ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ-ಬೆರಗಿನ ಬೆಳಕು| ಮಲಗಿರುವ ಮೃಗೀಯ ಗುಣ

Last Updated 25 ಜನವರಿ 2021, 19:30 IST
ಅಕ್ಷರ ಗಾತ್ರ

ಹುಲಿಯ ಕೆಣಕುವುದು ಹುಲಿ, ಕಪಿಯನಣಕಿಪುದು ಕಪಿ |
ಹುಲಿಕಪಿಗಳವಿತಿರದ ನರಜಂತುವೆಲ್ಲಿ ? ||
ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು |
ಕುಲಕದಿರು ಬಾಲವನು – ಮಂಕುತಿಮ್ಮ || 380 ||

ಪದ-ಅರ್ಥ

ಕಪಿಯನಣಕಿಪುದು=ಕಪಿಯನು+ಅಣಕಿಪುದು(ಅಣಕಿಸುವುದು), ಹುಲಿಕಪಿಗಳವಿತಿರದ=ಹುಲಿ+ಕಪಿಗಳು+
ಅವಿತಿರದ(ಅಡಗಿರದ), ಮೃಗವನಂತಿರಲು=
ಮೃಗವನು+ಅಂತೆ+ಇರಲು, ಜಾಣು=
ಬುದ್ಧಿವಂತಿಕೆ, ಕುಲಕದಿರು=ಅಲುಗಾಡಿಸದಿರು.

ವಾಚ್ಯಾರ್ಥ

ಒಂದು ಹುಲಿ ಮತ್ತೊಂದನ್ನು ಕೆಣುಕುತ್ತದೆ. ಒಂದು ಕಪಿ ಮತ್ತೊಂದು ಕಪಿಯನ್ನು ಅಣಗಿಸುತ್ತದೆ. ಹೀಗೆ ಹುಲಿ ಮತ್ತು ಕಪಿಗಳು ಮನಸ್ಸಿನಲ್ಲಿ ಅಡಗಿಕೊಂಡಿರದ ಮನುಷ್ಯರೆಲ್ಲಿ? ಆದ್ದರಿಂದ ಮನದಲ್ಲಿ ಮಲಗಿದ ಈ ಮೃಗಗಳನ್ನು ಹಾಗೆಯೇ ಬಿಡುವುದು ಬುದ್ಧಿವಂತಿಕೆ. ಆ ಮೃಗಗಳ ಬಾಲ ಎಳೆದು ಎಬ್ಬಿಸಬೇಡ.

ವಿವರಣೆ

ಹುಲಿ ಉಗ್ರತೆಗೆ ಮತ್ತೊಂದು ಹೆಸರು. ಅದು ಅದರ ಸ್ವಭಾವ. ಆ ಗುಣಗಳಿಂದಾಗಿಯೇ ಅದು ಹುಲಿಯಾಗಿರುವುದು. ಅದು ಮೃದುವಾದರೆ ಹುಲಿ ಎನ್ನಿಸಲಾರದು. ಅಂತೆಯೇ ಚೇಷ್ಟೆ ಮಾಡುವುದು ಕಪಿಯ ಗುಣ. ಗಂಭೀರವಾಗಿ ಒಂದೆಡೆಗೆ ಕುಳಿತರೆ ಅದು ಕಪಿ ಯಾಕಾದೀತು? ಹೀಗೆ ಪ್ರತಿಯೊಂದು ಪ್ರಾಣಿಗೆ ಅದರದೇ ವಿಶೇಷವಾದ ಗುಣಗಳಿವೆ. ಅವು ತಮ್ಮ ಮೂಲಧರ್ಮದಂತೆಯೇ ನಡೆದು ಬದುಕುತ್ತವೆ. ಹಾಗಾದರೆ ಮನುಷ್ಯನ ಮೂಲಧರ್ಮವೇನು? ಹೇಳುವುದು ಕಷ್ಟ. ಆತ ಹುಲಿಯ ಹಾಗೆ ಕ್ರೂರಿಯಾಗಬಲ್ಲ, ನರಿಯ ಹಾಗೆ ಮೋಸಮಾಡಬಲ್ಲ, ಸರ್ಪದ ಹಾಗೆ ಕಚ್ಚಬಲ್ಲ, ಗಿಳಿಯ ಹಾಗೆ ಸುಂದರವಾಗಿ ಮಾತನಾಡಬಲ್ಲ. ಆದರೆ ಆತ ಯಾವ ಹೊತ್ತಿನಲ್ಲಿ ಏನು ಮಾಡಿಯಾನು ಎಂಬುದನ್ನು ಹೇಳುವುದು ಸಾಧ್ಯವಿಲ್ಲ. ಆತ ತಮಾಷೆಗಾಗಿ ಕ್ರೌರ್ಯವನ್ನು ಮಾಡಬಲ್ಲ. ಇತ್ತೀಚಿಗೆ ನಾನು ಓದಿದ ಘಟನೆ. ಗರ್ಭಿಣಿಯಾದ ಮಠದ ಆನೆಯೊಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ಅದಕ್ಕೆ ಪಟಾಕಿ ತುಂಬಿದ ಅನಾನಸ್ ಹಣ್ಣನ್ನು ಕೆಲವು ಹುಡುಗರು ತಮಾಷೆಗೆಂದು ಕೊಡುತ್ತಾರೆ. ಆನೆಯ ಬಾಯಿಯಲ್ಲಿ ಪಟಾಕಿಗಳು ಸ್ಫೋಟಿಸಿದಾಗ ಅದರ ಬಾಯಿಯ ಒಳಭಾಗ, ನಾಲಿಗೆ ಹರಿದುಹೋಯಿತು. ಸಂಕಟದಿಂದ ಉರಿಯನ್ನು ತಾಳದೆ ಆನೆ ಘೀಳಿಡುತ್ತ ನೀರಿನ ಹೊಂಡಕ್ಕೆ ಹೋಗಿ ಸೊಂಡಿಲನ್ನು ನೀರಿನಲ್ಲಿಯೇ ಮುಳುಗಿಸಿಕೊಂಡು ನಿಂತಿತು. ಎರಡನೆಯ ದಿನ ಆನೆ ಸತ್ತು ಹೋಯಿತು. ತನ್ನ ಸ್ವಂತ ಸಂತೋಷಕ್ಕೆ ಇಂಥ ಮೃಗೀಯ ಉಗ್ರಕಾರ್ಯವನ್ನು ಮನುಷ್ಯ ಮಾಡಬಹುದೆ? ಇದು ಅವನ ಸ್ವಭಾವವಲ್ಲ. ಆದರೆ ಅವನ ಮನದಲ್ಲಿ ಹುಲಿಯ ಉಗ್ರತೆ ಎಲ್ಲಿಯೋ ಅಡಗಿಕೊಂಡು ಕುಳಿತಿದೆ.

ಮತ್ತೊಬ್ಬರು ಅಣಕಿಸುವ, ಕೀಟಲೆ ಮಾಡುವ ಸ್ವಭಾವ ಕೋತಿಯದು. ಅದಕ್ಕೇ ಅದನ್ನು ಕಪಿಚೇಷ್ಠೆ ಎನ್ನುವುದು. ಮನುಷ್ಯನಲ್ಲೂ ಆ ಕಪಿಯ ಗುಣ ಅವಿತುಕೊಂಡು ಕುಳಿತಿದೆ. ನಾವು ನಿತ್ಯ ಪತ್ರಿಕೆಗಳಲ್ಲಿ ಓದುವ ಕೆಲವು ಘಟನೆಗಳನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ತನ್ನ ನಾಯಿಗೆ ಬುದ್ಧಿ ಕಲಿಸಲು ಅದರ ಆರು ಮರಿಗಳನ್ನು ಕೊಂದು ಹಾಕಿದ ಮಹಿಳೆ, ಹಸುವಿನ ಮೇಲೆ ಅತ್ಯಾಚಾರ, ತಮಾಷೆಗಾಗಿ ನಾಯಿ, ಬೆಕ್ಕುಗಳ ಮೇಲೆ ವಿಚಿತ್ರ ಪ್ರಯೋಗಗಳು, ಟಿಕ್‌ಟಾಕ್ ವಿಡಿಯೊಗಳಿಗಾಗಿ ಪುಟ್ಟ ಪ್ರಾಣಿಗಳನ್ನು ನೇಣು ಬಿಗಿದು ನೇತುಹಾಕುವುದು ಮುಂತಾದ ಸುದ್ದಿಗಳು, ನಮ್ಮ ಮನದಾಳದಲ್ಲಿ ಅಡಗಿ ಕುಳಿತ ಮೃಗೀಯ ಜಂತುಗಳನ್ನು ನೆನಪಿಸುತ್ತವೆ. ಈ ಮೃಗಗಳ ಗುಣವಿರದೇ ಇರುವ ಮನುಷ್ಯ ದುರ್ಲಭ. ಆದರೆ ಹಾಗೆಯೇ ಆ ಗುಣಗಳು ಮಲಗಿದಂತೆಯೇ ಇರಲಿ. ಅವುಗಳ ಬಾಲ ಎಳೆದು, ತಟ್ಟಿ ಅವುಗಳನ್ನು ಎಬ್ಬಿಸಿ ಪ್ರಕಟಿಸುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT