ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮೂರನೆಯ ಕಣ್ಣು

Last Updated 16 ಆಗಸ್ಟ್ 2022, 19:23 IST
ಅಕ್ಷರ ಗಾತ್ರ

ದ್ವಂದ್ವಲೋಕವನಕ್ಷಿಯುಗದೆ ಪೊರೆದು ತ್ರ‍್ಯಕ್ಷ- |
ನೊಂದರಿಂ ಮಾಯೆಯಾಟವ ಮೀರುವಂತೆ ||
ಇಂದ್ರಿಯಾತೀತರ‍್ಶನಕೆ ಬೇರೊಂದಕ್ಷಿ|
ಸಂಧಾನವನು ಕಲಿಯೊ – ಮಂಕುತಿಮ್ಮ || 695 ||

ಪದ–ಅರ್ಥ: ದ್ವಂದ್ವಲೋಕವನಕ್ಷಿಯುಗದೆ=ದ್ವಂದ್ವ ಲೋಕವನ್ನು (ದ್ವಂದ್ವವಿರುವ ಈ ಲೋಕವನ್ನು) +ಅಕ್ಷಿಯುಗದೆ(ಎರಡು ಕಣ್ಣುಗಳಿಂದ), ಪೊರೆದು=ರಕ್ಷಿಸಿ, ತ್ರ‍್ಯಕ್ಷನೊಂದರಿಂ= ತ್ರ‍್ಯಕ್ಷ(ಪರಮೇಶ್ವರ, ಮುಕ್ಕಣ್ಣ)+ ಒಂದರಿಂ (ಒಂದರಿಂದ), ಮಾಯೆಯಾಟವ =ಮಾಯೆಯ+ಆಟವ, ಇಂದ್ರಿಯಾತೀತ ರ‍್ಶನಕೆ=ಇಂದ್ರಿಯ+ಅತೀತ(ಮೀರಿದ)+ರ‍್ಶನಕೆ, ಬೇರೊಂದಕ್ಷಿ=ಬೇರೊಂದು+ಅಕ್ಷಿ (ಕಣ್ಣು)

ವಾಚ್ಯಾರ್ಥ: ಬರೀ ದ್ವಂದ್ವಗಳಿಂದ ಕೂಡಿದ ಲೋಕವನ್ನು ತನ್ನ ಎರಡು ಕಣ್ಣುಗಳಿಂದ ಕಾಪಾಡಿದರೂ, ಮೂರನೆಯ ಕಣ್ಣಿನಿಂದ ಪರಮೇಶ್ವರ ಮಾಯೆಯನ್ನು ಬೂದಿಮಾಡಿದಂತೆ,ಇಂದ್ರಿಯಗಳನ್ನು ಮೀರಿದ ತತ್ವದರ್ಶನಕ್ಕೆ , ಬೇರೊಂದು ಜ್ಞಾನದ ಕಣ್ಣನ್ನು ಪಡೆಯುವುದಕ್ಕೆಹೊಂದಾಣಿಕೆಯನ್ನು ಮಾಡಿಕೊ.

ವಿವರಣೆ: ಪರಶಿವನು, ಶಂಕರನೂ ಹೌದು, ರುದ್ರನೂ ಹೌದು. ಅವನು ಯಾವಾಗಲೂ ಶುಭವನ್ನುಂಟುಮಾಡುವನಾದ್ದರಿಂದ ಶಂಕರ. ಅವನಿಗೆ ಇನ್ನೊಂದು ಹೆಸರು ತ್ರ‍್ಯಕ್ಷ. ಹಾಗೆಂದರೆಮೂರು ಕಣ್ಣುಳ್ಳುವ, ಮುಕ್ಕಣ್ಣ. ಅವನು ತನ್ನ ಎರಡು ಕಣ್ಣುಗಳಿಂದ ಪ್ರಪಂಚವನ್ನು ಕಾಪಾಡುತ್ತಾನೆ. ಈ ಜಗತ್ತು ದ್ವಂದ್ವಮಯವಾದದ್ದು. ಇಲ್ಲಿ ಸುಭಗವಾದದ್ದು, ಕಷ್ಟವಾದದ್ದು;ಸುಂದರವಾದದ್ದು, ಕುರೂಪವಾದದ್ದು; ಹಗಲು-ರಾತ್ರಿ; ಸುಖ-ದುಃಖ; ಹುಟ್ಟು-ಸಾವು; ಇಂಥಅನೇಕಗಳ ದ್ವಂದ್ವಗಳು ಎಲ್ಲವೂ ಇವೆ. ಇದೇ ಪ್ರಪಂಚದ ಕಷ್ಟ ಮತ್ತು ವಿಶೇಷ. ಇಂಥದ್ದನ್ನುಪರಮೇಶ್ವರ ಕರುಣೆಯಿಂದ, ಪ್ರೀತಿಯಿಂದ ಕಾಪಾಡುತ್ತಾನೆ. ಅವನಿಗೆ ಇನ್ನೊಂದು ಕಣ್ಣೂ ಇದೆ.

ಕೆಲವರು ಅದನ್ನು ಬೆಂಕಿಯ ಕಣ್ಣು ಎನ್ನುತ್ತಾರೆ. ಅದರಿಂದ ಆತ ದುರ್ಜನರನ್ನು ಸುಟ್ಟುಹಾಕುತ್ತಾನೆಎಂಬ ನಂಬಿಕೆ. ಆದರೆ ಆ ಮೂರನೆಯ ಕಣ್ಣು ನಿಜವಾಗಿಯೂ ಜ್ಞಾನದ ಕಣ್ಣು. ಜ್ಞಾನ, ಅಜ್ಞಾನವನ್ನು, ಅಂಧಕಾರವನ್ನು, ದುರ್ಗುಣಗಳನ್ನು ಸುಟ್ಟು ಹಾಕುತ್ತದೆ. ಈಶ್ವರನಿಗೆ ಆ ಅದ್ಭುತ ಶಕ್ತಿ ಇದೆ.

ಉಮೆಯ ರೂಪಕ್ಕೆ ವಿಚಲಿತನಾಗದ ಶಿವ, ಪ್ರೇಮದ ಮಾಯೆಯನ್ನು ಸೃಷ್ಟಿಸಿದ ಮನ್ಮಥನನ್ನುಜ್ಞಾನದಿಂದ ಭಸ್ಮಮಾಡುತ್ತಾನೆ,ಅವನು ಹೇಗೆ ಮಾಯೆಯ ನಾಶಕ್ಕೆ ಮತ್ತೊಂದು ಕಣ್ಣನ್ನು ಬಳಸಿದನೋ, ಹಾಗೆಯೇ ನಮಗೂ,ಇಂದ್ರಿಯಗಳನ್ನು ಮೀರಿದ ಪರಸತ್ವವನ್ನು ತಿಳಿಯಲು, ಪಡೆಯಲು, ಮತ್ತೊಂದು ಕಣ್ಣು ಬೇಕು. ಆಕಣ್ಣನ್ನು ಪಡೆಯುವುದು ಹೇಗೆ ಎನ್ನುವುದೇ ಅನು ಸಂಧಾನ. ಅದೇ ಸಾಧನೆಯ ಗುರಿ. ಅದಕ್ಕೆಮುಖ್ಯವಾಗಿ ಬೇಕಾದದ್ದು ಇಂದ್ರಿಯಗಳ ಉಬ್ಬಟೆಯನ್ನು ತಡೆಯಬೇಕು. ಅವುಗಳ ಹಾರಾಟ ತಗ್ಗದ ಹೊರತು, ಮೂರನೆಯ ಕಣ್ಣು ನಮಗೆ ದೊರೆಯಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT