ಬುಧವಾರ, ಡಿಸೆಂಬರ್ 8, 2021
18 °C

ಬೆರಗಿನ ಬೆಳಕು: ಜಾಣತನದ ಬದುಕು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಗುಹೆಯೆಡಕೆ, ಗುಹೆ ಬಲಕೆ, ನಡುವೆ ಮಲೆ; ಕಣಿವೆಯಲಿ|
ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ ?||
ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ -|
ರ್ವಹಿಸುವುದೆ ಜಾಣ್ಮೆಯಲ - ಮಂಕುತಿಮ್ಮ ||482||

ಪದ-ಅರ್ಥ: ಗುಹೆಯೆಡಕೆ= ಗುಹೆ+ ಎಡಕೆ, ಮಲೆ= ಬೆಟ್ಟ, ನಚ್ಚಿ= ನಂಬಿ, ರಹಸಿಯದ= ರಹಸ್ಯದ, ತೆರದಿ= ರೀತಿ.

ವಾಚ್ಯಾರ್ಥ: ಎಡಕೆ, ಬಲಕೆ ಗುಹೆಗಳು, ನಡುವೆ ಬೆಟ್ಟದ ದಾರಿ. ಹುಲಿ ಬರುವುದಿಲ್ಲವೆಂದು ನಂಬಿ ನೀನು ಆ ಕಣಿವೆಯಲ್ಲಿ ವಿಹಾರ ಮಾಡುತ್ತೀಯಾ? ರಹಸ್ಯದ ಭೂತ ಹಿಡಿಯಲಾರದಂತೆ ಬದುಕನ್ನು ನಡೆಯಿಸುವುದೆ ಜಾಣತನ.

ವಿವರಣೆ: ನಾಲ್ಕೇ ನಾಲ್ಕು ಸಾಲುಗಳಲ್ಲಿ ಅತ್ಯಂತ ಆಳದ ಚಿಂತನೆಗಳನ್ನು ಕಟ್ಟಿಡುವುದು ಡಿವಿಜಿ ಅವರಿಗೆ ಮಾತ್ರ ಸಾಧ್ಯವಾದ ಅದ್ಭುತ ಶಕ್ತಿ. ತಮ್ಮ ಅಪಾರ ಓದು, ಜೀವನಾನುಭವ, ಶಾಸ್ತ್ರಾಧ್ಯಯನದಲ್ಲಿ ಕಂಡಿದ್ದ ಸತ್ಯಗಳನ್ನು ಬಿಗಿಯಾದ ಬಂಧದಲ್ಲಿ, ಚೌಪದಿಯಲ್ಲಿ ನಮಗೆ ನೀಡಿದ್ದೊಂದು ವಿಸ್ಮಯ. ಆ ಚೌಪದಿಗಳು ಸಮುದ್ರವಿದ್ದಂತೆ. ದೂರದಿಂದ ನೋಡಿದರೆ ತೆರೆಗಳು ಮಾತ್ರ ಕಂಡಾವು. ಆಳಕ್ಕಿಳಿದರೆ ಅನಘ್ರ್ಯ ವಸ್ತುಗಳು ದೊರೆಯುತ್ತವೆ. ನಮ್ಮ ತಿಳುವಳಿಕೆಯ ಮಿತಿಗಳಲ್ಲಿ ಅವುಗಳನ್ನು ಅರಿಯುವುದು ನಮಗೇ ಕ್ಷೇಮ. ಪ್ರಸ್ತುತ ಕಗ್ಗವೂ ಹಾಗೆ ಎರಡು ಸ್ತರಗಳಲ್ಲಿ ಕೆಲಸ ಮಾಡುತ್ತದೆ. ಮೇಲ್ನೋಟದ ಅರ್ಥ ಸುಲಭ. ಬೆಟ್ಟದ ಎರಡು ಬದಿಗೂ ಗುಹೆಗಳಿವೆ. ಅಲ್ಲಿ ಹುಲಿಗಳು ಇವೆಯೆಂಬ ಸುದ್ದಿ ಜನಜನಿತ. ಕಣಿವೆಯಲ್ಲಿ ನಡೆಯುವಾಗ ಹುಲಿ ಬರುವುದಿಲ್ಲವೆಂದು ನಂಬಿ ನಡೆಯುವುದು ಸಾಧ್ಯವೆ? ಅಂತೆಯೇ ಯಾವ ಗುಹೆಯಲ್ಲಿ ಹುಲಿ ಇದೆಯೋ ಎಂದು ಸಂಶಯದ ಭೂತವನ್ನು ಹೊತ್ತು ನಡೆಯದೆ ಇರುವುದೂ ಸಾಧ್ಯವಲ್ಲವೆ? ಇವೆರಡನ್ನೂ ಅತಿಯಾಗಿ ನಂಬದೆ ಬದುಕು ಸಾಗಿಸುವುದೇ ಜಾಣತನ.

ಗುಹೆ ಎಂದರೆ ಗುಹ್ಯವಾದದ್ದು, ರಹಸ್ಯವಾದದ್ದು, ಮನುಷ್ಯನೊಬ್ಬ ಕಣಿವೆಯಲ್ಲಿ ಸಾಗುತ್ತಿದ್ದಾನೆ. ಕಣಿವೆ ಒಂದು ಇಕ್ಕಟ್ಟಾದ ದಾರಿ. ವಿಸ್ತಾರವಾದ ಜಾಗೆಯಲ್ಲಿ ಮನಸ್ಸೂ ವಿಸ್ತಾರವಾಗುತ್ತದೆ. ಇಕ್ಕಟ್ಟಾದ ಸ್ಥಳದಲ್ಲಿ ಮನಸ್ಸು ಬಿಗಿಯಾಗಿರುತ್ತದೆ, ಸ್ಪಷ್ಟವಾಗಿ ಚಿಂತಿಸದಂತಾಗುತ್ತದೆ. ಎಡಬಲದಲ್ಲಿ ಗುಹೆಗಳಿದ್ದರೂ ಅಲ್ಲಿ ಹುಲಿಗಳಿಲ್ಲ ಮತ್ತು ಅವು ತನ್ನ ಮೇಲೆ ದಾಳಿ ಮಾಡುವುದಿಲ್ಲವೆಂಬ ಹುಂಬ ಧೈರ್ಯ ಅವನಿಗೆ. ಇದು ಅತಿಯಾದ ಆತ್ಮವಿಶ್ವಾಸ. ಆತ್ಮವಿಶ್ವಾಸ ತುಂಬ ಒಳ್ಳೆಯದು ಆದರೆ ಅತಿಯಾದ ಆತ್ಮವಿಶ್ವಾಸ ಕಣ್ಣುಗಳನ್ನು ಕಟ್ಟುತ್ತದೆ. ಅತಿಯಾದ ವಿಶ್ವಾಸದಿಂದ ಅನಾಹುತಗಳಾದುದನ್ನು, ವ್ಯಕ್ತಿತ್ವಗಳು ಕುಸಿದದ್ದನ್ನು ಕಂಡಿದ್ದೇವೆ. ಕಗ್ಗದ ಮೂರನೆಯ ಸಾಲು ‘ರಹಸ್ಯದ ಭೂತ’ದ ಬಗ್ಗೆ ಹೇಳುತ್ತದೆ. ಅದು ಹಿಡಿಯಬಾರದಂತೆ ಇರಬೇಕು ಎನ್ನುತ್ತದೆ. ಈ ಗುಹೆಯಲ್ಲಿ ಹುಲಿ ಇರಬಹುದು, ಆ ಗುಹೆಯಲ್ಲಿ ಚಿರತೆ ಇದ್ದೀತು ಎಂದು ಹೆದರಿಕೆಯಿಂದ, ಸಂಶಯದಿಂದ ಜೀವಿ ಒದ್ದಾಡುತ್ತಾನೆ. ಯಾವ ಕಾರ್ಯಕ್ಕೆ ಹಾಕದಂತೆ ಸಂಶಯ ಅವನ ಕೈ ಕಟ್ಟಿ ಕೂಡ್ರಿಸುತ್ತದೆ. ಅತಿಯಾದ ಆತ್ಮವಿಶ್ವಾಸ ಬದುಕನ್ನು ಕೆಡಿಸುವಂತೆ, ಸಂಶಯವೂ ಬದುಕನ್ನು ಹದಗೆಡಿಸುತ್ತದೆ. ಸರಿಯಾಗಿ ನೋಡಿದರೆ ನಮಗೆ ನಂಬಿಕೆ ಮತ್ತು ಸಂಶಯಗಳು ಎರಡೂ ಇರಬೇಕು. ಸಂಶಯವಿಲ್ಲದೆ ಪ್ರಶ್ನೆಗಳಿಲ್ಲ, ಪ್ರಶ್ನೆಗಳಿಲ್ಲದೆ ಅರಿವಿಲ್ಲ. ಹಾಗೆಯೇ ನಂಬಿಕೆಯಿಲ್ಲದ ಬದುಕು, ಬೇರಿಲ್ಲದ ಮರದಂತೆ. ಅದು ದಂಡೆಗೆ ಕಟ್ಟದಿರುವ ದೋಣಿಯಂತೆ ಎತ್ತೆತ್ತಲೋ ಹೋಗಿಬಿಡುತ್ತದೆ. ಕಗ್ಗ ಹೇಳುವಂತೆ ಎರಡೂ ಅತಿಯಾಗದಂತೆ, ಎರಡನ್ನೂ ಸಮತೋಲನದಲ್ಲಿ ನಡೆಸಿದರೆ, ಅದು ಜಾಣತನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.