ಭಾನುವಾರ, ಆಗಸ್ಟ್ 1, 2021
26 °C

ಜ್ಞಾನರಕ್ಷಣೆಗೆ ಪ್ರಾಮಾಣಿಕತೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

prajavani

ಬ್ರಹ್ಮದತ್ತ ವಾರಣಸಿಯನ್ನು ಆಳುತ್ತಿದ್ದಾಗ ಪ್ಲೇಗ್ ರೋಗ ಬಂದಿತು. ಆಗ ಪುರೋಹಿತರ ಸಂಪೂರ್ಣ ಮನೆತನ ನಾಶವಾಯಿತು. ಆದರೆ ಅವರ ಹುಡುಗನೊಬ್ಬ ಕಲಿಯಲು ತಕ್ಕಶಿಲೆಯಲ್ಲಿ ಇದ್ದದ್ದರಿಂದ ಬದುಕಿಕೊಂಡ. ಶಿಕ್ಷಣ ಮುಗಿಸಿಕೊಂಡು ಮರಳಿ ಬರುವಾಗ ಒಂದು ಗ್ರಾಮದಲ್ಲಿ ತಂಗಿದ. ಆ ಹಳ್ಳಿಯಲ್ಲಿ ಬೋಧಿಸತ್ವ ವಾಸವಾಗಿದ್ದ. ಅವನಿಗೆ ಆ ಕಾಲದಲ್ಲಿ ಹಣ್ಣು ಪಡೆಯುವ ಮಂತ್ರ ಗೊತ್ತಿತ್ತು. ಆತ ಬೆಳಿಗ್ಗೆಯೇ ಒಂದು ಮಾವಿನ ಮರದ ಹತ್ತಿರ ಹೋಗಿ ಮಂತ್ರವನ್ನು ಹೇಳಿದರೆ ಅರೆಕ್ಷಣದಲ್ಲಿ ಮರದ ಎಲೆಗಳೆಲ್ಲಾ ಉದುರಿ, ಹೊಸ ಎಲೆಗಳು ಮೂಡಿ, ಹೂವು, ಕಾಯಿಗಳಾಗಿ, ಹಣ್ಣುಗಳು ಪಟಪಟನೆ ನೆಲಕ್ಕೆ ಉದುರುತ್ತಿದ್ದವು. ಅವು ಅತ್ಯಂತ ರುಚಿಯಾದ ಹಣ್ಣುಗಳು. ಈ ಪುರೋಹಿತರ ಹುಡುಗ ಅದನ್ನು ಗಮನಿಸಿ ತಾನೂ ಆ ಮಂತ್ರವನ್ನು ಕಲಿಯಬೇಕೆಂದು, ಬೋಧಿಸತ್ವನ ಮನೆಯಲ್ಲಿ ಒಂದು ವರ್ಷ ಸೇವೆ ಮಾಡಿಕೊಂಡಿದ್ದ.

ಬೋಧಿಸತ್ವನ ಹೆಂಡತಿ ಈತನ ಸೇವೆಗೆ ಸಂತೋಷಪಟ್ಟು ಅವನಿಗೆ ಮಂತ್ರವನ್ನು ಕಲಿಸಲು ಗಂಡನನ್ನು ಒತ್ತಾಯಿಸಿದಳು. ಆಕೆಯ ಒತ್ತಾಯಕ್ಕೆ ಮಣಿದು ಬೋಧಿಸತ್ವ ಹುಡುಗನಿಗೆ ಹೇಳಿದ, ‘ನೋಡಪ್ಪಾ, ನನ್ನ ಪ್ರಕಾರ ನಿನಗೆ ಮಂತ್ರ ಪಡೆಯುವ ಶಕ್ತಿ, ಅಧಿಕಾರವಿಲ್ಲ. ಆದರೂ ಹೆಂಡತಿಯ ಒತ್ತಾಯಕ್ಕೆ ಕಲಿಸುತ್ತಿದ್ದೇನೆ. ಆದರೆ ಈ ವಿದ್ಯೆಯನ್ನು ನಿನಗೆ ಯಾರು ಕಲಿಸಿದರು ಎಂದು ಕೇಳಿದರೆ ಸರಿಯಾಗಿ ಗುರುವಾದ ನನ್ನ ಹೆಸರು ಹೇಳು. ನನ್ನನ್ನು ಮರೆಮಾಚಲು ಬೇರೆ ಯಾರದಾದರೂ ಹೆಸರು ಹೇಳಿದರೆ ನೀನು ಕಲಿಯುವ ಮಂತ್ರ ಮರೆತು ಹೋಗುತ್ತದೆ’. ಹುಡುಗ ಒಪ್ಪಿ ಮಂತ್ರ ಕಲಿತ.

ವಾರಾಣಸಿಗೆ ಬಂದು ತಾನು ಕಲಿತ ಮಂತ್ರವನ್ನು ಬಳಸಿ ಅಕಾಲದಲ್ಲಿ ಅತ್ಯಂತ ಸುಂದರ ಮತ್ತು ರುಚಿಕರವಾದ ಹಣ್ಣುಗಳನ್ನು ಮಾರಿ ಶ್ರೀಮಂತನಾದ. ರಾಜ ಈ ಹಣ್ಣುಗಳನ್ನು ಕಂಡು ಈ ಕಾಲದಲ್ಲಿ ಇಂತಹ ಹಣ್ಣುಗಳು ಹೇಗೆ ಬಂದವು ಎಂದು ವಿಚಾರಿಸಿದ. ಮಂತ್ರಿಗಳಿಗೆ ಹೇಳಿ ಈ ಪುರೋಹಿತರ ಹುಡುಗನನ್ನು ಅರಮನೆಗೆ ಕರೆಸಿ, ತನಗೆ ಅಂಥ ಹಣ್ಣುಗಳು ಬೇಕೆಂದೂ ಮತ್ತು ಹಣ್ಣುಗಳನ್ನು ಪಡೆಯುವ ಬಗೆಯನ್ನು ನೋಡಬೇಕೆಂದೂ ಕೇಳಿದ. ರಾಜ ತನ್ನ ಮೇಲಿಟ್ಟ ವಿಶ್ವಾಸದಿಂದ ಬೀಗಿ ಹೋದ ಹುಡುಗ ರಾಜನನ್ನು ಮತ್ತು ಪರಿವಾರದವರನ್ನು ಕರೆದುಕೊಂಡು ರಾಜೋದ್ಯಾನಕ್ಕೆ ಹೋಗಿ ಮಾವಿನ ಮರದ ಕೆಳಗೆ ಕುಳಿತು ಮಂತ್ರ ಪಠಿಸಿದ. ಎಲ್ಲರಿಗೂ ಆಶ್ಚರ್ಯವಾಗುವಂತೆ ನಾಲ್ಕೈದು ಕ್ಷಣಗಳಲ್ಲಿ ನೆಲದ ಮೇಲೆ ಸಾವಿರಾರು ಹಣ್ಣುಗಳು ಸುರಿದವು. ರಾಜ ಬೆರಗಾಗಿ ‘ನೀನು ಈ ವಿದ್ಯೆಯನ್ನು ಯಾರಿಂದ ಕಲಿತೆ?’ ಎಂದು ಕೇಳಿದ. ಹುಡುಗ ನಿಜವಾದ ಗುರುಗಳ ಹೆಸರು ಹೇಳಿದರೆ ರಾಜ ಅಲ್ಲಿಗೇ ಹೋದಾನು, ತನ್ನ ಪ್ರತಿಷ್ಠೆ ಕಡಿಮೆಯಾಗುತ್ತದೆಂದು ಯಾವುದೋ ಸುಳ್ಳು ಹೆಸರು ಹೇಳಿದ. ಆ ಕ್ಷಣಕ್ಕೆ ಅವನು ಕಲಿತ ಮಂತ್ರ ಮರೆತು ಹೋಯಿತು. ಮತ್ತೊಮ್ಮೆ ರಾಜ ಹಣ್ಣು ಕೇಳಿದಾಗ ಆತ ಗಾಬರಿಯಾಗಿ, ಓಡಿ ಬೋಧಿಸತ್ವನ ಕಡೆಗೆ ಬಂದು, ಕ್ಷಮೆ ಕೇಳಿ, ಮತ್ತೊಮ್ಮೆ ಮಂತ್ರ ಕಲಿಸಲು ಬೇಡಿದ. ಬೋಧಿಸತ್ವ, ‘ಮಂತ್ರ ಜನರಿಗೆ ಒಳ್ಳೆಯದಾಗುವುದಕ್ಕೆ ಇದ್ದದ್ದು. ಅದನ್ನು ವ್ಯಾಪಾರ ಮಾಡಿ ಅಪವಿತ್ರ ಮಾಡಿದೆ, ಗುರುವಿನ ಹೆಸರು ಮುಚ್ಚಿಟ್ಟು ಅಪರಾಧ ಮಾಡಿದೆ. ಇನ್ನು ನಿನಗೆ ಮಂತ್ರ ದಕ್ಕದು’ ಎಂದು ಕಳುಹಿಸಿಬಿಟ್ಟ.

ಯಾವುದೇ ಶಕ್ತಿ ಪಡೆಯಲು ಅರ್ಹತೆ ಬೇಕು, ಅದನ್ನು ಉಳಿಸಿಕೊಳ್ಳಲು ಪ್ರಾಮಾಣಿಕತೆ ಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು