ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಆತ್ಮ ಸಂದರ್ಶನ

Last Updated 14 ಆಗಸ್ಟ್ 2022, 21:38 IST
ಅಕ್ಷರ ಗಾತ್ರ

ಇಂದ್ರಿಯಾತೀತವನು ಪಿಡಿಯಲಿಂದ್ರಿಯಕಳವೆ? |
ಇಂದ್ರಧನು ಕೈದೋಟಿ ಕೊಂಕಿಗೆಟುಕುವುದೆ? ||
ಸಂದೃಶ್ಯವಾತ್ಮವಾತ್ಮಕೆ ಬೇರೆ ಕರಣದಿಂ |
ತಂದ್ರಿ ಬಿಡೆ ದೊರೆವುದದು – ಮಂಕುತಿಮ್ಮ || 693 ||

ಪದ-ಅರ್ಥ: ಇಂದ್ರಿಯಾತೀತವನು= ಇಂದ್ರಿಯ+ಅತೀತವನು(ಮೀರಿದ್ದನ್ನು), ಪಿಡಿಯಲಿಂದ್ರಿಯಕಳವೆ=ಪಿಡಿಯಲು (ಹಿಡಿಯಲು)+ಇಂದ್ರಿಯಕೆ+ಅಳವೆ (ಸಾಧ್ಯವೆ), ಇಂದ್ರಧನು=ಕಾಮನಬಿಲ್ಲು, ಕೈದೋಟಿ=ಹೂವು ಕೊಯ್ಯುವ ಕೋಲಿನ, ಕೊಂಕಿಗೆಟಕುವುದೆ=ಕೊಂಕಿಗೆ (ಕೊಕ್ಕಿಗೆ)+ ಎಟಕುವುದೆ, ಸದೃಶ್ಯವಾತ್ಮವಾತ್ಮಕೆ=ಸದೃಶ್ಯವು (ತೋರುವುದು)+ಆತ್ಮ+ಆತ್ಮಕೆ, ಕರಣ=ಸಾಧನ, ತಂದ್ರಿ=ಆಲಸ್ಯ, ಜಡತ್ವ

ವಾಚ್ಯಾರ್ಥ: ಇಂದ್ರಿಯಗಳನ್ನು ಮೀರಿದ್ದನ್ನು ಇಂದ್ರಿಯಗಳಿಂದ ಹಿಡಿಯಲು ಸಾಧ್ಯವೆ? ಹೂವು ಕೊಯ್ಯಲು ಬಳಸುವ, ಕೋಲಿಗೆ ಕಟ್ಟಿದ ಕೊಂಕಿಗೆ ಕಾಮನಬಿಲ್ಲು ನಿಲುಕೀತೇ? ಅಂತೆಯೇ ಆತ್ಮ- ಆತ್ಮಗಳ ದರ್ಶನಕ್ಕೆ ಬೇರೆ ಸಾಧನ ಬೇಕು. ಆಲಸ್ಯವನ್ನು ತೊರೆದರೆ ಅದು ದೊರಕುತ್ತದೆ.

ವಿವರಣೆ: ಪ್ರತಿಯೊಂದು ಕೆಲಸಕ್ಕೆ ಒಂದು ಸಾಧನ ಬೇಕು. ಬರೆಯಲು ಕಾಗದ-ಪೆನ್ನು ಬೇಕು, ನೃತ್ಯಕ್ಕೆ ಅಲಂಕಾರ, ಗೆಜ್ಜೆ, ವೇಷ ಬೇಕು. ಹಾಗೆ ಒಂದು ಸಾಧನದಿಂದ ಕಾರ್ಯವನ್ನು ಸಾಧಿಸಬೇಕು. ಆದರೆ ಪೆನ್ನಿನಿಂದ, ಬ್ರಶ್‌ನಿಂದ ಆಕಾಶದಲ್ಲಿ ಚಿತ್ರ ಬರೆಯಲು ಸಾಧ್ಯವೇ? ಮನೆಯ ಕಡೆಗೋಲಿನಿಂದ ಸಮುದ್ರವನ್ನು ಕಡೆಯಲು ಆದೀತೆ? ಹಾಗೆಂದರೆ, ಪ್ರತಿಯೊಂದು ಉಪಕರಣಕ್ಕೊಂದು ಮಿತಿ ಇದೆ. ಅದರ ಕಾರ್ಯ ಆ ಮಿತಿಯಲ್ಲೇ. ಸಾಧನದ ಮಿತಿ ದಾಟಿದರೆ ಅದು ಅಸಹಾಯವಾಗುತ್ತದೆ, ನಿಷ್ಪ್ರಯೋಜಕ ಆಗುತ್ತದೆ. ಅದನ್ನೇ ಈ ಕಗ್ಗ ತಿಳಿಸುತ್ತದೆ. ಬಳ್ಳಿಯಲ್ಲಿ, ಮರದಲ್ಲಿ, ಕೈಗೆ ನಿಲುಕದಂತೆ ಇದ್ದ ಹೂವನ್ನು ಪಡೆಯಲು, ಒಂದು ಉದ್ದವಾದ ಕೋಲಿಗೆ ಕೊಕ್ಕನ್ನು ಸಿಕ್ಕಿಸಿ, ಕರಣವನ್ನಾಗಿ ಮಾಡಿಕೊಳ್ಳುತ್ತೇವೆ. ಆದರೆ ಅದನ್ನು ಬಳಸಿ ಆಕಾಶದಲ್ಲಿ ಅರಳಿ ನಿಂತ ಕಾಮನಬಿಲ್ಲನ್ನು ಕೊಯ್ದು ಪಡೆಯಲು ಆಗುವುದೆ?

ಕೊಕ್ಕಿಗೆ ಒಂದು ಮಿತಿ ಇದೆ. ಹೀಗಿರುವಾಗ ಯಾವುದು ಇಂದ್ರಿಯಗಳನ್ನು ಮೀರಿದ್ದೋ, ಅದನ್ನು ಇಂದ್ರಿಯಗಳಿಂದ ಹಿಡಿಯಲು ಸಾಧ್ಯವಾಗದು. ಅದಕ್ಕೇ ಅದನ್ನು ಇಂದ್ರಿಯಾತೀತವೆಂದು ಕರೆಯುವುದು. ಹಾಗಾದರೆ ಒಂದು ಆತ್ಮದ ದರ್ಶನ ಮತ್ತೊಂದು ಆತ್ಮಕ್ಕೆ ಆಗುವುದು ಹೇಗೆ?

ಆತ್ಮವೆಂಬುದು ಅವ್ಯಕ್ತ. ಅವ್ಯಕ್ತವೆಂದರೆ ಇದ್ದೂ ತೋರಿಸಿಕೊಳ್ಳದ ವಿಷಯ. ಅದು ಇದೆ ಎಂಬುದು ಗೊತ್ತು ಆದರೆ ಅದು ಕಾಣುವುದಿಲ್ಲ. ಇಂಥ ಆತ್ಮ, ಆತ್ಮಗಳ ಸಂದರ್ಶನಕ್ಕೆ ಇಂದ್ರಿಯಗಳಿಂದ ಸಾಧ್ಯವಾಗದ್ದರಿಂದ, ಬೇರೆ ಸಾಧನಗಳೇ ಬೇಕು. ಅದಕ್ಕೆ ಮುಖ್ಯ ಮನಶ್ಯಿಕ್ಷಣ ಮತ್ತು ಅಂತರಂಗ ಶುದ್ಧಿ. ಇವೆರಡೂ ಇಲ್ಲದಿದ್ದರೆ ಆತ್ಮಜ್ಞಾನದ ಮಾತು ಕೇವಲ ಶಬ್ದಖಂಡವಾಗಿ ನಿಲ್ಲುತ್ತದೆಯೇ ಹೊರತು ಅನುಭೂತ ಸತ್ಯವಾಗಲಾರದು. ಸಾಧನಗಳು ಸಕಾರಾತ್ಮಕವಾಗಿರಬೇಕು.

ಗೀತೆಯಲ್ಲಿ ಹೇಳುವಂತೆ,

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ |

ಭಗವಂತನಲ್ಲಿ ಅನನ್ಯವಾದ ಭಕ್ತಿ, ಪ್ರಪಂಚದ ಗದ್ದಲದಿಂದ ದೂರವಿರುವುದು ಮತ್ತು ಏಕಾಂತದ ಮೌನ,ಇವುಗಳ ಅನುಸಂಧಾನದಿಂದ ಆತ್ಮ-ಆತ್ಮಗಳ ಸಂದರ್ಶನಸಾಧ್ಯವಾದೀತು. ಇದಕ್ಕೆ ಸತತ ಪ್ರಯತ್ನ ಬೇಕು. ಆಲಸ್ಯ,ನಿದ್ರೆ, ಜಡತ್ವಗಳು ಮೊದಲು ದೂರವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT