ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮೋಸದ ಸೌಂದರ್ಯ

Last Updated 11 ಮೇ 2021, 19:45 IST
ಅಕ್ಷರ ಗಾತ್ರ

ಕುಸುಮ ಕೋಮಲಗಾತ್ರ ಶೂರ್ಪಣಖಿಗರಿದಾಯ್ತೆ?|
ವಿಷದ ಪೂತನಿ ನಯನ ಪಕ್ಷದೊಳಗಿರಳೆ ? ||
ಮುಸಿನಗುವಿನೊಳಗಿರಲಶಕ್ಯವೆ ಪಿಶಾಚಿಕೆಗೆ ?|
ಮೃಷೆಯೊ ಮೈ ಬೆಡಗೆಲ್ಲ – ಮಂಕುತಿಮ್ಮ || 416 ||

ಪದ-ಅರ್ಥ: ಕುಸುಮಕೋಮಲಗಾತ್ರ=ಹೂವಿನಂಥ ಮೃದುವಾದ ದೇಹ, ಸೂರ್ಪಣಖಿಗರಿದಾಯ್ತೆ=ಶೂರ್ಪಣಖಿಗೆ +ಅರಿದು(ಅಸಾಧ್ಯ)+ ಆಯ್ತೆ, ನಯನಪಕ್ಷ=ನಯನ(ಕಣ್ಣು)+ಪಕ್ಷ(ರೆಪ್ಪೆ), ಮುಸಿನಗುವಿನೊಳಗಿರಲಶಕ್ಯವೆ=ಮುಸಿನಗುವಿನೊಳು (ಹುಸಿ ನಗುವಿನಲ್ಲಿ)+ಇರಲು+ಅಶಕ್ಯವೆ, ಪಿಶಾಚಿಕೆಗೆ=ಪೈಶಾಚಿಕ ಕೃತ್ಯಕ್ಕೆ, ಮೃಷೆ=ವ್ಯಥೆ, ಸುಳ್ಳು.

ವಾಚ್ಯಾರ್ಥ: ಶೂರ್ಪಣಖಿಗೆ ಸುಂದರರೂಪವನ್ನು ಧರಿಸಲು ಕಷ್ಟವಾಯ್ತೇ?, ವಿಷವನ್ನು ತುಂಬಿಕೊಂಡ ಪೂತನಿಗೆ ಸುಂದರವಾದ ನಗುನಗುವ ಕಣ್ಣುಗಳನ್ನು ಹೊಂದುವುದು ಪರಿಶ್ರಮವೆ? ಪೈಶಾಚಿಕ ಕೃತ್ಯದ ಹಿಂದೆ ಹುಸಿನಾಗುವಿರುವುದು ಅಶಕ್ಯವೆ? ದೇಹ ಸೌಂದರ್ಯದಿಂದಲೇ ಕೃತ್ಯವನ್ನು ಅರಿಯುವುದು ಅಸಾಧ್ಯ.

ವಿವರಣೆ: ದೇಹಸೌಂದರ್ಯಕ್ಕೂ, ಆ ಸುಂದರ ದೇಹದಲ್ಲಿರುವ ಕಪಟ ಮನಸ್ಸಿಗೂ ಯಾವ ಸಂಬಂಧವೂ ಇಲ್ಲವೆಂಬುದನ್ನು ಈ ಕಗ್ಗ ಎರಡು ದೃಷ್ಟಾಂತಗಳ ಮೂಲಕ ತೋರಿಸಿಕೊಡುತ್ತದೆ.

ಮೊದಲನೆಯದು ರಾಮಾಯಣದ ಶೂರ್ಪಣಖಿಯದು. ಆಕೆ ರಾವಣನ ತಂಗಿ, ದುಷ್ಟಬುದ್ಧಿ ಎಂಬ ರಾಕ್ಷಸನ ಹೆಂಡತಿ. ಗಂಡನನ್ನು ಅಣ್ಣನೇ ಕೊಲ್ಲಿಸಿದ ಮೇಲೆ ಆಕೆ ದಂಡಕಾರಣ್ಯದಲ್ಲಿ ವಾಸವಾಗಿದ್ದಳು. ಆಗ ಆಕೆ ಕಂಡದ್ದು ರಾಮ-ಸೀತೆಯರನ್ನು, ಲಕ್ಷ್ಮಣನನ್ನು. ರಾಕ್ಷಸೀಬುದ್ಧಿಗೆ, ಸಂತೋಷವಾಗಿರುವುದನ್ನು ಕಂಡರೆ ಸಂಕಟವಾಗುತ್ತದೆ. ಆಕೆಗೆ ರಾಮನ ಮೇಲೆ ಅನುರಾಗ ಉಕ್ಕುತ್ತದೆ. ರಾಮನಂಥ ಸ್ಫುರದ್ರೂಪಿ ತರುಣನ ಬಳಿಗೆ ತನ್ನ ವಿಕಾರವಾದ ನೈಜ ರೂಪವನ್ನು ಹೇಗೆ ಹೊತ್ತುಕೊಂಡು ಹೋದಾಳು? ಒಂದು ಕ್ಷಣದಲ್ಲೇ ತನ್ನ ಅಸಹ್ಯರೂಪವನ್ನು ಕುಸುಮ ಕೋಮಲ ಶರೀರವನ್ನಾಗಿ ಮಾಡಿಕೊಂಡಳು. ದೇಹವೇನೋ ಸುಂದರವಾಯಿತು. ಆದರೆ ಒಳಗಿನ ಕೊಳಕು ಮನಸ್ಸು? ಅದು ಕೊಳಕನ್ನೇ ಯೋಚಿಸುತ್ತದೆ. ಇದು ರಾಮಾಯಣದ ಕಾಲದ ಪ್ರಸಂಗ.

ಎರಡನೆಯದು ಕೃಷ್ಣವತಾರದ ಪ್ರಸಂಗ. ಅಲ್ಲಿಯೂ ಕ್ರೂರಿಯಾದ ಕಂಸ, ರಾಕ್ಷಸಿಯಾದ ಪೂತನಿಯನ್ನೇ, ಕೃಷ್ಣನನ್ನು ಕೊಲ್ಲಲು ಕಳಿಸಿದ್ದು. ಆಕೆಯ ಉದ್ದೇಶ ಕ್ರೌರ್ಯದ್ದು, ಆದರೆ ಧರಿಸಿದ್ದು ಸುಂದರ ರೂಪ. ಮಮತೆಯ ಮೂಟೆಯನ್ನು ಕಣ್ಣಿಂದ ಉಕ್ಕಿಸಿದಳು ಪೂತನಿ. ಆಕೆ ಮಾಡಿಸಿದ್ದು ವಿಷಪ್ರಾಶನ. ಆಕೆಯ ಪೈಶಾಚಿಕ ಕೃತ್ಯ ಕಣ್ಣಿಗೆ ತೋರದೆ ಅವಳ ಸುಂದರ ರೂಪ ಮತ್ತು ಹುಸಿನಗೆ ಮಾತ್ರ ಕಂಡಿತ್ತು. ಇದು ದ್ವಾಪರಯುಗದ ಕಥೆ.

ಅಂದರೆ ಯಾವುದೇ ಕಾಲದಲ್ಲಾದರೂ, ಈಗಲಾದರೂ, ಸುಂದರರೂಪ, ಮನಮೋಹಕ ನಗು ಸುಭಗವಾದದ್ದನ್ನೇ, ಒಳ್ಳೆಯದನ್ನೇ ಸೂಚಿಸುತ್ತದೆ ಎಂದು ಹೇಳಲಾಗದು. ಅದನ್ನು ಕಗ್ಗ ‘ಮೃಷೆಯೊ ಮೈ ಬೆಡಗೆಲ್ಲ’ ಎನ್ನುತ್ತದೆ. ಅಂದರೆ ಮೈ ಸೌಂದರ್ಯ, ಬೆಡಗು ಇವೆಲ್ಲ ಸುಳ್ಳು, ನಂಬಲರ್ಹವಾದವುಗಳಲ್ಲ. ಬರೀ ಸೌಂದರ್ಯವುಳ್ಳ ಶರೀರವನ್ನು ಕಂಡು ಮೋಸ ಹೋಗುವುದು ಬುದ್ಧಿವಂತಿಕೆಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT