ಸೋಮವಾರ, ಮೇ 23, 2022
28 °C

ಬೆರಗಿನ ಬೆಳಕು: ನೈವೇದ್ಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ದೇವನೇನತಿಶಯಿತಮಾನಿಸನೆ ಭೋಗಕ್ಕೆ?|
ಹೂವುಣಿಸು ಮುಡುಪೊಡವೆಯವನಿಗಂ ಬೇಕೆ?||
ಆವುದೊಳ್ಳಿತೊ ತನಗೆ ನರನದನು ಪರಮಂಗೆ|
ನೈವೇದಿಪುದು ಸಾಜ – ಮಂಕುತಿಮ್ಮ ||500||

ಪದ-ಅರ್ಥ: ದೇವನೇನತಿಶಯಿತಮಾನಿಸನೆ= ದೇವನೇನು+ ಅತಿಶಯಿತ (ಅತಿಶಯವಾದ, ಅಮಾನುಷವಾದ)+ ಮಾನಿಸನೆ (ಮನುಷ್ಯನೆ), ಹೂವುಣಿಸು= ಹೂವು+ ಉಣಿಸು (ನೈವೇದ್ಯ), ಮುಡುಪೊಡವೆಯವನಿಗಂ= ಮುಡುಪು+ ಒಡವೆ+ ಅವನಿಗಂ(ಅವನಿಗೂ), ಆವುದೊಳ್ಳಿತೊ=ಆವುದು+ ಒಳ್ಳಿತೊ, ನೈವೇದಿಪುದು= ನೈವೇದ್ಯಮಾಡುವುದು, ಸಾಜ= ಸಹಜ.

ವಾಚ್ಯಾರ್ಥ: ಭೋಗದಲ್ಲಿ ದೇವರೇನು ಅತಿಮಾನುಷನೆ? ಹೂವು, ನೈವೇದ್ಯ, ಮುಡುಪು, ಒಡವೆಗಳು ಅವನಿಗೂ ಬೇಕೆ? ಮನುಷ್ಯ ತನಗೆ ಯಾವುದು ಹಿತವೊ, ಶ್ರೇಷ್ಠವೊ, ಅದನ್ನು ದೇವರಿಗೆ ಅರ್ಪಿಸುವುದು ಸಹಜ.

ವಿವರಣೆ: ನಾನೊಂದು ಜಾಹೀರಾತನ್ನು ಓದಿದ್ದೆ. ಅದರಲ್ಲಿ ಯಾವ ದೇವರಿಗೆ ಯಾವ ಪದಾರ್ಥ ಇಷ್ಟ ಮತ್ತು ಯಾವುದನ್ನು ನೈವೇದ್ಯ ಮಾಡಬೇಕು ಎಂದು ದಾಖಲಿಸಿದ್ದರು. ಗಣೇಶನಿಗೆ ಸಿಹಿತಿಂಡಿಗಳು ಇಷ್ಟ. ಅದರಲ್ಲೂ ಮೋತೀ ಚೂರು ಲಡ್ಡು ಮತ್ತು ಮೋದಕಗಳು ಅತ್ಯಂತ ಪ್ರೀತಿ. ಸರಸ್ಪತಿಗೆ ಕಿಚಡಿ ಎಂದರೆ ಬಲುಪ್ರೀತಿ. ಅದರೊಂದಿಗೆ ಆಕೆಗೆ ಹಾಲು, ಪಂಚಾಮೃತ, ಮೊಸರು, ಬಿಳಿಬೆಣ್ಣೆ ನೈವೇದ್ಯ ಮುಖ್ಯ. ಶಿವನಿಗೆ ಪಾನ್ ಎಲೆಗಳು, ಧತೂರಾ ಮತ್ತು ಬಿಲ್ವಪತ್ರೆಗಳ ಅರ್ಪಣೆಯೊಂದಿಗೆ ಬೆಲ್ಲ, ಚಿರೋಟಿಗಳ ನೈವೇದ್ಯ ಅವಶ್ಯ. ಹನುಮಂತನಿಗೆ ಹಲ್ವಾ, ಪಂಚಕಜ್ಜಾಯ, ಬೆಲ್ಲದ ಉಂಡೆ, ಕೇಸರಿ ಅಕ್ಕಿ ಮತ್ತು ಬೇಸನ್ ಲಾಡೂ ನೈವೇದ್ಯವೇ ಸರಿ.

ಇನ್ನೊಂದೆಡೆಗೆ ತೀಕ್ಷ್ಣವಾದ ಎಚ್ಚರಿಕೆಯ ಮಾತೊಂದು ಗಾಬರಿ ಹುಟ್ಟಿಸುವಂತಿತ್ತು. ಅತಿಯಾದ ಹುಳಿ, ಅತಿಯಾದ ಕಾರ ಮತ್ತು ಅತಿ ಬಿಸಿಯಾದ ಖಾದ್ಯಗಳನ್ನು ನೈವೇದ್ಯ ಮಾಡಿದರೆ ಭಗವಂತನ ಅವಕೃಪೆ ಕಟ್ಟಿಟ್ಟದ್ದು. ನೈವೇದ್ಯವನ್ನು ತಾಮ್ರ, ಹಿತ್ತಾಳೆ ಅಥವಾ ಮುಖ್ಯವಾಗಿ ಬೆಳ್ಳಿಯ ಪಾತ್ರೆಗಳಲ್ಲಿಟ್ಟರೆ ಸರಿ. ಅಪ್ಪಿತಪ್ಪಿ ನೀವೇನಾದರೂ ಗಾಜಿನ, ಅಲ್ಯೂಮಿನಿಯಂ, ಸ್ಟೀಲ್ ಅಥವಾ ಪ್ಲಾಸ್ಲಿಕ್ ಪಾತ್ರೆಗಳಲ್ಲಿ ನೈವೇದ್ಯ ಇಟ್ಟಿರೋ, ದೇವರ ಕ್ರೂರದೃಷ್ಟಿ ತಪ್ಪಿದ್ದಲ್ಲ. ಹೀಗೆ ಹರಿಯತ್ತದೆ ನೈವೇದ್ಯ ವಿಧಾನದ ಚಿಂತನಾ ಲಹರಿ. ಆದರೆ ಭಗವದ್ಗೀತೆಯಲ್ಲಿ ಬರುವ ಮಾತು ಬೇರೆ.

‘ಪತ್ರಂ ಪುಷ್ಪಂ ಫಲಂ ತೋಯಂ ಯೋಮೇ ಭಕ್ಷ್ಯಾ ಪ್ರಯಚ್ಛತಿ|

ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ’

‘ಎಲೆ, ಹೂವು, ಹಣ್ಣು, ನೀರು ಇವು ಯಾವುದನ್ನಾದರೂ ಭಕ್ತಿಯಿಂದ ಸಮರ್ಪಿಸಿದ್ದನ್ನು ನಾನು ಸ್ವೀಕರಿಸುತ್ತೇನೆ’. ಇದು ಕೃಷ್ಣನ ಅಪೇಕ್ಷೆ. ಹಾಗಾದರೆ ನಾವೇಕೆ ಈ ಆಡಂಬರಗಳನ್ನು ಸೃಷ್ಟಿಮಾಡಿಕೊಂಡೆವು? ಇವು ಆಡಂಬರಗಳಲ್ಲ, ಗೌರವ ತೋರಿಸುವ ರೀತಿ. ಮನೆಗೆ ಯಾರಾದರೂ ಹಿರಿಯರು, ನಮ್ಮ ಅತ್ಯಂತ ಗೌರವಕ್ಕೆ ಪಾತ್ರರಾದವರು ಬಂದರೆ, ಶುದ್ಧವಾದ, ರುಚಿಯಾದ, ನಮಗೆ ತುಂಬ ಒಳ್ಳೆಯದು ಎನ್ನಿಸಿದ ವಸ್ತುಗಳನ್ನು ನೀಡುವುದಿಲ್ಲವೇ? ಭಗವಂತ ಎಲ್ಲರಿಗಿಂತ ದೊಡ್ಡವನಲ್ಲವೆ? ಆದ್ದರಿಂದ ಸರ್ವೋತ್ಕೃಷ್ಟವಾದದ್ದನ್ನೇ ಕೊಡಬೇಕು. ಕಗ್ಗ ಈ ಮಾತನ್ನೇ ಹೇಳುತ್ತದೆ. ದೇವರಿಗೆ ಏನೂ ಬೇಡ. ಎಲ್ಲವೂ ಅವನದೇ ಆಗಿರುವುದಾಗಿರುವಾಗ ಅವನಿಗೆ ಕೊಡುವುದೇನು? ಮನುಷ್ಯ ತನಗೆ ಯಾವುದು ಶ್ರೇಷ್ಠವೆನ್ನಿಸುತ್ತದೋ ಅದನ್ನೇ ನೈವೇದ್ಯವಾಗಿ ನೀಡುವುದು ಸಹಜವಾದದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.