ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ- ಬೆರಗಿನ ಬೆಳಕು| ಕೆಸರು ದಾರಿಯ ಪಯಣ

Last Updated 23 ಜೂನ್ 2022, 19:30 IST
ಅಕ್ಷರ ಗಾತ್ರ

ಸಿರಿಮಾತ್ರಕೇನಲ್ಲ, ಪೆಣ್ ಮಾತ್ರಕೇನಲ್ಲ|
ಕರುಬಿ ಜನ ಕೆಸರು ದಾರಿಯಲಿ ಸಾಗುವುದು||
ಬಿರುದ ಗಳಿಸಲಿಕೆ ತಪ, ಹೆಸರ ಪಸರಿಸಲೆತಪ|
ದುರಿತಗಳ್ಗೆಣೆಯುಂಟೆ? – ಮಂಕುತಿಮ್ಮ ||657||

ಪದ-ಆರ್ಥ: ಸಿರಿಮಾತ್ರಕೇನಲ್ಲ= ಸಿರಿಮಾತ್ರಕೆ+ ಏನಲ್ಲ, ಪೆಣ್= ಹೆಣ್ಣು, ಕರುಬಿ= ಹೊಟ್ಟೆಕಿಚ್ಚುಪಟ್ಟು, ಪಸರಿಸಲೆತಪ= ಪಸರಿಸಲು+ ತಪ, ದುರಿತಗಳ್ಗೆಣೆಯುಂಟೆ= ದುರಿತಗಳ್ಗೆ (ಕೆಟ್ಟತನಗಳಿಗೆ)+ ಎಣೆಯುಂಟೆ.

ವಾಚ್ಯಾರ್ಥ: ಬರೀ ಹಣಕ್ಕಾಗಿಯಲ್ಲ, ಹೆಣ್ಣಿಗಾಗಿಯಲ್ಲ, ಜನ ಹೊಟ್ಟೆಕಿಚ್ಚಿನಿಂದ ಕೆಸರಿನ ದಾರಿಯಲ್ಲಿ ಸಾಗುತ್ತಿರುವುದು. ಬಿರುದುಗಳನ್ನು ಪಡೆಯಲು ಪ್ರಯತ್ನ, ಹೆಸರನ್ನು ಹರಡಲು ತಪಸ್ಸು, ಇಂಥ ಕೆಟ್ಟತನಗಳಿಗೆ ಮಿತಿಯುಂಟೆ?

ವಿವರಣೆ: ಇತಿಹಾಸದ, ಪುರಾಣದ ಪುಟಗಳನ್ನು ತಿರುವಿ ನೋಡಿದರೆ ಐಶ್ವರ್ಯಕ್ಕಾಗಿ, ಹೆಣ್ಣಿಗಾಗಿ ನಡೆದ ಅನಾಹುತಗಳಿಗೆ ಕೊನೆಯೇ ಇಲ್ಲ. ಸ್ಪಾರ್ಟಾದ ರಾಣಿ, ಅಪರೂಪದ ಸುಂದರಿ, ಹೆಲೆನ್‍ಳನ್ನು ಟ್ರೋಜನ್ ರಾಜಕುಮಾರ ಪ್ಯಾರಿಸ್ ಅಪಹರಿಸಿಕೊಂಡು ಹೋದ. ಅದರ ಪರಿಣಾಮ ಟ್ರೋಜನ್ ಮಹಾಯುದ್ಧ. ಲಕ್ಷಾಂತರ ಜನರ ಆಹುತಿಯಾಯಿತು.

ಇಂದ್ರಪ್ರಸ್ತದಲ್ಲಿ ರಾಜಸೂಯ ಯಾಗದ ನಂತರ ಧರ್ಮರಾಜನ ಶ್ರೀಮಂತಿಕೆ ದುರ್ಯೋಧನನ ಹೊಟ್ಟೆಯಲ್ಲಿ ಕಿಚ್ಚನ್ನೆಬ್ಬಿಸಿತು. ಮೊದಲೇ ಇದ್ದ ದ್ವೇಷ ಭುಗಿಲೆಂದಿತು. ಆ ದ್ವೇಷ ಸಾಧನೆಗೆ ಕುರುಕ್ಷೇತ್ರ ಯುದ್ಧ, ಅಪಾರ ಪ್ರಾಣಹಾನಿ.

ಕಗ್ಗ, ಹೆಣ್ಣಿಗಾಗಿ, ಹಣಕ್ಕಾಗಿ ಅಸೂಯೆಯಿಂದ ಹೋರಾಡುವುದನ್ನು ಕೆಸರು ದಾರಿ ಎನ್ನುತ್ತದೆ. ಅದು ನಿಜವಾಗಿಯೂ ಕೆಸರಿನ ದಾರಿ. ಅದರಲ್ಲಿ ನಡೆಯುವವ ಭದ್ರವಾಗಿ ಕಾಲೂರಲಾರ, ಜಾರಿ ಬೀಳುವ ಸಾಧ್ಯತೆಗಳೇ ಹೆಚ್ಚು. ಅದಲ್ಲದೆ ಮನುಷ್ಯ ಕೆಸರಿನಲ್ಲಿ ನಡೆದಾಗ ಯಾರೂ ಅವರ ಹತ್ತಿರ ಬರುವುದಿಲ್ಲ. ಅವನ ಬಳಿ ಯಾರು ಹೋದರೂ ಅವರಿಗೂ ಕೆಸರು ತಗುಲುವುದು ಖಂಡಿತ.

ಕಗ್ಗ ಹೇಳುತ್ತದೆ, ಜನ ಹೀಗೆ ಕೆಸರು ದಾರಿಯಲ್ಲಿ ಸಾಗುವುದು ಕೇವಲ ಹಣಕ್ಕಾಗಿ ಮತ್ತು ಹೆಣ್ಣಿಗಾಗಿ ಅಲ್ಲ. ಬಹಳ ಜನ ಬೆನ್ನುಹತ್ತಿ ಓಡಾಡುವುದು ಬಿರುದುಗಳನ್ನು ಗಳಿಸಲಿಕ್ಕೆ ಮತ್ತು ತಮ್ಮ ಹೆಸರನ್ನು ಪಸರಿಸಲಿಕ್ಕೆ. ನಾವೆಲ್ಲ ಕಂಡಿದ್ದೇವೆ, ಪ್ರಶಸ್ತಿಗಳನ್ನು ಪಡೆಯುವುದಕ್ಕೆ ಎಷ್ಟು ಒದ್ದಾಡುತ್ತಾರೆ ಜನ! ಮೊದಲು ಡಾಕ್ಟರೇಟ್ ಪಡೆಯಲು ಎಷ್ಟೊಂದು ಪರಿಶ್ರಮಪಡಬೇಕಿತ್ತು. ಆ ಪ್ರಶಸ್ತಿಗೆ ಒಂದು ಬೆಲೆ ಇತ್ತು. ಈಗ, ಒಂದು ದೊಡ್ಡ ಸಭಾಗ್ರಹದಲ್ಲಿ ಜನರನ್ನು ಕೂಡಿ ಹಾಕಿ, ಇಷ್ಟು ಹಣ ಕೊಟ್ಟರೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಹಂಚುವ ಕಾರ್ಯಗಳು ನಡೆದದ್ದು ವಾಸ್ತವ. ಸಣ್ಣಸಣ್ಣ ದಾನಗಳನ್ನು ಮಾಡಿ ಬಹುದೊಡ್ಡ ಹೆಸರು ಗಳಿಸುವ ಪ್ರಯತ್ನಗಳು, ಯಾರ ಸಾಧನೆಗೋ, ತಮ್ಮ ಹೆಸರು ಜೋಡಿಸಿಕೊಂಡು ಸುಲಭದಲ್ಲಿ ಹೆಸರು ಪಡೆಯುವ ತಂತ್ರಗಳು, ಇವೆಲ್ಲ ದುರಿತಗಳೇ, ಕೆಟ್ಟ ಕೆಲಸಗಳೇ.

ಕಗ್ಗದ ಸೂಚನೆಯೆಂದರೆ, ಈ ದುರಿತ ಕಾರ್ಯಗಳು ಬೇಕೇ? ಹೆಸರಿಗೋಸ್ಕರ ಈ ಒದ್ದಾಟ, ಸಂಕಟದ ಅವಶ್ಯಕತೆ ಇದೆಯೇ? ಅದೊಂದು ಕೀಳಾದ ಕೆಸರುದಾರಿಯ ಪ್ರಯಾಣ. ಸ್ವಂತಕ್ಕೂ ಸುಖವಿಲ್ಲ, ಪ್ರಪಂಚದ ದೃಷ್ಟಿಯಲ್ಲೂ ಅಸಹ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT