ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಭಾವಗಳ ಸರಸತೆ

Last Updated 26 ಆಗಸ್ಟ್ 2021, 22:00 IST
ಅಕ್ಷರ ಗಾತ್ರ

ಪರಿಪರಿಯ ವಿಶ್ವಪ್ರಕೃತಿಶಕ್ತಿತೇಜಗಳು |
ಕೆರಳಿಸಲು ನರಹೃದಯ ರಭಸಗಳನದರಿಂ ||
ಪೊರಮಡುವ ಸಂಮೋಹಧೀರಗಂಭೀರಗಳ |
ಸರಸತೆಯೆ ಸುಂದರವೊ – ಮಂಕುತಿಮ್ಮ || 454 ||

ಪದ-ಅರ್ಥ: ನರಹೃದಯರಭಸಗಳನದರಿಂ= ನರಹೃದಯ+ ರಭಸಗಳನು+ ಅದರಿಂ, ಪೊರಮೊಡುವ= ಹೊರಡುವ

ವಾಚ್ಯಾರ್ಥ: ವಿಶ್ವಪ್ರಕೃತಿಯ ಶಕ್ತಿಗಳು, ತೇಜಗಳು ಪರಿಪರಿಯಾಗಿ ಮನುಷ್ಯನನ್ನು ಕೆರಳಿಸಿದಾಗ, ಅವನ ಹೃದಯದ ರಭಸದಿಂದ ಹೊರಡುವ ಮೋಹ, ಧೀರತೆ ಮತ್ತು ಗಂಭೀರತೆಗಳ ಸ್ವಾರಸ್ಯವೇ ಸುಂದರವಾದದ್ದು.

ವಿವರಣೆ: ಬದುಕಿರುವವರೆಗೆ ಪ್ರತಿಯೊಬ್ಬ ಮನುಷ್ಯನೂ ಪ್ರಪಂಚದೊಂದಿಗೆ ಯಾವುದೇ ಒಂದು ಬಗೆಯಲ್ಲಿ ಸಂಬಂಧ ಇಟ್ಟುಕೊಂಡಿರಲೇಬೇಕಾಗುತ್ತದೆ. ಅವನು ಪ್ರಪಂಚಕ್ಕೆ ಒಂದಿಷ್ಟನ್ನು ಕೊಡುವುದು, ಅದರಿಂದ ಪಡೆಯುವುದು ನಡೆದೇ ಇರುತ್ತದೆ. ಹೀಗೆ ಕೊಟ್ಟು ಪಡೆಯುವುದರಲ್ಲಿ ಅವನ ಸ್ವಭಾವದಲ್ಲಿ ಬದಲಾವಣೆಗಳು ಕಾಣುತ್ತವೆ.

ಮನುಷ್ಯನ ಬುದ್ಧಿ, ಹೊರಗಿನ ಪ್ರಕೃತಿಗೂ, ಅವನ ಅಂತಃಚೈತನ್ಯಕ್ಕೂ ನಡುವೆ ಸೇತುವೆಯಂತೆ ಕಾರ್ಯಮಾಡುತ್ತದೆ. ಪ್ರಕೃತಿಯಲ್ಲಿ ಮೂರು ಗುಣಗಳು ಸೇರಿಕೊಂಡಿವೆ. ಅವು ಸತ್ವ, ರಜಸ್ಸು ಮತ್ತು ತಮಸ್ಸುಗಳು. ಈ ಮೂರೂ ಗುಣಗಳು ಮನುಷ್ಯನಲ್ಲೂ ಇವೆ. ಅವುಗಳ ಪ್ರಮಾಣ ಒಬ್ಬೊಬ್ಬರಲ್ಲಿ ಬೇರೆಯಾಗಿರುತ್ತವೆ. ಅವು ಬಹುಪಾಲು ಅವನು ಬೆಳೆದ ವಾತಾವರಣ, ವಂಶವಾಹಿನಿ, ಸಂಪರ್ಕದಲ್ಲಿದ್ದ ಜನರ ನಡವಳಿಕೆಗಳಿಂದ ಉಂಟಾದದ್ದು. ಪ್ರಕೃತಿ ತನ್ನ ಗುಣಗಳಿಂದ ಮನುಷ್ಯನನ್ನು ಸೆಳೆದಾಗ, ಅವನಲ್ಲಿದ್ದ ಗುಣಗಳು ಅವುಗಳೊಂದಿಗೆ ಹೊಂದಾಣಿಕೆಯಾಗಿಯೋ, ವಿರುದ್ಧವಾಗಿಯೋ ವರ್ತಿಸಿ ಅವನಲ್ಲಿ ಬೇರೆ ಬೇರೆ ಭಾವಗಳನ್ನು ಉಕ್ಕಿಸುತ್ತದೆ. ಪ್ರಕೃತಿಯ ಸತ್ವಗುಣ ಮನುಷ್ಯನನ್ನು ಕೆಣಕಿದಾಗ ಅದು ಆತ್ಮಾಭಿಮುಖವಾಗುತ್ತದೆ, ನಡತೆಯಲ್ಲಿ ಸುಭಗತೆ, ಕರುಣೆ, ವಿನಮ್ರತೆಗಳು ಕಾಣುತ್ತವೆ. ಅಂತೆಯೇ ರಾಜಸ ಹಾಗೂ ತಾಮಸಗುಣಗಳನ್ನು ಪ್ರಕೃತಿ ಪ್ರಚೋದಿಸಿದಾಗ ವ್ಯಕ್ತಿಗಳ ಗುಣಚರ್ಯೆಗಳೇ ಬದಲಾಗುತ್ತವೆ. ತನ್ನ ಹೆಂಡತಿಯನ್ನು ಅಪಹರಣ ಮಾಡಿಕೊಂಡು ಹೋದ ದೈತ್ಯ ರಾವಣನೊಡನೆ ಭೀಕರ ಯುದ್ಧವನ್ನು ಮಾಡುವಾಗ ತನ್ನ ಶೌರ್ಯವನ್ನು ತೋರಿದ ರಾಮಚಂದ್ರ, ರಾವಣನ ವಧೆಯಾದೊಡನೆ ಕರುಣೆಯಿಂದ ಅವನ ಗೌರವದ ಅಂತ್ಯಕ್ರಿಯೆಯನ್ನು ಮಾಡಲು ವಿಭೀಷಣನಿಗೆ ಹೇಳುತ್ತಾನೆ! ಅದೇ ರಾಮ, ಸಮುದ್ರ ದಾರಿ ನೀಡುವುದಿಲ್ಲವೆಂದಾಗ, ಅತ್ಯಾಧಿಕ್ಯವಾದ ರೋಷದಿಂದ, ಬಾಣ ಬಿಟ್ಟು ಸಮುದ್ರವನ್ನೇ ಒಣಗಿಸಿಬಿಡುವುದಾಗಿ ಸೆಟೆದು ನಿಲ್ಲುತ್ತಾನೆ. ಪ್ರಾಣತ್ಯಾಗ ಮಾಡುತ್ತಿರುವ ಜಟಾಯುವನ್ನು ನೋಡಿ ದುಃಖದಿಂದ ಕಣ್ಣೀರು ಸುರಿಸುತ್ತಾನೆ. ಸೀತೆಯ ಮೇಲೆ ಅನ್ಯಾದೃಶವಾದ ಪ್ರೀತಿ ತೋರಿಸುವ ಸೀತಾರಾಮ, ಲಂಕೆಯಲ್ಲಿ ಯುದ್ಧಮುಗಿದ ನಂತರ, ಆಕೆಯ ಮೇಲೆ ಏನೂ ಪ್ರೀತಿ ಇಲ್ಲದವರಂತೆ ಅಗ್ನಿಪರೀಕ್ಷೆಗೆ ಕರೆ ನೀಡುತ್ತಾನೆ. ಇವು ಪ್ರಕೃತಿಯ ಪ್ರಚೋದನೆಯಿಂದಾದ ಬದಲಾವಣೆಗಳು.

ನಾವು ವಾಹನದಲ್ಲಿ ಕುಳಿತು ಹಿಮಾಲಯ ಪರ್ವತದ ಶ್ರೇಣಿಗಳಲ್ಲಿ ಸಾಗುವಾಗ, ಸೃಷ್ಟಿ ಸೌಂದರ್ಯ ಹೃದಯಕ್ಕೆ ಆಲ್ಹಾದವನ್ನುಂಟುಮಾಡುತ್ತದೆ. ಆದರೆ ಮುಂದಿದ್ದ ಕಾರು ಜಾರಿ ಪ್ರಪಾತಕ್ಕುರುಳಿದಾಗ, ಆಲ್ಹಾದ ಮರೆಯಾಗಿ ಗಾಬರಿಯಾಗುತ್ತದೆ. ಇದನ್ನೇ ಕಗ್ಗ ಹೇಳುತ್ತದೆ. ಪ್ರಕೃತಿಯ ಶಕ್ತಿಗಳು, ತೇಜಗಳು ಮನುಷ್ಯನ ಹೃದಯವನ್ನು ಕೆರಳಿಸಿದಾಗ ಅವನಿಂದ ಹೊರಡುವ ಮೋಹದ, ಧೀರತೆಯ ಮತ್ತು ಗಂಭೀರ ಪ್ರತಿಕ್ರಿಯೆಗಳ ಸರಸತೆಯೇ ಸುಂದರವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT