ಬುಧವಾರ, ಜೂನ್ 23, 2021
22 °C

ಬೆರಗಿನ ಬೆಳಕು: ಸ್ಥಿರವಾದ ಪೌರುಷತ್ವ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ತೆರಪನರಿಯದೆ ಪರಿವ ಕಾಲಪ್ರವಾಹದಲಿ |
ಪುರುಷರಚಿತಗಳೆನಿತೊ ತೇಲಿಹೋಗಿಹವು ||
ಪುರ ರಾಪ್ಟ್ರ ದುರ್ಗಗಳು, ಮತನೀತಿ ಯುಕ್ತಿಗಳು |
ಪುರುಷತನ ನಿಂತಿಹುದು – ಮಂಕುತಿಮ್ಮ || 411 ||

ಪದ-ಅರ್ಥ: ತೆರಪನರಿಯದೆ=ಬಿಡುಗಡೆಯಿಲ್ಲದೆ, ಪರಿವ=ಹರಿಯುವ, ಪುರುಷರಚಿತಗಳೆನಿತೊ=ಪುರುಷರಚಿತಗಳು (ಮಾನವ ನಿರ್ಮಿತ)+
ಎನಿತೊ(ಎಷ್ಟೋ).

ವಾಚ್ಯಾರ್ಥ: ಬಿಡುವಿಲ್ಲದೆ ಹರಿಯುತ್ತಿರುವ ಕಾಲದ ಪ್ರವಾಹದಲ್ಲಿ ಮಾನವ ನಿರ್ಮಿತವಾದ ನಗರಗಳು, ರಾಷ್ಟ್ರಗಳು, ಕೋಟೆಗಳು, ಮತಗಳು, ನೀತಿಗಳು, ಯುಕ್ತಿಗಳೆಲ್ಲ ತೇಲಿ ಹೋಗಿವೆ. ಆದರೆ ಪುರುಷತನ ಮಾತ್ರ ನಿಂತಿದೆ.

ವಿವರಣೆ: ಈ ಕಗ್ಗ ಹಿಂದಿನ ಕಗ್ಗದ ಮುಂದುವರೆದ ಚಿಂತನೆ. ಕಾಲಪ್ರವಾಹ ಎಡೆಬಿಡದೆ ಹರಿಯುತ್ತಿದೆ. ಇಂಥ ಪ್ರವಾಹದಲ್ಲಿ ಮನುಷ್ಯ ನಿರ್ಮಿತವಾದ ಅನೇಕ ಸೃಷ್ಟಿಗಳು ಕೊಚ್ಚಿಕೊಂಡು ಹೋಗಿವೆ.

ನಾನು ನಾಲ್ಕಾರು ವರ್ಷಗಳ ಹಿಂದೆ ಬಿಹಾರದ ವೈಶಾಲಿ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿ ಪುರಾತತ್ವ ಇಲಾಖೆಯವರು ನನ್ನನ್ನು ಕರೆದುಕೊಂಡು ಹೋದರು. ಅಲ್ಲಿ ಉತ್ಖನನ ಮಾಡಿದ ಪ್ರದೇಶದಲ್ಲಿ ನಾನು ಸುತ್ತಾಡಿದಾಗ ರೋಮಾಂಚನವಾಗಿತ್ತು. ಅದು ಸುಮಾರು ಅರವತ್ತು-ಎಪ್ಪತ್ತು ಎಕರೆಗಳಷ್ಟು ವಿಸ್ತಾರವಾದ ಜಾಗ. 2600 ವರ್ಷಗಳ ಹಿಂದೆ ಅಷ್ಟು ದೊಡ್ಡ ಬೌದ್ಧವಿಹಾರವನ್ನು ನಿರ್ಮಿಸಿದ್ದರಲ್ಲ, ಇದೇ ನೆಲದಲ್ಲಿ ಬುದ್ಧ ಓಡಾಡಿದ್ದನಲ್ಲ, ಇದೇ ಜಾಗೆಯಲ್ಲಿ ಅಪರೂಪದ ಸುಂದರಿಯಾದ ಆಮ್ರಪಾಲಿ ಬುದ್ಧನ ಶಿಷ್ಯೆಯಾದಳಲ್ಲ ಎಂದು ನೆನೆದಾಗ ಅದ್ಭುತವೆನ್ನಿಸಿತ್ತು. ಆದರೆ ಅಂದು ಅಷ್ಟು ಸುರಮ್ಯವಾಗಿದ್ದ, ಅಧ್ಯಾತ್ಮಿಕ ಶಕ್ತಿಯ ಕೇಂದ್ರವಾಗಿದ್ದ ಸ್ಥಳ ಇಂದು ಪಳೆಯುಳಿಕೆ ಮಾತ್ರ.

ಅಭೇದ್ಯ, ಅಜಿಂಕ್ಯವೆನ್ನಿಸಿದ ರೋಮ್ ಸಾಮ್ರಾಜ್ಯ, ಈಜಿಪ್ಟ್‌ನ ಮಹಾನ್ ನಗರಗಳು, ಚೀನಾ ದೇಶದ ಚಕ್ರವರ್ತಿ ಪರಂಪರೆಗಳು ಇಂದು ಮಾಯವಾಗಿವೆ. ಭಾರತ ದೇಶದಲ್ಲಿ ಮಹಾಭಾರತದ ಹಸ್ತಿನಾಪುರ ಈಗಿಲ್ಲ. ಇಂದ್ರಪ್ರಸ್ಥ, ದೇಶದ ರಾಜಧಾನಿಯ ಒಂದು ಬಡಾವಣೆಯಾಗಿದೆ. ರಾಮನ ಅಯೋಧ್ಯೆ, ರಾವಣನ ಲಂಕೆ, ಚಾಣಕ್ಯ ಕಟ್ಟಿದ ಪ್ರಬಲ ಮಗಧದೇಶ, ಚಕ್ರವರ್ತಿ ಅಶೋಕನ ಸಾಮ್ರಾಜ್ಯಗಳೆಲ್ಲ ಇಂದು ಕಾಣದಾಗಿವೆ. ರಸ್ತೆಯ ಬದಿಯಲ್ಲಿ ರತ್ನ-ಮಾಣಿಕ್ಯಗಳನ್ನಿಟ್ಟು ಮಾರುತ್ತಿದ್ದ ವಿಜಯನಗರ ಸಾಮ್ರಾಜ್ಯ, ತನ್ನ ಕೋಟೆ ಕೊತ್ತಲಗಳನ್ನು ಕಳೆದುಕೊಂಡು, ಹಳೆಯದನ್ನು ನೆನಪಿಸುವ ಪ್ರವಾಸಿ ಕ್ಷೇತ್ರವಾಗಿದೆ. ಆಗ್ರಾದ ಕೋಟೆಗಳು ಕುಸಿಯುತ್ತಿವೆ, ಬಿಜಾಪುರದ ಮುಲ್ಕ ಮೈದಾನ ತೋಫು ಸದ್ದಿಲ್ಲದೆ ಮಲಗಿದೆ.

ಅಂದರೆ, ಹಿಂದೆ, ಒಂದು ಕಾಲದಲ್ಲಿ ಶ್ರೇಷ್ಠತೆಯ ಕುರುಹುಗಳಾಗಿದ್ದ, ಮನುಷ್ಯ ನಿರ್ಮಿತವಾದ ನಗರಗಳು, ದೇಶಗಳು, ಕೋಟೆ ಕೊತ್ತಲುಗಳು, ಆಗ ಇದ್ದ ಮತಗಳು, ನೀತಿ ಮೌಲ್ಯಗಳು, ಎಲ್ಲವೂ ಕಾಲದ ಪ್ರವಾಹದಲ್ಲಿ ನಿಲ್ಲದೆ ಹೋಗಿವೆ. ಆದರೆ ಹೊಸ ಹೊಸ ನಗರಗಳು, ಹೊಸ ವಾಹನ ಸೌಕರ್ಯಗಳು, ವಿಜ್ಞಾನದ ಅವಿಷ್ಕಾರಗಳು ಪ್ರಪಂಚವನ್ನು ನವನವೀನವನ್ನಾಗಿ ಮಾಡಿವೆ. ಹಳೆಯದು ಕಳೆದು ಹೋದರೂ, ಹೊಸದನ್ನು ಪುನರ್ನಿಮಿಸುವ ಪೌರುಷ ಶಕ್ತಿ ಅಚಲವಾಗಿದೆ. ಅದೇ ಭವಿಷ್ಯದಲ್ಲಿ ಆಸೆಯನ್ನು ಕೊನರಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.