ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪಾರಾದ ರಾಜ ಪರಿವಾರ

Last Updated 10 ಮೇ 2021, 19:31 IST
ಅಕ್ಷರ ಗಾತ್ರ

ವಿದೇಹಿ ರಾಜನನ್ನು ಸುರಂಗದ ಮೂಲಕ ಪಾರು ಮಾಡಿದ ಬೋಧಿಸತ್ವನಾದ ಮಹೋಷಧಕುಮಾರ, ನೌಕೆಯಲ್ಲಿ ರಾಜನನ್ನು ಕೂರಿಸಿ ಅವನೊಂದಿಗೆ ತೂಳನಿ ರಾಜ ಬ್ರಹ್ಮದತ್ತನ ತಾಯಿ ತಲತಲಾದೇವಿ, ಪಟ್ಟದರಾಣಿ ನಂದಾದೇವಿ, ಮಗಳು ಪಂಚಾಲಚಂಡಿ ಮತ್ತು ರಾಜಕುಮಾರ ಪಂಚಾಲಚಂಡರನ್ನು ಕೂರಿಸಿದ. ರಾಜನಿಗೆ ಹೇಳಿದ, ‘ನೀವು ಇಲ್ಲಿಂದ ಹೊರಟು, ಬೇಗ ಮಿಥಿಲೆಯನ್ನು ಸೇರಿಬಿಡಿ. ಆದರೆ ರಾಜಮಾತೆ ತಲತಲಾದೇವಿಯನ್ನು, ಪಟ್ಟದರಾಣಿ ನಂದಾದೇವಿಯವರನ್ನು ನಿಮ್ಮ ತಾಯಿಯಂತೆಯೇ ನೋಡಿಕೊಳ್ಳಿ.

ರಾಜಕುಮಾರನನ್ನು ನಿಮ್ಮ ಮಗನಂತೆಯೇ ಕಾಣಿ. ಈ ಸುರಸುಂದರಿ ಪಂಚಾಲಚಂಡಿ, ನಿಮ್ಮ ರಾಣಿ. ಆಕೆಯನ್ನು ಮದುವೆಯಾಗಿ ಸಂತೋಷಪಡಿ’. ವಿದೇಹನಿಗೆ ಗಾಬರಿಯಾಯಿತು. ‘ಯಾಕೆ ನೀನು ಹೀಗೆ ಹೇಳುತ್ತಿದ್ದೀಯೆ? ನೀನು ನಮ್ಮೊಂದಿಗೆ ಬರುವುದಿಲ್ಲವೆ? ನೀನಿಲ್ಲದೆ ನಾನು ಇರಲಾರೆ. ಬೇಗನೇ ನೌಕೆಯನ್ನೇರು’ ಎಂದ ರಾಜ. ಮಹೋಷಧಕುಮಾರ, ‘ಪ್ರಭೂ, ನಾನು ನಿಮ್ಮೊಂದಿಗೆ ಬರುವುದು ಸರಿಯಲ್ಲ. ನನ್ನ ಸೈನಿಕರೆಲ್ಲ ಇಲ್ಲಿದ್ದಾರೆ. ಅವರ ಪ್ರಾಣವನ್ನು ಕಾಪಾಡುವುದು ನನ್ನ ಜವಾಬ್ದಾರಿ. ನನ್ನೊಂದಿಗೆ ಅನೇಕ ಕುಶಲಕರ್ಮಿಗಳು, ಶಿಲ್ಪಿಗಳು, ವೈದ್ಯರು ಬಂದು, ಹಗಲು ರಾತ್ರಿ ದುಡಿದಿದ್ದಾರೆ.

ನಾನು ಅವರಿಗೆ ಅಭಾರಿಯಾಗಿದ್ದೇನೆ. ಅವರಿಗೆ ಯಾವ ತೊಂದರೆಯೂ ಆಗದಂತೆ ಕರೆದುಕೊಂಡು ಬರಬೇಕಾಗಿದೆ. ನೀವು ಹೊರಡಿ. ದಾರಿಯಲ್ಲಿ ನಿಮ್ಮ ಸೌಕರ್ಯಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದೇನೆ’ ಎಂದ. ವಿದೇಹ ರಾಜ, ‘ಅಲ್ಲಪ್ಪ, ಬ್ರಹ್ಮದತ್ತನ ದೊಡ್ಡ ಸೈನ್ಯದ ಮುಂದೆ ನೀವು ಕೆಲವೇ ಜನ ಹೇಗೆ ಹೋರಾಡಿ ಪಾರಾಗುತ್ತೀರಿ?’ ಎಂದು ಕೇಳಿದ. ಮಹೋಷಧಕುಮಾರ ಮುಗುಳ್ನಕ್ಕು ‘ಸ್ವಾಮಿ, ಬುದ್ಧಿವಂತನ ಕಡೆಗೆ ಅಲ್ಪಸೇನೆ ಇದ್ದರೂ ಮೂರ್ಖರ ಮಹಾಸೇನೆಯನ್ನು ಗೆದ್ದು ಬಿಡುತ್ತಾನೆ. ನಾನು ನಿಮ್ಮನ್ನು ಮಿಥಿಲೆಯಲ್ಲಿ ಕಾಣುತ್ತೇನೆ’ ಎಂದು ಕೈ ಬೀಸಿ ಹೊರಟ.

ವಿದೇಹ ರಾಜನಿಗೆ ಅತ್ಯಂತ ಸಂತೋಷವಾಗಿತ್ತು. ಬ್ರಹ್ಮದತ್ತನ ರಾಜ್ಯದಿಂದ ಪಾರಾದದ್ದು ಮತ್ತು ಪಂಚಾಲಚಂಡಿಯಂಥ ಅಪ್ಸರೆ ಅವನೊಂದಿಗಿದ್ದದ್ದು ಅವನ ಮನೋರಥವನ್ನು ಪೂರೈಸಿತ್ತು. ವಿದೇಹರಾಜ ನದಿಯಲ್ಲಿ ಯೋಜನ ದೂರ ದಾಟಿದ ಮೇಲೆ ಮಹೋಷಧಕುಮಾರ ಮರಳಿ ತನ್ನ ಮನೆಗೆ ಬಂದು ಶ್ರೇಷ್ಠ ಭೋಜನ ಮಾಡಿ ಮಲಗಿದ. ಅತ್ತ ಕಡೆಗೆ ಬ್ರಹ್ಮದತ್ತನಿಗೆ ಇದಾವುದೂ ತಿಳಿದೇ ಇರಲಿಲ್ಲ. ಆತ ಹೇಗಿದ್ದರೂ, ವಿದೇಹ ರಾಜ ಹಾಗೂ ಮಹೋಷಧಕುಮಾರ ತನ್ನ ನಗರದಲ್ಲೇ ಹೊಸದಾಗಿ ಕಟ್ಟಿಸಿಕೊಂಡ ಅರಮನೆಯಲ್ಲಿರುವುದರಿಂದ ಅವರನ್ನು ಇಂದೇ ಕೊಂದುಬಿಡಬೇಕೆಂದು ತೀರ್ಮಾನಿಸಿದ.

ತಾನು ಬಲಶಾಲಿಗಳಾಗಿದ್ದ ಸಾವಿರ ಸೈನಿಕರು, ಕುದುರೆ ಸವಾರರು, ಆನೆದಳವನ್ನು ತೆಗೆದುಕೊಂಡು ಮಹೋಷಧಕುಮಾರನಿದ್ದ ಅರಮನೆಗೆ ಹೋದ. ಅದನ್ನು ತಿಳಿದ ಕುಮಾರ ಲಕ್ಷ ಕಹಾಪಣದ ಕಾಶಿವಸ್ತ್ರವನ್ನು ಉಟ್ಟುಕೊಂಡು, ಬಂಗಾರದ ಪಾದುಕೆಗಳನ್ನು ಧರಿಸಿ, ಆಪ್ಸರೆಯಂತಿದ್ದ ಸುಂದರಿಯರಿಂದ ಗಾಳಿ ಹಾಕಿಸಿಕೊಳ್ಳುತ್ತ ಕುಳಿತಿದ್ದ. ರಾಜ ಅವನ ಮೇಲೆ ಆಕ್ರಮಣ ಮಾಡಲು ಬಂದಾಗ ಹೇಳಿದ, ‘ರಾಜಾ, ನಿನ್ನ ತಾಯಿ, ಹೆಂಡತಿ, ಮಗಳು, ಮಗ ಎಲ್ಲರೂ ನಮ್ಮ ರಾಜ ವಿದೇಹನೊಡನೆ ಮಿಥಿಲೆಯನ್ನು ಸೇರಿದ್ದಾರೆ.

ನನಗೆ ಒಂದು ಪೆಟ್ಟು ಬಿದ್ದರೆ ಅಲ್ಲಿ ಪ್ರತಿಯೊಬ್ಬರಿಗೂ ಹತ್ತು ಪೆಟ್ಟು ಬೀಳುತ್ತದೆ, ಹುಷಾರ್’. ಅಷ್ಟರಲ್ಲಿ ರಾಜನ ಸೇನಾಪತಿ ಬಂದು ಅರಮನೆಯಲ್ಲಿ ಇವರಾರೂ ಇಲ್ಲ. ವಿದೇಹ ರಾಜನೊಡನೆ ಹೋಗಿದ್ದಾರೆ ಎಂದು ಹೇಳಿದಾಗ, ಮತ್ತೊಮ್ಮೆ ಸೋಲನ್ನು ಅನುಭವಿಸಿ ಬ್ರಹ್ಮದತ್ತ ಸುಮ್ಮನಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT