯಾನಿಸಾತ್ಮದ ಗತಿಯ – ಮಂಕುತಿಮ್ಮ || 324 ||

ಪದ-ಅರ್ಥ: ನಾನೆನಿಪ್ಪಾತ್ಮವೊಂದಿರುವುದನುಭವಿಕ=ನಾನು+ಎನಿಪ್ಪ(ಎನ್ನುವ)+ಆತ್ಮವೊಂದು+ಇರುವುದು+ಅನುಭವಿಕ (ಅನುಭವಕ್ಕೆ ಬಂದದ್ದು), ಹಾನಿಗಾವಾತನಾತ್ಮವನುಮಂ=ಹಾನಿಗೆ+ಆವಾತನ(ಮತ್ತೊಬ್ಬನ)+ಆತ್ಮವನುಮ(ಆತ್ಮವನ್ನು), ಧ್ಯಾನಿಸಾತ್ಮದ=ಧ್ಯಾನಿಸು+ಆತ್ಮದ, ಗತಿಯ=ರೀತಿಯನ್ನು.

ವಾಚ್ಯಾರ್ಥ: ಯಾವುದೇ ಸತ್ಯವಿರಲಿ, ಯಾವುದೇ ಸುಳ್ಳಿರಲಿ, ನಾನು ಎನ್ನುವವನಿದ್ದೇನೆ, ನನಗೊಂದು ಆತ್ಮವಿದೆ ಎನ್ನುವುದು ಅನುಭವಕ್ಕೆ ಬಂದ ವಿಚಾರ. ಸ್ವಂತದ ವೃದ್ಧಿಗೋಸುಗ ಮತ್ತೊಬ್ಬರ ಆತ್ಮಕ್ಕೆ ಹಾನಿಮಾಡುವುದು ಬೇಡ. ಆತ್ಮದ ಉನ್ನತಿಯ ಗತಿಯನ್ನು ಧ್ಯಾನಮಾಡು.

ವಿವರಣೆ: ಜಗತ್ತಿನಲ್ಲಿ ಯಾವುದು ಸತ್ಯವೋ, ಯಾವುದು ಸುಳ್ಳೋ ತಿಳಿಯುವುದಿಲ್ಲ. ಕೆಲವರು ದೇವರಿದ್ದಾನೆ ಎನ್ನುತ್ತಾರೆ ಮತ್ತೆ ಕೆಲವರು ದೇವರು ಬರೀ ಮನುಷ್ಯನ ಕಲ್ಪನೆ ಎನ್ನುತ್ತಾರೆ. ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದು ಬೇಡ. ಅವನಿದ್ದರೆ ಸರಿ, ಇರದಿದ್ದರೆ ನಮಗಾವ ತೊಂದರೆಯೂ ಇಲ್ಲ. ಆದರೆ ಒಂದು ಮಾತ್ರ ಸತ್ಯ, ನಾನು ಇದ್ದೇನೆ. ನನಗೊಂದು ಆಸ್ತಿತ್ವವಿದೆ. ನನಗೆ ಆತ್ಮವಿದೆಯೆಂದೂ ತಿಳಿದಿದೆ. ಯಾಕೆಂದರೆ ನನ್ನ ಹೆಸರು ರಾಮ ಎಂದು ಹೇಳಿದರೆ ಅಲ್ಲಿ ಇಬ್ಬರಿರಬೇಕು. ನಾನು ಮತ್ತು ರಾಮ. ಈ ನಾನು ಎನ್ನುವವರು ಯಾರು? ಇದು ನನ್ನ ಪೆನ್ನು ಎಂದರೆ ನಾನು ಮತ್ತು ಪೆನ್ನು ಎರಡೂ ಬೇರೆ ವಸ್ತುಗಳು. ಇದು ನನ್ನ ಕೈ, ಇದು ನನ್ನ ಕಾಲು, ಇದು ನನ್ನ ತಲೆ ಎನ್ನುತ್ತೇನೆ. ಅಂದರೆ, ನನ್ನ ಕೈ. ಕಾಲು, ತಲೆ, ರಾಮನಲ್ಲ. ಯಾವೊಂದು ಪ್ರತ್ಯೇಕ ಅವಯವವೂ ರಾಮನಲ್ಲ. ಹಾಗಾದರೆ ಈ ರಾಮನೆಂಬುವನು ಯಾರು? ನನ್ನಲ್ಲಿಯೇ ಇದ್ದು, ನನ್ನನ್ನು ಆಡಿಸುವ, ನಿಗ್ರಹಿಸುವ ಒಂದು ಯಾವುದೋ ಶಕ್ತಿ ಇರಬಹುದಲ್ಲ. ಅದನ್ನು ನನ್ನ ಆತ್ಮ ಎಂದು ಭಾವಿಸಿಕೊಂಡಿದ್ದೇನೆ. ಇದು ನಮ್ಮ ಅನುಭವಕ್ಕೆ ಬಂದ ವಿಷಯ.

ಇನ್ನೊಂದು ನಮ್ಮ ತಿಳಿವಳಿಕೆಗೆ ಬಂದದ್ದೆಂದರೆ, ನಮ್ಮ ಆತ್ಮಶಕ್ತಿಯನ್ನು ಬೆಳಸುತ್ತಾ ಹೋಗುವುದೇ ಬದುಕಿನ ಪರಮ ಉದ್ದೇಶ. ಇದಕ್ಕೆ ನಮ್ಮ ಹಿರಿಯರು ನೀಡಿದ ಮಾರ್ಗದರ್ಶನ ಪ್ರಯೋಜನಕಾರಿಯಾದದ್ದು. ಮೊದಲು ಮನಸ್ಸನ್ನು ಶೋಧಿಸಿ, ಶೋಧಿಸಿ ತಿಳಿಯಾಗಿ ಮಾಡಿಕೊಳ್ಳಬೇಕಾದದ್ದು. ಅದರಿಂದ ಮನಸ್ಸು ಸಂವೇದನಾಶೀಲವಾಗುತ್ತದೆ. ಗಾಳಿ ಬೀಸಿದರೆ ಹದವಾಗಿ ಮೀಟಿ ಇಟ್ಟ ವೀಣೆಯ ತಂತಿ ಅಲುಗಿ ಮಧುರ ಧ್ವನಿ ಬರುವಂತೆ, ಹೃದಯ ಸ್ಪಂದಿಸುತ್ತದೆ. ಆಗ ನಮ್ಮ ನೀತಿಯೋಗ್ಯತೆಗಳನ್ನು ಬೆಳೆಸಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ.

ಒಬ್ಬ ಸಂಗೀತಕಾರ ತನ್ನ ಕಂಠವನ್ನು ಜತನದಿಂದ ಕಾಪಾಡಿಕೊಳ್ಳುವಂತೆ, ಚಿತ್ರಕಾರ ತನ್ನ ಕಣ್ಣುಗಳನ್ನು ನೋಡಿಕೊಳ್ಳುವಂತೆ, ಒಬ್ಬ ಶಸ್ತ್ರಚಿಕಿತ್ಸಕ ತನ್ನ ಉಪಕರಣಗಳನ್ನು ಶುದ್ಧವಾಗಿಟ್ಟುಕೊಳ್ಳುವಂತೆ ಪ್ರತಿಯೊಬ್ಬ ಮನುಷ್ಯ ತನ್ನ ಅಂತಃಸಾಕ್ಷಿ (con science) ಯನ್ನು ಒಣಗಿಹೋಗದಂತೆ ಕಾಯ್ದುಕೊಳ್ಳಬೇಕು. ಆದರೆ ಕಗ್ಗ ಇಲ್ಲಿ ಒಂದು ಎಚ್ಚರಿಕೆಯನ್ನು ನೀಡುತ್ತದೆ. ನಮ್ಮ ಆತ್ಮಪ್ರಜ್ಞೆಯನ್ನು ಊರ್ಜಿತಗೊಳಿಸಿಕೊಳ್ಳುವ ಆತುರದಲ್ಲಿ, ಸಂಭ್ರಮದಲ್ಲಿ ಮತ್ತೊಬ್ಬರ ಆತ್ಮದ ಪ್ರಗತಿಗೆ ಅಡ್ಡವಾಗಬಾರದು.

ನಮ್ಮ ಪ್ರಗತಿಯನ್ನು ಕಾಣುವ ಉತ್ಸಾಹದಲ್ಲಿ ಅದು ಮತ್ತೊಬ್ಬರ ಸಾಧನೆಯ ಮಾರ್ಗದಲ್ಲಿ ಅಡಚಣೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮದೆ. ಜೀವ ಜೀವಗಳ ನಡುವೆ ಭಿನ್ನತೆ ಇದೆ. ಪ್ರತಿಯೊಂದು ಜೀವ ಅದರ ಶಕ್ತಿಯಂತೆ ಬೆಳೆಯುತ್ತದೆ. ಅಲ್ಲಿ ಪೈಪೋಟಿ ಇಲ್ಲ. ತನ್ನ ಜೀವಪ್ರಗತಿಯ ಜೊತೆಗೆ ಉಳಿದವುಗಳ ಬೆಳವಣಿಗೆಯ ಹದವನ್ನು ತಿಳಿದು ಸಹಕರಿಸುವುದೆಆತ್ಮಗತಿಯಧ್ಯಾನಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT