ಶನಿವಾರ, ಏಪ್ರಿಲ್ 1, 2023
26 °C

ಬೆರಗಿನ ಬೆಳಕು: ಮಿತದಲ್ಲಿ ಅಮಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಅಂಬುಧಿಯ ಮಡಕೆಯಲಿ, ಹೊಂಬಿಸಿಲ ಕಿಟಕಿಯಲಿ |
ತುಂಬಿಕೊಳ್ಳುವ ಬಡವನೈಶ್ವರ್ಯದಂತೆ ||
ಬಿಂಬದೊಳಗಮಿತ ಸತ್ತ್ವವ ಪಿಡಿದಿಡುವ ಭಕ್ತಿ |
ಯಿಂಬು ಕಿಂಚಿನ್ಮತಿಗೆ – ಮಂಕುತಿಮ್ಮ || 491 ||

ಪದ-ಅರ್ಥ: ಅಂಬುಧಿ= ಸಮುದ್ರ, ಬಿಂಬದೊಳಗಮಿತ= ಬಿಂಬದೊಳಗೆ (ವಿಗ್ರಹದೊಳಗೆ)+ ಅಮಿತ (ಅನಂತವಾದ), ಪಿಡಿದಿಡುವ= ಹಿಡಿದು ಇಡುವ, ಇಂಬು= ಅವಕಾಶ, ಸಾಧ್ಯತೆ, ಕಿಂಚಿನ್ಮತಿ= ಸ್ವಲ್ಪ ಬುದ್ಧಿ.

ವಾಚ್ಯಾರ್ಥ: ಸಮುದ್ರವನ್ನು ಮಡಕೆಯಲ್ಲಿ, ಸೂರ್ಯನ ಬಿಸಿಲನ್ನೆಲ್ಲ ಕಿಟಕಿಯಲ್ಲಿ, ತುಂಬಿಕೊಳ್ಳಬಯಸುವ ಬಡವನ ಐಶ್ವರ್ಯದಂತೆ, ವಿಗ್ರಹದಲ್ಲಿ ಅಪಾರ ಭಗವದ್ ಶಕ್ತಿಯನ್ನು ಹಿಡಿದಿಡುವ ಭಕ್ತಿಯೇ ಮಿತವಾದ ಬುದ್ಧಿಗೆ ಇರುವ ಅವಕಾಶ.

ವಿವರಣೆ: ಸ್ವಾಮಿ ವಿವೇಕಾನಂದರು ಭಾರತದಲ್ಲೆಲ್ಲ ಪ್ರವಾಸ ಮಾಡುವಾಗ ರಾಜಸ್ಥಾನದ ಅಳ್ವಾರ್ ರಾಜ್ಯಕ್ಕೆ ಬಂದರು. ಅಲ್ಲಿಯ ರಾಜ ಮಂಗಲಸಿಂಗ್ ಅವರಿಗೆ ಆದರದ ಸ್ವಾಗತ ನೀಡಿದ. ಅವನೊಡನೆ ಚರ್ಚಿಸುವಾಗ ಆತನಿಗೆ ವಿಗ್ರಹಗಳ ಬಗ್ಗೆ ಗೌರವವಿಲ್ಲವೆಂದು ತಿಳಿಯಿತು. ಆತ, ‘ವಿಗ್ರಹಗಳನ್ನು ಪೂಜಿಸುವುದು ಮೂಢನಂಬಿಕೆ. ನಮ್ಮ ಮುಂದೆಯೇ ಇದ್ದ ಕಲ್ಲನ್ನು, ಮನುಷ್ಯನೇ ಕೆತ್ತಿ ವಿಗ್ರಹಮಾಡಿದಾಗ, ಅದನ್ನು ದೇವರೆಂದು ಪೂಜಿಸುವುದು ಹೇಗೆ? ದೇವರು ನಿರಾಕಾರ, ಅವನನ್ನು ಮೂರ್ತಿಯಲ್ಲಿ ಕಾಣುವುದು ಸರಿಯಲ್ಲ’ ಎಂದ. ಆಗ ವಿವೇಕಾನಂದರು ರಾಜನ ದಿವಾನರನ್ನು ಕರೆದು, ರಾಜನ ಮುಂದೆಯೇ, ಗೋಡೆಯ ಮೇಲೆ ನೇತು ಹಾಕಿದ್ದ ಮಹಾರಾಜರ ತಂದೆಯ ಚಿತ್ರಪಟವನ್ನು ತೋರಿಸಿ, ‘ಅದರ ಮೇಲೆ ನೀವು ಉಗುಳುವಿರಾ?’ ಎಂದು ಕೇಳಿದರು. ದಿವಾನರಿಗೆ ಹೆದರಿಕೆ, ರಾಜನಿಗೆ ಮುಜುಗರ. ಆತ, ‘ಸ್ವಾಮಿ, ಅದು ಮಹಾರಾಜರ ತಂದೆಯ ಚಿತ್ರ. ಹಾಗೆ ಮಾಡುವುದು ಅಪಚಾರ’ ಎಂದ. ಆಗ ವಿವೇಕಾನಂದರು, ‘ಅದು ರಾಜರ ಚಿತ್ರ, ರಾಜರಲ್ಲ. ಅದೊಂದು ನಿರ್ಜೀವ ವಸ್ತು. ಕಾಗದದ ಮೇಲೆ ನಿಮ್ಮ ಮುಂದೆಯೇ ಚಿತ್ರಕಾರ ಬಿಡಿಸಿದ್ದು. ದಿವಾನರು ಉಗುಳುವುದಕ್ಕೆ ಯಾಕೆ ಹಿಂಜರಿದರೆಂದರೆ, ಆ ಚಿತ್ರ ನಿಮ್ಮ ತಂದೆಯವರನ್ನು ನೆನಪಿಸುತ್ತದೆ, ಗೌರವವನ್ನು ನೆನಪಿಗೆ ತರುತ್ತದೆ. ಚಿತ್ರ ಮಹಾರಾಜರ ರೂಪವೇ. ಆದ್ದರಿಂದ ಅದನ್ನು ಪೂಜಿಸುತ್ತೀರಿ’ ಎಂದರು. ರಾಜನಿಗೆ ವಿಗ್ರಹಾರಾಧನೆಯಲ್ಲಿ ನಂಬಿಕೆ ಬಂದಿತು.

ಶ್ವೇತಾಶ್ವತರ ಉಪನಿಷತ್ತು ದೇವರನ್ನು, ‘ಏಕೋ ದೇವಃ ಸರ್ವ ಭೂತೇಷು ಗೂಢಃ ಸರ್ವವ್ಯಾಪೀ ಸರ್ವಭೂತಾತ್ಮರಾತ್ಮಾ’ ಎಂದು ವರ್ಣಿಸುತ್ತದೆ. ಹಾಗೆಂದರೆ ಒಬ್ಬನೇ ದೇವರು ಸರ್ವ ಜೀವಜಂತುಗಳಲ್ಲಿ ನೆಲೆಸಿದ್ದಾನೆ. ರಹಸ್ಯವಾಗಿ ಎಲ್ಲದರಲ್ಲಿ ಆತ್ಮರೂಪದಲ್ಲಿದ್ದಾನೆ. ದೇವರಿಗೆ ಒಂದೇ ಎಂಬ ಆಕಾರವಿಲ್ಲ, ಬಣ್ಣವಿಲ್ಲ. ಎಲ್ಲ ಆಕಾರಗಳೂ ಅವನವೇ. ಲೋಕದ ಜನ ಅದನ್ನು ಕಾಣಲರಿಯರು, ರುಚಿಸಲರಿಯರು, ಮುಟ್ಟಲರಿಯರು. ಆದರೆ ಆ ರೂಪ ಅನುಭವಜನ್ಯವಾಗಬೇಕಾದರೆ, ಸಾಧಕನಿಗೊಂದು ರೂಪದ ಚಿಹ್ನೆ ಬೇಕು. ಭಕ್ತಿ ಹೆಪ್ಪುಗಟ್ಟಲು ವಿಗ್ರಹದ ಆಕಾರ ಅಗತ್ಯವೆನ್ನಿಸಿತು. ದೇಶದ ಧ್ವಜ ಇಡೀ ದೇಶವನ್ನು ಪ್ರತಿನಿಧಿಸುವಂತೆ ವಿಗ್ರಹ, ಅನಂತವಾದ, ನಿರ್ಗುಣವಾದ, ಸರ್ವವ್ಯಾಪಿಯಾದ ತತ್ವವನ್ನು ಭಕ್ತನ ಮಿತವಾದ ಬುದ್ಧಿಗೆ ತಲುಪಿಸುವ ಸಾಧನ. ಹೀಗೆ ಅಮಿತವಾದ ಶಕ್ತಿಯನ್ನು ಮಿತವಾದ ಬುದ್ಧಿಯ ಮನುಷ್ಯನಿಗೆ ತೋರುವ ಸಂಕೇತವಾದ ಬಿಂಬ, ಭಕ್ತಿಗೆ ಕಾರಣವಾಗುತ್ತದೆ. ಇದನ್ನು ಕಗ್ಗ ಕೆಲವು ಸುಂದರ ಉಪಮೆಗಳೊಂದಿಗೆ ವರ್ಣಿಸುತ್ತದೆ. ಸಮುದ್ರವನ್ನು ಮಡಕೆಯಲ್ಲಿ ತುಂಬಿಸಿಕೊಂಡು, ಬಿಸಿಲುರಾಶಿಯನ್ನು ಕಿಟಕಿಯೊಳಗೆ ತೂರಿಸಿಕೊಂಡು, ಸಂತೋಷಪಡುವ ಬಡವನಂತೆ, ವಿಗ್ರಹದಲ್ಲಿ ಅನಂತವನ್ನು ಕಾಣುವ ಅವಕಾಶ ಭಕ್ತನಿಗೆ, ಸಾಧಕನಿಗೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು