ಸೋಮವಾರ, ಸೆಪ್ಟೆಂಬರ್ 26, 2022
24 °C

ಬೆರಗಿನ ಬೆಳಕು | ನಿರ್ಮಿತ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓರ್ವವೇ ನಿಲ್ಲುವೆ ನೀನುತ್ಕಟಕ್ಷಣಗಳಲಿ |

ಧರ್ಮಸಂಕಟಗಳಲಿ, ಜೀವಸಮರದಲಿ ||

ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ |

ನಿರ್ಮಿತ್ರನಿರಲು ಕಲಿ - ಮಂಕುತಿಮ್ಮ || 689 ||

ಪದ-ಅರ್ಥ: ನೀನುತ್ಕಟಕ್ಷಣಗಳಲಿ=ನೀನು+ಉತ್ಕಟ+ಕ್ಷಣಗಳಲಿ, ನಿರ್ವಾಣ ದೀಕ್ಷೆಯಲಿ=ಮುಕ್ತಿಯ ಸಮಯದಲ್ಲಿ, ನಿರ್ಯಾಣ ಘಟ್ಟದಲಿ=ನಿರ್ಯಾಣ (ಮರಣದ)+ಘಟ್ಟದಲಿ(ಸಮಯದಲಿ), ನಿರ್ಮಿತ್ರನಿರಲು=ನಿರ್ಮಿತ್ರ(ಮಿತ್ರನಿರದೆ)=ಇರಲು
ವಾಚ್ಯಾರ್ಥ: ಬದುಕಿನ ಉತ್ಕಟಕ್ಷಣಗಳಲ್ಲಿ, ಧರ್ಮಸಂಕಟದ ಸಮಯದಲ್ಲಿ, ಜೀವನದ ಹೋರಾಟದಲ್ಲಿ, ಮುಕ್ತಿಯ ಕ್ಷಣಗಳಲ್ಲಿ, ಮರಣ ಸಮಯದಲ್ಲಿ ಯಾರೂ ನಿನ್ನೊಂದಿಗೆ ಇರುವುದಿಲ್ಲ. ಆದ್ದರಿಂದ ನಿರ್ಮಿತ್ರನಿರಲು ಕಲಿ.
ವಿವರಣೆ: ಮನುಷ್ಯ ಸಂಘಜೀವಿ ಎನ್ನುವುದು ನಿಜ. ಸಮಷ್ಟಿಯಲ್ಲಿ ಮನುಷ್ಯ ಸಮೂಹದಲ್ಲೇ ಇದ್ದರೂ ವ್ಯಕ್ತಿಯಾಗಿ ಆತ ಏಕಾಂಗಿಯೇ. ದ್ರೌಪದಿ ಅಸಾಮಾನ್ಯ ಕನ್ಯೆ. ಆಕೆ ಅಯೋನಿಜೆ, ಅಗ್ನಿಕುಂಡದಲ್ಲಿ ಹುಟ್ಟಿದವಳು. ದ್ರುಪದ ರಾಜನ ಪುತ್ರಿ. ಅಂದು ಅತ್ಯಂತ ಪರಾಕ್ರಮಶಾಲಿಗಳಾಗಿದ್ದ ಪಂಚಪಾಂಡವರ ಪತ್ನಿ, ಧರ್ಮರಾಜನ ರಾಜಸೂಯ ಯಾಗದಲ್ಲಿ ಮಹಾರಾಣಿಯಾಗಿ ಋಷಿಗಳಿಂದಅಭಿಷೇಕ ಮಾಡಿಸಿಕೊಂಡವಳು ಆಕೆಯಷ್ಟು ಭಾಗ್ಯಶಾಲಿ ಯಾರೂ ಇಲ್ಲ ಎನ್ನುವಂಥ ಸ್ಥಿತಿಯಲ್ಲಿದ್ದವಳು.

ಆದರೆ ಒಂದು ಪರೀಕ್ಷೆಯ ಕಾಲ ಬಂದಿತು. ಮಗನಂತಿರಬೇಕಾದ ಮೈದುನ ಆಕೆಯ ತಲೆಗೂದಲನ್ನು ಹಿಡಿದು ಎಳೆದು ಸಭೆಗೆ ತಂದಾಗ, ಅವಳ ದುಃಖವನ್ನು ನಿವಾರಿಸುವವರೂ ಒಬ್ಬರೂ ಇರದೆ ಏಕಾಂಗಿಯಾಗಿ ಆಕೆ ಅವಮಾನ ಭರಿಸಬೇಕಾಯಿತು. ದೈವವೇ ಅವಳನ್ನು ಕಾಪಾಡಬೇಕಾಯಿತು.

ಮಾಯಾವಿ ಮಾರೀಚ ಸಾಯುವಾಗ “ಹೇ ಲಕ್ಷ್ಮಣಾ, ಹೇ ಸೀತಾ” ಎಂದು ಕೂಗಿದಾಗ ಆತಂಕಗೊಂಡ ಸೀತೆ ರಾಮನನ್ನು ಹುಡುಕಿಕೊಂಡು ಹೋಗಲು ಅಪ್ಪಣೆ ಮಾಡುತ್ತಾಳೆ. ಅವನು ಬೇಡವೆಂದಾಗ ಕಟುಮಾತುಗಳನ್ನಾಡುತ್ತಾಳೆ. ಅಣ್ಣ ರಾಮ ಆಕೆಯನ್ನು ತೊರೆದು ಹೋಗಬೇಡ ಎಂದಿದ್ದರೆ, ಅತ್ತಿಗೆ ತಕ್ಷಣ ಹೋಗು ಎನ್ನುತ್ತಾಳೆ. ಈ ಧರ್ಮಸಂಕಟದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಲಕ್ಷ್ಮಣ ಏಕಾಂಗಿ. ಯಾವ ತೀರ್ಮಾನ ತೆಗೆದುಕೊಂಡರೂ ತನಗೆ ಅತ್ಯಂತ ಪ್ರಿಯರಾದ ಒಬ್ಬರಿಗೆ ಕೋಪ ಬರಬಹುದು ಎಂಬ ಚಿಂತೆ ಅವನದು.

ಸಂಸಾರದಲ್ಲಿ ಬದುಕಿರುವಾಗ ಪರಿವಾರದವರು ಜೊತೆಗಿದ್ದರೂ ನಿಮ್ಮ ಸಮಸ್ಯೆ ನಿಮ್ಮದೆ. ಉಳಿದವರು ಅಭಿಪ್ರಾಯಗಳನ್ನು ಕೊಡಬಹುದು. ಆದರೆ ತೀರ್ಮಾನದ ಜವಾಬ್ದಾರಿ ಮತ್ತು ಪರಿಣಾಮ ನಿಮ್ಮ ಮೇಲೆಯೇ. ಕೈವಲ್ಯಜ್ಞಾನವನ್ನು ಪಡೆಯಲು ರಾಜಕುಮಾರ ಸಿದ್ಧಾರ್ಥ ಹೊರಟದ್ದು ಮಧ್ಯರಾತ್ರಿಯಲ್ಲಿ ಒಬ್ಬನೇ. ಅವನ ಸುತ್ತ ರಾಜ ಪರಿವಾರವಿದೆ, ಸುಂದರ ಪತ್ನಿ, ಪುಟ್ಟ ಮಗು ಎಲ್ಲವೂ ಇದ್ದರೂ ಸಂಸಾರವನ್ನು ತೊರೆಯುವ, ದೀಕ್ಷೆ ಪಡೆಯುವ ವಿಷಯದಲ್ಲಿ, ಆತ ಏಕಾಂಗಿಯಾಗಿಯೇ ತೀರ್ಮಾನ ತೆಗೆದುಕೊಂಡ.

ಒಬ್ಬ ವ್ಯಕ್ತಿ ಅದೆಷ್ಟೇ ಉನ್ನತಸ್ಥಾನದಲ್ಲಿದ್ದರೂ, ಮರಣಸಮಯದಲ್ಲಿ ‘ಯಾರೂ ಸಂಗಡ ಬಾಹೋರಿಲ್ಲ’ ಎಂಬಂತೆ ಏಕಾಂಗಿಯೇ. ಹೊರಗಡೆಗೆ ಸಾವಿರಾರು ಕಾದು ನಿಂತಿದ್ದರೂ, ವೈದ್ಯರ ತಂಡವೇ ಸಿದ್ಧವಾಗಿದ್ದರೂ ವ್ಯಕ್ತಿ ತನ್ನ ಮರಣಯಾತ್ರೆಯನ್ನು ಏಕಾಂಗಿಯಾಗಿಯೇ ಮಾಡಬೇಕಾಗುತ್ತದೆ. ಅದಕ್ಕೇ ಕಗ್ಗ ‘ನಿರ್ಮಿತ್ರನಿರಲು ಕಲಿ’ ಎನ್ನುತ್ತದೆ. ಹಾಗೆಂದರೆ ಮಿತ್ರರಿರಬಾರದು ಎಂದಲ್ಲ. ಬದುಕಿನ ತೀವ್ರತಮ ಕ್ಷಣಗಳಲ್ಲಿ ಯಾರೂ ಜೊತೆಗೆ ಇರುವುದಿಲ್ಲವೆಂಬುದನ್ನು ತಿಳಿದುಕೊಂಡು, ಆ ಸ್ಥಿತಿಗೆ ಮನಸ್ಸನ್ನು ಸಿದ್ಧಮಾಡಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.