ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಆನಂದದ ಲೀಲೆ

Last Updated 30 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಶಶ್ಪದ್ಪಿಕಾಸನ ಹ್ರಾಸನ ಕ್ರಮಗಳಿಂ |
ವಿಶ್ವದಲಿ ನರ್ತಿಸುತೆ ಪೌರುಷೋನ್ನತಿಯೊಳ್ ||
ಸ್ಪಸ್ವರೂಪವನರಸುವಾಟ ಪರಚೇತನದ |
ಹೃಷ್ಯದ್ವಿಲಾಸವೆಲೊ – ಮಂಕುತಿಮ್ಮ || 531 ||

ಪದ-ಅರ್ಥ: ಶಶ್ಪದ್ವಿಕಾಸನ=ಶಶ್ವತ್
(ಶಾಶ್ವತವಾದ)+ವಿಕಾಸನ(ಅರಳುವಿಕೆ), ಹ್ರಾಸನ=ಕುಗ್ಗುವ, ಮುಚ್ಚಿಕೊಳ್ಳುವ, ಪುರುಷೋನ್ನತಿ=ಮನುಷ್ಯನ ಉನ್ನತಿ, ಸ್ಪಸ್ವರೂಪವನರಸುವಾಟ=ಸ್ಪಸ್ವರೂಪವನು(ತನ್ನ ನಿಜರೂಪವನ್ನು)+ಅರಸುವ(ಹುಡುಕುವ)+ಆಟ. ಹೃಷ್ಯದ್ಪಿತ್‌ಲಾಸ=ಹೃಷ್ಯತ್ (ಆನಂದದ)+
ವಿಲಾಸ(ಕ್ರೀಡೆ, ಸಂಭ್ರಮ).

ವಾಚ್ಯಾರ್ಥ: ಶಾಶ್ವತವಾದ ಶಕ್ತಿಯೊಂದು, ವಿಕಸನ ಮತ್ತು ಆಕುಂಚನದ ಕ್ರಿಯೆಗಳಿಂದ ಪ್ರಪಂಚದಲ್ಲಿ ನರ್ತಿಸುತ್ತ, ಮನುಷ್ಯನ ಉನ್ನತಿಯಲ್ಲಿ ತನ್ನ ನಿಜಸ್ವರೂಪವನ್ನು ಹುಡುಕಿಕೊಳ್ಳುವ ಆಟವೇ ಪರಚೇತನದ ಆನಂದದ ಸಂಭ್ರಮ.

ವಿವರಣೆ: ಜಗತ್ತಿನ ಮೂಲ ಸ್ವಭಾವ ಆವರ್ತನಶೀಲತೆ. ಇಡೀ ವಿಶ್ವಚರಿತ್ರೆಯೇ ಅದರ ಆಕುಂಚನ ಹಾಗೂ ವಿಸ್ತರಣದ ಕಥೆ. ಒಂದು ಪುಟ್ಟ ಬೀಜದಿಂದ ಹುಟ್ಟಿದ ಸಸಿ ಬೃಹತ್ ಮರವಾಗಿ ಸಂಭ್ರಮಿಸುತ್ತದೆ. ಒಂದು ದಿನ ಅದು ಮತ್ತೆ ಬೀಜದಲ್ಲಿಯೇ ಪರ್ಯಾವಸನವಾಗುತ್ತದೆ. ಮನುಷ್ಯ ದೇಹದಲ್ಲೂ ಅದೇ ಆವರ್ತತೆ. ಬಾಲ್ಯ, ಯೌವನ, ವೃದ್ಧಾಪ್ಯ ನಂತರ ಸಾವು. ಸಾವು ಮತ್ತೊಂದು ಹುಟ್ಟಿಗೆ ಬೀಜ. ಇದು ಜೀವನ ಕಾಲಚಕ್ರ.

ಈ ಪ್ರಪಂಚ, ಗ್ರಹ, ತಾರೆಗಳು ಸೂರ್ಯ ಒಂದು ದಿನ ಸೃಷ್ಟಿಯಾಗಿವೆಯೆಂದರೆ, ಅವು ಕಾಲಚಕ್ರದಲ್ಲಿ ಸಿಲುಕಿವೆ ಎಂದೇ ಅರ್ಥ. ಅವು ಒಂದು ದಿನ ಅಳಿದು ಮರೆಯಾಗಲೇಬೇಕು. ಅದೇ ಜಗತ್ಪ್ರಳಯ ಆನಂತರ ಮತ್ತೆ ಹುಟ್ಟು, ಬೆಳವಣಿಗೆ, ಸಾವು. ಈ ಚಕ್ರವನ್ನು ಯಾವ ಶಕ್ತಿಯೂ ನಿಲ್ಲಿಸಲು ಸಾಧ್ಯವಿಲ್ಲ. ರೋಮ್ ಸಾಮ್ರಾಜ್ಯ ತಲೆ ಎತ್ತಿತು. ಪ್ರಚಂಡ ಶಕ್ತಿಯಾಗಿ ಬೆಳಗಿ ಪ್ರಪಂಚದ ಕಣ್ಣು ಕುಕ್ಕಿತು. ಮುಂದೆ ಹೇಳ ಹೆಸರಿಲ್ಲದೆ ಮರೆಯಾಯಿತು. ಈಗ ಅಲ್ಲಿ ಆ ಸಮೃದ್ಧ ಸಾಮ್ರಾಜ್ಯದ ನೆನಪಿನಲ್ಲಿ ಕಟ್ಟಡಗಳು ಪ್ರವಾಸಿಗರನ್ನು ಸೆಳೆಯುವ ಪಳೆಯುಳಿಕೆಗಳಾಗಿ ನಿಂತಿವೆ. ಎಷ್ಟೊಂದು ಜನ ಅವತಾರಿಗಳು ಬಂದರು, ತಮ್ಮ ಧರ್ಮದ ಸಿದ್ಧಾಂತಗಳನ್ನು ಪಸರಿಸಿದರು. ಕೊನೆಗೆ ಒಬ್ಬರೂ ನೆಲೆ ನಿಲ್ಲದೆ ಕಣ್ಮರೆಯಾದರು. ಹೀಗೆ ಆವರ್ತನಶೀಲವಾದ ಪ್ರಪಂಚವನ್ನು ನಿಗ್ರಹಿಸುವ ಶಕ್ತಿಯೊಂದಿದೆಯಲ್ಲ! ಅದು ಪರಿವರ್ತನೆಗೆ ನಿಲುಕದ ವಸ್ತು. ಇದೊಂದು ವಿಶೇಷ. ಸದಾ ಪರಿವರ್ತನಶೀಲ ಪ್ರಪಂಚಕ್ಕೆ ಮಧ್ಯದಲ್ಲಿ, ಅದಕ್ಕೆ ಕಾರಣನಾಗಿ ಅಪರಿವರ್ತನೀಯ ಭಗವಂತ ಇದ್ದಾನೆ. ಅವನನ್ನು ಗುರುತಿಸುವುದು ಸಾಧನೆಗಳಿಂದಲೇ. ತಾನು ಒಂದು ದಿನ ಇಲ್ಲವಾಗುತ್ತೇನೆ ಎಂದು ತಿಳಿದೂ ಸಾಧನೆಯ ಬೆನ್ನು ಹತ್ತಿ ಸಾಧಿಸುವುದು ಪುರುಷೋನ್ನತಿ. ಹಾಗಾಗಿರದಿದ್ದರೆ ಪ್ರಪಂಚ ಇಷ್ಟು ಬೃಹತ್ತಾಗಿ, ಸಮೃದ್ಧವಾಗಿ ಬೆಳೆಯುತ್ತಿತ್ತೇ?

ರೋಮ್ ಸಾಮ್ರಾಜ್ಯ ಬಿದ್ದುದನ್ನು ಕಂಡರೂ ಮೆಸಿಡೋನಿಯನ್, ಟ್ಯಾಂಗ್, ಜಪಾನ ಸಾಮ್ರಾಜ್ಯ, ಯುವಾನ ರಾಜ್ಯ, ಫ್ರೆಂಚ್ ಸಾಮ್ರಾಜ್ಯ, ಮಂಗೋಲ್ ಮತ್ತು ಬ್ರಿಟಿಶ್ ಸಾಮ್ರಾಜ್ಯಗಳು ತಲೆ ಎತ್ತಿದುವೇಕೆ? ಎಲ್ಲ ಸಾಧನೆಗಳ ಮೂಲ ಉದ್ದೇಶ ತಮ್ಮಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಬಳಸಿ, ತಮ್ಮ ನಿಜಸ್ವರೂಪವನ್ನು ಕಂಡುಕೊಳ್ಳುವುದು. ಈ ಪುರುಷೋನ್ನತಿಯ ಪಥದಲ್ಲಿ ಮನೋವಿಕಾಸ. ಅದು ಪೂರ್ಣವಾದಾಗ ದೇವದರ್ಶನ! ಹೀಗೆ ನಮ್ಮೆಲ್ಲರನ್ನು, ಸ್ವಶೋಧದಲ್ಲಿ ತೊಡಗಿಸುವುದೇ ಪರಸತ್ವದ ಆನಂದದ ಲೀಲೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT