ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಮನ್ವಯದ ಭಾವಮಾಧುರ್ಯ

Last Updated 23 ಆಗಸ್ಟ್ 2021, 18:58 IST
ಅಕ್ಷರ ಗಾತ್ರ

ನೀಳುಗೆರೆ ಬಳುಬಳುಕೆ ಕಡಲತೆರೆಯೊಯ್ಯಾರ |
ತಾಳಲಯಸೇರೆ ರಾಗದ ನಾಟ್ಯ ಧಾಟಿ ||
ಗೋಳದ ಜ್ವಾಲೆಯಿಂ ಗಗನಪಟ ಸಿಂಗಾರ |
ವೈಲಕ್ಷಣದೊಳಿಂಬು – ಮಂಕುತಿಮ್ಮ || 452 ||

ಪದ-ಅರ್ಥ: ನೀಳುಗೆರೆ=ನೇರವಾದ ಗೆರೆ, ಕಡಲತೆರೆಯೊಯ್ಯಾರ=ಕಡಲತೆರೆಯ+ಒಯ್ಯಾರ, ಜ್ವಾಲೆಯಿಂ=ಬೆಂಕಿಯಿಂದ, ಗಗನಪಟ=ಆಕಾಶ, ವೈಲಕ್ಷಣದೊಳಿಂಬು=ವೈಲಕ್ಷಣದೊಳು(ವಿವಿಧತೆಯಲ್ಲಿ)+ಇಂಬು(ಅವಕಾಶ)

ವಾಚ್ಯಾರ್ಥ: ಕಡಲತೆರೆ ತಡಿಯನ್ನು ಮುಟ್ಟಿದಾಗ ಆದ ನೀಳಗೆರೆ ಮತ್ತೊಂದು ತೆರೆಬಂದಾಗ ಬಳುಕಿ ತೆರೆಯ ವಯ್ಯಾರವನ್ನು ತೋರುತ್ತದೆ. ರಾಗದ ನಾಟ್ಯದ ಧಾಟಿ ಬರುವುದೇ ತಾಳ ಮತ್ತು ಲಯಗಳು ಸೇರಿದಾಗ. ಸೂರ್ಯನೆಂಬ ಗೋಳದ ಜ್ವಾಲೆಯಿಂದಲೇ ಆಕಾಶ ಶೃಂಗಾರವಾಗುವುದು. ವಿಲಕ್ಷಣವಾದ ಅನೇಕ ವಸ್ತುಗಳು, ಚಿಂತನೆಗಳು ಜಗತ್ತು ಸುಂದರವಾಗುವುದಕ್ಕೆ ಅವಕಾಶವಾಗಿವೆ.

ವಿವರಣೆ: ಸೊಗಸೆಂಬುದು ಎಲ್ಲರೂ ಬಯಸುವ ಒಂದು ಅವಸ್ಥೆ. ಸೊಗಸು ಎಂಬುದದೇನು? ಅದು ಒಂದೇ ವಸ್ತುವೆ? ಅನೇಕ ವಸ್ತುಗಳ ಮಿಶ್ರಣವೇ? ಪ್ರಕೃತಿಯ ಸೊಗಸಿನಲ್ಲಿ ಬೆಟ್ಟ ಕಣಿವೆಗಳಿವೆ, ಗಿಡ, ಮರ, ಬಳ್ಳಿಗಳಿವೆ, ನೀರಿನ ಹರಿವಿದೆ, ಹಕ್ಕಿಗಳ ಉಲಿವಿದೆ. ಅವೆಲ್ಲ ಸೇರಿ ಆದದ್ದು ಪ್ರಕೃತಿ ಸೌಂದರ್ಯ. ಪಂಚಾಮೃತದ ರುಚಿ ಬಂದದ್ದು ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಗಳ ಹದವಾದ ಸಂಯೋಗ. ಪರಿಣಿತ ನೃತ್ಯಗಾತಿಯ ನೃತ್ಯದ ಸೌಂದರ್ಯ ಕೂಡ ಅನೇಕ ವಿಲಕ್ಷಣಗಳ ಕೂಡುವಿಕೆ. ನೃತ್ಯಗಾತಿಯ ದೇಹಸೌಷ್ಠವ, ಮಾಡಿಕೊಂಡಿರುವ ಅಲಂಕಾರ, ಧರಿಸಿದ ಸರಿಯಾದ ವಸ್ತ್ರ ವಿನ್ಯಾಸ, ನೃತ್ಯವೇದಿಕೆಯ ಅಲಂಕಾರ, ಬೆಳಕಿನ ವ್ಯವಸ್ಥೆ, ಸಂಗೀತ, ಶ್ರವಣಸಾಧನಗಳು, ವಾದ್ಯಗಳು, ಪ್ರೇಕ್ಷಕರ ಆಸನ ವ್ಯವಸ್ಥೆ ಇವೆಲ್ಲ ಸೇರಿ ಕಾರ್ಯಕ್ರಮದ ಸೊಗಸನ್ನು ನಿರ್ಮಿಸುತ್ತವೆ.

ಹೀಗೆಂದರೆ ಪರಸ್ಪರ ಸಂಬಂಧವಿಲ್ಲದ, ಸಮಾನಗುಣಗಳಿಲ್ಲದ ಮತ್ತು ಕೆಲವೊಂದು ಬಾರಿ ವಿರೋಧದ ಗುಣಗಳುಳ್ಳ ವಸ್ತುಗಳು ಸೇರಿ ಸುಂದರತೆಯನ್ನು ಸೃಷ್ಟಿಸುತ್ತವೆ. ಇದನ್ನು ಈ ಕಗ್ಗ ಎಷ್ಟು ಚೆನ್ನಾಗಿ ವಿವರಿಸುತ್ತದೆ! ಸಮುದ್ರ ತೀರಕ್ಕೆ ಹೋದಾಗ ಅಲೆಗಳು ಬಂದು ಮರಳಿನ ಮೇಲೆ ಚಿತ್ತಾರಗಳನ್ನು ನಿರ್ಮಿಸುತ್ತವೆ. ಪ್ರತಿಬಾರಿ ಅಲೆಯೊಂದು ಬಂದಾಗ ಹಳೆಯ ಗೆರೆ ಅಳಿಸಿ ಬಳುಬಳುಕುವ ಮತ್ತೊಂದು ಗೆರೆ ನಿರ್ಮಾಣವಾಗುತ್ತದೆ. ನಂತರ ಮತ್ತೊಂದು, ಮಗುದೊಂದು. ಅದೇ ಕಡಲ ತೆರೆಯ ಒಯ್ಯಾರ. ತಾಳ ಮತ್ತು ಲಯಗಳು ಸೇರಿದಾಗ ರಂಜಿಸುವ ಸ್ವರಗಳ ಸಮೂಹವಾದ ರಾಗದ ಗತಿ ಸಿದ್ಧವಾಗುತ್ತದೆ. ಸೂರ್ಯನನ್ನು ಗೋಳದ ಜ್ವಾಲೆ ಎಂದು ಕರೆಯುತ್ತಾರೆ. ಸೂರ್ಯ ನಮ್ಮ ಸೌರಮಂಡಲದ ಮಧ್ಯದಲ್ಲಿರುವ ನಕ್ಷತ್ರ. ಅದೊಂದು ಪ್ರಜ್ವಲಿಸುವ ನಕ್ಷತ್ರ. ಸೆಕೆಂಡಿಗೆ ಆರುನೂರು ಮಿಲಿಯನ್ ಟನ್‌ಗಳಷ್ಟು ಜಲಜನಕವನ್ನು ಉರಿಸುತ್ತ ಬೆಂಕಿಯ ಗೋಳವಾಗಿದೆ. ಅದು ಹಾಗೆ ಉರಿಯುವುದರಿಂದಲೇ ನಮ್ಮ ಆಕಾಶ ಬೆಳಕು ಕಂಡಿದೆ. ಆ ಬೆಳಕಿನಿಂದಲೇ ಪ್ರಪಂಚದ ಅಸ್ತಿತ್ವ.

ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿಗಳು ಶ್ರೀರಾಮಚಂದ್ರನ ವ್ಯಕ್ತಿತ್ವವನ್ನು ಇಪ್ಪತ್ತು ಗುಣಗಳಲ್ಲಿ ವರ್ಣಿಸುತ್ತಾರೆ. ಅವೆಲ್ಲವೂ ಬೇರೆ ಬೇರೆ ಗುಣಗಳು. ಹಾಗಾದರೆ ಶ್ರೀರಾಮನ ನಿಜವಾದ ಗುಣ ಯಾವುದು? ಅವನ ಸ್ವರೂಪ ಈ ಎಲ್ಲ ಗುಣಗಳ ಸಾಮರಸ್ಯ. ವಿದ್ಯೆ, ವಿನಯ, ಧೈರ್ಯ, ಕಾರುಣ್ಯ, ಹಾಸ್ಯ, ಶೌರ್ಯ, ಸಾಹಸ, ಗಾಂಭೀರ್ಯ ಈ ವಿವಿಧ ಗುಣಗಳು ಸೇರಿ ಸಮರಸವಾದದ್ದರ ಪರಿಣಾಮವಾಗಿ ಹೊಸದೊಂದು ಶೀಲಸೌಂದರ್ಯ ಕಾಣಬರುತ್ತದೆ. ಹೀಗೆ ವಿಲಕ್ಷಣ ಗುಣಗಳ ಸಮನ್ವಯ ಸೌಂದರ್ಯದ ಅವಿಷ್ಕಾರಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT