ಶನಿವಾರ, ಜುಲೈ 2, 2022
20 °C

ಬೆರಗಿನ ಬೆಳಕು | ಮಂಗಲದ ನಡೆ

ಗುರುರಾಜ‌ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬೋಧಿಸತ್ವ ಒಂದು ನಿಗಮದಲ್ಲಿ ಅತ್ಯಂತ ಶ್ರೀಮಂತ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ. ಅವನಿಗೆ ರಕ್ಷಿತಕುಮಾರ ಎಂದು ಹೆಸರಿಟ್ಟರು. ಅವನು ಬೆಳೆದಂತೆ ತಕ್ಕಶಿಲೆಗೆ ಹೋಗಿ ಸಕಲವಿದ್ಯೆಗಳಲ್ಲಿ ಪಾರಂಗತನಾಗಿ ಮರಳಿದ. ಸ್ವಲ್ಪೇ ದಿನಗಳಲ್ಲಿ ಅವನಿಗೆ ಹಣದ ಬಗ್ಗೆ ವೈರಾಗ್ಯ ಹುಟ್ಟಿ, ಎಲ್ಲವನ್ನು ದಾನಮಾಡಿ, ಪ್ರವ್ರಜಿತನಾಗಿ ಹಿಮಾಲಯಕ್ಕೆ ಹೋಗಿಬಿಟ್ಟ. ಹತ್ತಾರು ವರ್ಷಗಳಲ್ಲಿ ಅವನ ಬಳಿ ಐದುನೂರು ಜನ ಶಿಷ್ಯರಾದರು. ಒಂದು ವರ್ಷ ಅವನ ಶಿಷ್ಯರು ಪ್ರವಾಸ ಮಾಡಿ ಜಗತ್ತನ್ನು ನೋಡಲು ಹೊರಟು ವಾರಾಣಸಿಗೆ ಬಂದರು. ಅಲ್ಲಿ ಅವರಿಗೆ ರಾಜೋದ್ಯಾನದಲ್ಲಿ ರಾಜ ವ್ಯವಸ್ಥೆಯನ್ನು ಮಾಡಿದ. ದಿನವೂ ಸಾಯಂಕಾಲ ಉದ್ಯಾನದಲ್ಲಿ ಸಭೆ ಸೇರಿ ಧರ್ಮ ಚಿಂತನೆ ನಡೆಯುತ್ತಿತ್ತು.

ಒಂದು ದಿನ ಯಾವುದು ಮಂಗಲ ಎಂಬ ವಿಷಯವಾಗಿ ಚರ್ಚೆ ಬಂದಿತು. ಜನರಲ್ಲಿ ಒಬ್ಬ, ‘ಮಂಗಲ ಎಂದರೆ ಶುಭವಾದುದ್ದನ್ನು ನೋಡುವುದು. ಬೆಳಿಗ್ಗೆ ಎದ್ದ ತಕ್ಷಣ ಬಿಳಿ ಬಣ್ಣ ನೋಡಿದರೆ, ಗರ್ಭಿಣಿಯನ್ನು ಕಂಡರೆ, ಕೆಂಪು ಮೀನು, ಪೂರ್ಣಕುಂಭ, ಹೊಸ ಬಟ್ಟೆ, ಹಸುವಿನ ತುಪ್ಪ ಅಥವಾ ಹಾಲು ಇವುಗಳನ್ನು ನೋಡಿದರೆ ಮಂಗಲ’ ಎಂದ. ಮತ್ತೊಬ್ಬ, ‘ಅದು ಸರಿಯಾದ ಮಾತಲ್ಲ. ಎಲ್ಲವನ್ನೂ ನೋಡಲೇಬೇಕೆಂದಿಲ್ಲ. ಹಾಗೆ ನೋಡಬೇಕೆಂದು ಮೊದಲೇ ಯೋಜಿಸಿ ಇಟ್ಟುಕೊಂಡರೆ ಅದು ಮಂಗಲ ಅಲ್ಲವೇ ಅಲ್ಲ. ನಿಜವಾಗಿ ಮಂಗಲವೆಂದರೆ ಶುಭವಾದದ್ದನ್ನು ಕೇಳುವುದು. ಬೆಳಿಗ್ಗೆ ಏಳುವಾಗ ಕಿವಿಗೆ ಮಧುರವಾದ ಪ್ರಾರ್ಥನೆ ಕಿವಿಗೆ ಬಿದ್ದರೆ, ಹಸುವಿನ ಕರೆ ಕೇಳಿದರೆ, ಪಕ್ಷಿಗಳ ಕಲರವ ಕೇಳಿದರೆ, ಮನುಷ್ಯರು ಸಂತೋಷದಿಂದ ಆಡುವ ಮಾತುಗಳು ಕಿವಿಗೆ ಬಿದ್ದರೆ ಅದೇ ಮಂಗಲ’ ಎಂದು ವಾದಿಸಿದ. ಮೂರನೆಯಾತ, ‘ನೀವಿಬ್ಬರೂ ಮಂಗಲದ ಸರಿಯಾದ ಅರ್ಥವನ್ನು ಗ್ರಹಿಸಿಲ್ಲ. ಮಂಗಲವೆಂದರೆ ನೋಡುವುದು ಮತ್ತು ಕೇಳುವುದು ಅಲ್ಲ. ಅದು ಸ್ಪರ್ಶಿಸುವುದು. ಬರೀ ಹಾಲನ್ನು ನೋಡಿದರೇನಾಯಿತು? ಅದನ್ನು ಸ್ಪರ್ಶಿಸುವುದು ಮಂಗಲ. ಕೆಂಪು ಮೀನನ್ನು ಮುಟ್ಟುವುದು, ಪೂರ್ಣಕುಂಭವನ್ನು ಹಿಡಿದುಕೊಳ್ಳುವುದು, ಹೊಸಬಟ್ಟೆಯನ್ನು ಧರಿಸುವುದು, ಆಗ ತಾನೇ ಕರೆದ ಹಾಲನ್ನು ಕುಡಿಯುವುದು ಮಂಗಲಕರವಾದದ್ದು’ ಎಂದ. 

ವಾದಕ್ಕೆ ಪ್ರತಿವಾದ ಬೆಳೆಯಿತು. ಯಾವುದು ಸರಿ ಎಂಬುದು ತೀರ್ಮಾನವಾಗಲೇ ಇಲ್ಲ. ಸಭೆಯಲ್ಲಿ ಕುಳಿತಿದ್ದ ರಾಜ, ಹಿಮಾಲಯದಿಂದ ಬಂದ ಈ ಸನ್ಯಾಸಿಗಳಿಗೆ ಸರಿಯಾದ ಉತ್ತರ ಯಾವುದು ಎಂದು ಕೇಳಿದ. ಅವರಿಗೂ ಸರಿಯಾದ ಉತ್ತರ ತಿಳಿಯಲಿಲ್ಲ. ಆಗ ಅವರು, ‘ರಾಜಾ, ನಮ್ಮಲ್ಲಿ ಅದಕ್ಕೆ ಸ್ಪಷ್ಟ ಉತ್ತರ ಇಲ್ಲ. ನಾವು ಹಿಮಾಲಯಕ್ಕೆ ಹೋಗಿ ನಮ್ಮ ಗುರುಗಳನ್ನು ಕೇಳಿಕೊಂಡು, ಉತ್ತರವನ್ನು ತಮಗೆ ಬಂದು ತಿಳಿಸುತ್ತೇವೆ’ ಎಂದು ಹೇಳಿ ಮರಳಿ ಆಶ್ರಮಕ್ಕೆ ಬಂದು ಈ ಪ್ರಶ್ನೆಯನ್ನು ಗುರುಗಳಿಗೆ ಕೇಳಿದರು. ಆಗ ಗುರುಗಳು ಹೇಳಿದರು, ‘ಮೂರು ಗುಂಪಿನವರು ಹೇಳಿದ ಎಲ್ಲವೂ ಮಂಗಲಗಳೇ ಆದರೆ ಅವು ಪ್ರಮುಖ ಮಂಗಲವಲ್ಲ. ಶುಭವನ್ನು ನೋಡುವುದು, ಕೇಳುವುದು, ಸ್ಪರ್ಶಿಸುವುದು ಎಲ್ಲವೂ ಒಳ್ಳೆಯದೆ. ಅವೆಲ್ಲವುಗಳಿಗಿಂತ ಜನರ ನಡೆಯಿಂದ ಮಂಗಲದ ನಿರ್ಧಾರವಾಗುತ್ತದೆ. ನೋಡುವ, ಕೇಳುವ, ಸ್ಪರ್ಶಿಸುವ ಕಾರ್ಯಗಳು ನಿಜವಾಗಿ ಫಲ ಕೊಡುವುದು ಮನುಷ್ಯ ನಡೆಯುವ ರೀತಿಯಲ್ಲಿ. ಆತ ಸದಾಕಾಲ ಒಳ್ಳೆಯದನ್ನೇ ನೋಡುತ್ತ, ಒಳ್ಳೆಯದನ್ನೇ ಕೇಳುತ್ತ, ಸ್ಪರ್ಶಿಸುತ್ತಲಿದ್ದರೆ ಅವನ ಹೃದಯ ಪರಿಶುದ್ಧವಾಗುತ್ತದೆ, ದೃಷ್ಟಿ ನಿರ್ಮಲವಾಗುತ್ತದೆ, ಮತ್ತು ಅವನು ಮಾಡಿದ್ದೆಲ್ಲ ಮಂಗಲವಾಗುತ್ತದೆ. ಎಲ್ಲ ಕ್ರಿಯೆಗಳಿಗಿಂತ ನಡವಳಿಕೆ ಮುಖ್ಯವಾದದ್ದು’.

ಶಿಷ್ಯರಿಗೂ ಆ ಮಾತು ಸರಿಯೆಂದು ತೋಚಿ, ಮರಳಿ ವಾರಾಣಸಿಗೆ ಬಂದು ರಾಜನಿಗೆ ಅದನ್ನು ತಿಳಿಸಿ ತೃಪ್ತಿಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು